

ಗದಗ, 22 ಜೂನ್ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆಯಲ್ಲಿ ಅಕ್ರಮ ಬಡ್ಡಿ ದಂಧೆಕೋರರ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರೈತರು ಹಾಗೂ ಸಾಮಾನ್ಯ ಜನರ ಬದುಕನ್ನೇ ನುಂಗುವ ಮಟ್ಟಕ್ಕೆ ತಲುಪಿದೆ. ವಾರದ ಹಿಂದಷ್ಟೇ ಬಡ್ಡಿ ಹಣಕ್ಕಾಗಿ ಮನೆಯ ಕಾಂಪೌಂಡ್ ಗೋಡೆಯನ್ನು ಧ್ವಂಸಗೊಳಿಸಿದ ಘಟನೆ ಜನರ ಆಕ್ರೋಶಕ್ಕೆ ಕಾರಣವಾಗಿದ್ದರೆ, ಇದೀಗ ಮತ್ತೊಂದು ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದ್ದು, ಕೇವಲ 17 ಲಕ್ಷ ರೂಪಾಯಿ ಸಾಲಕ್ಕಾಗಿ ಕೋಟ್ಯಾಂತರ ರೂಪಾಯಿ ಮೌಲ್ಯದ ಐದು ಎಕರೆ ಕೃಷಿ ಜಮೀನನ್ನು ಬಡ್ಡಿ ದಂಧೆಕೋರರು ಕಬಳಿಸಿರುವ ಆರೋಪ ಕೇಳಿಬಂದಿದೆ.
ಗದಗ ತಾಲೂಕಿನ ಬೆಳಹೋಡ ಗ್ರಾಮದ ರೈತ ಮಹ್ಮದ್ ರಫೀಕ್ ದೊಡ್ಡಮನಿ ಹಾಗೂ ಅವರ ಸಹೋದರರು ಈ ಮೋಸದ ಜಾಲಕ್ಕೆ ಸಿಲುಕಿದವರಾಗಿದ್ದಾರೆ. ಕೃಷಿ ಹಾಗೂ ಕುಟುಂಬದ ಆರ್ಥಿಕ ಸಂಕಷ್ಟದ ಸಂದರ್ಭದಲ್ಲಿ ಅವರು ಬೆಟಗೇರಿ ಭಾಗದ ಕೆಲವು ವ್ಯಕ್ತಿಗಳಿಂದ ಸಾಲ ಪಡೆದಿದ್ದರು. ಆದರೆ ಸಾಲದ ಹೆಸರಿನಲ್ಲಿ ಆರಂಭವಾದ ವ್ಯವಹಾರ ಅಂತಿಮವಾಗಿ ರೈತ ಕುಟುಂಬದ ಅಮೂಲ್ಯ ಆಸ್ತಿಯನ್ನೇ ಕಸಿದುಕೊಳ್ಳುವ ಮಟ್ಟಕ್ಕೆ ತಲುಪಿದೆ ಎಂಬ ಆರೋಪ ಈಗ ಕೇಳಿಬರುತ್ತಿದೆ.
ರೈತ ಕುಟುಂಬದ ಆರೋಪದ ಪ್ರಕಾರ, 17 ಲಕ್ಷ ರೂಪಾಯಿ ಸಾಲ ನೀಡುವುದಾಗಿ ಹೇಳಿದ ಬಡ್ಡಿ ದಂಧೆಕೋರರು ಮೊದಲೇ 5 ಲಕ್ಷ ರೂಪಾಯಿಯನ್ನು ಬಡ್ಡಿ ರೂಪದಲ್ಲಿ ಕಡಿತಗೊಳಿಸಿ ಕೇವಲ 12 ಲಕ್ಷ ರೂಪಾಯಿಯನ್ನು ಮಾತ್ರ ನೀಡಿದ್ದಾರೆ. ಸಾಲಕ್ಕೆ ಭದ್ರತೆಯಾಗಿ ಐದು ಎಕರೆ ಕೃಷಿ ಜಮೀನಿನ ದಾಖಲೆಗಳನ್ನು ಪಡೆದುಕೊಂಡ ಆರೋಪಿಗಳು, ಜಮೀನಿನ ಮೇಲೆ ಹಾಪ್ ನೋಂದಣಿ ಮಾಡಿಕೊಡುವುದಾಗಿ ನಂಬಿಕೆ ಮೂಡಿಸಿದ್ದಾರೆ. ಆದರೆ ಬಳಿಕ ರೈತ ಕುಟುಂಬಕ್ಕೆ ತಿಳಿಯದಂತೆ ಅಡಮಾನ ಪತ್ರದ ಬದಲಿಗೆ ಖರೀದಿ ಪತ್ರವನ್ನೇ ಮಾಡಿಕೊಂಡು ಜಮೀನನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ ಎನ್ನಲಾಗಿದೆ.
ಈ ಸಂಗತಿ ಬೆಳಕಿಗೆ ಬಂದಾಗ ರೈತ ಕುಟುಂಬಕ್ಕೆ ಭಾರೀ ಆಘಾತ ಉಂಟಾಗಿದೆ. ಸುಮಾರು ಒಂದು ಕೋಟಿಗೂ ಹೆಚ್ಚು ಮೌಲ್ಯದ ಕೃಷಿ ಜಮೀನು ಕಳೆದುಕೊಂಡ ಕುಟುಂಬ ಈಗ ನ್ಯಾಯಕ್ಕಾಗಿ ಅಲೆದಾಡುವ ಪರಿಸ್ಥಿತಿಗೆ ತಲುಪಿದೆ. ಹಲವು ವರ್ಷಗಳ ಪರಿಶ್ರಮದಿಂದ ಉಳಿಸಿಕೊಂಡಿದ್ದ ಆಸ್ತಿಯನ್ನೇ ಕಳೆದುಕೊಂಡು ಕುಟುಂಬದ ಸದಸ್ಯರು ಕಂಗಾಲಾಗಿದ್ದು, ತಮ್ಮ ಜಮೀನನ್ನು ಮರಳಿ ಕೊಡಿಸುವಂತೆ ಅಧಿಕಾರಿಗಳ ಮೊರೆ ಹೋಗಿದ್ದಾರೆ.
ಪ್ರಕರಣದ ಗಂಭೀರತೆಯನ್ನು ಮನಗಂಡ ರೈತ ಕುಟುಂಬ ನೇರವಾಗಿ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಅವರನ್ನು ಭೇಟಿ ಮಾಡಿ ನ್ಯಾಯ ಕೋರಿ ಮನವಿ ಸಲ್ಲಿಸಿತು. ದೂರಿನ ಪರಿಶೀಲನೆ ನಡೆಸಿದ ಎಸ್ಪಿ ರೋಹನ್ ಜಗದೀಶ್ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದಲ್ಲಿ ರೌಡಿಶೀಟರ್ ಯುವರಾಜ್ ಕೊರವರ, ರವಿ ಕೌಜಗೇರಿ, ಬಸನಗೌಡ ಕರಮುಡಿ, ಶೇಷಗೀರಸಾ ಬಾಕಳೆ ಹಾಗೂ ಜಗದೀಶ ಅಯ್ಯನಗೌಡರ ವಿರುದ್ಧ ಆರೋಪಗಳು ಕೇಳಿಬಂದಿವೆ. ಪ್ರಕರಣ ದಾಖಲಾದ ಬೆನ್ನಲ್ಲೇ ಪೊಲೀಸರು ಕಾರ್ಯಾಚರಣೆ ನಡೆಸಿ ಪ್ರಮುಖ ಆರೋಪಿಗಳಾದ ಯುವರಾಜ್ ಕೊರವರ ಹಾಗೂ ರವಿ ಕೌಜಗೇರಿಯನ್ನು ಬಂಧಿಸಿದ್ದಾರೆ. ಉಳಿದ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕಾಗಿ ವಿಶೇಷ ತಂಡಗಳು ಶೋಧ ಕಾರ್ಯ ನಡೆಸುತ್ತಿವೆ.
ಗದಗ ಜಿಲ್ಲೆಯಲ್ಲಿ ಅಕ್ರಮ ಬಡ್ಡಿ ದಂಧೆಕೋರರ ವಿರುದ್ಧ ಇತ್ತೀಚಿನ ದಿನಗಳಲ್ಲಿ ದೂರುಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ರೈತರು, ಕಾರ್ಮಿಕರು ಹಾಗೂ ಸಣ್ಣ ವ್ಯಾಪಾರಿಗಳು ಆರ್ಥಿಕ ಸಂಕಷ್ಟದ ಸಂದರ್ಭದಲ್ಲಿ ಹೆಚ್ಚಿನ ಬಡ್ಡಿಗೆ ಸಾಲ ಪಡೆದು ನಂತರ ತಮ್ಮ ಆಸ್ತಿ, ಜಮೀನು ಹಾಗೂ ಮನೆಗಳನ್ನು ಕಳೆದುಕೊಳ್ಳುತ್ತಿರುವ ಘಟನೆಗಳು ಮರುಕಳಿಸುತ್ತಿವೆ. ಕಾನೂನುಬಾಹಿರವಾಗಿ ಹಣಕಾಸು ವ್ಯವಹಾರ ನಡೆಸುವ ಕೆಲವು ಗುಂಪುಗಳು ಬಡವರ ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಂಡು ಕೋಟ್ಯಾಂತರ ಮೌಲ್ಯದ ಆಸ್ತಿಗಳನ್ನು ಕಬಳಿಸುತ್ತಿರುವ ಆರೋಪಗಳು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿವೆ.
ಜಿಲ್ಲೆಯಲ್ಲಿ ವಾರದ ಹಿಂದೆಯಷ್ಟೇ ಬಡ್ಡಿ ಹಣ ವಸೂಲಿಗಾಗಿ ಮನೆಯ ಕಾಂಪೌಂಡ್ ಗೋಡೆಯನ್ನು ಧ್ವಂಸಗೊಳಿಸಿದ ಪ್ರಕರಣ ಇನ್ನೂ ಜನರ ಮನಸ್ಸಿನಿಂದ ಮಾಸಿಲ್ಲ. ಅದರ ಬೆನ್ನಲ್ಲೇ ಇದೀಗ ರೈತನ ಐದು ಎಕರೆ ಜಮೀನನ್ನು ಮೋಸದಿಂದ ಕಬಳಿಸಿರುವ ಆರೋಪ ಹೊರಬಿದ್ದಿರುವುದು ಅಕ್ರಮ ಬಡ್ಡಿ ದಂಧೆಯ ಭೀಕರ ಮುಖವನ್ನು ಬಯಲಿಗೆಳೆದಿದೆ.
ಈ ಪ್ರಕರಣದ ಬಳಿಕ ಜಿಲ್ಲೆಯಾದ್ಯಂತ ಅಕ್ರಮ ಬಡ್ಡಿ ದಂಧೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ರೈತ ಸಂಘಟನೆಗಳು, ಸಾಮಾಜಿಕ ಹೋರಾಟಗಾರರು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ. ಸಾಲದ ಹೆಸರಿನಲ್ಲಿ ಜನರ ಆಸ್ತಿ ಕಬಳಿಸುವ ಜಾಲವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕೆಂದು ಒತ್ತಾಯಿಸಿರುವ ಅವರು, ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಹಾಗೂ ರೈತ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಸ್ತುತ ಪ್ರಕರಣದ ತನಿಖೆಯನ್ನು ಗದಗ ಗ್ರಾಮೀಣ ಪೊಲೀಸರು ಮುಂದುವರಿಸಿದ್ದು, ಆರೋಪಿಗಳಿಂದ ಇನ್ನಷ್ಟು ಜನರು ಮೋಸಕ್ಕೊಳಗಾಗಿರುವ ಸಾಧ್ಯತೆಯ ಬಗ್ಗೆಯೂ ಪರಿಶೀಲನೆ ನಡೆಸುತ್ತಿದ್ದಾರೆ. ಜಿಲ್ಲೆಯಲ್ಲಿನ ಅಕ್ರಮ ಬಡ್ಡಿ ದಂಧೆಯ ವಿರುದ್ಧ ಪೊಲೀಸ್ ಇಲಾಖೆ ಕೈಗೊಂಡಿರುವ ಕ್ರಮಗಳು ಮುಂದಿನ ದಿನಗಳಲ್ಲಿ ಯಾವ ಮಟ್ಟಿಗೆ ಪರಿಣಾಮಕಾರಿ ಆಗಲಿವೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಹಿಂದೂಸ್ತಾನ್ ಸಮಾಚಾರ್ / lalita MP