
ಕೋಲಾರ, ಮೇ ೦೨(ಹಿ.ಸ) :
ಆ್ಯಂಕರ್ : ಪೋಷಕರು ಮಕ್ಕಳ ಮೇಲೆ ಒತ್ತಡ ಏರಬೇಡಿ. ನೀವು ಬದುಕಿನಲ್ಲಿ ಏನು ಆಗಲಿಲ್ಲ ಎಂಬ ಕಾರಣಕ್ಕಾಗಿ ಅವರ ಮೇಲೆ ಪ್ರಯೋಗಗಳನ್ನು ಮಾಡುವುದು ಸರಿಯಲ್ಲ. ಮಕ್ಕಳು ಪ್ರಯೋಗಶಾಲೆ ಅಲ್ಲ. ಒಂದು ಮಗುವಿನೊಂದಿಗೆ ಮತ್ತೊಂದು ಮಗುವನ್ನು ಹೋಲಿಕೆ ಮಾಡುವುದು ಬಿಡಿ. ಮಕ್ಕಳು ಅವರ ಪಾಡಿಗೆ ಬೆಳೆಯಲು ಬಿಡಿ. ನಿಮ್ಮಲ್ಲಿನ ಆಸೆಗಳನ್ನು ಮಕ್ಕಳ ಮೇಲೆ ಹೊರೆಸುವ ದುಸ್ಸಾಹಸ ಮಾಡಬೇಡಿ. ಅವರು ನೈಸರ್ಗಿಕವಾಗಿ ಅರಳಲು ಬಿಡಿ. ಎಲ್ಲ ಮಕ್ಕಳೂ ಬುದ್ಧಿವಂತರೇ ಆಗಿರುತ್ತಾರೆ. ಜಾತಿ ಜಾತಿಗಳ ನಡುವೆ ಇರುವ ತಾರತಮ್ಯಗಳು ಹೋಗಬೇಕಾದರೆ ದೊಡ್ಡವರಲ್ಲಿನ ಸಣ್ಣತನಗಳು ಬಿಡಬೇಕು. ವಯಸ್ಸಾದವೆರೆಲ್ಲಾ ಪ್ರಬುದ್ಧರಾಗಿಲ್ಲ. ಅದನ್ನು ಈ ಮಕ್ಕಳಿಂದ ನೋಡಿ ಕಲಿಯಬೇಕಾಗುತ್ತದೆ. ಡಾಕ್ಟರ್, ಇಂಜನಿಯರ್, ಐಎಎಸ್, ಐಪಿಎಸ್ ಇವರಿಂದಲೇ ದೇಶಕಟ್ಟಲು ಸಾಧ್ಯವಿಲ್ಲ. ಮನಸ್ಸಿನ ಒಳಗಿರುವ ಕೊಳಕನ್ನು ಹೊರಹಾಕಬೇಕು ಎಂದು ಕೋಲಾರ ಜಿಲ್ಲಾಧಿಕಾರ ಎಂ.ಆರ್. ರವಿ ಕರೆ ನೀಡಿದರು.
ಕೋಲಾರ ತಾಲ್ಲೂಕಿನ ತೇರಹಳ್ಳಿ ಬೆಟ್ಟದ ಆದಿಮ ಸಾಂಸ್ಕೃತಿಕ ಕೇಂದ್ರದಲ್ಲಿ ನಡೆದ ಮಕ್ಕಳ ಬೇಸಿಗೆ ಶಿಬಿರ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಂಸ್ಕೃತಿ ಚಿಂತಕ ಡಾ.ನೆಲ್ಲುಕುಂಟೆ ವೆಂಕಟೇಶ್ ಮಾತನಾಡಿ ಇಪ್ಪತ್ತೈದು ವರ್ಷಗಳ ಹಿಂದೆ ಆದಿಮ ಕಟ್ಟಿದ ಎಲ್ಲಾ ಹಿರಿಯರನ್ನು ನೆನೆಸಿಕೊಂಡರು. ಆದಿಮ ನಮ್ಮ ಪಾಲಿಗೆ ಬಯಲು ವಿಶ್ವವಿದ್ಯಾಲಯವೇ ಆಗಿದೆ. ಇಲ್ಲಿರುವವರೆಲ್ಲಾ ಬಯಲು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು. ಶಿಕ್ಷಕರು ಎಂದವರು ತಕ್ಷಶಿಲಾ ಕಲಿಕಾ ಕೇಂದ್ರ ಹಾಗೂ ಬುದ್ಧರನ್ನು ಸ್ಮರಿಸಿಕೊಂಡರು. ನಗರ ಪ್ರದೇಶಗಳಲ್ಲಿ ಕೂಡ ಮಕ್ಕಳ ಬೇಸಿಗೆ ಶಿಬಿರಗಳು ನಡೆಯುತ್ತವೆ ಅವು ಈ ರೀತಿ ಇರುವದಿಲ್ಲ. ನಿಮಗೆ ಈ ಅವಕಾಶ ಆದಿಮ ಕಲ್ಪಿಸಿಕೊಟ್ಟಿದೆ ಎಂದರು.
ಸಂಸ್ಕೃತಿ ಚಿಂತಕ, ಕನ್ನಡ ಪ್ರಾಧ್ಯಾಪಕ ಡಾ.ರಾಜಪ್ಪ ದಳವಾಯಿ ಆದಿಮ ಬೆಳವಣಿಗೆ ಕುರಿತು ಮಾತನಾಡಿ, ಇಸ್ಮಾಯಿಲ್ ಗೊನಾಳ್ ಆದಿಮದಲ್ಲಿ ಇದ್ದು ಅನೇಕ ನಾಟಕಗಳಿಗೆ ಸಂಗೀತ, ಗಾಯನ ನಡೆಸಿಕೊಟ್ಟಿದ್ದಾರೆ. ಆದ ಕಾರಣ ಆದಿಮ ಅವರ ಹೆಸರಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ. ಪ್ರಶಸ್ತಿ ೨೫ ಸಾವಿರ ನಗದು ಸ್ಮರಣಿಕೆ ಒಳಗೊಂಡಿದೆ. ಈ ಬಾರಿಯ ಪ್ರಶಸ್ತಿ ಪುರಸ್ಕೃತ ಸಂಘಟಕ, ರಂಗಕರ್ಮಿ ಪಿಂಜಾರ ಅಬ್ದುಲ್ ಸಾಬ್ ಹೊಸಪೇಟೆ ಅವರ ಪರಿಚಯ, ರಂಗಭೂಮಿಗೆ ಅವರು ನೀಡಿದ ಕೊಡುಗೆ, ಅದರಲ್ಲೂ ಬೀದಿನಾಟಕಗಳ ಮೂಲಕ ಏನೆಲ್ಲಾ ಜನಜಾಗೃತಿ ಮೂಡಿಸಲು ಸಾಧ್ಯವಿದೆ ಎಂದು ತೋರಿಸಿಕೊಟ್ಟಿದ್ದಾರೆ. ಅವರಿಗೆ ಈ ಪ್ರಶಸ್ತಿ ನೀಡುತ್ತಿರುವುದು ಅರ್ಥಪೂರ್ಣ ಎಂದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪಿಂಜಾರ ಅಬ್ದುಲ್ ಸಾಬ್, ಆದಿಮ ಕಾರ್ಯಕ್ರಮಗಳನ್ನು ವೀಕ್ಷಿಸಿ ಮೌನವಾಗಿಬಿಟ್ಟಿದ್ದೇನೆ. ಹೊಸಪೇಟೆಯ ಸಿದ್ಲಿಂಗ್ ಚೌಕಿ ಎಂಬ ಸ್ಲಂ ನಲ್ಲಿ ಹುಟ್ಟಿ ಬೆಳೆದ ನಾನು, ಅಲ್ಲಿನ ಪರಿಸ್ಥಿತಿಗಳ ಗಮನಿಸಿ ನೊಂದ, ನಿರಾಶ್ರಿತ, ಓದು ನಿಲ್ಲಿಸಿದ ಮಕ್ಕಳೊಂದಿಗೆ ಭಾವಕೈತಾವೇದಿಕೆ ಎಂಬ ತಂಡ ಕಟ್ಟಿಕೊಳ್ಳಲಾಯಿತು. ಕರ್ನಾಟಕದಾದ್ಯಂತ ಬೀದಿ ನಾಟಕಗಳು ಮಾಡಿದ ಬಗೆ, ಆಯ್ಕೆ ಮಾಡಿಕೊಂಡ ವಿಷಯಗಳು ಸಮಾಜಮುಖಿ, ಜನಮುಖಿ ಆಗಿದ್ದವು, ಬೀದಿಯಲ್ಲಿ ಬಟ್ಟೆ ಹಾಸಿ ಪ್ರೇಕ್ಷಕರು ನೀಡಿದ್ದನ್ನು ಸ್ವೀಕರಿಸಿ ತಂಡದ ಯುವಕರನ್ನು ವಿದ್ಯಾವಂತರಾಗಿ ಮಾಡಿ ಅವರೀಗ ವಿವಿಧ ಉದ್ಯೋಗಗಳನ್ನು ಮಾಡುತ್ತಿರುವುದಾಗಿ ಹೇಳುತ್ತಾರೆ. ಇದೆಲ್ಲಾ ರಂಗಭೂಮಿಯಿAದಲೇ ಸಾಧ್ಯವಾಯಿತು ಎನ್ನುತ್ತಾರೆ. ಕುಟುಂಬದ ಎಲ್ಲಾ ಸದಸ್ಯರೂ ರಂಗಭೂಮಿ ಬಗ್ಗೆ ವಿವಿಧ ಕೇಂದ್ರಗಳಿAದ ತರಬೇತಿ ಪಡೆದಿದ್ದಾರೆ. ಎಷ್ಟೇ ಮೇಧಾವಿ ಆಗಿದ್ದರೂ ಪ್ರಚಾರದ ಗೀಳು ಇಲ್ಲದ ಗೊನಾಳ ರ ಹೆಸರಿನ ಪ್ರಶಸ್ತಿ ನಮಗೆ ನೀಡಿರುವುದು ಬಹಳ ಸಂತೋಷ ತಂದಿದೆ ಎಂದರು. ಆದಿಮ ಆಯ್ಕೆ ಸಮಿತಿ, ಹಾಗೂ ಎಲ್ಲರಿಗೂ ಅಭಿನಂದನೆ ತಿಳಿಸಿದರು. .
ಹಿರಿಯ ಹೋರಾಟಗಾರ್ತಿ, ರಂಗಕಲಾವಿದೆ ಡಾ.ದು.ಸರಸ್ವತಿ ಆದಿಮ ಮಕ್ಕಳ ಮೇಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ, ಮನುಷ್ಯ ಪ್ರೀತಿಯನ್ನು ಶಿಬಿರದಲ್ಲಿ ಮಕ್ಕಳಿಗೆ ಕಲಿಸಲಾಗುತ್ತಿದೆ. ಜೊತೆಗೆ ನೈತಿಕತೆ ಕೂಡ ಕಲಿಸಬೇಕಿದೆ. ಸಂವಿಧಾನಾತ್ಮಕ ನೈತಿಕತೆ ಬಾಬಾ ಸಾಹೇಬರು ಹೇಳಿದ ಹೊಸ ಮಾದರಿಯ ನೈತಿಕತೆ ಕಲಿಸಬೇಕಿದೆ. ಕಾರಣ ಭಾರತದಲ್ಲಿನ ಜಾತಿ ವ್ಯವಸ್ಥೆ ತೊಲಗಲು ನಾಗರೀಕ ಪ್ರಜ್ಞೆ ಬೇಕಿದೆ. ಅದನ್ನು ಮಕ್ಕಳಿಗೆ ಕಲಿಸಬೇಕಿದೆ. ನೆಲ ಸಂಸ್ಖೃತಿಯತ್ತ ಸಾಗುವುದಕ್ಕೆ ಈ ಕಲಾಪ್ರಕಾರಗಳಿಂದ ಸಾಧ್ಯವಿದೆ. ಬುದ್ಧನ ಕರುಣೆ ಮತ್ತು ಮೈತ್ರಿಯಿಂದ ಇತಿಹಾಸವನ್ನು ಕಟ್ಟುತ್ತಾ ಮಕ್ಕಳನ್ನು ಕಟ್ಟಬೇಕಿದೆ ಎಂದು ಬುದ್ಧ, ಬಸವಣ್ಣ, ಅಂಬೇಡ್ಕರ್ ಅವರನ್ನು ನೆನಪಿಸಿಕೊಂಡರೆ ಸಾಲದು ರಮಾಬಾಯಿ, ಯಶೋಧರೆ, ನೀಲಾಂಬಿಕೆ, ಗಂಗಾ0ಬಿಕೆಯನ್ನು ಮರೆತರೆ ನೆಲಸಂಸ್ಕೃತಿಯನ್ನು ನೆನಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.
ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ.ವಿ ಪ್ರಭಾಕರ್ ಮಾತನಾಡಿ ಜಾನಪದ ಕಲೆಯಲ್ಲಿ ಶ್ರಮಿಕರ ನೋವು, ನಲಿವು ಮತ್ತು ಕಲೆ ಇರುತ್ತದೆ. ಜಾನಪದದಲ್ಲಿ ಶೋಷಣೆ ಅಥವಾ ದ್ವೇಶ ಇರುವುದಿಲ್ಲ. ಪೋಷಕರು ತಮ್ಮ ಮಕ್ಕಳನ್ನು ಜಾನಪದ ಕಲೆಗಳ ಕರೆ ತೆಗೆದುಕೊಂಡು ಹೋಗಬೇಕು. ಟೆಕ್ನಾಲಜಿ ಇರಬೇಕು ಆದರೆ ನಮ್ಮ ಪರಂಪರಯಾದ ಜನಪದದ ಮುಂದೆ ಅದು ದೊಡ್ಡದಲ್ಲ. ಅಂದಿನ ಜೀವನಶೈಲಿ ಮಕ್ಕಳಲ್ಲಿ ಶಕ್ತಿ, ಧೈರ್ಯ, ಅತ್ಮವಿಶ್ವಾಸ ಇತ್ತು. ಇವತ್ತಿನ ಮಕ್ಕಳಲ್ಲಿ ಅದು ಕಾಣಲು ಸಾಧ್ಯವಿಲ್ಲ. ಕಾರಣ ಮೊಬೈಲಿನಿಂದ ಮನಸುಗಳು ಕೆಡೆಸಿಕೊಂಡಿದ್ದಾರೆ. ಅದರಿಂದ ಹೊರಬರಬೇಕಾದರೆ ಇಂತಹ ಶಿಬಿರಗಳ ಮೂಲಕ ಜನಪದವನ್ನು ಕಲಿತುಕೊಳ್ಳಬೇಕು ಎಂದು ಹೇಳಿದರು.
ಆದಿಮ ಕಾರ್ಯದರ್ಶಿ ಹ.ಮಾ.ರಾಮಚಂದ್ರ ಕಾರ್ಯಕ್ರಮದ ಅಧ್ಯಕ್ಷತೆ ಮಾತನಾಡಿ ಈ ನೆಲ ಅಚಲ, ಆಜೀವಿಕ, ಅವಧೂತ ಪರಂಪರೆಗೆ ಸೇರಿದ್ದಾಗಿದೆ. ಮಕ್ಕಳಲ್ಲಿನ ಬಹುವಿಧಧ ಬುದ್ಧಿವಂತಿಕೆಯನ್ನು ಹೊರತೆಗೆಯುವ ಕೆಲಸ ಆದಿಮ ಮಾಡುತ್ತಿದೆ. ವಿದ್ಯಾರ್ಥಿಗಳಿಗೆ ಹೇಳಬೇಕಾದ ಕ್ರಮವನ್ನು ಶಿಕ್ಷಕರು ಕಲಿಯಬೇಕು. ಮಕ್ಕಳ ಮೇಳಕ್ಕೆ ಅನೇಕರು ಪರೋಕ್ಷವಾಗಿ ಪ್ರತ್ಯಕ್ಷವಾಗಿ ನೆರವಿಗೆ ನಿಂತು ಸಹಕಾರ ನೀಡಿದ್ದೀರಿ ಎಲ್ಲರಿಗೂ ಆದಿಮ ಅಭಿನಂದನೆಗಳನ್ನು ಸಲ್ಲಿಸುತ್ತದೆ ಎಂದರು.
ಶಿಬಿರದ ನಿರ್ದೇಶಕ ಡಿ.ಆರ್.ರಾಜಪ್ಪ ಮಾತನಾಡಿ ಹದಿನೆಂಟು ದಿನಗಳ ಕಾಲ ಮಕ್ಕಳು ಹಕ್ಕಿಗಳಾಗಿ ಕುಣಿದು ಕುಪ್ಪಳಿಸಿದ್ದಾರೆ. ಹಗಲು ರಾತ್ರಿ ಜಾನಪದ ಕಲೆಗಳು ಮತ್ತು ನಾಟಕ ಕಲಿತಿದ್ದಾರೆ. ಕೊನೆ ಕೊನೆಯ ದಿನಗಳಲ್ಲಿ ನಾವು ಮನೆಗಳಿಗೆ ಹೋಗುವುದಿಲ್ಲ. ಇಲ್ಲೇ ಇರುತ್ತೇವೆ. ಆದಿಮ ನಮ್ಮದು ಎಂದು ಮಕ್ಕಳು ಮನದಾಸೆಯನ್ನು ವ್ಯಕ್ತಪಡಿಸಿದರು.
ಜಡೆ ಕೋಲಾಟ, ತಮಟೆ, ತಾಝಾ, ನಗಾರಿ, ತುಡುಮು, ಡೊಳ್ಳುಕುಣಿತ, ಕಂಸಾಳೆ, ಮರಗಾಲು ಕುಣಿತ, ಥಾಲಿ (ತಟ್ಟೆ) ನೃತ್ಯ, ವೀರಗಾಸೆ ಕಲಾ ಪ್ರಕಾರಗಳನ್ನು ಮಕ್ಕಳು ಪ್ರಸ್ತುತ ಪಡಿಸಿದರು. ಎರಡು ನಾಟಕಗಳು ಪ್ರದರ್ಶನಗೊಂಡವು. ಕಿತ್ಲೆ ಹಣ್ಣು ನಾಟಕ ರಚನೆ, ನಾವೆಂಕಿ ಕೋಲಾರ, ವಿನ್ಯಾಸ, ಸಂಗೀತ, ಪರಿಕಲ್ಪನೆ ಮತ್ತು ನಿರ್ದೇಶನ ಜಗದೀಶ್ ಆರ್ ಜಾಣಿ, ಗ.ನ.ಅಶ್ವತ್ಥ್, ನಿರ್ವಹಣೆ, ಯೋಗೀಶ್ ಡಿ.ಕೆ. ಶೋಭಿತ.ಎನ್. ಅಜ್ಜನ ಹೆಜ್ಜೆ ಜಾಡು ರಚನೆ ಕೆ.ವಿ.ಕಾಳಿದಾಸ್ ಕೋಟಿಗಾನಹಳ್ಳಿ, ನಿರ್ದೇಶನ; ಕೆ.ವಿ.ನಾಯಕ್, ಸಂಗೀತ; ಗಜಾನನ ಟಿ ನಾಯ್ಕ, ಸಹನಿರ್ದೇಶನ; ಶಿವಕುಮಾರ್ ಮೈಸೂರು, ಸಹಾಯ; ದರ್ಶನ್, ವಾದ್ಯ ಸಹಕಾರ; ತುರಾಂಡಹಳ್ಳಿ ಶ್ರೀನಿವಾಸ್, ಸುನೀಲ್ ಕುಮಾರ್.ಬಿ.ಆರ್, ಹಾಡುಗಾರಿಕೆ; ವಿದ್ಯಾಶ್ರೀ.ಎ.ಎನ್, ವಿನುತ.ಕೆ.ಎನ್. ದರ್ಶನ್, ರಂಗಪರಿಕರ; ಡಿ.ನಾರಾಯಣಸ್ವಾಮಿ, ಮಂಜುನಾಥ.ಸಿ.ಕೆ, ಕೆ.ವಿ.ಕಾಳಿದಾಸ, ಪ್ರಸಾಧನ/ಮುಖವರ್ಣಿಕೆ; ರಾಮಕೃಷ್ಣ ಬೆಳ್ತೂರು, ನೃತ್ಯ ಸಂಯೋಜನೆ ವಿನುತ.ಕೆ.ಎನ್. ತಮಟೆ; ಸುನೀಲ್ ಕುಮಾರ್,
ಕಾರ್ಯಕ್ರಮದಲ್ಲಿ ಸಚಿವ ಜಮೀರ್ ಅಹಮದ್ ಮಾದ್ಯಮ ಸಲಹೆಗಾರ ಲಕ್ಷ್ಮೀನಾರಾಯಣ, ಆದಿಮ ಅಧ್ಯಕ್ಷ ಎನ್.ಮುನಿಸ್ವಾಮಿ, ಉಪಾಧ್ಯಕ್ಷ ಮಾರ್ಕೊಂಡಪ್ಪ, ಅಮರೇಶ್, ಕುಪ್ಪನಳ್ಳಿ ಎಂ ಭೈರಪ್ಪ, ಶಿಬಿರದ ನಿರ್ದೇಶಕರಾಗಿದ್ದ ರಾಜಪ್ಪ ಡಿ.ಆರ್. ಹಾಗೂ ತಂಡ ಆದಿಮ ಆಶಯಗೀತೆ ಇತರೆ ಹಾಡುಗಳನ್ನು ಹಾಡಿದರು. ಶಿಬಿರದ ಸಂಯೋಜಕರಾಗಿ ಹರೀಷ ಕುಮಾರ್, ಕೆ.ವಿ.ಕಾಳಿದಾಸ ನಿರ್ವಹಿಸಿದರು. ಕಾರ್ಯಕ್ರಮದ ಮೇಲುಸ್ತುವಾರಿಯನ್ನು ಆದಿಮ ರಂಗಶಿಕ್ಷಣ ಕೇಂದ್ರ ಆಡಳಿತಾಧಿಕಾರಿ ರಮೇಶ್ ಅಗ್ರಹಾರ ನಿರ್ವಹಿಸಿದರು. ಆಹಾರದ ಮೇಲುಸ್ತುವಾರಿ ಎಂ. ವೆಂಕಟಸ್ವಾಮಿ ಗಂಗನಬೀಡು, ಕೆ.ಎಂ.ನೀಲಕ0ಠೇಗೌಡ, ಗೋವಿಂದಪ್ಪ, ತುರಾಂಡಹಳ್ಳಿ ಶ್ರೀನಿವಾಸ್.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್