ಸಂತ ಶಿಶುನಾಳ ಶರೀಫರ ತತ್ವಗಳು ಸಮಾಜಕ್ಕೆ ದಾರಿದೀಪ : ಶೆಟ್ಟರ್
ಗದಗ, 13 ಜೂನ್ (ಹಿ.ಸ.) : ಆ್ಯಂಕರ್ : ಕನ್ನಡ ಸಾಹಿತ್ಯವು ವಿಶ್ವಮಾನವೀಯ ಮೌಲ್ಯಗಳನ್ನು ಸಾರುವ ಅನೇಕ ಸಾಹಿತ್ಯ ಪ್ರಕಾರಗಳ ಮೂಲಕ ಸಮಾಜವನ್ನು ಜಾಗೃತಗೊಳಿಸುತ್ತ ಬಂದಿದೆ. ಶರಣ ಸಾಹಿತ್ಯ, ವಚನ ಸಾಹಿತ್ಯ, ಜನಪದ ಸಾಹಿತ್ಯ, ಬಂಡಾಯ ಸಾಹಿತ್ಯ ಹಾಗೂ ಚುಟುಕು ಸಾಹಿತ್ಯಗಳು ಕನ್ನಡ ನಾಡಿನ ಸಾಂಸ್ಕೃತಿಕ ಶ್ರೀ
ಫೋಟೋ


ಗದಗ, 13 ಜೂನ್ (ಹಿ.ಸ.) :

ಆ್ಯಂಕರ್ : ಕನ್ನಡ ಸಾಹಿತ್ಯವು ವಿಶ್ವಮಾನವೀಯ ಮೌಲ್ಯಗಳನ್ನು ಸಾರುವ ಅನೇಕ ಸಾಹಿತ್ಯ ಪ್ರಕಾರಗಳ ಮೂಲಕ ಸಮಾಜವನ್ನು ಜಾಗೃತಗೊಳಿಸುತ್ತ ಬಂದಿದೆ. ಶರಣ ಸಾಹಿತ್ಯ, ವಚನ ಸಾಹಿತ್ಯ, ಜನಪದ ಸಾಹಿತ್ಯ, ಬಂಡಾಯ ಸಾಹಿತ್ಯ ಹಾಗೂ ಚುಟುಕು ಸಾಹಿತ್ಯಗಳು ಕನ್ನಡ ನಾಡಿನ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುತ್ತವೆ. ಅದರಲ್ಲೂ ಜನಪದ ಸಾಹಿತ್ಯದ ಮೂಲಕ ಸಮಾಜಕ್ಕೆ ಮೌಲ್ಯಯುತ ಸಂದೇಶಗಳನ್ನು ನೀಡಿದ ಮಹಾನ್ ದಾರ್ಶನಿಕರಲ್ಲಿ ಸಂತ ಶಿಶುನಾಳ ಶರೀಫರು ಪ್ರಮುಖ ಸ್ಥಾನ ಹೊಂದಿದ್ದಾರೆ ಎಂದು ಗದಗ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕ ಸಿದ್ದಲಿಂಗೇಶ್ ಸಜ್ಜನ ಶೆಟ್ಟರ್ ಹೇಳಿದರು.

ನಗರದ ಬಣ್ಣದ ಮನೆ ಸಾಂಸ್ಕೃತಿಕ ವೇದಿಕೆ ಹಾಗೂ ಜೇನುಗೂಡು ಜಾನಪದ ಕಲಾತಂಡ, ಹುಯಿಲಗೋಳ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ‘ಈ ತಿಂಗು’ ಸುನಾದ ಸಾಂಸ್ಕೃತಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಂತ ಶಿಶುನಾಳ ಶರೀಫರು ತಮ್ಮ ತತ್ವಪದಗಳು ಮತ್ತು ಜನಪದ ಗೀತೆಗಳ ಮೂಲಕ ಸಮಾಜದಲ್ಲಿ ಸಮಾನತೆ, ಸೌಹಾರ್ದತೆ ಹಾಗೂ ಮಾನವೀಯತೆಯ ಸಂದೇಶವನ್ನು ಬಿತ್ತಿದ ಮಹಾನ್ ಸಂತರು. ಹಿಂದೂ-ಮುಸ್ಲಿಂ ಭಾವೈಕ್ಯತೆಯ ಪ್ರತೀಕವಾಗಿದ್ದ ಅವರು ಜಾತಿ, ಮತ ಮತ್ತು ಪಂಥಗಳ ಗೋಡೆಗಳನ್ನು ಮೀರಿ ಮಾನವೀಯತೆಯ ಮೌಲ್ಯಗಳನ್ನು ಪ್ರತಿಪಾದಿಸಿದರು. ಅವರ ಸಾಹಿತ್ಯದಲ್ಲಿ ಜೀವನದ ಸತ್ಯಗಳು, ನೈತಿಕ ಮೌಲ್ಯಗಳು ಮತ್ತು ಸಾಮಾಜಿಕ ಜಾಗೃತಿಯ ಸಂದೇಶಗಳು ಅಡಕವಾಗಿದ್ದು, ಇಂದಿನ ಪೀಳಿಗೆಗೂ ಮಾರ್ಗದರ್ಶನ ನೀಡುತ್ತಿವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಜನಪದ ಕಲಾವಿದ ಹಾಗೂ ಸಾಮಾಜಿಕ ಚಿಂತಕ ಬಸವರಾಜ ಈರಣ್ಣವರ ಅವರು ಸಂತ ಶಿಶುನಾಳ ಶರೀಫರ ಪ್ರಸಿದ್ಧ ತತ್ವಪದಗಳನ್ನು ಸುಶ್ರಾವ್ಯವಾಗಿ ಹಾಡಿ ಸಭಿಕರನ್ನು ರಂಜಿಸಿದರು. ಅಲ್ಲದೆ ತತ್ವಪದಗಳಲ್ಲಿರುವ ತಾತ್ವಿಕ ಅಂಶಗಳು, ಒಳಾರ್ಥಗಳು ಹಾಗೂ ಅವುಗಳ ಸಾಮಾಜಿಕ ಮಹತ್ವವನ್ನು ವಿವರಿಸಿದರು. ಅವರ ಗಾಯನ ಮತ್ತು ನಿರೂಪಣೆಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿದ ವೆಲ್ಫೇರ್ ಟೌನ್ಶಿಪ್ ಸಂಘದ ಅಧ್ಯಕ್ಷ ಜನಾಬ್ ಆರ್.ವೈ. ನದಾಫ್ ಮಾತನಾಡಿ, ಸಂತ ಶಿಶುನಾಳ ಶರೀಫರು ಮಾನವೀಯ ಮೌಲ್ಯಗಳ ಪ್ರತಿಪಾದಕರಾಗಿದ್ದು, ಅವರ ಚಿಂತನೆಗಳು ಕಾಲಾತೀತವಾಗಿವೆ. ಜಾತಿ, ಮತ, ಧರ್ಮಗಳ ಮಿತಿಗಳನ್ನು ಮೀರಿ ಬದುಕಿದ ಅವರು ಸಮಾಜಕ್ಕೆ ಶಾಂತಿ, ಪ್ರೀತಿ ಹಾಗೂ ಸಹಬಾಳ್ವೆಯ ಸಂದೇಶವನ್ನು ನೀಡಿದರು. ಅವರ ಸಾಹಿತ್ಯ ಮತ್ತು ತತ್ವಗಳು ಮುಂದಿನ ಪೀಳಿಗೆಗಳಿಗೂ ಪ್ರೇರಣೆಯಾಗಲಿವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶರಣಪ್ಪ ಅವರು ತಬಲಾ ಸಾಥ್ ನೀಡಿ ಸಂಗೀತ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು. ಶಾಂತಕುಮಾರ ಭಜಂತ್ರಿ, ಎಂ.ಬಿ. ಮಡಿವಾಳರ, ಎ.ಎ. ನದಾಫ್, ಅಶೋಕ ಅಗಸಿಮನಿ, ವಿ.ಎಲ್. ತಮ್ಮನಗೌಡ್ರ, ವಿಜಯ ಕಿರೇಸೂರ, ಶ್ರೀಮತಿ ಭಾರತಿ ಕಿರೇಸೂರ ಸೇರಿದಂತೆ ಅನೇಕ ಸಾಹಿತ್ಯಾಸಕ್ತರು, ಕಲಾವಿದರು ಮತ್ತು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಮಹೇಶ ಶಟವಾಜಿ ಕಾರ್ಯಕ್ರಮವನ್ನು ನಿರೂಪಿಸಿದರು. ಟಿ.ಆರ್. ಬೇವಿನಮರದ ವಂದಿಸಿದರು. ಶಿಶುನಾಳ ಶರೀಫರ ಸಾಹಿತ್ಯ, ತತ್ವಚಿಂತನೆ ಹಾಗೂ ಜನಪದ ಪರಂಪರೆಯ ಮಹತ್ವವನ್ನು ಜನರಿಗೆ ಪರಿಚಯಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande