
ಗದಗ, 13 ಜೂನ್ (ಹಿ.ಸ.) :
ಆ್ಯಂಕರ್ : ಆರಿ ವರ್ಕ್ ಕೌಶಲ್ಯದ ಮೂಲಕ ನೂರಾರು ಮಹಿಳೆಯರ ಬದುಕಿಗೆ ಹೊಸ ದಾರಿ ತೆರೆದು, ಆರ್ಥಿಕ ಸ್ವಾವಲಂಬನೆಯತ್ತ ಮುನ್ನಡೆಸಿರುವ ಗದಗದ ಭಾರ್ಗವಿ ಮಹಿಳಾ ಫೌಂಡೇಶನ್ ಸಂಸ್ಥಾಪಕಿ ಕವಿತಾ ಕೊಣ್ಣೂರ ಅವರಿಗೆ ಅಂತಾರಾಷ್ಟ್ರೀಯ ಮಟ್ಟದ ಗೌರವ ಲಭಿಸಿದೆ.
ಇತ್ತೀಚೆಗೆ ಮಲೇಶಿಯಾದಲ್ಲಿ ನಡೆದ ಘಂಡಿಟಜ ಈಝಠಟಿ ವರ್ಲ್ಡ್ ಫ್ಯಾಷನ್ ಸಮ್ಮಿಟ್ 2026 ಕಾರ್ಯಕ್ರಮದಲ್ಲಿ ಉಗಾಂಡಾದ ಘಂಡಿಟಜ ವರ್ಲ್ಡ್ ಫ್ಯಾಷನ್ ವಿಶ್ವವಿದ್ಯಾಲಯದ ವತಿಯಿಂದ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿ ಸನ್ಮಾನಿಸಲಾಯಿತು.
ಆರಿ ವರ್ಕ್ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿರುವುದರ ಜೊತೆಗೆ, ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿಸಲು ನೀಡಿದ ನಿರಂತರ ಕೊಡುಗೆಯನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಕೇವಲ ತರಬೇತಿ ನೀಡುವುದಷ್ಟೇ ಅಲ್ಲದೆ, ತಮ್ಮನ್ನು ಅರಸಿ ಬರುವ ಮಹಿಳೆಯರಿಗೆ ಮಾರ್ಗದರ್ಶಕಿಯಾಗಿ, ಆತ್ಮವಿಶ್ವಾಸ ತುಂಬುವ ಅಕ್ಕನ ಸ್ಥಾನದಲ್ಲಿ ನಿಂತು ಕವಿತಾ ಕೊಣ್ಣೂರ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಅನೇಕ ಮಹಿಳೆಯರು ಸ್ವಂತ ಉದ್ಯಮ ಆರಂಭಿಸಿ ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಿದ್ದಾರೆ.
ಸಾಮಾಜಿಕ ಸೇವಾ ಕ್ಷೇತ್ರದಲ್ಲಿಯೂ ಸಕ್ರಿಯವಾಗಿರುವ ಅವರು ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ರೂಪಿಸಿ ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದಾರೆ.
ಗೌರವ ಸ್ವೀಕರಿಸಿದ ಸಂದರ್ಭದಲ್ಲಿ ಮಾತನಾಡಿದ ಕವಿತಾ ಕೊಣ್ಣೂರ ಅವರು,
“ಇದು ನನ್ನೊಬ್ಬಳ ಸಾಧನೆಯಲ್ಲ. ನನ್ನ ಕುಟುಂಬ, ಗುರುಗಳು, ಸ್ನೇಹಿತರು ಹಾಗೂ ನನ್ನನ್ನು ಬೆಂಬಲಿಸಿದ ಎಲ್ಲರ ಆಶೀರ್ವಾದದ ಫಲ. ಈ ಗೌರವ ನನ್ನ ಸಾಮಾಜಿಕ ಸೇವೆಗೆ ಮತ್ತಷ್ಟು ಪ್ರೇರಣೆ ನೀಡಿದೆ” ಎಂದು ಸಂತಸ ವ್ಯಕ್ತಪಡಿಸಿದರು.
ಜಿಲ್ಲೆಗೆ ಹೆಮ್ಮೆಯ ಕ್ಷಣವಾಗಿರುವ ಈ ಸಾಧನೆಯ ಕುರಿತು ಗದಗ ಜಿಲ್ಲೆಯ ವಿವಿಧ ಸಂಘ-ಸಂಸ್ಥೆಗಳು, ಸಮಾಜಮುಖಿ ಸಂಘಟನೆಗಳು ಹಾಗೂ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.
ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ವಿವಿಧ ದೇಶಗಳ ಗಣ್ಯರು, ಸಮಾಜಸೇವಕರು ಹಾಗೂ ವಿವಿಧ ಕ್ಷೇತ್ರಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಈ ಗೌರವವು ತಮ್ಮ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದ್ದು, ಸಮಾಜ ಸೇವೆಯಲ್ಲಿ ಮತ್ತಷ್ಟು ತೊಡಗಿಸಿಕೊಳ್ಳಲು ಪ್ರೇರಣೆ ನೀಡಿದೆ ಎಂದು ಕವಿತಾ ಕೊಣ್ಣೂರ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP