




ಹೊಸಪೇಟೆ, 24 ಜೂನ್ (ಹಿ.ಸ.) :
ಆ್ಯಂಕರ್ : ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಜೀವನದಿ ತುಂಗ ಭದ್ರೆಗೆ ಜೂನ್ 25, 2026ರಂದು ವಿಶೇಷ ದಿನ. ವಿಜಯನಗರ ಜಿಲ್ಲೆಯ ಹೊಸಪೇಟೆ ಪಟ್ಟಣ ಸಮೀಪದ ತುಂಗಭದ್ರ ಜಲಾಶಯ ಆವರಣದಲ್ಲಿ ಭರ್ತಿ 72 ವರ್ಷಗಳ ನಂತರ, ಒಂದು ಅಪರೂಪದ ಮತ್ತು ಐತಿಹಾಸಿಕ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮಕ್ಕೆ ಕರ್ನಾಟಕ ಮುಖ್ಯ ಮಂತ್ರಿಗಳಾದ ಡಿ.ಕೆ.ಶಿವಕುಮಾರ, ಆಂಧ್ರ ಪ್ರದೇಶದ ಮುಖ್ಯಮಂತ್ರಿಗಳಾದ ಎನ್.ಚಂದ್ರಬಾಬು ನಾಯ್ಡು ಹಾಗೂ ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ಅವರು ಸಾಕ್ಷಿ ಆಗಲಿದ್ದಾರೆ.
ಕರ್ನಾಟಕ ರಾಜ್ಯದ ಕೊಪ್ಪಳ, ವಿಜಯನಗರ, ಬಳ್ಳಾರಿ, ರಾಯಚೂರು, ಗದಗ ಜಿಲ್ಲೆಗಳ ಎಲ್ಲ ಹಂತದ ಜನಪ್ರತಿನಿಧಿಗಳು, ನೀರಾವರಿ ಇಲಾಖೆಯ ಕೇಂದ್ರ, ರಾಜ್ಯ ಸರ್ಕಾರಗಳ ವಿವಿಧ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ತುಂಗಭದ್ರ ಜಲಾಶಯ : ಕರ್ನಾಟಕ ರಾಜ್ಯದ ಉತ್ತರ ಕರ್ನಾಟಕ ಹಾಗೂ ಹೈದ್ರಾಬಾದ್ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಕೃಷಿ, ಕೈಗಾರಿಕೆ, ಕುಡಿಯುವ ನೀರು ಪಡಯಲು ತುಂಗಭದ್ರೆಗೆ ಹೊಸಪೇಟೆ ಹತ್ತಿರ ಅಣೆಕಟ್ಟೆ ನಿರ್ಮಿಸಲು ಸ್ವಾತಂತ್ರ್ಯ ಪೂರ್ವದಲ್ಲಿ ಅಂದರೆ 1945ರಲ್ಲಿ ಕಾಮಗಾರಿ ಆರಂಭವಾಗಿ 1953ರಲ್ಲಿ ಪೂರ್ಣಗೊಂಡಿತು. ಮತ್ತು ಆಣೆಕಟ್ಟೆಗೆ ಸ್ಟೀಲ್ ವೇ ಗೇಟ್ಗಳ ಅಳವಡಿಕೆ ಕಾರ್ಯವು 1953ರಲ್ಲಿ ಆರಂಭವಾಗಿ 1958ರಲ್ಲಿ ಪೂರ್ಣಗೊಂಡಿತು. 1958 ರಿಂದ 2024ರವರೆಗೆ ತುಂಗಭದ್ರ ಜಲಾಶಯಕ್ಕೆ ಅಳವಡಿಸಿದ್ದ ಎಲ್ಲಾ 33 ಗೇಟ್ ವೇ ಗಳು ಸುರಕ್ಷಿತವಾಗಿ ಕಾರ್ಯನಿರ್ವಹಿಸಿದ್ದವು.
ಆಗಸ್ಟ್ 10, 2024ರ ರಾತ್ರಿ 10:50 ಗಂಟೆ ಸುಮಾರಿಗೆ ತುಂಗಭದ್ರ ಆಣೆಕಟ್ಟಿನ ಸ್ಟೀಲ್ ವೇ ಗೇಟ್ ಸಂಖ್ಯೆ 19, ನೀರಿನ ಸೆಳೆತಕ್ಕೆ ಕೊಚ್ಚಿ ಹೋಯಿತು. ತಕ್ಷಣ ಕಾರ್ಯ ಪ್ರವೃತ್ತರಾದ ತುಂಗಭದ್ರ ಮಂಡಳಿಯ ಅಧಿಕಾರಿಗಳು ಸ್ಟೀಲ್ ವೇ ಗೇಟ್ ತಜ್ಞರ ಹಾಗೂ ಹಿರಿಯ ಅಧಿಕಾರಿಗಳ ಸಲಹಾ ಸಮಿತಿ ಮಾರ್ಗದರ್ಶನದಲ್ಲಿ ಸ್ಟಾಪ್ ಲಾಗ್ ಗೇಟ್ ಅಂಶಗಳನ್ನು ಬಳಸಿಕೊಂಡು ದುರಸ್ತಿ ಮಾಡಿದರು. ಒಂದು ವಾರದಲ್ಲಿ ನೀರು ಸೊರಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸಿ 2024ನೇ ಸಾಲಿನ ಮುಂಗಾರು ಮತ್ತು ಹಿಂಗಾರು ಬೆಳೆಗಳಿಗೆ ನೀರಿನ ಕೊರತೆ ಆಗದಂತೆ ಕ್ರಮ ವಹಿಸಿದ್ದರು.
ಟಿಬಿ ಅಣೆಕಟ್ಟಿನ ಸ್ಟೀಲ್ ಗೇಟ್ಗಳ ಕುರಿತು : ತುಂಗಭದ್ರಾ ಅಣೆಕಟ್ಟಿನ ಸ್ಪಿಲ್ವೇ ಗೇಟ್ ಸಂಖ್ಯೆ 19 ದಿನಾಂಕ 10.08.2024 ರಂದು ರಾತ್ರಿ 10:50 ಕ್ಕೆ ಕೊಚ್ಚಿಹೋಯಿತು. ಈ ಬಗ್ಗೆ ತಕ್ಷಣವೇ ಉನ್ನತ ಅಧಿಕಾರಿಗಳು ವರದಿ ಪಡೆದು, ತುರ್ತು ದುರಸ್ತಿಗೆ ಸೂಚನೆ ನೀಡಿದರು. ಸ್ಟಾಪ್ಲಾಗ್ ಗೇಟ್ ಅಂಶಗಳನ್ನು ಬಳಸಿಕೊಂಡು ಸ್ಪಿಲ್ವೇ ಗೇಟ್ ಸಂಖ್ಯೆ 19 ತಾತ್ಕಾಲಿಕ ಪುನಃಸ್ಥಾಪನೆ ಕಾರ್ಯ ಒಂದು ವಾರದೊಳಗೆ ಪೂರ್ಣಗೊಂಡಿತು.
ತಜ್ಞ ಎ.ಕೆ. ಬಜಾಜ್ ಅವರ ಸಲಹೆ, ಅವರ ಸಮಿತಿಯ ಶಿಫಾರಸುಗಳು ಮತ್ತು ನವದೆಹಲಿಯ ಎನ್ಡಿಎಸ್ಎ ಸಮಿತಿಯ ಅಧ್ಯಕ್ಷರಾದ ಅನಿಲ್ ಜೈನ್ ಅವರ ಪರಿಶೀಲನಾ ವರದಿ (ಟಿಬಿ ಡ್ಯಾಮ್ ಗೇಟ್ಸ್) ಹಾಗೂ ಸ್ಟ್ಯಾಂಡಿಂಗ್ ಎಕ್ಸ್ಪರ್ಟ್ ಸಲಹಾ ಸಮಿತಿಯ ಸಲಹೆಗಳನ್ನು ಅನುಸರಿಸಿ ನಡೆಸಿದ ಎನ್ಡಿಟಿ ಪರೀಕ್ಷೆಗಳ ವರದಿಯಲ್ಲಿ ಪೂರ್ಣ ಗೇಟ್ ಬದಲಿ ಮತ್ತು ಬದಲಿ ತನಕ ತಾತ್ಕಾಲಿಕ ಬಲಪಡಿಸುವಿಕೆಯನ್ನು ಶಿಫಾರಸು ಮಾಡಲಾಯಿತು.
ಗೇಟ್ಸ್ಗಳ ತಜ್ಞ ಎನ್. ಕನ್ಹಯ್ಯ ನಾಯ್ಡು ಅವರು, ಪರಿಶೀಲನಾ ವರದಿಯನ್ನು ಪರಿಶೀಲಿಸಿ ಸ್ಟೀಲ್ ವೇ ಗೇಟ್ಗಳನ್ನು ಪರಿಶೀಲಿಸಿದರು ಮತ್ತು ಒಂದು ಹಂಗಾಮು ಬೆಳೆ, ಕುಡಿಯಲು ನೀರು ಮತ್ತು ಕೈಗಾರಿಕಾ ಅಗತ್ಯಗಳನ್ನು ಪೂರೈಸಲು ಮಾತ್ರ 80 ಟಿಎಂಸಿ ವರೆಗೆ ಜಲಾಶಯದಲ್ಲಿ ನೀರು ಸಂಗ್ರಹಿಸಲು ಶಿಫಾರಸು ಮಾಡಿದರು. ಎಲ್ಲಾ ಗೇಟ್ಗಳ ಬದಲಿ ಮತ್ತು ಅಸ್ತಿತ್ವದಲ್ಲಿರುವ ಗೇಟ್ಗಳಿಗೆ ತಾತ್ಕಾಲಿಕ ಬಲವರ್ಧನೆ ಮಾಡಲು ಸೂಚಿಸಿದರು.
2025-26ರಲ್ಲಿ ಜಲಾಶಯವನ್ನು 80 ಟಿಎಂಸಿಯಲ್ಲಿ ನಿರ್ವಹಿಸಲಾಗಿತ್ತು. ಗೇಟ್ಗಳು ಮತ್ತು ಚೈನ್ಗಳೆರಡಕ್ಕೂ 58 ಕೋಟಿ ಅಂದಾಜು ವೆಚ್ಚದೊಂದಿಗೆ ಟೆಂಡರ್ ಆಧಾರದ ಮೇಲೆ ಕಾಮಗಾರಿಯನ್ನು ಏಜೆನ್ಸಿಗೆ ನೀಡಲಾಯಿತು. ಎಲ್ಲಾ ಗೇಟ್ಗಳ ನಿರ್ಮಾಣ ಕಾರ್ಯವು ಏಪ್ರಿಲ್ 25, 2026 ರಂದು, ಅಂದರೆ ಕಾಮಗಾರಿಯು 121 ದಿನಗಳಲ್ಲಿ ಪೂರ್ಣಗೊಂಡಿತು.
ಆಂಧ್ರ ಪ್ರದೇಶ ಸರ್ಕಾರದ ಜಲಸಂಪನ್ಮೂಲ ಇಲಾಖೆಯ ಸಲಹೆಗಾರ (ಯಾಂತ್ರಿಕ) ಎನ್. ಕನ್ನಯ್ಯ ನಾಯ್ಡು ಅವರು ಗೇಟ್ ಅಳವಡಿಕೆ ಕಾಮಗಾರಿಗಳನ್ನು ಪರಿಶೀಲಿಸಿದರು ಮತ್ತು ಪೂರ್ಣಗೊಂಡ ಕೆಲಸದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು.
ತುಂಗಭದ್ರಾ ಜಲಾಶಯ ಆಣೆಕಟ್ಟಿನ ಎಲ್ಲಾ 33 ಗೇಟ್ಗಳ ನಿರ್ಮಾಣ ಪೂರ್ಣಗೊಂಡಿದೆ. ತಜ್ಞರ ಹಾಗೂ ಹಿರಿಯ ಅಧಿಕಾರಿಗಳ ಸಲಹೆಗಳ ಪ್ರಕಾರ ಗೇಟ್ಗಳ ಸುರಕ್ಷತೆಯ ಕುರಿತು ಪರೀಕ್ಷೆಯನ್ನು ಮಾಡಲಾಗಿದೆ. ಹೊಸ ಸರಪಳಿಯ 33 ನಿರ್ಮಾಣಗಳು ಪೂರ್ಣಗೊಂಡಿವೆ. ಪ್ರಸ್ತುತ ಜಲಾಶಯದಲ್ಲಿ 1633 ಮಟ್ಟದವರೆಗೆ ನೀರು ಸಂಗ್ರಹಣೆಗೆ ಸಿದ್ಧವಾಗಿದೆ ಮತ್ತು ಹೆಚ್ಚುವರಿ ಪ್ರವಾಹದ ಹೊರಸೂಸುವಿಕೆಯನ್ನು ಬಿಡುಗಡೆ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ.
ತುಂಗಭದ್ರಾ ನೀರು ಹಂಚಿಕೆಗೆ ಒಪ್ಪಂದ:
ಸರ್ ಆರ್ಥರ್ ಕಾಟನ್ ಅವರು ಮೂಲತಃ ತುಂಗಭದ್ರಾ ಯೋಜನೆಯನ್ನು 1860 ರಲ್ಲಿ ರೂಪಿಸಿದರು. ಪ್ರಸ್ತಾವನೆಗಳನ್ನು ಮತ್ತಷ್ಟು ಮಾರ್ಪಡಿಸಿ ಅಭಿವೃದ್ಧಿಪಡಿಸಲಾಯಿತು, ಅದನ್ನು ಹೈದರಾಬಾದ್ನೊಂದಿಗೆ ಜಂಟಿ ಯೋಜನೆಯಾಗಿ ವಿಕಸನಗೊಳಿಸಲಾಯಿತು. ಎನ್. ಪರಮೇಶ್ವರನ್ ಪಿಳ್ಳೈ ಅವರು ಅದಕ್ಕೆ ಅನುಗುಣವಾಗಿ 1933 ರಲ್ಲಿ ಯೋಜನೆಯನ್ನು ಪರಿಷ್ಕರಿಸಿದರು. ತುಂಗಭದ್ರಾ ನೀರನ್ನು ಬಳಕೆ ಮಾಡಲು ಮತ್ತು ಬಳಸುವುದರ ಮೇಲೆ ಕೆಲವು ನಿಬರ್ಂಧಗಳನ್ನು ವಿಧಿಸಲು ಹಿಂದೆ ಹಲವಾರು ಒಪ್ಪಂದಗಳಿದ್ದವು.
ಸುಮಾರು ಎಂಬತ್ತು ವರ್ಷಗಳ ಕಾಲ ಸುದೀರ್ಘ ಮಾತುಕತೆಗಳು ಮತ್ತು ತನಿಖೆಗಳು ನಡೆದವು. 1940 ರಲ್ಲಿ ಮದ್ರಾಸ್ ಸರ್ಕಾರವು ಯೋಜನೆಯ ವಿವರವಾದ ತನಿಖೆಗೆ ಆದೇಶಿಸಿತು. ಆಗಿನ ಅಧೀಕ್ಷಕ ಎಂಜಿನಿಯರ್ ಬಳ್ಳಾರಿಯ ಎಲ್. ವೆಂಕಟ ಕೃಷ್ಣ ಅಯ್ಯರ್ ಮತ್ತು ನೀರಾವರಿ ಮುಖ್ಯ ಎಂಜಿನಿಯರ್ ಎಫ್.ಎಂ. ಡೌಲಿ ಅವರು ತೀರ್ಮಾನಿಸಿದ ಒಪ್ಪಂದಗಳು ಮತ್ತು ಹಲವಾರು ಪರ್ಯಾಯಗಳ ಆಧಾರದ ಮೇಲೆ 1942 ರಲ್ಲಿ ಮದ್ರಾಸ್ ಕಡೆಯಿಂದ ಎಂ. ಎಸ್. ತಿರುಮಲೆ ಅಯ್ಯಾಂಗಾರ್ ಅವರು ಯೋಜನೆಯ ವಿವರವಾದ ತನಿಖೆಗಳನ್ನು ಮಾಡಿದರು. ಜೂನ್ 1944 ರಲ್ಲಿ ಮದ್ರಾಸ್ ಮತ್ತು ಹೈದರಾಬಾದ್ ನಡುವಿನ ಒಪ್ಪಂದದಂತೆ ಮದ್ರಾಸ್ ಮತ್ತು ಹೈದರಾಬಾದ್ ಸರ್ಕಾರಗಳು ಅಂತಿಮವಾಗಿ ತುಂಗಭದ್ರಾ ಯೋಜನೆಯ ನಿರ್ಮಾಣವನ್ನು ಪ್ರಾರಂಭಿಸಲು ಅನುಮತಿ ನೀಡಿದವು. ತುಂಗಭದ್ರಾ ಯೋಜನೆಯು ಫೆಬ್ರವರಿ 28, 1945 ರಂದು ಶಿಲಾನ್ಯಾಸಗೊಳ್ಳುವ ಮೂಲಕ ಔಪಚಾರಿಕವಾಗಿ ಉದ್ಘಾಟನೆಗೊಂಡಿತು.
ಅಂದಿನಿಂದ ನಿರಂತರವಾಗಿ ಕರ್ನಾಟಕ ಮತ್ತು ಅವಿಭಜಿತ ಆಂಧ್ರಪ್ರದೇಶ ರಾಜ್ಯಗಳಿಗೆ ತುಂಗಭದ್ರಾ ಜಲಾಶಯದಿಂದ ಕುಡಿಯುವ ನೀರು, ಕೃಷಿ, ಕೈಗಾರಿಕೆಗಳಿಗೆ ನೀರು ಪೂರೈಸಲಾಗುತ್ತಿದೆ. ಕರ್ನಾಟಕ ರಾಜ್ಯದ ಇಂದಿನ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೃಷಿ, ಕೈಗಾರಿಕೆ ಮತ್ತು ಜನರ ಜೀವನ ಮಟ್ಟ ಸುಧಾರಣೆಯಲ್ಲಿ ತುಂಗಭದ್ರಾ ಜಲಾಶಯವು ಮಹತ್ವದ ಕೊಡುಗೆಯನ್ನು ನೀಡುತ್ತಾ ಬಂದಿದೆ.
ಜೂನ್ 25ರಂದು ನೂತನ ಸ್ಟೀಲ್ ಗೇಟ್ಗಳ ಲೋಕಾರ್ಪಣೆ : ಜಲಸಂಪನ್ಮೂಲ ಇಲಾಖೆ ಹಾಗೂ ತುಂಗಭದ್ರಾ ಮಂಡಳಿಯ ಸಹಯೋಗದಲ್ಲಿ ಇದೇ ಜೂನ್ 25 ರಂದು ಬೆಳಗ್ಗೆ 11 ಗಂಟೆಗೆ ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ತುಂಗಭದ್ರಾ ಜಲಾಶಯಕ್ಕೆ ನೂತನವಾಗಿ ಬದಲಾಯಿಸಿರುವ 33 ಸ್ಟೀಲ್ವೇ ಗೇಟುಗಳ ಲೋಕಾರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿದೆ.
ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಕಾರ್ಯಕ್ರಮ ಉದ್ಘಾಟಿಸುವರು. ಕಾರ್ಯಕ್ರಮದಲ್ಲಿ ಘನ ಉಪಸ್ಥಿತರಿರುವವರು. ಕೇಂದ್ರ ಜಲಶಕ್ತಿ ಸಚಿವರಾದ ಸಿ.ಆರ್.ಪಾಟೀಲ್, ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು, ತೆಲಂಗಾಣ ರಾಜ್ಯದ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ, ರಾಜ್ಯದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಕೆ. ಪವನ್ ಕಲ್ಯಾಣ್, ತೆಲಂಗಾಣ ಉಪಮುಖ್ಯಮಂತ್ರಿ ಮಲ್ಲುಭಟ್ಟಿ ವಿಕ್ರಮಾರ್ಕ, ಕೇಂದ್ರ ಜಲಶಕ್ತಿ ಹಾಗೂ ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ, ಕೇಂದ್ರ ಜಲಶಕ್ತಿ ಖಾತೆ ರಾಜ್ಯ ಸಚಿವ ರಾಜ ಭೂಷಣ ಚೌಧರಿ, ವಿಧಾನ ಪರಿಷತ್ ಸಭಾಪತಿ ಬಸವರಾಜ್ ಎಸ್. ಹೊರಟ್ಟಿ, ಭಾರಿ ಮತ್ತು ಮಧ್ಯಮ ನೀರಾವರಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ, ಮಾಜಿ ಮುಖ್ಯಮಂತ್ರಿಗಳು ಹಾಗೂ ಹಾವೇರಿ- ಗದಗ ಸಂಸದ ಬಸವರಾಜ ಬೊಮ್ಮಾಯಿ, ಆಂಧ್ರಪ್ರದೇಶ ಜಲಸಂಪನ್ಮೂಲ ಸಚಿವ ಡಾ.ನಿಮ್ಮಲ ರಾಮನಾಯ್ಡು, ಆಂಧ್ರಪ್ರದೇಶದ ಹಣಕಾಸು ಯೋಜನೆ, ವಾಣಿಜ್ಯ ತೆರಿಗೆ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪಯ್ಯವುಲ ಕೇಶವ್, ತೆಲಂಗಾಣ ನೀರಾವರಿ ಹಾಗೂ ಸಿಎಡಿ ಸಚಿವ ಎನ್.ಉತ್ತಮ್ ಕುಮಾರ್ ರೆಡ್ಡಿ, ರಾಜ್ಯ ವಿಧಾನ ಪರಿಷತ್ತನ ಸರ್ಕಾರಿ ಮುಖ್ಯ ಸಚೇತಕ ಸಲೀಂ ಅಹಮದ್, ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್, ಮಸ್ಕಿ ಶಾಸಕ ಹಾಗೂ ಕರ್ನಾಟಕ ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷರಾದ ಆರ್.ಬಸನಗೌಡ ತುರ್ವಿಹಾಳ, ಸಿಂಧನೂರು ಶಾಸಕ ಹಾಗೂ ರಾಜ್ಯ ಕೈಗಾರಿಕಾ ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಂಪನಗೌಡ ಬಾದರ್ಲಿ, ರೋಣ ಶಾಸಕ ಹಾಗೂ ಕರ್ನಾಟಕ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಪಾಟೀಲ್, ಕಂಪ್ಲಿ ಶಾಸಕ ಹಾಗೂ ಕರ್ನಾಟಕ ಕೈಮಗ್ಗ ನಿಗಮ ನಿಯಮಿತ ಅಧ್ಯಕ್ಷರಾದ ಜೆ.ಎನ್.ಗಣೇಶ್, ಕುಷ್ಟಗಿ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಹನುಮನಗೌಡ ಪಾಟೀಲ್, ಡಾ.ಬಾಬು ಜಗಜೀವನರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ್, ಕೇಂದ್ರ ಜಲ ಆಯೋಗದ ಅಧ್ಯಕ್ಷರಾದ ಅನುಪಮ್ ಪ್ರಸಾದ್ ಉಪಸ್ಥಿತರಿರುವರು.
ಕೊಪ್ಪಳ ವಿಧಾನಸಭಾ ಕ್ಷೇತ್ರದ ಶಾಸಕ ರಾಘವೇಂದ್ರ ಹಿಟ್ನಾಳ್ ಅಧ್ಯಕ್ಷತೆ ವಹಿಸುವರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೊಪ್ಪಳ ಸಂಸದ ಕೆ.ರಾಜಶೇಖರ ಹಿಟ್ನಾಳ್, ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರ, ಬಳ್ಳಾರಿ ಸಂಸದರಾದ ಈ.ತುಕಾರಾಮ್, ದಾವಣಗೆರೆ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ, ರಾಯಚೂರು ಸಂಸದರಾದ ಜಿ.ಕುಮಾರ್ ನಾಯಕ್, ಬಳ್ಳಾರಿ ರಾಜ್ಯಸಭಾ ಸದಸ್ಯ ಡಾ.ಸೈಯದ್ ನಾಸಿರ್ ಹುಸೇನ್, ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ, ಕನಕಗಿರಿ ಶಾಸಕ ಶಿವರಾಜ್ ಎಸ್. ತಂಗಡಗಿ, ಗಂಗಾವತಿ ಶಾಸಕ ಜಿ.ಜನಾರ್ಧನ ರೆಡ್ಡಿ, ವಿಜಯನಗರ ಶಾಸಕ ಹೆಚ್.ಆರ್.ಗವಿಯಪ್ಪ, ಹಗರಿಬೊಮ್ಮನಹಳ್ಳಿ ಶಾಸಕ ಕೆ.ನೇಮಿರಾಜ ನಾಯ್ಕ್, ಕೂಡ್ಲಿಗಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್, ಹಡಗಲಿ ಶಾಸಕ ಎಲ್.ಕೃಷ್ಣ ನಾಯಕ್, ಹರಪನಹಳ್ಳಿ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ, ಜಗಳೂರು ಶಾಸಕ ಬಿ.ದೇವೇಂದ್ರಪ್ಪ, ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ನಾಗೇಂದ್ರ, ಸಿರುಗುಪ್ಪ ಶಾಸಕ ಬಿ.ಎಂ.ನಾಗರಾಜ, ಬಳ್ಳಾರಿ ನಗರ ವಿಧಾನಸಭಾ ಕ್ರೇತ್ರದ ಶಾಸಕ ನಾರಾ ಭರತ್ ರೆಡ್ಡಿ, ಸಂಡೂರು ಶಾಸಕಿ ಈ.ಅನ್ನಪೂರ್ಣ ತುಕಾರಾಂ, ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ.ನಮೋಶಿ, ಚಂದ್ರಶೇಖರ್ ಬಿ ಪಾಟೀಲ್, ಶರಣಗೌಡ ಎ. ಪಾಟೀಲ್ ಬಯ್ಯಾಪುರ, ಹೇಮಲತಾ ಪಿ.ನಾಯಕ್, ವೈ.ಎಂ.ಸತೀಶ್, ತುಂಗಭದ್ರಾ ಯೋಜನೆ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಹಸನ್ಸಾಬ್ ನಬಿಸಾಬ್ ದೋಟಿಹಾಳ, ಕೊಪ್ಪಳ ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ರೆಡ್ಡಿ ಶ್ರೀನಿವಾಸ, ವಿಜಯನಗರ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಕೆ.ಶಿವಮೂರ್ತಿ ಮತ್ತು ರಾಯಚೂರು, ಗದಗ, ಹಾವೇರಿ ಜಿಲ್ಲೆಗಳ ವಿಧಾನಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರು ಮತ್ತು ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರು, ಕೇಂದ್ರ ಜಲಶಕ್ತಿ ಇಲಾಖೆ, ರಾಜ್ಯ ಜಲಸಂಪನ್ಮೂಲ ಇಲಾಖೆ ಸೇರಿದಂತೆ ಕರ್ನಾಟಕ ರಾಜ್ಯದ ಮತ್ತು ಆಂಧ್ರಪ್ರದೇಶ, ತೆಲಂಗಾಣ ರಾಜ್ಯದ ಪ್ರಮುಖ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸುವರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್