
ಬೆಳಗಾವಿ, 13 ಜೂನ್ (ಹಿ.ಸ.) :
ಆ್ಯಂಕರ್ : ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವತಿಯಿಂದ ನಿರ್ಮಿಸಲಾಗುತ್ತಿರುವ ಬೆಳಗಾವಿ (ಶೇಗಣಮಟ್ಟಿ)–ಹುನಗುಂದ–ರಾಯಚೂರು ಚತುಷ್ಪಥ ರಸ್ತೆ ಯೋಜನೆಯ ಕಾಮಗಾರಿಯ ಪ್ರಗತಿ ಪರಿಶೀಲಿಸಲು ಸಂಸದ ಜಗದೀಶ್ ಶೆಟ್ಟರ್ ಅವರು ಶನಿವಾರ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ವೀಕ್ಷಣೆ ನಡೆಸಿದರು.
ಬೆಳಗಾವಿ ಜಿಲ್ಲೆಯ ಶೇಗಣಮಟ್ಟಿ ಗ್ರಾಮದ ಸಮೀಪದಿಂದ ಆರಂಭವಾಗುವ ಪ್ಯಾಕೇಜ್–1 ಅಡಿಯಲ್ಲಿ ಸುಮಾರು 42 ಕಿಲೋಮೀಟರ್ ಉದ್ದದ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಅದರ ವಿವಿಧ ಹಂತಗಳ ಪ್ರಗತಿಯನ್ನು ಸಂಸದರು ಪರಿಶೀಲಿಸಿದರು. ಈ ವೇಳೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಭಿಯಂತರ ಕಿಶೋರ ಹಾಗೂ ಇತರ ಅಧಿಕಾರಿಗಳು ಯೋಜನೆಯ ತಾಂತ್ರಿಕ ವಿವರಗಳು, ಕಾಮಗಾರಿಯ ಪ್ರಗತಿ ಮತ್ತು ಮುಂದಿನ ಕಾರ್ಯಯೋಜನೆ ಕುರಿತು ಮಾಹಿತಿ ನೀಡಿದರು.
ಕಾಮಗಾರಿ ಗುಣಮಟ್ಟ ಹಾಗೂ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಸಂಸದರು, ಈ ರಸ್ತೆ ನಿರ್ಮಾಣದಿಂದ ಉತ್ತರ ಕರ್ನಾಟಕ ಭಾಗದ ಸಂಪರ್ಕ ವ್ಯವಸ್ಥೆ ಮತ್ತಷ್ಟು ಸುಧಾರಣೆಯಾಗಲಿದ್ದು, ವ್ಯಾಪಾರ, ಕೈಗಾರಿಕೆ ಹಾಗೂ ಸಾರಿಗೆ ಕ್ಷೇತ್ರಗಳಿಗೆ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಬೆಳಗಾವಿ ಗ್ರಾಮೀಣ ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಸ್ ಪಾಟೀಲ, ಬೆಳಗಾವಿ ಮಹಾನಗರ ಬಿಜೆಪಿ ಜಿಲ್ಲಾಧ್ಯಕ್ಷೆ ಗೀತಾ ಸುತಾರ, ಪಕ್ಷದ ಮುಖಂಡರಾದ ಮಾರುತಿ ಜಿರಲಿ, ಆರ್.ಎಸ್. ಮುತಾಲಿಕ, ರಮೇಶ್ ದೇಶಪಾಂಡೆ, ಮುರಗೇಂದ್ರಗೌಡ ಪಾಟೀಲ ಸೇರಿದಂತೆ ಹಲವು ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.