ನೂತನ ಸಹಾಯಕ ಔಷಧ ನಿಯಂತ್ರಕರಾಗಿ ಎ.ಎಂ.ಸನೋಫರ್ ಜಾನ್ ಅಧಿಕಾರ ಸ್ವೀಕಾರ
ನೂತನ ಸಹಾಯಕ ಔಷಧ ನಿಯಂತ್ರಕರಾಗಿ ಎ.ಎಂ.ಸನೋಫರ್ ಜಾನ್ ಅಧಿಕಾರ ಸ್ವೀಕಾರ
ಕೋಲಾರ ಜಿಲ್ಲಾ ಸಹಾಯಕ ಔಷಧಿ ನಿಯಂತ್ರಣಾಧಿಕಾರಿಯಾಗಿ ಎ.ಎಂ.ಸನೋಫರ್ ಜಾನ್ ಅಧಿಕಾರ ಸ್ವೀಕರಿಸಿದರು.


ಕೋಲಾರ, ೧೦ ಜೂನ್ (ಹಿ.ಸ) :

ಆ್ಯಂಕರ್ : ಜಿಲ್ಲೆಯ ನೂತನ ಸಹಾಯಕ ಔಷಧ ನಿಯಂತ್ರಕರಾಗಿ ಎ.ಎಂ.ಸನೋಫರ್ ಜಾನ್ ಅವರು ಅಧಿಕಾರ ಸ್ವೀಕರಿಸಿದರು. ಬಳಿಕ ಕಚೇರಿಯ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ನೂತನ ಅಧಿಕಾರಿಗೆ ಪುಷ್ಪಗುಚ್ಛ ನೀಡಿ, ಆತ್ಮೀಯವಾಗಿ ಬರಮಾಡಿಕೊಂಡು ಶುಭ ಹಾರೈಸಿದರು.

ನಗರದ ಔಷಧಿ ನಿಯಂತ್ರಣ ಕಚೇರಿಯಲ್ಲಿ ಬುಧವಾರ ಅಧಿಕಾರ ವಹಿಸಿಕೊಂಡ ನಂತರ ಮಾತನಾಡಿದ ಅವರು ಜಿಲ್ಲೆಯಲ್ಲಿ ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ತಮ್ಮ ಮೊದಲ ಆದ್ಯತೆ ಇರಲಿದೆ. ಜಿಲ್ಲೆಯಾದ್ಯಂತ ಔಷಧಿ ನಿಯಂತ್ರಣ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು. ಪ್ರಮುಖವಾಗಿ, ವೈದ್ಯರ ಅಧಿಕೃತ ಚೀಟಿ ಇಲ್ಲದೆ ಸಾರ್ವಜನಿಕರಿಗೆ ಆಂಟಿಬಯೋಟಿಕ್ಸ್ ಸೇರಿದಂತೆ ಯಾವುದೇ ಪ್ರಮುಖ ಹಾಗೂ ನಿಷೇಧಿತ ಮಾತ್ರೆಗಳನ್ನು ಮಾರಾಟ ಮಾಡುವುದನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲಾಗುವುದು. ಈ ನಿಟ್ಟಿನಲ್ಲಿ ಔಷಧಿ ವ್ಯಾಪಾರಿಗಳು ಜವಾಬ್ದಾರಿಯಿಂದ ವರ್ತಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷರಾದ ವೆಂಕಟೇಶಗೌಡ ಮಾತನಾಡಿ ಇಲಾಖೆ ಮತ್ತು ವ್ಯಾಪಾರಿಗಳ ನಡುವಿನ ಬಾಂಧವ್ಯ ಹಾಗೂ ಸಾರ್ವಜನಿಕ ಆರೋಗ್ಯ ರಕ್ಷಣೆಯಲ್ಲಿ ವ್ಯಾಪಾರಿಗಳ ಮೇಲಿರುವ ಜವಾಬ್ದಾರಿಗಳ ಕುರಿತು ಮಾತನಾಡಿದವರು ಜಿಲ್ಲೆಯ ಎಲ್ಲಾ ಔಷಧಿ ವ್ಯಾಪಾರಿಗಳು ಸರ್ಕಾರದ ನಿಯಮಾವಳಿಗಳಿಗೆ ಬದ್ಧರಾಗಿ ವ್ಯಾಪಾರ ಮಾಡುತ್ತಿದ್ದಾರೆ. ಮುಂಬರುವ ದಿನಗಳಲ್ಲೂ ಇಲಾಖೆಯ ಎಲ್ಲಾ ಕಾನೂನು ಮತ್ತು ಮಾರ್ಗಸೂಚಿಗಳನ್ನು ಚಾಚೂ ತಪ್ಪದೆ ಪಾಲಿಸಲು ನಮ್ಮ ಸಂಘವು ಸಂಪೂರ್ಣ ಸಹಕಾರ ನೀಡಲಿದೆ.

ಮಾರುಕಟ್ಟೆಗೆ ಕಳಪೆ ಅಥವಾ ನಕಲಿ ಔಷಧಿಗಳು ಪ್ರವೇಶಿಸದಂತೆ ತಡೆಯಲು ಅಧಿಕಾರಿಗಳೊಂದಿಗೆ ನಮ್ಮ ಸಂಘವು ಕೈಜೋಡಿಸಲಿದೆ. ಸಾರ್ವಜನಿಕರ ಜೀವದೊಂದಿಗೆ ಆಟವಾಡುವ ಯಾವುದೇ ಕಪ್ಪು ಚುಕ್ಕೆಯೂ ನಮ್ಮ ಜಿಲ್ಲೆಯ ಔಷಧಿ ವಲಯಕ್ಕೆ ಬರದಂತೆ ನಾವು ಜಾಗ್ರತೆ ವಹಿಸುತ್ತೇವೆ. ಅಧಿಕಾರಿಗಳು ಮತ್ತು ವ್ಯಾಪಾರಿಗಳ ನಡುವೆ ಸಂಘರ್ಷಕ್ಕೆ ಆಸ್ಪದವಿರಬಾರದು, ಸೌಹಾರ್ದತೆ ಇರಬೇಕು. ಯಾವುದೇ ಗೊಂದಲಗಳಿದ್ದರೂ ಮುಕ್ತ ಚರ್ಚೆಯ ಮೂಲಕ ಬಗೆಹರಿಸಿಕೊಂಡು, ಜನರಿಗೆ ಗುಣಮಟ್ಟದ ಸೇವೆ ನೀಡಲು ಶ್ರಮಿಸುತ್ತೇವೆ ಎಂದರು.

ಬಳಿಕ ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಜಿ.ಪ್ರಕಾಶ್ ಮಾತನಾಡಿ ನೂತನ ಸಹಾಯಕ ಔಷಧ ನಿಯಂತ್ರಕರು ಅತ್ಯಂತ ದಕ್ಷ ಅಧಿಕಾರಿಯಾಗಿದ್ದಾರೆ. ಅವರ ಅಧಿಕಾರ ಅವಧಿಯಲ್ಲಿ ಜಿಲ್ಲೆಯ ಔಷಧ ನಿಯಂತ್ರಣ ಇಲಾಖೆ ಮತ್ತು ಔಷಧಿ ವ್ಯಾಪಾರಿಗಳ ಸಂಘವು ಒಟ್ಟಾಗಿ ಸಾರ್ವಜನಿಕರಿಗೆ ಅತ್ಯುತ್ತಮ ಆರೋಗ್ಯ ಸೇವೆ ನೀಡುವಲ್ಲಿ ಯಶಸ್ವಿಯಾಗಲಿದೆ ಎಂಬ ದೃಢ ನಂಬಿಕೆ ನಮಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘದ ಎಲ್ಲಾ ಪದಾಧಿಕಾರಿಗಳು, ಪ್ರಮುಖ ಔಷಧಿ ವ್ಯಾಪಾರಿಗಳು ಹಾಗೂ ಔಷಧ ನಿಯಂತ್ರಣ ಕಚೇರಿಯ ಸಿಬ್ಬಂದಿ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande