
ಕೋಲಾರ, ೨೦ ಜೂನ್ (ಹಿ.ಸ) :
ಆ್ಯಂಕರ್ : ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಕರ್ನಾಟಕ ರಾಜ್ಯದಲ್ಲಿ ಮೂರನೇ ಹಂತದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯು ನಡೆಯುತ್ತಿದ್ದು, ಜಿಲ್ಲೆಯಲ್ಲಿ ಈ ಕಾರ್ಯಕ್ರಮವನ್ನು ಅತ್ಯಂತ ಪಾರದರ್ಶಕ ಹಾಗೂ ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ ಅವರು ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗಕ್ಕೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರ ಎಸ್.ಐ.ಆರ್ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರತಿ ವರ್ಷ ಮತದಾರರ ಪಟ್ಟಿಯ ತಿದ್ದುಪಡಿಗಾಗಿ ಸಮ್ಮರಿ ರಿವಿಷನ್ ಪ್ರಕ್ರಿಯೆ ನಡೆಯುತ್ತದೆ. ಆದರೆ, ಎಸ್.ಐ.ಆರ್ ಪ್ರಕ್ರಿಯೆಯು ಸುಮಾರು ೨೪ ವರ್ಷಗಳ ಸುದೀರ್ಘ ಅವಧಿಯ ನಂತರ ನಡೆಯುತ್ತಿರುವ ಅತ್ಯಂತ ಜವಾಬ್ದಾರಿಯುತ ಹಾಗೂ ಮಹತ್ವದ ಕಾರ್ಯವಾಗಿದೆ. ನಗರೀಕರಣ, ಜನರ ವಲಸೆ, ಮರಣ ಹಾಗೂ ವಿಳಾಸ ಬದಲಾವಣೆಯಿಂದಾಗಿ ಮತದಾರರ ಪಟ್ಟಿಯಲ್ಲಿ ಕಂಡು ಬರುವ ನ್ಯೂನತೆಗಳನ್ನು ಸರಿಪಡಿಸಿ, ಸಂಪೂರ್ಣವಾಗಿ ಹೊಸ ಹಾಗೂ ಸ್ವಚ್ಛ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವುದು ಈ ಪ್ರಕ್ರಿಯೆಯ ಮುಖ್ಯ ಉದ್ದೇಶವಾಗಿದೆ ಎಂದು ಜಿಲ್ಲಾಧಿಕಾರಿಗಳು ವಿವರಿಸಿದರು.
ಜಿಲ್ಲೆಯಾದ್ಯಂತ ಒಟ್ಟು ೧,೫೩೮ ಬಿ.ಎಲ್.ಓ ಕಾರ್ಯನಿರ್ವಹಿಸುತ್ತಿದ್ದು, ಪ್ರತಿಯೊಬ್ಬ ಮತದಾರರ ಮನೆಗೆ ಭೇಟಿ ನೀಡಿ ಗಣತಿ ನಡೆಸಲಿದ್ದಾರೆ. ಒಂದು ವೇಳೆ ಮತದಾರರು ಮನೆಯಲ್ಲಿ ಇಲ್ಲದಿದ್ದರೆ ಕನಿಷ್ಠ ಮೂರು ಬಾರಿ ಬಿ.ಎಲ್.ಓಗಳು ಆ ಮನೆಗೆ ಭೇಟಿ ನೀಡಬೇಕಾಗುತ್ತದೆ. ಇದಕ್ಕಾಗಿ ಪರ್ಪಲ್ ಕಲರ್ (ಕೆಲಸ ಮುಗಿದಿರುವ ಮನೆಗಳಿಗೆ) ಮತ್ತು ರೆಡ್ ಕಲರ್ (ಬೀಗ ಹಾಕಿರುವ ಮನೆಗಳಿಗೆ) ಸ್ಟಿಕ್ಕರ್ಗಳ ಮೂಲಕ ಪ್ರತ್ಯೇಕಿಸಿ ಗುರುತಿಸಲಾಗುತ್ತದೆ.
ಬಿ.ಎಲ್.ಓಗಳು ಪ್ರತಿ ಮತದಾರರಿಗೆ ಗಣತಿ ನಮೂನೆಯನ್ನು ಎರಡು ಪ್ರತಿಗಳಲ್ಲಿ ವಿತರಿಸಲಿದ್ದಾರೆ. ಒಂದು ಪ್ರತಿಯನ್ನು ಭರ್ತಿ ಮಾಡಿ ಸಹಿ ರಸೀದಿಯೊಂದಿಗೆ ಮತದಾರರು ತಮ್ಮ ಬಳಿ ಸುರಕ್ಷಿತವಾಗಿಟ್ಟುಕೊಳ್ಳಬೇಕು. ಯಾವುದೇ ಮತದಾರರು ಈ ಗಣತಿ ನಮೂನೆಯನ್ನು ಭರ್ತಿ ಮಾಡಿ ಸಹಿಯೊಂದಿಗೆ ಬಿ.ಎಲ್.ಓಗೆ ವಾಪಸ್ ನೀಡದಿದ್ದರೆ, ಅವರ ಹೆಸರನ್ನು ಕರಡು ಮತದಾರರ ಪಟ್ಟಿಯಿಂದ ಕೈಬಿಡಲಾಗುತ್ತದೆ. ಮತದಾರರು ಆನ್ಲೈನ್ ಮೂಲಕವೂ ಸಹ ಈ ಗಣತಿ ನಮೂನೆಯನ್ನು ಭರ್ತಿ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಕರಡು ಪಟ್ಟಿಯಲ್ಲಿ ಹೆಸರು ಬಿಟ್ಟುಹೋಗಿ ಆಕ್ಷೇಪಣೆ ಸಲ್ಲಿಸುವ ಸಂದರ್ಭದಲ್ಲಿ ಆಯೋಗವು ಸೂಚಿಸಿರುವ ಆಧಾರ್ ಕಾರ್ಡ್ ಹೊರತುಪಡಿಸಿದ ಇತರೇ ೧೧ ಅರ್ಹ ಸರ್ಕಾರಿ ದಾಖಲೆಗಳಲ್ಲಿ (ಉದಾಹರಣೆಗೆ: ಜನನ ಪ್ರಮಾಣ ಪತ್ರ, ನಿವಾಸಿ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ ಇತ್ಯಾದಿ) ಯಾವುದಾದರೂ ಒಂದನ್ನು ಕಡ್ಡಾಯವಾಗಿ ಸಲ್ಲಿಸಬೇಕಿರುತ್ತದೆ.
ಚುನಾವಣಾ ಪ್ರಕ್ರಿಯೆಯು ಅತ್ಯಂತ ಗಂಭೀರ ಹಾಗೂ ಕಾನೂನಾತ್ಮಕ ವಿಷಯವಾಗಿದ್ದು, ತರಬೇತಿಯನ್ನು ಸಮರ್ಪಕವಾಗಿ ಪಡೆದು ಪ್ರತಿಯೊಬ್ಬರೂ ತಮಗೆ ವಹಿಸಿದ ಜವಾಬ್ದಾರಿಯನ್ನು ಶೇ ೧೦೦ ರಷ್ಟು ನಿಷ್ಠೆಯಿಂದ ನಿಭಾಯಿಸಬೇಕು. ಯಾವುದೇ ಹಂತದಲ್ಲಿ ನಿರ್ಲಕ್ಷ್ಯ ತೋರಿದರೆ ಭಾರತ ಚುನಾವಣಾ ಆಯೋಗದ ನಿಯಮಾವಳಿಗಳ ಅಡಿಯಲ್ಲಿ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಎಚ್ಚರಿಸಿದರು.
ಇದೇ ವೇಳೆ ಅಕ್ಟೋಬರ್ ೭, ೨೦೨೬ ರೊಳಗೆ ಈ ಪ್ರಕ್ರಿಯೆಯ ಎಲ್ಲಾ ಹಂತಗಳನ್ನು ವ್ಯವಸ್ಥಿತವಾಗಿ ಮುಕ್ತಾಯಗೊಳಿಸಲು ಕಾಲಮಿತಿಯನ್ನು ನಿಗದಿಪಡಿಸಲಾಗಿದೆ ಎಂದು ಅವರು ತಿಳಿಸಿದರು.
ತರಬೇತಿ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಎಸ್. ಎಂ. ಮಂಗಳ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯಕ್ರಮ ನಿರ್ವಾಹಕ ಅಧಿಕಾರಿ ಡಾ. ಪ್ರವೀಣ್. ಪಿ. ಬಾಗೇವಾಡಿ, ಉಪಕಾರ್ಯದರ್ಶಿ ಟಿ. ಕೆ. ರಮೇಶ್, ಉಪವಿಭಾಗಾಧಿಕಾರಿ ಜಂಬಗಿ ರೇಣುಕಾ ಪ್ರಸಾದ್ ದಿಲೀಪ್, ಎಲ್ಲಾ ತಹಶೀಲ್ದಾರರು ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಮತ್ತು ತಾಲೂಕು ಮಟ್ಟದ ನೋಡಲ್ ಅಧಿಕಾರಿಗಳು ಹಾಗೂ ಬಿ.ಎಲ್.ಓ ಸೂಪರ್ವೈಸರ್ಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್