ಮಣ್ಣಿನ ಸಂರಕ್ಷಣೆಗಾಗಿ ‘ಖೇತ್ ಬಚಾವೋ ಅಭಿಯಾನ’
ಗದಗ, 13 ಜೂನ್ (ಹಿ.ಸ.) : ಆ್ಯಂಕರ್ : ಮಣ್ಣಿನ ಫಲವತ್ತತೆ ಉಳಿಸಿ ಕೃಷಿಯನ್ನು ಸುಸ್ಥಿರಗೊಳಿಸುವ ಉದ್ದೇಶದಿಂದ ಐಸಿಎಆರ್-ಕೆ.ಎಚ್. ಪಾಟೀಲ ಕೃಷಿ ವಿಜ್ಞಾನ ಕೇಂದ್ರ, ಹುಲಕೋಟಿ ಹಾಗೂ ಕೃಷಿ ಇಲಾಖೆ, ಗದಗ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ಖೇತ್ ಬಚಾವೋ ಅಭಿಯಾನ’ಕ್ಕೆ ಡಾ. ಎಸ್. ರಾಮೇನಹಳ್ಳಿಯಲ್ಲಿ ಚಾಲನೆ
ಫೋಟೋ


ಗದಗ, 13 ಜೂನ್ (ಹಿ.ಸ.) :

ಆ್ಯಂಕರ್ : ಮಣ್ಣಿನ ಫಲವತ್ತತೆ ಉಳಿಸಿ ಕೃಷಿಯನ್ನು ಸುಸ್ಥಿರಗೊಳಿಸುವ ಉದ್ದೇಶದಿಂದ ಐಸಿಎಆರ್-ಕೆ.ಎಚ್. ಪಾಟೀಲ ಕೃಷಿ ವಿಜ್ಞಾನ ಕೇಂದ್ರ, ಹುಲಕೋಟಿ ಹಾಗೂ ಕೃಷಿ ಇಲಾಖೆ, ಗದಗ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ಖೇತ್ ಬಚಾವೋ ಅಭಿಯಾನ’ಕ್ಕೆ ಡಾ. ಎಸ್. ರಾಮೇನಹಳ್ಳಿಯಲ್ಲಿ ಚಾಲನೆ ನೀಡಲಾಯಿತು.

ಕಾರ್ಯಕ್ರಮವನ್ನು ಜಿಲ್ಲಾ ಕೃಷಿ ಜಂಟಿ ನಿರ್ದೇಶಕಿ ಚೇತನಾ ಪಾಟೀಲ ಅವರು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಯೂರಿಯಾ, ಡಿಎಪಿ ಸೇರಿದಂತೆ ವಿವಿಧ ರಾಸಾಯನಿಕ ಗೊಬ್ಬರಗಳ ತಯಾರಿಕೆಗೆ ಅಗತ್ಯ ಕಚ್ಚಾ ವಸ್ತುಗಳ ಕೊರತೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಗೊಬ್ಬರಗಳ ಲಭ್ಯತೆ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು. ಈ ಹಿನ್ನೆಲೆಯಲ್ಲಿ ರೈತರು ಮಣ್ಣಿನ ಪರೀಕ್ಷೆ ಆಧರಿಸಿ ಸಮತೋಲನ ಗೊಬ್ಬರ ಬಳಕೆಗೆ ಒತ್ತು ನೀಡಬೇಕೆಂದು ಅವರು ಸಲಹೆ ನೀಡಿದರು.

ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆಯಿಂದ ಮಣ್ಣಿನ ಗುಣಮಟ್ಟ ಕುಸಿಯುತ್ತಿದ್ದು, ದೀರ್ಘಾವಧಿಯಲ್ಲಿ ಬೆಳೆ ಉತ್ಪಾದನೆ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಅವರು ಹೇಳಿದರು. ಹಸಿರೆಲೆ ಗೊಬ್ಬರ, ಕೊಟ್ಟಿಗೆ ಗೊಬ್ಬರ ಹಾಗೂ ಎರೆಹುಳು ಗೊಬ್ಬರಗಳಂತಹ ಸಾವಯವ ವಿಧಾನಗಳನ್ನು ಅಳವಡಿಸಿಕೊಂಡರೆ ಮಣ್ಣಿನ ಆರೋಗ್ಯ ಕಾಪಾಡಿ ಉತ್ತಮ ಇಳುವರಿ ಪಡೆಯಬಹುದು ಎಂದು ಅವರು ಅಭಿಪ್ರಾಯಪಟ್ಟರು.

“ಸಾವಯವ ಹಾಗೂ ನೈಸರ್ಗಿಕ ಕೃಷಿಯತ್ತ ಮರಳುವುದು ಇಂದಿನ ಅಗತ್ಯವಾಗಿದೆ. ಮಣ್ಣಿನ ಆರೋಗ್ಯ ಉಳಿಸಿದರೆ ಮಾತ್ರ ಭವಿಷ್ಯದ ಕೃಷಿ ಸುರಕ್ಷಿತವಾಗಿರುತ್ತದೆ,” ಎಂದು ಚೇತನಾ ಪಾಟೀಲ ಹೇಳಿದರು.

ಮುಂಡರಗಿ ಸಹಾಯಕ ಕೃಷಿ ನಿರ್ದೇಶಕ ಡಾ. ಪ್ರಣೇಶ ಹಾದಿಮನಿ ಮಾತನಾಡಿ, ಮಣ್ಣು ಜೀವಂತ ಸಂಪನ್ಮೂಲವಾಗಿದ್ದು, ಅದರಲ್ಲಿರುವ ಸೂಕ್ಷ್ಮಾಣು ಜೀವಿಗಳ ಸಂರಕ್ಷಣೆ ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದರು. ಸಾವಯವ ಕೃಷಿಯನ್ನು ಅಳವಡಿಸಿಕೊಳ್ಳದಿದ್ದರೆ ಭೂಮಿ ಕ್ರಮೇಣ ಬರಡಾಗುವ ಅಪಾಯವಿದೆ ಎಂದು ಅವರು ಎಚ್ಚರಿಸಿದರು.

ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ಶಾಸ್ತ್ರ ವಿಜ್ಞಾನಿ ಡಾ. ಚೇತನ ಬಾಬು ಆರ್.ಟಿ. ಅವರು ಹೆಸರು, ಉದ್ದು, ಸೂರ್ಯಕಾಂತಿ ಹಾಗೂ ಕಡಲೆ ಬೆಳೆಗಳ ವೈಜ್ಞಾನಿಕ ಬೇಸಾಯ ಕ್ರಮಗಳು ಹಾಗೂ ಕೀಟ-ರೋಗ ನಿಯಂತ್ರಣಕ್ಕೆ ಕಡಿಮೆ ವೆಚ್ಚದ ತಂತ್ರಜ್ಞಾನಗಳ ಕುರಿತು ರೈತರಿಗೆ ಮಾಹಿತಿ ನೀಡಿದರು.

ಕೃಷಿ ವಿಸ್ತರಣೆ ವಿಜ್ಞಾನಿ ಡಾ. ಮಂಜುಪ್ರಕಾಶ ಪಾಟೀಲ ಅವರು ಮಾತನಾಡಿ, ‘ಖೇತ್ ಬಚಾವೋ ಅಭಿಯಾನ’ವು ರೈತರಿಗೆ ಜಾಗೃತಿ ಮೂಡಿಸುವ ಮಹತ್ವದ ಕಾರ್ಯಕ್ರಮವಾಗಿದ್ದು, ಸಾವಯವ ಮತ್ತು ನೈಸರ್ಗಿಕ ಕೃಷಿಯತ್ತ ಮರಳುವುದು ಕಾಲದ ಅಗತ್ಯವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕೃಷಿ ಅಧಿಕಾರಿಗಳು, ಕೃಷಿ ಸಖಿಯರು, ರೈತರು ಹಾಗೂ ರೈತ ಮಹಿಳೆಯರು ಸೇರಿದಂತೆ ಸುಮಾರು 120ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande