ದಲಿತರ ಪತ್ರಿಕೋದ್ಯಮಕ್ಕೆ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಪ್ರೇರಣೆ
ದಲಿತರ ಪತ್ರಿಕೋದ್ಯಮಕ್ಕೆ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಪ್ರೇರಣೆ
ಕೋಲಾರ ಚಿಕ್ಕಬಳ್ಳಾಪುರ ಪತ್ರಕರ್ತರ ಸಹಕಾರ ಸಂಘದ ಆಶ್ರಯದಲ್ಲಿ ನಡೆದ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿಯಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಮಾತನಾಡಿದರು.


ಕೋಲಾರ, 0೨ ಮೇ (ಹಿ.ಸ) :

ಆ್ಯಂಕರ್ : ಸ್ವಾತಂತ್ರö್ಯ ಪೂರ್ವದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಪತ್ರಿಕೆ ಪ್ರಕಟಿಸುತ್ತಿದ್ದರು. ಅಸ್ಪೃಶ್ಯ ನಿವಾರಣೆ ಮತ್ತು ದಮನಿತರಲ್ಲಿ ಅರಿವು ಮೂಡಿಸುವುದು ಅವರ ಧ್ಯೇಯವಾಗಿತ್ತು. ಆರ್ಥಿಕ ಮುಗ್ಗಟ್ಟು ಮತ್ತು ಸಂಪನ್ಮೂಲಗಳ ಕೊರತೆ ಅಂಬೇಡ್ಕರ್ ಅವರ ಪತ್ರಿಕೆಗಳಿಗೂ ಇತ್ತು. ದೊಡ್ಡ ಉದ್ಯಮಿಗಳ ಬೆಂಬಲವಿರಲಿಲ್ಲ. ಜಾಹೀರಾತುಗಳ ಕೊರತೆಯಿಂದಾಗಿ ಪತ್ರಿಕೆಗಳನ್ನು ನಡೆಸುವುದು ಆರ್ಥಿಕವಾಗಿ ಬಹಳ ಕಷ್ಟವಾಗಿತ್ತು. ತಮ್ಮ ವೈಯಕ್ತಿಕ ಉಳಿತಾಯ ಮತ್ತು ಆಪ್ತರ ಸಹಾಯದಿಂದಲೇ ಅವರು ಪತ್ರಿಕೆಗಳನ್ನು ಮುದ್ರಿಸಬೇಕಿತ್ತು. ಹಣದ ಕೊರತೆಯಿಂದಾಗಿ ಹಲವು ಬಾರಿ ಪತ್ರಿಕೆಗಳ ಪ್ರಕಟಣೆ ತಾತ್ಕಾಲಿಕವಾಗಿ ಸ್ಥಗಿತಗೊಂಡ ಉದಾಹರಣೆಗಳಿವೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅಭಿಪ್ರಾಯಪಟ್ಟರು.

ಕೋಲಾರ ಮತ್ತು ಚಿಕ್ಕಬಳ್ಳಾಪುರ ಪತ್ರಕರ್ತರ ಸಂಘ ೧೩೫ನೇ ಅಂಬೇಡ್ಕರ್ ಜಯಂತಿ ಪ್ರಯುಕ್ತ ಆಯೋಜಿಸಿದ್ದ ಅಂಬೇಡ್ಕರ್ ಮತ್ತು ಪತ್ರಿಕೋದ್ಯಮ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಮಹಾತ್ಮಗಾಂಧಿ ಕೂಡ ಪತ್ರಕರ್ತರಾಗಿ ಹಲವು ಸವಾಲುಗಳನ್ನು ಎದುರಿಸಿದ್ದರು. ಆದರೆ, ಅಂಬೇಡ್ಕರ್ ಅವರು ಎದುರಿಸಿದ ಸವಾಲನ್ನು ಬೇರೆ ಯಾರೂ ಎದುರಿಸಿರಲಿಲ್ಲ. ಅಂಬೇಡ್ಕರ್ ಅವರು ಹೊರಡಿಸಿದ ಪತ್ರಿಕೆಯನ್ನು ಮುಟ್ಟಿಸಿಕೊಳ್ಳುವುದಕ್ಕೂ ಸಿದ್ದವಿಲ್ಲದ ಸಮಾಜ, ಅಸ್ಪೃಶ್ಯತೆ ಆಳವಾಗಿದ್ದ ಸಂದರ್ಭದಲ್ಲಿ ಅಂಬೇಡ್ಕರ್ ಅವರು ನಾಲ್ಕು ಪತ್ರಿಕೆಗಳನ್ನು ಹೊರತಂದಿದ್ದು ಬಹಳ ದೊಡ್ಡ ಸವಾಲು ಎಂದರು.

ಕೋವಿಡ್ ಸಂದರ್ಭದಲ್ಲಿ ಪತ್ರಿಕೆಗಳನ್ನು ಮುಟ್ಟಲು ಜನ ಹೆದರಿದ್ದಕ್ಕೆ ನಾವು ಸಾಕ್ಷಿ ಆಗಿದ್ದೇವೆ. ಆದರೆ, ಜಾತಿ ಕಾರಣಕ್ಕೆ ಅಂಬೇಡ್ಕರ್ ಹೊರ ತರುವ ಪತ್ರಿಕೆಯನ್ನು ಓದುವುದಿರಲಿ, ಮುಟ್ಟುವುದಕ್ಕೂ ಹೆದರುತ್ತಿದ್ದ ಕೆಟ್ಟ ಪರಿಸ್ಥಿತಿಯನ್ನು ನಾವು ಊಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ.

ಈಗ ಅಂಥಾ ಪರಿಸ್ಥಿತಿ ಇಲ್ಲ. ಸಾವಿರಾರು ಪತ್ರಿಕೆಗಳು ಅಂಬೇಡ್ಕರ್ ಆಶಯದಲ್ಲಿ, ದಲಿತ ಸಮುದಾಯಗಳಿಂದಲೇ ಪ್ರಕಟಗೊಳ್ಳುತ್ತಿದೆ. ಈ ಮಟ್ಟದ ಬದಲಾವಣೆಗೆ ಕಾರಣ ಮತ್ತು ಪ್ರೇರಣಾ ಶಕ್ತಿ ಆಗಿರುವುದೂ ಕೂಡ ಅಂಬೇಡ್ಕರ್ ಅವರ ಹೋರಾಟ ಮತ್ತು ಚಿಂತನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇಂದು ದಲಿತ ಸಂಪಾದಕರುಗಳು ಹೊರ ತರುತ್ತಿರುವ ಪತ್ರಿಕೆಗಳಿಗೆ ಸಮಸ್ಯೆ, ಸವಾಲುಗಳೇ ಇಲ್ಲ ಅಂತ ನಾನು ಹೇಳುವುದಿಲ್ಲ. ಬದಲಿಗೆ ಪತ್ರಿಕೆಗಳನ್ನು ಮುಟ್ಟಿಸಿಕೊಳ್ಳದ ಸಮಸ್ಯೆ ಇಲ್ಲ ಎನ್ನುವುದು ಮುಖ್ಯ ಎಂದರು

ಅಂಬೇಡ್ಕರ್ ಅವರು ಸಂವಿಧಾನದ ರಚನೆಯಲ್ಲಿ ಮುಳುಗಿದ್ದ ಸಂದರ್ಭ. ಅಮೆರಿಕದ ಪತ್ರಕರ್ತರೊಬ್ಬರು ಸಂದರ್ಶನಕ್ಕಾಗಿ ಅಂಬೇಡ್ಕರ್ ಅವರ ಬಳಿಗೆ ಹೋಗಬೇಕಿತ್ತು. ಪತ್ರಕರ್ತ ಎಷ್ಟೊತ್ತಿಗೆ ಬರಲಿ ಅಂತ ಕೇಳಿದರೆ, ಅಂಬೇಡ್ಕರ್ ಎಷ್ಟೊತ್ತಿಗಾದರೂ ಬನ್ನಿ ಎಂದರು. ಪತ್ರಕರ್ತ ಬಂದಾಗ ಮಧ್ಯರಾತ್ರಿ ಆಗಿತ್ತು. ಆತ ಕೇಳ್ತಾನೆ, ಎಲ್ಲಾ ನಾಯಕರೂ ಮಲಗಿದ್ದಾರೆ, ನೀವೊಬ್ಬರೇ ಎಚ್ಚರವಾಗಿದ್ದೀರಲ್ಲಾ ? ಅದಕ್ಕೆ ಅಂಬೇಡ್ಕರ್ ಅವರು, ಉಳಿದ ನಾಯಕರು ಮಲಗಬಹುದು ಏಕೆಂದರೆ ಅವರ ಸಮುದಾಯ ಎಚ್ಚೆತ್ತಿದೆ. ನಮ್ಮ ಸಮುದಾಯ ಇನ್ನೂ ಮಲಗಿದೆ. ಹೀಗಾಗಿ ನಾನು ಎಚ್ಚರವಾಗಿರುವುದು ಅನಿವಾರ್ಯ ಎಂದರು. ಹೀಗೆ ಶೋಷಿತ ಸಮುದಾಯಗಳಿಗಾಗಿ ಸದಾ ಎಚ್ಚರದಿಂದ ಅಂಬೇಡ್ಕರ್ ಅವರು ಈಗ ಕಣ್ಣು ಮುಚ್ಚಿದ್ದಾರೆ. ಆದರೆ, ಸಮುದಾಯ ಬಹುಪಾಲು ಎಚ್ಚೆತ್ತಿದೆ. ಎಲ್ಲೆಲ್ಲಿ ಶೋಷಣೆ ಇದೆಯೋ ಅಲ್ಲೆಲ್ಲಾ ಅಂಬೇಡ್ಕರ್ ಅವರ ಧ್ವನಿ, ಹೋರಾಟ ಎಚ್ಚರಿಸುತ್ತಲೇ ಇರುತ್ತದೆ ಎಂದು ವಿವರಿಸಿದರು.

ಅವತ್ತು ಅವರು 'ಮೂಕನಾಯಕ', 'ಬಹಿಷ್ಕೃತ ಭಾರತ', 'ಜನತಾ' ಮತ್ತು 'ಪ್ರಬುದ್ಧ ಭಾರತ' ಪತ್ರಿಕೆಗಳ ಮೂಲಕ ಸಾಮಾಜಿಕ ಬದಲಾವಣೆಗೆ ಮುನ್ನುಡಿ ಬರೆದರು. ಆದರೆ, ಅಂದಿನ ಕಾಲಘಟ್ಟದಲ್ಲಿ ಅವರು ಪತ್ರಕರ್ತರಾಗಿ ಎದುರಿಸಿದ ಸವಾಲುಗಳು ಅಸಾಧಾರಣವಾಗಿದ್ದವು. ಅಂದಿನ ಮುಖ್ಯವಾಹಿನಿ ಮಾಧ್ಯಮಗಳ ಅಸಹಕಾರವನ್ನೂ ಅಂಬೇಡ್ಕರ್ ಎದುರಿಸಿದ್ದರು. ಈ ಸಮಸ್ಯೆ ಮತ್ತು ಸವಾಲು ಈಗಲೂ ಸ್ವಲ್ಪಮಟ್ಟಿಗೆ ಇದೆ.

ಅಂಬೇಡ್ಕರ್ ಅವರು ಹಮ್ಮಿಕೊಂಡಿದ್ದ ಚಳವಳಿಗಳು ಮತ್ತು ಅವರು ಪ್ರಕಟಿಸುತ್ತಿದ್ದ ಪತ್ರಿಕೆಗಳ ಬಗ್ಗೆ ಮುಖ್ಯವಾಹಿನಿ ಮಾಧ್ಯಮಗಳು ಸಂಪೂರ್ಣ ಮೌನ ವಹಿಸುವ ಜೊತೆಗೆ ಅವರ ಹೋರಾಟ ಮತ್ತು ಕಾಳಜಿಗಳನ್ನು ನಕಾರಾತ್ಮಕವಾಗಿ ಬಿಂಬಿಸುತ್ತಿದ್ದವು ಎಂದರು.

ಮುಖ್ಯವಾಹಿನಿ ಪತ್ರಿಕೆಗಳು ದಲಿತರ ಮತ್ತು ಶೋಷಿತರ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಿದ್ದದ್ದೇ ಅಂಬೇಡ್ಕರ್ ಅವರು ತಾವೇ ಒಂದಲ್ಲಾ ಒಂದು ಪತ್ರಿಕೆಗಳನ್ನು ಆರಂಭಿಸುವ ಸಾಹಸಕ್ಕೆ ಕಾರಣವಾಗಿತ್ತು. ಅಂಬೇಡ್ಕರ್ ಅವರು ತಮ್ಮ ಪತ್ರಿಕೆಗಳ ಜಾಹೀರಾತನ್ನು ನೀಡಲು ಮುಂದಾದಾಗಲೂ ಕೆಲವು ಪ್ರಮುಖ ಪತ್ರಿಕೆಗಳು ಅದನ್ನು ತಿರಸ್ಕರಿಸಿದ ಘಟನೆಗಳು ನಡೆದಿವೆ ಎಂದು ಬಿಡಿ ಬಿಡಿ ಘಟನೆಗಳನ್ನು ವಿವರಿಸಿದರು.

ವಿತರಣಾ ವ್ಯವಸ್ಥೆಯ ಅಡೆತಡೆಗಳು ಅಂಬೇಡ್ಕರ್ ಅವರನ್ನು ಹಣಕಾಸಿನ ಕೊರತೆಗಿಂತ ಹೆಚ್ಚಾಗಿ ಬಾಧಿಸಿತ್ತು. ಪತ್ರಿಕೆಗಳನ್ನು ಹಳ್ಳಿಗಳಿಗೆ ಮತ್ತು ಓದುಗರಿಗೆ ತಲುಪಿಸುವುದು ದೊಡ್ಡ ಸವಾಲಾಗಿತ್ತು. ಅಸ್ಪೃಶ್ಯತೆ ಜೀವಂತವಾಗಿದ್ದ ಕಾಲದಲ್ಲಿ, ಅಂಬೇಡ್ಕರ್ ಅವರ ಪತ್ರಿಕೆಗಳನ್ನು ಮುಟ್ಟಲು ಅಥವಾ ಮಾರಾಟ ಮಾಡಲು ಮುಂದೆಬರುತ್ತಿದ್ದವರೇ ಕಡಿಮೆ. ಪತ್ರಿಕೆಗಳನ್ನು ಮುದ್ರಿಸುವುದರಿಂದಹಿಡಿದು ಸಾರಿಗೆ ವ್ಯವಸ್ಥೆ ಕಲ್ಪಿಸುವುದು ಮತ್ತು ವಿತರಣಾ ಜಾಲದಲ್ಲಿ ಅವರಿಗೆ ಯಾವುದೇ ಸಹಕಾರ ಸಿಗುತ್ತಿರಲಿಲ್ಲ.

ಓದುಗರ ಸಾಕ್ಷರತೆಯ ಕೊರತೆ ಅಂಬೇಡ್ಕರ್ ಅವರ ಪಾಲಿಗಿದ್ದ ಮತ್ತೊಂದು ದೊಡ್ಡ ಸವಾಲಾಗಿತ್ತು. ಅಂಬೇಡ್ಕರ್ ಅವರು ಯಾರ ಪರವಾಗಿ ಧ್ವನಿ ಎತ್ತುತ್ತಿದ್ದರೋ, ಆ ಸಮುದಾಯದ ಜನರಲ್ಲಿ ಸಾಕ್ಷರತೆಯ ಪ್ರಮಾಣ ಬಹಳ ಕಡಿಮೆ ಇತ್ತು. ಬರೆದದ್ದನ್ನು ಓದಿ ಅರ್ಥಮಾಡಿಕೊಳ್ಳುವವರು ಬೆರಳೆಣಿಕೆಯಷ್ಟು ಮಂದಿ ಮಾತ್ರ ಇದ್ದರು. ಹೀಗಾಗಿ, ಓದಬಲ್ಲವರು ಇತರರಿಗೆ ಓದಿ ಹೇಳುವ ಮೂಲಕ ವಿಚಾರಗಳನ್ನು ತಲುಪಿಸುತ್ತಿದ್ದರು ಎಂದು ಆ ಹೊತ್ತಿನ ಸಂದರ್ಭವನ್ನು ಮೆಲುಕು ಹಾಕಿದರು.

ಹೀಗಾಗಿ ಅಂಬೇಡ್ಕರ್ ಅವರು ಪತ್ರಕರ್ತರಾಗಿ ಕೇವಲ ಬ್ರಿಟಿಷ್ ಸರ್ಕಾರವನ್ನು ಮಾತ್ರ ಎದುರು ಹಾಕಿಕೊಂಡಿರಲಿಲ್ಲ. ಸಂಪ್ರದಾಯವಾದಿ ಸಮಾಜವನ್ನೂ ಅಂಬೇಡ್ಕರ್ ಎದುರಿಸುತ್ತಿದ್ದರು. ಅವರ ಲೇಖನಿ ಕೇವಲ ಬ್ರಿಟಿಷರ ಕೆಂಗಣ್ಣಿಗೆ ಮಾತ್ರವಲ್ಲದೆ, ಅಂದಿನ ಸಮಾಜದ ಪ್ರಭಾವಿ ವರ್ಗದವರ ತೀವ್ರ ವಿರೋಧವನ್ನೂ ಎದುರಿಸಿದ್ದನ್ನು ವಿವರಿಸಿದರು.

ಇಷ್ಟೆಲ್ಲಾ ಸವಾಲುಗಳ ನಡುವೆಯೂ ಅಂಬೇಡ್ಕರ್ ಅವರು ಪತ್ರಿಕೋದ್ಯಮವನ್ನು ಕೇವಲ ವೃತ್ತಿಯನ್ನಾಗಿ ಮಾಡಿಕೊಳ್ಳದೆ, ಅದನ್ನು ಒಂದು 'ಸಾಮಾಜಿಕ ಅಸ್ತ್ರ'ವಾಗಿ ಬಳಸಿದರು. ಅವರು ಹಾಕಿಕೊಟ್ಟ ನಿಷ್ಠುರ ಮಾರ್ಗಗಳೇ ಇಂದು ಭಾರತದ ದಲಿತ ಮತ್ತು ಶೋಷಿತ ವರ್ಗಗಳ ಪತ್ರಿಕೋದ್ಯಮಕ್ಕೆ ಭದ್ರ ಬುನಾದಿಯಾಗಿವೆ. ಇಂದು ಪತ್ರಿಕೋದ್ಯಮದ ಬಗ್ಗೆ ಇಡೀ ದೇಶದಲ್ಲಿ ಎಲ್ಲೇ ಚರ್ಚೆ ನಡೆದರೂ ವೃತ್ತಿಪರತೆ ಕಟಕಟೆಗೆ ಬಂದು ನಿಲ್ಲುತ್ತದೆ. ಈ ವೃತ್ತಿಪರತೆ ಬಗ್ಗೆಯೇ ಹೆಚ್ಚೆಚ್ಚು ಚರ್ಚೆ ನಡೆಯುತ್ತದೆ. ಆದರೆ ಅಂಬೇಡ್ಕರ್ ಅವರ ಪತ್ರಿಕೆಗಳು ವೃತ್ತಿಪರತೆಯ ಜೊತೆಗೆ ತುಳಿತಕ್ಕೊಳಗಾದವರ ಹೋರಾಟದ ಅಸ್ತ್ರವೂ ಆಗಿತ್ತು ಎಂದರು.

ಅಂಬೇಡ್ಕರ್ ಅವರು, ಎಂದಿಗೂ ಪತ್ರಿಕೋದ್ಯಮವನ್ನು ಲಾಭಕ್ಕಾಗಿ ಬಳಸಲಿಲ್ಲ. ಸತ್ಯವನ್ನು ಸಮಾಜದ ಮುಂದೆ ಇಡುವುದೇ ಅವರ ಗುರಿಯಾಗಿತ್ತು. ತಮ್ಮ ಪತ್ರಿಕೆಗಳ ಲೇಖನಗಳು ಭಾವನಾತ್ಮಕವಾಗಿರುವುದಕ್ಕಿಂತ ಹೆಚ್ಚಾಗಿ ತರ್ಕಬದ್ಧವಾಗಿರುವಂತೆ, ಅಂಕಿಅAಶಗಳು ಮತ್ತು ಐತಿಹಾಸಿಕ ಸಾಕ್ಷ್ಯಗಳೊಂದಿಗೆ ಲೇಖನಗಳು ಪ್ರಕಟಗೊಳ್ಳುವಂತೆ ನೋಡಿಕೊಳ್ಳುತ್ತಿದ್ದರು. ಇಂದಿನ ಪತ್ರಿಕೋದ್ಯಮವು ವಾಣಿಜ್ಯೀಕರಣಗೊಳ್ಳುತ್ತಿರುವ ಸಂದರ್ಭದಲ್ಲಿ, ಅಂಬೇಡ್ಕರ್ ಅವರ ಪತ್ರಿಕಾ ವೃತ್ತಿಯ ಮೌಲ್ಯಗಳು ಅತ್ಯಂತ ಪ್ರಸ್ತುತವಾಗಿವೆ ಎಂದರು.

ಸತ್ಯಕ್ಕೆ ಬೆಲೆ ಕೊಡುವುದು, ಶೋಷಿತರ ಪರ ನಿಲ್ಲುವುದು ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುವುದನ್ನು ಅಂಬೇಡ್ಕರ್ ನಮಗೆ ಕಲಿಸಿಕೊಟ್ಟು ಹೋಗಿದ್ದಾರೆ. ಅಂಬೇಡ್ಕರ್ ಅವರ ಆದರ್ಶ, ಕಾಳಜಿ ಮತ್ತು ಛಲ ಇವತ್ತಿನ ಪತ್ರಿಕಾ ಕ್ಷೇತ್ರದ ಗುರಿ ಮತ್ತು ಮಾರ್ಗ ಆಗಲಿ ಎಂದು ಆಶಿಸುತ್ತೇನೆ ಎಂದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande