









ಕ್ರಿ.ಶ 18 ಮತ್ತು 19ನೇ ಶತಮಾನದಲ್ಲಿ ಈ ಪ್ರದೇಶವನ್ನು ನಿಜಾಮರು ಮತ್ತು ಬ್ರಿಟಿಷ್ ಇಬ್ಬರೂ ಪರಸ್ಪರ ಹಂಚಿಕೆಯ ಆಧಾರದ ಮೇಲೆ ಆಡಳಿತ ಮಾಡುತ್ತಿದ್ದರು. ಒಂದರ್ಥದಲ್ಲಿ ಇಲ್ಲಿ ದ್ವಿ-ಸರಕಾರ ಪದ್ಧತಿ ಇದ್ದರೂ ಹೇಳಿಕೊಳ್ಳುವಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿರುವುದಿಲ್ಲ. ಈ ಮೊದಲು ಹೆಚ್ಚಿನ ಪ್ರಮಾಣದಲ್ಲಿದ್ದ ಮಳೆಯು ಕಡಿಮೆಯಾಗುತ್ತಾ ಅಲ್ಲಲ್ಲಿ ಬರಗಾಲ ಉಂಟಾಯಿತು. ಅದರ ಪರಿಣಾಮದಿಂದಾಗಿ ನೀರಿನಮೂಲ ಕಡಿಮೆಯಾಯಿತು. ಬ್ರಿಟಿಷ್ ಇಸ್ಟ್ಇಂಡಿಯಾ ಕಂಪನಿಯ ಥಾಮಸ್ ಮನ್ರೋ ಅನಂತಪುರ ಜಿಲ್ಲೆಯನ್ನು ಒಡೆದು, ಅದರ ಒಂದು ಭಾಗವಾದ ಬಳ್ಳಾರಿ ಜಿಲ್ಲೆಯನ್ನು ಹೈದ್ರಾಬಾದ ನಿಜಾಮನಿಂದ ಕಿತ್ತುಕೊಂಡು, ತಮ್ಮ ಅಧೀನದಲ್ಲಿದ್ದ ಮದ್ರಾಸ್ ಪ್ರಾಂತ್ಯಕ್ಕೆ ಸೇರಿಸಿಕೊಂಡನು. ಕ್ರಿ.ಶ 1882ರಲ್ಲಿ ಹಂಡೆ ಪಾಳೆಗಾರರ ಆಡಳಿತ ಕೊನೆಗೊಂಡಿತು. ಆಗ ಥಾಮಸ್ ಮನ್ರೋ ರೈತವಾರಿ ಭೂಕಂದಾಯ ಪದ್ಧತಿಯನ್ನು ಜಾರಿಗೆ ತಂದನು. 1876ಕ್ಕಿಂತ ಮೊದಲು ಬಳ್ಳಾರಿ, ರಾಯಚೂರು ಪ್ರದೇಶಗಳು ಮಳೆಯಾಧಾರಿತವಾಗಿ ನಾಡು ಸಮೃದ್ಧವಾಗಿತ್ತು. ಆದರೆ ನಂತದ ದಿನಮಾನಗಳಲ್ಲಿ ಈ ಪ್ರದೇಶಗಳ ಪರಿಸ್ಥಿತಿ ಬದಲಾಯಿತು. ಮಳೆಯ ಪ್ರಮಾಣದಲ್ಲಿ ಏರಿಳಿತ ಉಂಟಾಗಿ ಬರಗಾಲ ಹೆಚ್ಚಾಗುತ್ತಾ ಹೋಯಿತು. ಮನೆಯಲ್ಲಿ ಆಹಾರ ಧಾನ್ಯಗಳ ಕೊರತೆಯುಂಟಾಯಿತು. ಅಂಗಡಿಯಲ್ಲಿಯೂ ಸಹ ಧಾನ್ಯಗಳ ಕೊರತೆಯುಂಟಾಗಿ ದನ-ಕರುಗಳಿಗೂ ನೀರಿಲ್ಲದ ಸ್ಥಿತಿ ನಿರ್ಮಾಣವಾಯಿತು. ಒಂದು ಅಂದಾಜಿನ ಪ್ರಕಾರ ಐವತ್ತು ಲಕ್ಷಕ್ಕೂ ಅಧಿಕ ಜನ ಬಲಿಯಾದರು ಎಂದು ಹೇಳಲಾಗುತ್ತಿದೆ. ಸತ್ತ ಹೆಣಗಳನ್ನು ಶವಸಂಸ್ಕಾರ ಮಾಡಲಾಗದ ಸ್ಥಿತಿ ಉಂಟಾಯಿತು. ಇದರಿಂದಾಗಿ ಕಾಲರಾ, ಪ್ಲೇಗ್ಗಳಂತಹ ಅತಿ ಭಯಾನಕ ಮಾರಕ ರೋಗಗಳು ಉಲ್ಭಣಗೊಂಡವು. ಸತ್ತ ಹೆಣಗಳ ಶವಸಂಸ್ಕಾರ ಮಾಡಲಾದ ಸ್ಥಿತಿ ಉಂಟಾಯಿತು. ಸತ್ತ ಹೆಣಗಳನ್ನು ನಾಯಿ ನರಿಗಳು ತಿಂದುಹೋದ ದೃಶ್ಯಗಳು ಎದುರಾದವು ಎಂದು ಹೇಳಲಾಗುತ್ತಿದೆ. ಬ್ರಿಟಿಷ್ ಸರಕಾರ ಇಲ್ಲಿನ ಜನರ ಬವಣೆ ನೀಗಿಸಿ ಬದುಕನ್ನು ಹಸನಾಗಿಸಬೇಕು, ನೆಲ ಹಸಿರಾಗಿಸಬೇಕು ಎಂಬ ಆಲೋಚನೆಯೊಂದಿಗೆ ಹಲವು ಯೋಜನೆಗಳನ್ನು ರೂಪಿಸಿದರು. ಬರಕ್ಕೆ ಖರ್ಚು ಮಾಡುವ ಹಣದಲ್ಲಿ ಅಣೆಕಟ್ಟುಗಳನ್ನು ಕಟ್ಟಿ, ಶಾಶ್ವತ ಕಾಲುವೆ ನಿರ್ಮಿಸಿ ಪರಿಹಾರ ಮಾಡಬೇಕೆಂದು ಆಲೋಚಿಸಿದರು. ಹಾಗಾಗಿ ಬ್ರಿಟಿಷ್ ಸರಕಾರಗಳು ಅಲ್ಲಲ್ಲಿ ಅಣೆಕಟ್ಟುಗಳನ್ನು ಕಟ್ಟಿ ಜನರಿಗೆ ಅನುಕೂಲ ಮಾಡಬೇಕೆಂಬ ಯೋಜನೆಗಳನ್ನು ರೂಪಿಸುವ ಕಾರ್ಯದಲ್ಲಿ ತೊಡಗಿದರು.
ಆಗಿನ ಬ್ರಿಟಿಷ್ ನಿರಾವರಿ ತಜ್ಞ ಆರ್ಥರ ಕಾಟನರವರು ದೇಶಾದ್ಯಂತ್ಯ ಅನೇಕ ಅಣೆಕಟ್ಟುಗಳನ್ನು ಕಟ್ಟಿ ಪ್ರಸಿದ್ಧರಾಗಿದ್ದವರು. ಅವರು ಬರಕ್ಕೆ ಖರ್ಚು ಮಾಡುವ ಹಣದಲ್ಲಿ ಕೆಲವು ಭಾಗಗಳನ್ನು ಅಣೆಕಟ್ಟುಗಳನ್ನು ಕಟ್ಟಿ ಜನರ ಬವಣೆ ನೀಗಿಸಬಹುದೆಂದು ಸಲಹೆ ನೀಡಿದರು. ಆದರೆ ಅಂದಿನ ಬ್ರಿಟಿಷ್ ಸರಕಾರ ಹಣದ ಕೊರೆತೆಯ ನೆಪಹೂಡಿತುಂಗಭದ್ರಾ ಯೋಜನೆಯನ್ನು ಕೈ ಬಿಟ್ಟರು. ಕೊನೆಗೆ 1902ರಲ್ಲಿ ಮದ್ರಾಸ್ ಸರಕಾರದ ಮುಖ್ಯ ಎಂಜಿನಿಯರ್ ಆಗಿದ್ದ ಕರ್ನಲ್ ಸ್ಮಾರ್ಟ್ ತುಂಗಭದ್ರಾ ಅಣೆಕಟ್ಟಿನ ನಿರ್ಮಾಣಕ್ಕಾಗಿ ವಿವರವಾದ ವರದಿಯನ್ನು ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಿದರು. ನಂತರ ಬಂದ ಮೆಕೆಂಜಿಯವರು ಮಲ್ಲಾಪುರ ಮತ್ತು ಹೊಳೆನಿಂಗಾಪುರ ಗ್ರಾಮಗಳ ಎರಡು ಗುಡ್ಡಗಳ ನಡುವೆ ಅಣೆಕಟ್ಟನ್ನು ಕಟ್ಟಬಹುದೆಂದು ಸಲಹೆ ನೀಡಿದರು. ಆಗ ಹೈದರಾಬಾದಿನ ನಿಜಾಮನು ನದಿಯ ಮೇಲೆ ನಮಗೂ ಹಕ್ಕಿದೆ ಎಂದು ಹಕ್ಕೊತ್ತಾಯ ಮಾಡಿದರು. ಇದಲ್ಲದೇ ಮುಂಬೈ ಪ್ರಾಂತ್ಯ, ಮೈಸೂರು ಪ್ರಾಂತ್ಯ ಮತ್ತು ಮದ್ರಾಸ ಪ್ರಾಂತ್ಯಗಳೂ ಸಹ ತಮ್ಮ-ತಮ್ಮ ಹಿತಾಸಕ್ತಿಗನುಗುಣವಾಗಿ ಅಣೆಕಟ್ಟು ನಿರ್ಮಿಸುವ ಪ್ರಸ್ತಾವನೆಯನ್ನು ಸಲ್ಲಿಸಿದರು. ಇದರಿಂದಾಗಿಈ ಯೋಜನೆಯು ನೆನೆÀಗುದಿಗೆ ಬಿದ್ದಿತು. ತುಂಗಭದ್ರಾ ಅಣೆಕಟ್ಟು ನಿರ್ಮಿಸಿ ಈಪ್ರದೇಶದ ಬರಸ್ಥಿತಿ ಕಡಿಮೆ ಮಾಡಲು ಹೊರಟ ಮಹತ್ವದ ಕಾರ್ಯಕ್ಕೆ ಹಿನ್ನೆಡೆಯುಂಟಾಯಿತು. ಮದ್ರಾಸ್ ಪ್ರಾಂತ್ಯವು ಆಗಿನ ಮುಖ್ಯ ಇಂಜಿನಿಯರ್ ತಿರುಮಲೆ ಅಯ್ಯರ್ರವರಿಗೆ ಒಂದು ವಸ್ತುನಿಷ್ಠ ಯೋಜನೆ ತಯಾರಿಸಲು ನೇಮಿಸಲಾಯಿತು. ಹೈದರಾಬಾದಿನ ನಿಜಾಮರೂ ಸಹ ಸಿ.ಸಿ.ದಲಾಲ್ ಎಂಬ ಎಂಜಿನಿಯರ್ಗೆ ಒಂದು ಪ್ರತ್ಯೇಕ ವರದಿ ತಯಾರಿಸಲು ನೇಮಿಸಿದರು. ಈ ಎರಡೂ ವರದಿಗಳನ್ನು ಪರಿಶೀಲಿಸಿದ ಮದ್ರಾಸ ಪ್ರಾಂತ್ಯದ ಸರಕಾರ 1942ರಲ್ಲಿ ತಿರುಮಲೆ ಅಯ್ಯರ್ ವರದಿಯನ್ನೇ ಅಂತಿಮಗೊಳಿಸಿ ಅನುಮೋದನೆ ನೀಡಿತು. ಸುಮಾರು ನಲವತೈದು ವರ್ಷಗಳ ಸುದೀರ್ಘ ಚರ್ಚೆ, ವಾದ, ವಿವಾದಗಳ ನಂತರ 1945ರ ಫೆಬ್ರುವರಿ 28ರಂದು ಮದ್ರಾಸ್ ಪ್ರಾಂತೀಯ ಗೌವರ್ನರ್ ಆಗಿದ್ದ ಸರ್ ಅರ್ಥರ್ ಹೋಪ್ ಅಡಿಗಲ್ಲು ಹಾಕಿ, ಈತುಂಗಭದ್ರಾ ಅಣೆಕಟ್ಟು ಯೋಜನೆಯನ್ನು ಪ್ರಾರಂಭಿಸಿದರು.
ಅದರಂತೆ ಮುನಿರಾಬಾದ ಗ್ರಾಮದ ಹತ್ತಿರವಿರುವ ಬೆಟ್ಟಗಳ ಸಾಲಿನಲ್ಲಿ ಒಂದು ಅಣೆಕಟ್ಟು ಕಟ್ಟಲು ಪ್ರಾರಂಭಿಸಿದರು.ಆಗ ದೇಶಕ್ಕೆ ಸ್ವಾತಂತ್ರ ಬಂದ ಕಾರಣ ಮತ್ತು ಹಣದ ಹಂಚಿಕೆ ಹಾಗೂ ಕೊರತೆಯ ಕಾರಣದಿಂದ ಯೋಜನೆಗೆ ಮತ್ತಷ್ಟು ಕಂಟಕ ಉಂಟಾಯಿತು. ಹೇಗೋ ಒಟ್ಟಿನಲ್ಲಿ ತುಂಗಭದ್ರ ಅಣೆಕಟ್ಟು ಯೋಜನೆ ಕುಂಟುತ್ತಾ ಸಾಗಿತು. ಒಟ್ಟಿನಲ್ಲಿ ಆಂಧ್ರಪ್ರದೇಶ ಮತ್ತು ಕರ್ನಾಟಕ ಎರಡೂ ರಾಜ್ಯಗಳ ಹಣದ ಹಂಚಿಕೆಯ ಮೇಲೆ ಅಣೆಕಟ್ಟಿನ ನಿರ್ಮಾಣದ ಕಾರ್ಯ ಸಾಗಿತು. ಈ ಅಣೆಕಟ್ಟು ಕಟ್ಟಲು ಮದ್ರಾಸ ಪ್ರಾಂತದ ಇಂಜಿನಿಯರಿಗಳೇ ಹೆಚ್ಚಿದ್ದರು. ಮುಖ್ಯವಾಗಿ ಈ ಯೋಜನೆ ಪೂರ್ಣಗೊಳಿಸಲು ತಿರುಮಲೆ ಅಯ್ಯರ್ಗೆ ಜವಾಬ್ಧಾರಿ ನೀಡಲಾಗಿತ್ತು. ಇದರ ಜೊತೆಗೆ ಈ ಅಣೆಕಟ್ಟು ನಿಮಾರ್ಣಕ್ಕೆ ಆಂಧ್ರಪ್ರದೇಶ ಮತ್ತು ಮುಖ್ಯವಾಗಿ ತಮಿಳುನಾಡು ರಾಜ್ಯಗಳಿಂದ ಕಾರ್ಮಿಕರನ್ನು ಕರೆಸಲಾಗಿತ್ತು. ಜೊತೆಗೆ ತಂತ್ರಜ್ಞರು, ಇಂಜಿನೀಯರ್ಸ್ಗಳನ್ನು ಕರೆಸಲಾಗಿತ್ತು. ಒಟ್ಟಾರೆ ಅಡೆ-ತಡೆಗಳು ಮತ್ತು ವಾದ-ವಿವಾದಗಳ ನಡುವೆಯೇ ಅಣೆಕಟ್ಟು ಪೂರ್ಣಗೊಂಡು 1953ರ ಜುಲೈ 1ರಂದು ಪ್ರಪ್ರಥಮವಾಗಿ ಕಾಲುವೆಗೆ ನೀರು ಹರಿಸಲಾಯಿತು.
ಡಾ. ಸಿದ್ಧಲಿಂಗಪ್ಪ ಕೊಟ್ನೆಕಲ್
ಹಿರಿಯ ಶ್ರೇಣಿಕನ್ನಡಉಪನ್ಯಾಸಕರು
ಶ್ರೀ ಗವಿಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ,
ಕೊಪ್ಪಳ-583231
ಮೊಬೈಲ್: 9448570340
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್