ಜನಸಾಮಾನ್ಯರ ದುಃಖ ದುಮ್ಮಾನಕ್ಕೆ ಸ್ಪಂದಿಸಲು ವಿಧಾನ ಪರಿಷತ್ ಸದಸ್ಯ ಶಿವಕುಮಾರ್ ಕರೆ
ಜನಸಾಮಾನ್ಯರ ದುಃಖ ದುಮ್ಮಾನಕ್ಕೆ ಸ್ಪಂದಿಸಲು ವಿಧಾನಪರಿಷತ್ ಸದಸ್ಯ ಶಿವಕುಮಾರ್ ಕರೆ
ಡಾ.ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ ಪುರಸ್ಕೃತ ಸಿ.ಎಂ. ಮುನಿಯಪ್ಪನವರನ್ನು ಕೋಲಾರದಲ್ಲಿ ಶನಿವಾರ ಅಭಿನಂದಿಸಲಾಯಿತು.


ಕೋಲಾರ, ೦೨ ಮೇ (ಹಿ.ಸ) :

ಆ್ಯಂಕರ್ : ಅಂಬೇಡ್ಕರ್ ಅವರು ಪ್ರತಿಪಾದಿಸಿದ ಮಾನವ ಹಕ್ಕುಗಳು, ವಾಕ್ ಸ್ವಾತಂತ್ರö್ಯ ರಕ್ಷಣೆಯ ಜೊತೆಗೆ ಸಂಶೋಧನೆ, ಸತ್ಯದ ಅಡಿಯಲ್ಲಿ ನಿಷ್ಪಕ್ಷಪಾತ ಸುದ್ದಿಗಳನ್ನು ನೀಡುವ ಬದ್ದತೆಯನ್ನು ತೋರಬೇಕು. ಕೇವಲ ರಾಜಕಾರಣಿಗಳ ಹೇಳಿಕೆ ಸುದ್ದಿಯಾಗಬಾರದು. ಉಳ್ಳವರು ಮತ್ತು ಜಾಹೀರಾತು ನೀಡುವವರ ಪರ ಪತ್ರಕರ್ತರು ಕೆಲಸ ಮಾಡಬಾರದು. ಜನ ಸಾಮಾನ್ಯರು ಹಾಗೂ ತಳಸಮುದಾಯಗಳ ದುಃಖ ದುಮ್ಮಾನಕ್ಕೆ ಪತ್ರಕರ್ತರು ಸ್ಪಂದಿಸುವ0ತೆ ಎಂದು ಹಿರಿಯ ಪತ್ರಕರ್ತ ಹಾಗೂ ವಿಧಾನಪರಿಷತ್ ಸದಸ್ಯ ಕೆ.ಶಿವಕುಮಾರ್ ಕರೆ ನೀಡಿದರು.

ಕೋಲಾರ ಮತ್ತು ಚಿಕ್ಕಬಳ್ಳಾಪುರ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಆಶ್ರಯದಲ್ಲಿ ಶನಿವಾರ ಡಾ.ಬಿ.ಆರ್.ಅಂಬೇಡ್ಕರ್ ಅವರ ೧೩೫ನೇ ಜಯಂತಿ ಅಂಗವಾಗಿ `ಅಂಬೇಡ್ಕರ್ ಮತ್ತು ಪತ್ರಿಕೋದ್ಯಮ' ಕುರಿತ ವಿಚಾರ ಸಂಕಿರಣ ಹಾಗೂ,ಡಾ.ಅಂಬೇಡ್ಕರ್ ರಾಜ್ಯ ಪ್ರಶಸ್ತಿ ಪುರಸ್ಕೃತ ಹಿರಿಯ ದಲಿತ ಹೋರಾಟಗಾರ ಹಾಗೂ ಪತ್ರಕರ್ತ ಸಿ.ಎಂ.ಮುನಿಯಪ್ಪ ಅವರನ್ನು ಸನ್ಮಾನಿಸಿ ಮಾತನಾಡಿದರು.

ಅಂಬೇಡ್ಕರ್ ಅವರು ಪತ್ರಿಕೆ ಆರಂಭಿಸಿ ನೂರು ವರ್ಷಗಳಾದ ನಂತರ ನಾವು ಅವರು ಪತ್ರಕರ್ತರಾಗಿದ್ದರು ಎಂದು ಸ್ಮರಿಸುತ್ತಿದ್ದೇವೆ, ಅಂಬೇಡ್ಕರ್ ಅವರನ್ನು ವಿಶ್ವದ ನೂರಾರು ದೇಶಗಳು ಮಹಾಜ್ಞಾನಿಯಾಗಿ ಕಾಣುತ್ತಾರೆ ಆದರೆ ಭಾರತದಲ್ಲಿ ಅವರೊಬ್ಬ ದಲಿತ ಪರ ಹೋರಾಟಗಾರರು ಎಂಬಷ್ಟರಮಟ್ಟಿಗೆ ನೋಡಲಾಗುತ್ತಿದೆ. ಗಾಂಧಿ, ಅಂಬೇಡ್ಕರ್ ಅವರ ಪತ್ರಿಕೆಗಳಿಗೆ ವ್ಯತ್ಯಾಸವಿದೆ, ಗಾಂಧಿಯವರು ತಮ್ಮ ಹರಿಜನ ಪತ್ರಿಕೆಯಲ್ಲಿ ದೇಶದ ಸಂಸ್ಕೃತಿಯ ಕುರಿತು ಬರೆದರೆ ಅಂಬೇಡ್ಕರ್ ಅವರು ಶೋಷಿತರ ನೋವು, ಬವಣೆಯನ್ನು ಬರೆಯುತ್ತಾ ಬಂದರು ಎಂದರು.

ಸಮಾಜದಲ್ಲಿ ಅಸ್ಪೃಶ್ಯತೆ ಆಚರಣೆ ಮಾಡಿ ಶೋಷಣೆ ಮಾಡುತ್ತಿದ್ದ ಸಂದರ್ಭದಲ್ಲಿ ಅಂಬೇಡ್ಕರ್ ಪತ್ರಕರ್ತರಾಗಿ ಎದುರಿಸಿದ ದೊಡ್ಡ ಸವಾಲುಗಳನ್ನು ಎದುರಿಸಬೇಕಾಯಿತು. ಅವರು ತಮ್ಮ ಚಿಂತನೆಗಳನ್ನು ಶೋಷಿತರಿಗೆ ತಲುಪಿಸಲು ಅನಕ್ಷರತೆ ಅಡ್ಡಿಯಾಗಿತ್ತು ಈ ಹಿನ್ನಲೆಯಲ್ಲಿ ಪತ್ರಿಕೆ ನಡೆಸುವುದು ಸುಲಭದ ಮಾತಾಗಿರಲಿಲ್ಲ. ಸ್ವಾತಂತ್ರö್ಯ ಪೂರ್ವದಲ್ಲಿ ಇಡೀ ಪತ್ರಿಕೋದ್ಯಮವನ್ನು ಒಂದು ವರ್ಗ ನಿಯಂತ್ರಣ ಮಾಡುತ್ತಿತ್ತು. ದಲಿತರ ಶೋಷಣೆ, ಅಸ್ಪೃಶ್ಯತೆ ಬಗ್ಗೆ ಪತ್ರಿಕೆಗಳು ಬರೆಯುತ್ತಿರಲಿಲ್ಲ. ಅಂತಹ ಸಂದರ್ಭದಲ್ಲಿ ಅಂಬೇಡ್ಕರ್ ಪತ್ರಿಕೆ ಆರಂಭಿಸಿದರು. ಆದರೆ ಗಾಂಧೀಜಿಗೆ ದೊರೆತ ಆರ್ಥಿಕ ಬಲ ಅಂಬೇಡ್ಕರ್ರವರಿಗೆ ದೊರೆಯಲಿಲ್ಲ ಎಂದು ಇತಿಹಾಸವನ್ನು ಮೆಲುಕು ಹಾಕಿದರು.

ಇಂದಿನ ಕಾಲಘಟ್ಟದಲ್ಲಿ ಕಾರ್ಪೋರೇಟ್ ಕಂಪನಿಗಳು ಪತ್ರಿಕೋದ್ಯಮವನ್ನು ನಿಯಂತ್ರಣ ಮಾಡುತ್ತಿವೆ. ಪತ್ರಿಕೋದ್ಯಮ ಕೊನೆಯ ಮೊಳೆ ಹೊಡೆಸಿಕೊಳ್ಳುವ ಹಂತ ತಲುಪಿದೆ. ಜಾಹಿರಾತಿಗಾಗಿಯೇ ಹಲವಾರು ಪತ್ರಿಕೆಗಳು ಹುಟ್ಟಿಕೊಂಡಿವೆ. ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರ ವೇತನ ಇತರ ಭತ್ಯೆಗಳನ್ನು ನಿರ್ಧರಿಸಲು ಹಿಂದೆ ವೇಜ್ ಬೋರ್ಡ್ಅನ್ನು ಕೇಂದ್ರ ಸರ್ಕಾರ ರಚನೆ ಮಾಡಿತ್ತು. ಆದರೆ ಇಂದು ವೇಜ್ ಬೋರ್ಡ್ ಕಾರ್ಯನಿರ್ವಹಿಸುತ್ತಿಲ್ಲ. ದೊಡ್ಡ ದೊಡ್ಡ ಕಾರ್ಪೋರೇಟ್ ಕಂಪನಿಗಳು ಪ್ರಕಟಿಸುವ ಪತ್ರಿಕೆಗಳಲ್ಲಿ ಪತ್ರಕರ್ತರಿಗೆ ನ್ಯಾಯಬದ್ದವಾದ ವೇತನ ಹಾಗೂ ಇತರ ಸೌಲಭ್ಯಗಳು ದೊರೆಯುತ್ತಿಲ್ಲ. ಕಾರ್ಯನಿರತ ಪತ್ರಕರ್ತನ ವ್ಯಾಖ್ಯಾನವನ್ನು ಮರು ವ್ಯಾಖ್ಯಾನಿಸಲಾಗಿದೆ ಇದರಿಂದಾಗಿ ಪತ್ರಕರ್ತರಿಗೆ ವೃತ್ತಿ ಭದ್ರತೆ ಇಲ್ಲವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಇಂದು ಜಾಹಿರಾತಿಗಾಗಿಯೇ ಪ್ರಕಟವಾಗುತ್ತಿರುವ ಪತ್ರಿಕೆಗಳು ಜನರನ್ನು ತಲುಪಿತ್ತಿಲ್ಲ. ಜನರ ಬಗ್ಗೆ ಪತ್ರಿಕೆಗಳಿಗೆ ಕಾಳಜಿ ಇಲ್ಲ. ಸಾವಿರಾರು ಪ್ರತಿಗಳ ಪ್ರಸಾರ ಇರುವುದಾಗಿ ದಾಖಲೆಗಳನ್ನು ಸೃಷ್ಠಿಸಿ ಜಾಹೀರಾತು ಪಡೆಯಲಾಗುತ್ತಿದೆ. ಗಂಡ ಹೆಂಡತಿ, ಸಂಪಾದಕರು, ಪ್ರಕಾಶಕರು ಆಗಿದ್ದಾರೆ. ಅಳಿಯ ಜಾಹೀರಾತು ವ್ಯವಸ್ಥಾಪಕ ಎಂದು ಬಿಂಬಿಸುವ ಮೂಲಕ ಜಾಹೀರಾತು ಪಡೆಯಲಾಗುತ್ತಿದೆ. ಯಾವುದೇ ಜನಪರ ಸುದ್ಧಿಗಳು ಪ್ರಕಟವಾಗುವುದಿಲ್ಲ. ಜಾಹೀರಾತಿಗಾಗಿಯೇ ಪ್ರಕಟವಾಗುವ ಪತ್ರಿಕೆಗಳನ್ನು ಬುಡ ಸಮೇತ ಕಿತ್ತು ಹಾಕಬೇಕೆಂದು ಸಲಹೆ ಮಾಡಿದರು.

ಅಂಬೇಡ್ಕರ್ ಅವರು ಆರಂಭಿಸಿದ ಮೂಕನಾಯಕ, ಸಮತ, ಜನತಾ, ಬಹಿಷ್ಕೃತ ಭಾರತ, ಪ್ರಬುದ್ಧ ಭಾರತ ಪತ್ರಿಕೆಗಳು ಮರಾಠಿಯಲ್ಲಿದ್ದು ಇಂಗ್ಲೀಷ್ನಲ್ಲಿ ಬರೆದಿದ್ದರೆ. ಇಲ್ಲಿನ ಜನರ ಕಷ್ಟಗಳು ಸುಲಭವಾಗಿ ಬ್ರಿಟೀಷರಿಗೆ ಅರ್ಥವಾಗುತ್ತಿತ್ತು ಸಾಮಾಜಿಕ, ರಾಜಕೀಯ ಅಸ್ಪೃಶ್ಯತೆ ಕೊನೆಗೊಳ್ಳುತ್ತಿತ್ತು. ಪತ್ರಕರ್ತರಾಗಿದ್ದ ಗಾಂಧಿ, ಅಂಬೇಡ್ಕರ್ ಫೋಟೋ ಪತ್ರಕರ್ತರ ಸಂಘಗಳಲ್ಲಿ ಹಾಕಬೇಕು ಎಂದು ಸಲಹೆ ನೀಡಿದರು.ಇದೇ ಸಂದರ್ಭದಲ್ಲಿ ಪತ್ರಕರ್ತರ ಸಹಕಾರ ಸಂಘ ಪ್ರತಿವರ್ಷ ಅಂಬೇಡ್ಕರ್ ಜಯಂತಿ ನಡೆಸಿ ಒಬ್ಬ ಸಾಧಕರಿಗೆ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಲು ನಿರ್ಧರಿಸಿದ್ದು, ಅದಕ್ಕಾಗಿ ೧ ಲಕ್ಷ ರೂ ದತ್ತಿನಿಧಿ ತಾವೇ ನೀಡುವುದಾಗಿ ಘೋಷಿಸಿದರು. ಅಂಬೇಡ್ಕರ್ ಪ್ರಶಸ್ತಿ ಸಿ.ಎಂ.ಮುನಿಯಪ್ಪ ಅವರಿಗೆ ಬಂದಿದ್ದು, ಸೂಕ್ತ ವ್ಯಕ್ತಿಗೆ ಸಿಕ್ಕಂತಾಗಿದೆ, ತಮ್ಮ ಹೋರಾಟದ ಮೂಲಕ ಸಮಾಜಕ್ಕೆ ಬದುಕು ಮುಡಿಪಾಗಿಟ್ಟ ಅವರಿಗೆ ಸಂದಿದ್ದು ಸಂತಸ ಎಂದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಎಸ್ಸಿಘಟಕದ ಅಧ್ಯಕ್ಷ ಕೆ.ಜಯದೇವ್ ಅವರು ಪತ್ರಕರ್ತರ ಸಂಘಕ್ಕೆ ನೀಡಿದ ಸುಂದರವಾದ ಅಂಬೇಡ್ಕರ್ ಭಾವಚಿತ್ರವನ್ನು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಕೆ.ಚಂದ್ರಶೇಖರ್ ಅವರಿಗೆ ಹಸ್ತಾಂತರಿಸಿದರು.

ಮುಖ್ಯಮAತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾದರು. ಕಾರ್ಯನಿರತ ಪತ್ರಕರ್ತರ ವಿವಿಧೋದ್ಧೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಆಶಯ ಭಾಷಣ ಮಾಡಿದರು. ಅಂಬೇಡ್ಕರ್ ಅಧ್ಯಯನಶೀಲರಾಗಿ ಸತ್ಯದ ಹುಡುಕಾಟ ನಡೆಸಿ ಪಡೆದ ಜ್ಞಾನವನ್ನು ದನಿ ಇಲ್ಲದವರಿಗೆ ಧ್ವನಿ ನೀಡಲು ಬಳಸುತ್ತಿದ್ದರು, ಈ ಹಿನ್ನೆಲೆಯಲ್ಲಿ ಪ್ರತಿ ಪತ್ರಕರ್ತ ಅಂಬೇಡ್ಕರ್ ವಾದಿ ಆಗಬೇಕು, ಪತ್ರಕರ್ತರ ಸಂಘಗಳು ಅಂಬೇಡ್ಕರ್ ಭವನಗಳಾಗಬೇಕು ಎಂದರು.

ಪತ್ರಕರ್ತರ ಸಹಕಾರ ಸಂಘದಿAದ ಇನ್ನು ಮುಂದೆ ಪ್ರತಿ ವರ್ಷ ಅಂಬೇಡ್ಕರ್ ಜಯಂತಿ ಆಚರಿಸುವುದು ಮತ್ತು ಓರ್ವ ಸಾಧಕ ಪತ್ರಕರ್ತರಿಗೆ ಅವರ ಹೆಸರಿನಲ್ಲಿ ದತ್ತಿನಿಧಿ ಸ್ಥಾಪಿಸಿ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು, ಅಂಬೇಡ್ಕರ್ ದಲಿತರಿಗೆ ಮಾತ್ರವಲ್ಲ ಸಮಾಜಕ್ಕೆ ಬೇಕಾದವರಾಗಿದ್ದಾರೆ ಎಂದರು.

ರಾಜ್ಯ ಸರ್ಕಾರದ ಡಾ.ಅಂಬೇಡ್ಕರ್ ರಾಜ್ಯ ಪ್ರಶಸ್ತಿ ಪುರಸ್ಕೃತ ಹಿರಿಯ ದಲಿತ ಚಳುವಳಿಯ ನೇತಾರ ಹಾಗೂ ಪತ್ರಕರ್ತ ಸಿ.ಎಂ.ಮುನಿಯಪ್ಪ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಸಹಾ ಅವರನ್ನು ಸನ್ಮಾನಿಸಿದರು.

ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎ.ಜಿ.ಸುರೇಶ್ಕುಮಾರ್ ಕಾರ್ಯಕ್ರಮ ನಿರೂಪಿಸಿ, ಖಜಾಂಚಿ ರಾಜೇಂದ್ರ ಸಿಂಹ ಸ್ವಾಗತಿಸಿ, ಉಪಾಧ್ಯಕ್ಷ ರವಿಕುಮಾರ್ ವಂದಿಸಿದರು ಮತ್ತು ಕೊಂಡರಾಜನಹಳ್ಳಿ ಮಂಜುಳಾ ಸೌಹಾರ್ದತೆ ಗೀತೆ ಹಾಡಿದರು.

ಕಾರ್ಯಕ್ರಮದಲ್ಲಿ ರಾಜ್ಯ ವಸತಿ ಸಚಿವರ ಮಾಧ್ಯಮ ಸಲಹೆಗಾರ ಲಕ್ಷಿö್ಮನಾರಾಯಣ, ಜಿಲ್ಲಾ ವಾರ್ತಾಧಿಕಾರಿ ಡಾ.ಕವನ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಕೆ.ಚಂದ್ರಶೇಖರ್, ರಾಜ್ಯಕಾರ್ಯಕಾರಿ ಸದಸ್ಯ ವಿ.ಮುನಿರಾಜು, ಕಾರ್ಯನಿರತ ಪತ್ರಕರ್ತರ ಸಂಘದ ವಿವಿಧೋದ್ಧೇಶ ಸಹಕಾರ ಸಂಘದ ಉಪಾಧ್ಯಕ್ಷ ಅಬ್ಬಣಿ ಶಂಕರ್, ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಸಂಪಾದಕರ ಸಂಘದ ಅಧ್ಯಕ್ಷ ಎಚ್.ಎನ್.ಮುರಳೀಧರ್, ಪ್ರಧಾನ ಕಾರ್ಯದರ್ಶಿ ವೆಂಕಟೇಶ್ಬಾಬಾ, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಮಾನ್ಯತೆ ಪಡೆದ ಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷ ಎ.ಸದಾನಂದ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಮದ್ ಯೂನುಸ್, ಸಹಕಾರ ಸಂಘದ ನಿರ್ದೇಶಕರಾದ ಸಿ.ವಿ.ನಾಗರಾಜ್, ಎಂ.ವರಲಕ್ಷಿö್ಮ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕೆಜಿಎಫ್ ತಾಲ್ಲೂಕು ಅಧ್ಯಕ್ಷ ತ್ಯಾಗರಾಜ್, ಬಂಗಾರಪೇಟೆ ಅಧ್ಯಕ್ಷ ಮೋಹನ್, ಶ್ರೀನಿವಾಸಪುರ ಅಧ್ಯಕ್ಷ ನಾಗರಾಜ್ ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande