
ಕೋಲಾರ, ೨೦ ಜೂನ್ (ಹಿ.ಸ) :
ಆ್ಯಂಕರ್ : “ಹಿರಿಯ ನಾಗರಿಕರು ನಮ್ಮ ದೇಶದ ಅಮೂಲ್ಯ ಆಸ್ತಿ. ಅವರು ಅಪಾರವಾದ ಅನುಭವವನ್ನು ಹೊಂದಿದ್ದು, ಅವರ ಮಾರ್ಗದರ್ಶನ ಇಂದಿನ ಯುವ ಪೀಳಿಗೆ ಹಾಗೂ ಸಮಾಜಕ್ಕೆ ಅತ್ಯಂತ ಅಗತ್ಯವಾಗಿದೆ. ಹಿರಿಯರನ್ನು ಕಡೆಗಣಿಸದೆ ಅವರಿಗೆ ಪ್ರಥಮ ಆದ್ಯತೆ ನೀಡಿ ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಪ್ರಭು ಎನ್. ಬಡಿಗೇರ್ ತಿಳಿಸಿದರು.
ನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ, ವಿಶ್ವ ಹಿರಿಯ ನಾಗರಿಕರ ಮೇಲಿನ ದೌರ್ಜನ್ಯ ತಡೆ ಜಾಗೃತಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹಿರಿಯ ನಾಗರಿಕರ ಹಕ್ಕುಗಳ ರಕ್ಷಣೆಗೆ ಕಾನೂನಿನಲ್ಲಿರುವ ಅವಕಾಶಗಳನ್ನು ಒತ್ತಿ ಹೇಳಿದರು.ಹಿರಿಯ ನಾಗರಿಕರಿಗೆ ಸಂಬ0ಧಿಸಿದ ನ್ಯಾಯಾಲಯದ ಪ್ರಕರಣಗಳನ್ನು ಕೇವಲ ಎರಡು ತಿಂಗಳ ಅವಧಿಯಲ್ಲಿ ಇತ್ಯರ್ಥಪಡಿಸಲು ಸಹಾಯಕ ಆಯುಕ್ತರಿಗೆ ಕಾನೂನಿನಲ್ಲಿ ಅವಕಾಶವಿದೆ.
ಯಾವುದೇ ಕಚೇರಿ ಅಥವಾ ನ್ಯಾಯಾಲಯಗಳಲ್ಲಿ ಹಿರಿಯ ನಾಗರಿಕರ ಅರ್ಜಿಗಳಿಗೆ ಮೊದಲ ಆದ್ಯತೆ ನೀಡಿ ಇತ್ಯರ್ಥಪಡಿಸಬೇಕು. ತಂದೆ-ತಾಯಿಯ ಆಸ್ತಿಯನ್ನು ತಮ್ಮ ಹೆಸರಿಗೆ ಮಾಡಿಸಿಕೊಂಡು ನಂತರ ಅವರನ್ನು ಸಾಲಹದೆ ಬೀದಿಗೆ ತಳ್ಳುವ ಮಕ್ಕಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಹಿರಿಯ ನಾಗರಿಕರ ಸಂರಕ್ಷಣಾ ಕಾಯ್ದೆ ೨೦೦೭ ರಲ್ಲಿ ಅವಕಾಶವಿದ್ದು, ಆಸ್ತಿಯನ್ನು ಮರಳಿ ಪೋಷಕರ ಹೆಸರಿಗೆ ವರ್ಗಾಯಿಸಬಹುದಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಪರ ಜಿಲ್ಲಾಧಿಕಾರಿಗಳಾದ ಎಸ್.ಎಂ. ಮಂಗಳಾ ಮಾತನಾಡಿ,ವಯಸ್ಸಾದಂತೆ ಹಿರಿಯರು ಸಣ್ಣ ಮಕ್ಕಳಂತಾಗುತ್ತಾರೆ. ಬಾಲ್ಯದಲ್ಲಿ ಪೋಷಕರು ನಮ್ಮನ್ನು ಹೇಗೆ ಪ್ರೀತಿಯಿಂದ ಸಲಹುತ್ತಾರೋ, ಹಾಗೆಯೇ ವೃದ್ಧಾಪ್ಯದಲ್ಲಿ ಅವರಿಗೆ ಆರೋಗ್ಯ ಸಮಸ್ಯೆಗಳು ಎದುರಾದಾಗ ಮಕ್ಕಳು ಪ್ರೀತಿಯಿಂದ 'ನರ್ಸಿಂಗ್ ಕೇರ್' ನೀಡಬೇಕು. ಕೇವಲ ಹಣ ನೀಡುವುದಕ್ಕಿಂತ ಅವರೊಂದಿಗೆ ಪ್ರೀತಿಯಿಂದ ಮಾತನಾಡಿ ಧೈರ್ಯ ತುಂಬುವುದು ಮುಖ್ಯ ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಎಲ್ ಶ್ರೀನಿವಾಸ್ ಮಾತನಾಡಿ, ಪೋಷಕರು ಮಕ್ಕಳ ಏಳಿಗೆಗಾಗಿ ತಮ್ಮ ಜೀವನವನ್ನೇ ಸವೆಯುತ್ತಾರೆ. ಆದರೆ ಇಂದು ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿರುವುದು ಖೇದಕರ. ತಂದೆ-ತಾಯಿಯನ್ನು ಗೌರವಿಸದ ಜೀವನ ಸಾರ್ಥಕವಲ್ಲ ಎಂದು ಮಾರ್ಮಿಕವಾಗಿ ನುಡಿದರು.
ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿಗಳಾದ ಶ್ರೀಮತಿ ಆರ್. ಮಂಜುಳಾ ಅವರು ಇಲಾಖೆಯ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಹಿರಿಯ ನಾಗರಿಕರ ನೆರವಿಗಾಗಿ '೧೦೯೦' ಸಹಾಯವಾಣಿ ಕೇಂದ್ರ ಕಾರ್ಯನಿರ್ವಹಿಸುತ್ತಿದ್ದು, ಈ ವರ್ಷ ಬಂದ ೨೪ ದೂರುಗಳಲ್ಲಿ ೨೦ ಪ್ರಕರಣಗಳನ್ನು ಯಶಸ್ವಿಯಾಗಿ ಇತ್ಯರ್ಥಪಡಿಸಲಾಗಿದೆ ಎಂದರು.
ಜಿಲ್ಲಾ ಆಸ್ಪತ್ರೆಯಲ್ಲಿ ಹಿರಿಯ ನಾಗರಿಕರಿಗಾಗಿ ೧೦ ಹಾಸಿಗೆಗಳ ಉಚಿತ ವಾರ್ಡ್ ಕಾಯ್ದಿರಿಸಲಾಗಿದ್ದು, ಉಚಿತ ಔಷಧೋಪಚಾರ ನೀಡಲಾಗುತ್ತಿದೆ. ಕೀಲ್ಕೋಟೆ ಕ್ರೀಡಾಂಗಣದ ಬಳಿ 'ಅಗಲು ಯೋಗಕ್ಷೇಮ ಕೇಂದ್ರ' ನಡೆಸಲಾಗುತ್ತಿದ್ದು, ಪ್ರತಿದಿನ ೫೦ಕ್ಕೂ ಹೆಚ್ಚು ಹಿರಿಯರು ಇದರ ಸೌಲಭ್ಯ ಪಡೆಯುತ್ತಿದ್ದಾರೆ. ಈ ವರ್ಷ ಅಲಿಂಕೋ ಸಂಸ್ಥೆಯ ವತಿಯಿಂದ ೬೮೦ ವೃದ್ಧರಿಗೆ ಸಾಧನ ಸಲಕರಣೆಗಳನ್ನು ವಿತರಿಸಲಾಗಿದೆ ಎಂದರು
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಟಿ.ಎಂ. ರಾಮಕೃಷ್ಣೇಗೌಡ, ಸಿ ಡಿ ಪಿ ಓ ನಾಗರತ್ನಮ್ಮ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ಹಿರಿಯ ನಾಗರಿಕರು ಮತ್ತು ಮಹಿಳೆಯರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್