
ವಾಷಿಂಗ್ಟನ್, 13 ಮೇ (ಹಿ.ಸ.) :
ಆ್ಯಂಕರ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಂಗಳವಾರ ಚೀನಾಕ್ಕೆ ಪ್ರಯಾಣ ಬೆಳೆಸಿದ್ದು, ಬುಧವಾರ ಬೀಜಿಂಗ್ ಗೆ ಆಗಮಿಸಲಿದ್ದಾರೆ. ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರೊಂದಿಗೆ ನಡೆಯಲಿರುವ ಮಹತ್ವದ ದ್ವಿಪಕ್ಷೀಯ ಮಾತುಕತೆಯತ್ತ ಇಡೀ ವಿಶ್ವದ ಗಮನ ಕೇಂದ್ರೀಕೃತವಾಗಿದೆ.
ಉಭಯ ರಾಷ್ಟ್ರಗಳ ನಡುವಿನ ವ್ಯಾಪಾರ ಉದ್ವಿಗ್ನತೆ, ಸುಂಕ ನೀತಿ, ಅಪರೂಪದ ಖನಿಜಗಳ ವ್ಯಾಪಾರ ಒಪ್ಪಂದ, ಪಶ್ಚಿಮ ಏಷ್ಯಾದ ಉದ್ವಿಗ್ನ ಪರಿಸ್ಥಿತಿ ಹಾಗೂ ಇರಾನ್ ಸಂಬಂಧಿತ ವಿಚಾರಗಳು ಸಭೆಯ ಪ್ರಮುಖ ವಿಷಯಳಾಗಿವೆ ಎಂದು ತಿಳಿದುಬಂದಿದೆ. ವಿಶೇಷವಾಗಿ ಕೊಲ್ಲಿ ಪ್ರದೇಶದ ಯುದ್ಧ ಪರಿಸ್ಥಿತಿ ಮತ್ತು ಜಾಗತಿಕ ವ್ಯಾಪಾರ ಸಮತೋಲನ ಕುರಿತಂತೆ ಮಹತ್ವದ ಚರ್ಚೆಗಳು ನಡೆಯುವ ನಿರೀಕ್ಷೆಯಿದೆ.
ಚೀನಾಕ್ಕೆ ಟ್ರಂಪ್ ಅವರ ಇದು ಎರಡನೇ ಅಧಿಕೃತ ಭೇಟಿ ಆಗಿದ್ದು, 2017ರಲ್ಲಿ ತಮ್ಮ ಮೊದಲ ಅಧಿಕಾರಾವಧಿಯಲ್ಲಿಯೂ ಅವರು ಬೀಜಿಂಗ್ಗೆ ಭೇಟಿ ನೀಡಿದ್ದರು. ಈ ಬಾರಿ ಅಮೆರಿಕದ ಪ್ರಮುಖ ಕಂಪನಿಗಳ ಉನ್ನತ ಕಾರ್ಯನಿರ್ವಾಹಕರೂ ಸಹ ಅವರೊಂದಿಗೆ ಪ್ರಯಾಣಿಸುತ್ತಿದ್ದಾರೆ. ಅಮೆರಿಕದ ಉಪ ಪತ್ರಿಕಾ ಕಾರ್ಯದರ್ಶಿ ಅನ್ನಾ ಕೆಲ್ಲಿ ಅವರು ಬುಧವಾರ ಸಂಜೆ ಬೀಜಿಂಗ್ಗೆ ಆಗಮಿಸಿ, ಗುರುವಾರ ನಡೆಯುವ ಸ್ವಾಗತ ಸಮಾರಂಭ ಮತ್ತು ದ್ವಿಪಕ್ಷೀಯ ಸಭೆಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.
ಬೀಜಿಂಗ್ಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, “ವ್ಯಾಪಾರ ಒಪ್ಪಂದಗಳು ಮತ್ತು ಸುಂಕ ನೀತಿಗಳೇ ಮಾತುಕತೆಯ ಕೇಂದ್ರಬಿಂದು ಆಗಲಿವೆ” ಎಂದು ಹೇಳಿದರು. ಜೊತೆಗೆ ಇರಾನ್ ಕುರಿತೂ ಚರ್ಚೆ ನಡೆಯುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರನ್ನು “ಉತ್ತಮ ಸ್ನೇಹಿತ” ಎಂದು ಬಣ್ಣಿಸಿದ ಟ್ರಂಪ್, “ಅವರೊಂದಿಗೆ ನನಗೆ ಉತ್ತಮ ಬಾಂಧವ್ಯವಿದೆ. ಈ ಭೇಟಿಯಿಂದ ಅನೇಕ ಸಕಾರಾತ್ಮಕ ಬೆಳವಣಿಗೆಗಳು ಹೊರಬರಲಿವೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇರಾನ್ನ ಪರಮಾಣು ಕಾರ್ಯಕ್ರಮದ ಬಗ್ಗೆ ಕಠಿಣ ಎಚ್ಚರಿಕೆ ನೀಡಿದ ಟ್ರಂಪ್, “ಅಮೆರಿಕ ಮತ್ತು ಇರಾನ್ ಒಪ್ಪಂದಕ್ಕೆ ಬರಬೇಕು; ಇಲ್ಲವಾದರೆ ಇರಾನ್ ಸಂಪೂರ್ಣ ನಾಶವಾಗಬಹುದು” ಎಂದು ಹೇಳಿದರು. “ಅಂತಿಮ ಗೆಲುವು ಯಾವಾಗಲೂ ಅಮೆರಿಕದದೇ ಆಗಿರುತ್ತದೆ” ಎಂಬುದಾಗಿ ಅವರು ಹೇಳಿದ್ದಾರೆ.
ಅಮೆರಿಕದ ಆಹಾರ ಮತ್ತು ಔಷಧ ನಿಯಂತ್ರಣ ಸಂಸ್ಥೆ ಎಫ್ಡಿಎ ಆಯುಕ್ತ ಮಾರ್ಟಿ ಮಕಾರಿ ರಾಜೀನಾಮೆ ನೀಡಿರುವುದಾಗಿ ಟ್ರಂಪ್ ತಿಳಿಸಿದ್ದಾರೆ. ಅವರ ಸ್ಥಾನಕ್ಕೆ ಕೈಲ್ ಡೈಮಂಟಸ್ ಅವರನ್ನು ಹಂಗಾಮಿ ಆಯುಕ್ತರಾಗಿ ನೇಮಕ ಮಾಡಲಾಗಿದೆ. ಟ್ರಂಪ್ ತಮ್ಮ ಸಾಮಾಜಿಕ ಜಾಲತಾಣವಾದ ಟ್ರೂಥ್ ನಲ್ಲಿ ಈ ಮಾಹಿತಿ ಹಂಚಿಕೊಂಡಿದ್ದು, ಮಕರಿ ಅವರ ಸೇವೆಯನ್ನು ಪ್ರಶಂಸಿಸಿದ್ದಾರೆ.
ಇದರ ನಡುವೆಯೇ, ಇರಾನ್ ಯುದ್ಧ ಕುರಿತ ಮಾಧ್ಯಮ ವರದಿಗಳ ವಿರುದ್ಧವೂ ಟ್ರಂಪ್ ಕಿಡಿಕಾರಿದ್ದಾರೆ. “ಇರಾನ್ ಅಮೆರಿಕದ ವಿರುದ್ಧ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳುವ ಕೆಲವು ಮಾಧ್ಯಮ ವರದಿಗಳು ದೇಶದ್ರೋಹಕ್ಕೆ ಸಮಾನ” ಎಂದು ಅವರು ಆರೋಪಿಸಿದ್ದಾರೆ. “ಇಂತಹ ವರದಿಗಳು ಶತ್ರು ರಾಷ್ಟ್ರಗಳಿಗೆ ಪ್ರೋತ್ಸಾಹ ನೀಡುತ್ತವೆ” ಎಂದು ಟ್ರಂಪ್ ಅಭಿಪ್ರಾಯಪಟ್ಟಿದ್ದಾರೆ.
ಅಮೆರಿಕ ಸಂವಿಧಾನದ ಪ್ರಕಾರ ದೇಶದ್ರೋಹ ಎಂದರೇನು ಎಂಬುದನ್ನೂ ಉಲ್ಲೇಖಿಸಿದ ಟ್ರಂಪ್, “ಅಮೆರಿಕದ ವಿರುದ್ಧ ಶತ್ರುಗಳಿಗೆ ಸಹಾಯ ಮಾಡುವ ಯಾವುದೇ ಕೃತ್ಯ ದೇಶದ್ರೋಹವೆಂದು ಪರಿಗಣಿಸಲಾಗುತ್ತದೆ” ಎಂದು ಹೇಳಿದ್ದಾರೆ. ಮಾಧ್ಯಮ ಸಂಸ್ಥೆಗಳ ವಿರುದ್ಧ ಫೆಡರಲ್ ಕಮ್ಯುನಿಕೇಷನ್ಸ್ ಆಯೋಗ ಕ್ರಮ ಕೈಗೊಳ್ಳಬಹುದು ಎಂಬ ಎಚ್ಚರಿಕೆಯೂ ಅಮೆರಿಕ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.