ಅಶೋಕ್ ಕಸ ಮಾಫಿಯಾ ಗ್ಯಾಂಗಿನ ಏಜೆಂಟ್: ಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು
ನವದೆಹಲಿ, 10 ಜೂನ್ (ಹಿ.ಸ.): ಆ್ಯಂಕರ್: ಬೆಂಗಳೂರು ಕಸದ ಟೆಂಡರ್ ವಿಚಾರದಲ್ಲಿ ಬಿಜೆಪಿ ಮಾಡಿರುವ ಭ್ರಷ್ಟಾಚಾರದ ಆರೋಪಗಳಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀವ್ರ ಪ್ರತಿಕ್ರಿಯೆ ನೀಡಿದ್ದು, ಪ್ರತಿಪಕ್ಷ ನಾಯಕ ಆರ್.ಅಶೋಕ ಅವರು “ಕಸ ಮಾಫಿಯಾ ಗ್ಯಾಂಗಿನ ಏಜೆಂಟ್” ರೀತಿ ಮಾತನಾಡುತ್ತಿದ್ದಾರೆ ಎಂದು
Cm file photo


ನವದೆಹಲಿ, 10 ಜೂನ್ (ಹಿ.ಸ.):

ಆ್ಯಂಕರ್:

ಬೆಂಗಳೂರು ಕಸದ ಟೆಂಡರ್ ವಿಚಾರದಲ್ಲಿ ಬಿಜೆಪಿ ಮಾಡಿರುವ ಭ್ರಷ್ಟಾಚಾರದ ಆರೋಪಗಳಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀವ್ರ ಪ್ರತಿಕ್ರಿಯೆ ನೀಡಿದ್ದು, ಪ್ರತಿಪಕ್ಷ ನಾಯಕ ಆರ್.ಅಶೋಕ ಅವರು “ಕಸ ಮಾಫಿಯಾ ಗ್ಯಾಂಗಿನ ಏಜೆಂಟ್” ರೀತಿ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು.

ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಬೆಂಗಳೂರು ಕಸದ ಮಾಫಿಯಾವನ್ನು ನಿಯಂತ್ರಿಸಬೇಕೆಂದು ನಾನು ಈ ಹಿಂದೆ ಅಶೋಕ್ ಅವರೊಂದಿಗೂ ಚರ್ಚೆ ಮಾಡಿದ್ದೆ. ಆದರೆ ಈಗ ಅವರು ಅದೇ ಮಾಫಿಯಾದ ವಕ್ತಾರರಂತೆ ಮಾತನಾಡುತ್ತಿರುವುದು ಆಶ್ಚರ್ಯ ತಂದಿದೆ” ಎಂದು ಹೇಳಿದರು.

ಕಸದ ಟೆಂಡರ್ನಲ್ಲಿ ಸಾವಿರಾರು ಕೋಟಿ ರೂಪಾಯಿ ಕಿಕ್ಬ್ಯಾಕ್ ನಡೆದಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಸಿಎಂ, “ಅವರಿಗೆ ಎಷ್ಟು ಕಸ ಬೇಕೋ ಲಾರಿಯಲ್ಲಿ ತುಂಬಿ ಕಳುಹಿಸಿಕೊಡುತ್ತೇವೆ. ಈ ಹಿಂದೆ ಕುಮಾರಸ್ವಾಮಿ ಅವರೂ ಇದೇ ರೀತಿಯ ಆರೋಪ ಮಾಡಿದ್ದರು. ಬೆಂಗಳೂರಿನಲ್ಲಿ ದೊಡ್ಡ ಕಸದ ಲಾಬಿ ಕಾರ್ಯನಿರ್ವಹಿಸುತ್ತಿದೆ. ಅವರ ಆಡಳಿತದ ಅವಧಿಯಲ್ಲಿ ಯಾಕೆ ಕಸದ ಟೆಂಡರ್ ಅಂತಿಮಗೊಳಿಸಲಾಗಲಿಲ್ಲ?” ಎಂದು ಪ್ರಶ್ನಿಸಿದರು.

ಕಸ ವಿಲೇವಾರಿ ಯೋಜನೆ ಕುರಿತು ವಿವರಿಸಿದ ಅವರು, “ಈ ಯೋಜನೆಯಲ್ಲಿ ಸುಮಾರು 6 ಸಾವಿರ ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಆಗಲಿದೆ. ನಗರದಲ್ಲಿ ಸೂಕ್ತ ಜಾಗ ಲಭ್ಯವಾಗದ ಕಾರಣ ದೊಡ್ಡಬಳ್ಳಾಪುರದಲ್ಲಿ ಭೂಮಿ ಖರೀದಿಸಲು ತೀರ್ಮಾನಿಸಲಾಗಿದೆ. ಅಲ್ಲದೆ, ನೈಸ್ ಸಂಸ್ಥೆ ಬಿಟ್ಟಿರುವ ಜಾಗವನ್ನೂ ಬಳಸಿಕೊಳ್ಳಲಾಗುತ್ತಿದೆ. ಕಸದಿಂದ ಗ್ಯಾಸ್ ಹಾಗೂ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಿದ್ದೇವೆ” ಎಂದರು.

ಯಾವುದೇ ಅಕ್ರಮ ನಡೆದಿದ್ದರೆ ತನಿಖೆಗೆ ಸಿದ್ಧ ಎಂದು ಹೇಳಿದ ಸಿಎಂ,

“36 ಸಾವಿರ ಕೋಟಿ ಅಲ್ಲ, ಕೇವಲ 10 ಕೋಟಿ ರೂಪಾಯಿ ದುರ್ಬಳಕೆಯಾದರೂ ತನಿಖೆ ನಡೆಸಲಿ. ಯಾವುದೇ ತನಿಖೆಯನ್ನು ಎದುರಿಸಲು ನಾನು ಸಿದ್ಧನಿದ್ದೇನೆ” ಎಂದು ಸವಾಲು ಹಾಕಿದರು.

ರಾಜ್ಯಪಾಲರನ್ನು ಭೇಟಿ ಮಾಡಿರುವ ಬಿಜೆಪಿ ನಾಯಕರ ಕ್ರಮದ ಕುರಿತು ಪ್ರತಿಕ್ರಿಯಿಸಿದ ಅವರು, “ನಾನು ಮುಖ್ಯಮಂತ್ರಿಯಾಗಿರುವುದನ್ನು ಸಹಿಸಲಾಗದೆ ಅಸೂಯೆ ರಾಜಕೀಯ ಮಾಡುತ್ತಿದ್ದಾರೆ. ನಮ್ಮ ಸರ್ಕಾರದ ಪಾರದರ್ಶಕತೆ ಹಾಗೂ ಕಾರ್ಯವೈಖರಿಯನ್ನು ವಿರೋಧ ಪಕ್ಷ ಸಹಿಸಿಕೊಳ್ಳಲಾಗುತ್ತಿಲ್ಲ” ಎಂದು ವಾಗ್ದಾಳಿ ನಡೆಸಿದರು.

ಕಳೆದ ಹಲವು ವರ್ಷಗಳಿಂದ ಕಸದ ಟೆಂಡರ್ ಪ್ರಕ್ರಿಯೆ ನ್ಯಾಯಾಲಯದ ಮೆಟ್ಟಿಲೇರಿದ್ದ ವಿಚಾರವನ್ನು ಉಲ್ಲೇಖಿಸಿದ ಅವರು, “ಕೊನೆಗೆ ನ್ಯಾಯಾಲಯ ಸರ್ಕಾರದ ಕ್ರಮ ಸರಿಯಾಗಿದೆ ಎಂದು ತೀರ್ಪು ನೀಡಿದೆ. ಅದಾದ ಬಳಿಕವೂ ನಾವು ಪ್ರತ್ಯೇಕ ಸಮಿತಿ ರಚಿಸಿ ಪರಿಶೀಲನೆ ನಡೆಸಿದ್ದೇವೆ. ಆದರೂ ಪ್ರತಿಪಕ್ಷಗಳು ಆರೋಪಗಳನ್ನು ಮುಂದುವರಿಸುತ್ತಿದೆ” ಎಂದು ಹೇಳಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande