
ಬೀಜಿಂಗ್, 14 ಮೇ (ಹಿ.ಸ.) :
ಆ್ಯಂಕರ್ : 2026ನೇ ವರ್ಷವು ಚೀನಾ–ಅಮೆರಿಕ ಸಂಬಂಧಗಳ ಇತಿಹಾಸದಲ್ಲಿ ಮೈಲಿಗಲ್ಲಾಗಲಿದ್ದು, ಉಭಯ ರಾಷ್ಟ್ರಗಳ ನಡುವಿನ ಸಂಬಂಧಗಳಲ್ಲಿ “ಹೊಸ ಅಧ್ಯಾಯ” ಆರಂಭವಾಗಲಿದೆ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ನಡೆದ ಅಧಿಕೃತ ಸಭೆಯ ಆರಂಭದಲ್ಲಿ ಅವರು ಮಾತನಾಡದರು.
ಚೀನಾದ ಸರ್ಕಾರಿ ಸುದ್ದಿ ಸಂಸ್ಥೆ ಕ್ಸಿನ್ಹುವಾ ಸುದ್ದಿ ಸಂಸ್ಥೆ ಹಾಗೂ ಅಮೆರಿಕದ ಮಾಧ್ಯಮ ಸಂಸ್ಥೆ ಸಿಎನ್ಎನ್ ವರದಿಗಳ ಪ್ರಕಾರ, ಟ್ರಂಪ್ ಅವರಿಗೆ ಚೀನಾ ಸರ್ಕಾರವು ಭವ್ಯ ಸ್ವಾಗತ ನೀಡಿತು. ಸ್ವಾಗತ ಸಮಾರಂಭದ ಬಳಿಕ ಉಭಯ ನಾಯಕರು ತಮ್ಮ ನಿಯೋಗ ಸದಸ್ಯರನ್ನು ಪರಿಚಯಿಸಿಕೊಂಡರು.
ಸಮಾರಂಭದ ವೇಳೆ ಮಿಲಿಟರಿ ಬ್ಯಾಂಡ್ ಉಭಯ ರಾಷ್ಟ್ರಗಳ ರಾಷ್ಟ್ರಗೀತೆಗಳನ್ನು ನುಡಿಸಿತು. ಸಮೀಪದ ತಿಯಾನನ್ಮೆನ್ ಚೌಕ ಪ್ರದೇಶದಲ್ಲಿ ಗೌರವ ವಂದನೆ ಸಲ್ಲಿಸಲಾಯಿತು. ಬಳಿಕ ಟ್ರಂಪ್ ಮತ್ತು ಕ್ಸಿ ಸೈನಿಕ ಪಥಸಂಚಲನವನ್ನು ಪರಿಶೀಲಿಸಿದರು. ಪರಂಪರೆಯ ವೇಷಭೂಷಣದಲ್ಲಿ ಭಾಗವಹಿಸಿದ್ದ ನೂರಾರು ಮಕ್ಕಳು ನೃತ್ಯ ಮತ್ತು ಕಲಾ ಪ್ರದರ್ಶನಗಳ ಮೂಲಕ ನಾಯಕರನ್ನು ಸ್ವಾಗತಿಸಿದರು.
ಎರಡು ದಿನಗಳ ಕಾಲ ನಡೆಯಲಿರುವ ಈ ಮಹತ್ವದ ಮಾತುಕತೆಯಲ್ಲಿ ತಂತ್ರಜ್ಞಾನ, ವ್ಯಾಪಾರ, ಕೃತಕ ಬುದ್ಧಿಮತ್ತೆ, ತೈವಾನ್ ಪ್ರಶ್ನೆ, ಜಾಗತಿಕ ಭದ್ರತೆ ಮತ್ತು ಇಂಧನ ಬಿಕ್ಕಟ್ಟು ಸೇರಿದಂತೆ ಹಲವು ಸೂಕ್ಷ್ಮ ವಿಷಯಗಳ ಕುರಿತು ಚರ್ಚೆ ನಡೆಯುವ ನಿರೀಕ್ಷೆಯಿದೆ. ಈ ಸಭೆಯ ಫಲಿತಾಂಶವು ಮುಂದಿನ ವರ್ಷಗಳಲ್ಲಿ ವಿಶ್ವದ ಎರಡು ಅತಿದೊಡ್ಡ ಆರ್ಥಿಕ ಶಕ್ತಿಗಳ ನಡುವಿನ ಸಂಬಂಧಗಳ ದಿಕ್ಕನ್ನು ನಿರ್ಧರಿಸಬಹುದು ಎಂದು ಅಂತಾರಾಷ್ಟ್ರೀಯ ವೀಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಇರಾನ್–ಇಸ್ರೇಲ್ ಉದ್ವಿಗ್ನತೆ ಮತ್ತು ಅದರ ಪರಿಣಾಮವಾಗಿ ಉಂಟಾಗಬಹುದಾದ ಜಾಗತಿಕ ಇಂಧನ ಬಿಕ್ಕಟ್ಟು ಕೂಡ ಈ ಮಾತುಕತೆಯ ಪ್ರಮುಖ ಅಂಶವಾಗಿದೆ. ಹಾರ್ಮುಜ್ ಜಲಸಂಧಿಯ ಸುರಕ್ಷತೆ ಮತ್ತು ತೈಲ ಸರಬರಾಜು ಸ್ಥಿರತೆ ಕುರಿತು ಅಮೆರಿಕ ಚೀನಾದ ಸಹಕಾರವನ್ನು ನಿರೀಕ್ಷಿಸುತ್ತಿದೆ ಎಂದು ತಿಳಿದುಬಂದಿದೆ. ಇರಾನ್ ಮೇಲೆ ಪ್ರಭಾವ ಬೀರಿ ಶಾಂತಿ ಮಾತುಕತೆಗೆ ಒತ್ತಡ ತರಲು ಟ್ರಂಪ್, ಕ್ಸಿ ಜಿನ್ಪಿಂಗ್ ಅವರನ್ನು ಮನವಿ ಮಾಡುವ ಸಾಧ್ಯತೆಯಿದೆ.
ಈ ಭೇಟಿಗೆ ಅಮೆರಿಕದ ಹಲವು ಪ್ರಮುಖ ಉದ್ಯಮಿಗಳು ಮತ್ತು ತಂತ್ರಜ್ಞಾನ ಕ್ಷೇತ್ರದ ಗಣ್ಯರು ಸಹ ಭಾಗಿಯಾಗಿದ್ದಾರೆ. ಟಿಮ್ ಕುಕ್, ಎಲಾನ್ ಮಸ್ಕ್ ಸೇರಿದಂತೆ ಉದ್ಯಮ ನಾಯಕರು ಟ್ರಂಪ್ ನಿಯೋಗದ ಭಾಗವಾಗಿದ್ದಾರೆ.
ವಿಶ್ವದ ರಾಜಕೀಯ, ವ್ಯಾಪಾರ ಮತ್ತು ಭದ್ರತಾ ಸಮೀಕರಣಗಳ ಮೇಲೆ ಪರಿಣಾಮ ಬೀರುವ ಈ ಶೃಂಗಸಭೆಯತ್ತ ಜಾಗತಿಕ ಸಮುದಾಯದ ಗಮನ ನೆಟ್ಟಿದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.