ಕೋಲಾರದಲ್ಲಿ ಅಕ್ರಮ ಗಾಂಜಾ ಗಿಡಗಳ ಪತ್ತೆ ; ಆರೋಪಿಯ ಬಂಧನ
ಕೋಲಾರದಲ್ಲಿ ಅಕ್ರಮ ಗಾಂಜಾ ಗಿಡಗಳ ಪತ್ತೆ ; ಆರೋಪಿಯ ಬಂಧನ
ಕೋಲಾರ ತಾಲ್ಲೂಕಿನ ಹೊದಲವಾಡಿ ಗ್ರಾಮದಲ್ಲಿ ಮನೆಯ ಹಿಂಭಾಗ ಬೆಳೆಯಲಾಗಿದ್ದ ಗಾಂಜ ಗಿಡಗಳನ್ನು ಅಬಕಾರಿ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ನಾಶಪಡಿಸಿದರು.


ಕೋಲಾರ, ೨೪ ಜೂನ್ (ಹಿ.ಸ) :

ಆ್ಯಂಕರ್ : ತಾಲೂಕಿನ ಅರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊದಲವಾಡಿ ಗ್ರಾಮದಲ್ಲಿ ಮನೆಯೊಂದರ ಹಿಂಬದಿಯಲ್ಲಿ ಅಕ್ರಮವಾಗಿ ಬೆಳೆಸಲಾಗಿದ್ದ ಗಾಂಜಾ ಗಿಡಗಳನ್ನು ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಂಡಿದ್ದು, ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಅಬಕಾರಿ ಜಂಟಿ ಆಯುಕ್ತರು (ಜಾರಿ ಮತ್ತು ತನಿಖೆ, ಬೆಂಗಳೂರು ದಕ್ಷಿಣ ವಿಭಾಗ) ರವರ ಆದೇಶದಂತೆ, ಕೋಲಾರ ಜಿಲ್ಲೆಯ ಅಬಕಾರಿ ಉಪ ಆಯುಕ್ತರಾದ ಶ್ರೀಮತಿ ಸಯ್ಯದ್ ಅಜಮತ್ ಆಫ್ರೀನ್ ರವರ ನಿರ್ದೇಶನದ ಮೇರೆಗೆ ಈ ಕಾರ್ಯಾಚರಣೆ ನಡೆದಿದೆ.

ಅಬಕಾರಿ ಉಪ ಅಧೀಕ್ಷಕರು (ಕೋಲಾರ ಉಪ ವಿಭಾಗ) ಶ್ರೀನಿವಾಸಮೂರ್ತಿ ಎಂ. ರವರ ನೇತೃತ್ವದಲ್ಲಿ, ಅಬಕಾರಿ ಉಪ ಆಯುಕ್ತರ ಕಛೇರಿಯ ಅಬಕಾರಿ ನಿರೀಕ್ಷಕರಾದ ರವೀಂದ್ರ ಆರ್. ಮತ್ತು ಸಿಬ್ಬಂದಿ ವರ್ಗದವರು ದಾಳಿ ನಡೆಸಿದ್ದಾರೆ.

ಹೊದಲವಾಡಿ ಗ್ರಾಮದ ನಿವಾಸಿ ಚಂದ್ರಪ್ರಕಾಶ್ (ಬಿನ್ ಲೇಟ್ ಹನುಮಪ್ಪ, ೩೫ ವರ್ಷ) ಎಂಬುವವರಿಗೆ ಸೇರಿದ ಮನೆಯ ಹಿಂಬದಿಯಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆಸಲಾಗಿತ್ತು. ದಾಳಿ ವೇಳೆ ಅಧಿಕಾರಿಗಳು ಸುಮಾರು ೫ ರಿಂದ ೭ ಅಡಿಗಳಷ್ಟು ಎತ್ತರ ಬೆಳೆದಿದ್ದ ೨೨ ಹಸಿ ಗಾಂಜಾ ಗಿಡಗಳನ್ನು ಅಳತೆ ಮಾಡಿ, ಜಪ್ತಿ ಮಾಡಿದ್ದಾರೆ. ಪ್ರಕರಣದ ಮುಖ್ಯ ಆರೋಪಿ ಚಂದ್ರಪ್ರಕಾಶ್ನನ್ನು ಸ್ಥಳದಲ್ಲೇ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಅಬಕಾರಿ ನಿರೀಕ್ಷಕರಾದ ರವೀಂದ್ರ ಆರ್. ಅವರು ಈ ಸಂಬ0ಧ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

ದಾಳಿಯಲ್ಲಿ ಅಬಕಾರಿ ಉಪ ಅಧೀಕ್ಷಕ ಶ್ರೀನಿವಾಸಮೂರ್ತಿ, ಅಬಕಾರಿ ಉಪ ನಿರೀಕ್ಷಕ ವೇಣುಗೋಪಾಲ, ಸಿಬ್ಬಂದಿಗಳಾದ ಅಂಬರೀಶ್ ಎಸ್., ಸುಬ್ರಮಣಿ ಬಿ.ವಿ. ಹಾಗೂ ಅರಹಳ್ಳಿ ಗ್ರಾಮ ಪಂಚಾಯಿತಿಯ ದ್ವಿತೀಯ ದರ್ಜೆ ಸಹಾಯಕಿ ಚಿಕ್ಕಮುನಿಯಮ್ಮ, ಹೊದಲವಾಡಿ ಗ್ರಾಮದ ವಾಟರ್ಮ್ಯಾನ್ ಪಿಳ್ಳೇಗೌಡ ಮತ್ತು ಗೃಹ ರಕ್ಷಕ ಸಿಬ್ಬಂದಿ ಗಣೇಶ್ ಅವರು ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande