ಅಮೆರಿಕ–ಇರಾನ್ ಮಾತುಕತೆ ವಿಫಲ ; ಯುದ್ಧ ಭೀತಿ ಹೆಚ್ಚಳ
ವಾಷಿಂಗ್ಟನ್/ಟೆಹ್ರಾನ್, 11 ಮೇ (ಹಿ.ಸ.) : ಆ್ಯಂಕರ್ : ಮಧ್ಯಪ್ರಾಚ್ಯದ ಅತ್ಯಂತ ಸೂಕ್ಷ್ಮ ಪ್ರದೇಶವಾದ ಹೋರ್ಮುಜ್ ಜಲಸಂಧಿಯಲ್ಲಿ ಮತ್ತೊಮ್ಮೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಅಮೆರಿಕ ಮತ್ತು ಇರಾನ್ ನಡುವಿನ ರಾಜತಾಂತ್ರಿಕ ಮಾತುಕತೆಗಳು ವಿಫಲವಾದ ಹಿನ್ನೆಲೆಯಲ್ಲಿ ಯುದ್ಧ ಭೀತಿ ಹೆಚ್ಚಾಗಿದೆ.
ಟೆಹ್ರಾನ್ ಚಿತ್ರ


ವಾಷಿಂಗ್ಟನ್/ಟೆಹ್ರಾನ್, 11 ಮೇ (ಹಿ.ಸ.) :

ಆ್ಯಂಕರ್ : ಮಧ್ಯಪ್ರಾಚ್ಯದ ಅತ್ಯಂತ ಸೂಕ್ಷ್ಮ ಪ್ರದೇಶವಾದ ಹೋರ್ಮುಜ್ ಜಲಸಂಧಿಯಲ್ಲಿ ಮತ್ತೊಮ್ಮೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಅಮೆರಿಕ ಮತ್ತು ಇರಾನ್ ನಡುವಿನ ರಾಜತಾಂತ್ರಿಕ ಮಾತುಕತೆಗಳು ವಿಫಲವಾದ ಹಿನ್ನೆಲೆಯಲ್ಲಿ ಯುದ್ಧ ಭೀತಿ ಹೆಚ್ಚಾಗಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ನೀಡಿದ ಹೊಸ ಶಾಂತಿ ಪ್ರಸ್ತಾಪವನ್ನು “ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ” ಎಂದು ತಿರಸ್ಕರಿಸಿದ್ದು, ಇದರಿಂದ ಪರಿಸ್ಥಿತಿ ಮತ್ತಷ್ಟು ಕಠಿಣಗೊಂಡಿದೆ. ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ತೀವ್ರ ಎಚ್ಚರಿಕೆ ನೀಡಿದೆ.

ಇರಾನ್ ತನ್ನ ಪ್ರತಿಕ್ರಿಯೆಯಲ್ಲಿ, “ಅಮೆರಿಕದ ನೌಕಾ ದಿಗ್ಬಂಧನವನ್ನು ತಕ್ಷಣ ತೆರವುಗೊಳಿಸಬೇಕು, ಆರ್ಥಿಕ ನಿರ್ಬಂಧಗಳನ್ನು ರದ್ದುಪಡಿಸಬೇಕು ಹಾಗೂ ಪರಮಾಣು ಕಾರ್ಯಕ್ರಮ ಮತ್ತು ವಿದೇಶಾಂಗ ನೀತಿಯಲ್ಲಿ ಹಸ್ತಕ್ಷೇಪ ನಿಲ್ಲಿಸಬೇಕು” ಎಂದು ಒತ್ತಾಯಿಸಿದೆ. ಆದರೆ ಈ ಬೇಡಿಕೆಗಳನ್ನು ಅಮೆರಿಕ ಸಂಪೂರ್ಣವಾಗಿ ತಿರಸ್ಕರಿಸಿದೆ.

ಟ್ರಂಪ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ, “ಇರಾನ್ ಹಲವು ದಶಕಗಳಿಂದ ವಿಶ್ವ ಸಮುದಾಯದೊಂದಿಗೆ ಆಟವಾಡುತ್ತಿದೆ. ಅವರ ಪ್ರತಿಕ್ರಿಯೆ ಸಂಪೂರ್ಣ ಅಸ್ವೀಕಾರಾರ್ಹ” ಎಂದು ಕಿಡಿಕಾರಿದ್ದಾರೆ.

ಪರಮಾಣು ಕಾರ್ಯಕ್ರಮವೇ ಪ್ರಮುಖ ಅಡ್ಡಿ

ಇರಾನ್ ತನ್ನ ಪರಮಾಣು ಸಾಮರ್ಥ್ಯವನ್ನು ವಿಸ್ತರಿಸಲು ಮುಂದಾಗಿರುವುದು ಅಮೆರಿಕ ಮತ್ತು ಪಾಶ್ಚಾತ್ಯ ರಾಷ್ಟ್ರಗಳ ಪ್ರಮುಖ ಚಿಂತೆಯಾಗಿದೆ. ವಿಶೇಷವಾಗಿ ಇಸ್ರೇಲ್ ವಿರುದ್ಧ ಇರಾನ್ನ ಆಕ್ರಮಣಕಾರಿ ನಿಲುವು ಹಾಗೂ ಹಮಾಸ್ ಮತ್ತು ಹೆಜ್ಬೊಲ್ಲಾ ಮುಂತಾದ ಸಂಘಟನೆಗಳಿಗೆ ನೀಡುತ್ತಿರುವ ಬೆಂಬಲವನ್ನು ಅಮೆರಿಕ ಗಂಭೀರವಾಗಿ ವಿರೋಧಿಸುತ್ತಿದೆ.

2015ರಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಆಡಳಿತದ ಅವಧಿಯಲ್ಲಿ ಇರಾನ್ ಪರಮಾಣು ಕಾರ್ಯಕ್ರಮವನ್ನು ನಿಯಂತ್ರಿಸುವ ಉದ್ದೇಶದಿಂದ ಒಪ್ಪಂದ ಕೈಗೊಳ್ಳಲಾಗಿತ್ತು. ಆದರೆ ಟ್ರಂಪ್ ತಮ್ಮ ಮೊದಲ ಅಧಿಕಾರಾವಧಿಯಲ್ಲಿ ಆ ಒಪ್ಪಂದದಿಂದ ಅಮೆರಿಕವನ್ನು ಹೊರತೆಗೆದಿದ್ದರು.

ಹೋರ್ಮುಜ್ನಲ್ಲಿ ಸೈನಿಕ ಚಟುವಟಿಕೆ ಹೆಚ್ಚಳ

ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾದ ಹೋರ್ಮುಜ್ ಜಲಸಂಧಿಯಲ್ಲಿ ಈಗ ಸೈನಿಕ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಫ್ರಾನ್ಸ್ ಮತ್ತು ಬ್ರಿಟನ್ ಈ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ನೌಕಾ ಕಾರ್ಯಾಚರಣೆಗೆ ಸಿದ್ಧತೆ ನಡೆಸುತ್ತಿರುವುದಾಗಿ ವರದಿಯಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಇರಾನ್ ಉಪ ವಿದೇಶಾಂಗ ಸಚಿವರು, “ಹೋರ್ಮುಜ್ನಲ್ಲಿ ಅಮೆರಿಕದ ಕ್ರಮಗಳಿಗೆ ಬೆಂಬಲ ನೀಡಿದರೆ ತಕ್ಷಣ ಹಾಗೂ ನಿರ್ಣಾಯಕ ಪ್ರತಿಕ್ರಿಯೆ ನೀಡಲಾಗುವುದು” ಎಂದು ಎಚ್ಚರಿಸಿದ್ದಾರೆ.

ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್, “ಇದು ಸೈನಿಕ ದಾಳಿ ಕಾರ್ಯಾಚರಣೆ ಅಲ್ಲ. ವ್ಯಾಪಾರ ಹಡಗುಗಳ ಸುರಕ್ಷಿತ ಸಂಚಾರ ಖಚಿತಪಡಿಸುವ ಉದ್ದೇಶ ಮಾತ್ರ ಇದೆ” ಎಂದು ಸ್ಪಷ್ಟಪಡಿಸಿದ್ದಾರೆ.

ಇನ್ನೊಂದೆಡೆ, ಬ್ರಿಟಿಷ್ ರಾಯಲ್ ನೌಕಾಪಡೆ ತನ್ನ ಆಧುನಿಕ ಯುದ್ಧನೌಕೆ ಎಚ್ಎಂಎಸ್ ಡ್ರ್ಯಾಗನ್ ಅನ್ನು ಮಧ್ಯಪ್ರಾಚ್ಯಕ್ಕೆ ನಿಯೋಜಿಸುವುದಾಗಿ ಘೋಷಿಸಿದೆ. ವೈಮಾನಿಕ ದಾಳಿ ಮತ್ತು ಕ್ಷಿಪಣಿ ಭೀತಿಯನ್ನು ಎದುರಿಸಲು ಈ ಯುದ್ಧನೌಕೆಯನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.

ಜಾಗತಿಕ ತೈಲ ಮಾರುಕಟ್ಟೆಗೆ ಆತಂಕ

ಹೋರ್ಮುಜ್ ಜಲಸಂಧಿ ಮೂಲಕವೇ ವಿಶ್ವದ ದೊಡ್ಡ ಪ್ರಮಾಣದ ಕಚ್ಚಾ ತೈಲ ಸಾಗಾಟ ನಡೆಯುವುದರಿಂದ, ಇಲ್ಲಿ ಉಂಟಾಗುವ ಯಾವುದೇ ಯುದ್ಧ ಅಥವಾ ಅಸ್ಥಿರತೆ ಜಾಗತಿಕ ಇಂಧನ ಮಾರುಕಟ್ಟೆಯ ಮೇಲೂ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ. ತಜ್ಞರ ಪ್ರಕಾರ, ಪರಿಸ್ಥಿತಿ ಮತ್ತಷ್ಟು ಹದಗೆಟ್ಟರೆ ಜಾಗತಿಕ ಆರ್ಥಿಕತೆಯ ಮೇಲೂ ಗಂಭೀರ ಪರಿಣಾಮ ಉಂಟಾಗಬಹುದು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande