
ಇಸ್ಲಾಮಾಬಾದ್, 12 ಮೇ (ಹಿ.ಸ.) :
ಆ್ಯಂಕರ್ : ಪಾಕಿಸ್ತಾನದ ಅಶಾಂತ ಬಲೂಚಿಸ್ತಾನ ಪ್ರಾಂತ್ಯದಲ್ಲಿ ೧೨ ಕಾರ್ಮಿಕರ ಸಾಮೂಹಿಕ ಹತ್ಯೆ ನಡೆದಿದೆ ಎಂಬ ಆರೋಪ ಕೇಳಿ ಬಂದಿದ್ದು, ಪಾಕಿಸ್ತಾನದ ಕರಾವಳಿ ಕಾವಲು ಪಡೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಗ್ವಾದರ್ನ ಕುಂತಾನಿ ಮತ್ತು ಜಿವಾನಿ ಪ್ರದೇಶಗಳಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಠ ೧೨ ಬಲೂಚ್ ಕಾರ್ಮಿಕರು ಹಾಗೂ ಮೀನುಗಾರರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಘಟನೆಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಸ್ಥಳೀಯ ನಾಗರಿಕರು ಮತ್ತು ಬಲೂಚ್ ಹೋರಾಟಗಾರರ ಪ್ರಕಾರ, ಪಾಕಿಸ್ತಾನದ ಕರಾವಳಿ ಕಾವಲು ಪಡೆ ನಿರಾಯುಧ ಬಲೂಚ್ ನಾಗರಿಕರ ಮೇಲೆ ಯಾವುದೇ ಎಚ್ಚರಿಕೆ ಇಲ್ಲದೆ ಗುಂಡಿನ ದಾಳಿ ನಡೆಸಿದೆ ಎಂದು ಆರೋಪಿಸಲಾಗಿದೆ. ಘಟನೆಯ ಬಳಿಕ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ.
ಬಲೂಚ್ ವಿದ್ಯಾರ್ಥಿ ಸಂಘಟನೆಯ ಪ್ರಮುಖ ವಕ್ತಾರ ಶೋಲನ್ ಬಲೂಚ್, “ಇದು ಕರಾವಳಿ ಕಾವಲು ಪಡೆಯ ಕ್ರೌರ್ಯದ ಭೀಕರ ಉದಾಹರಣೆ. ದುಡಿಯಲು ಹೊರಟಿದ್ದ ಕಾರ್ಮಿಕರ ಮೇಲೆ ಗುಂಡು ಹಾರಿಸಲಾಗಿದೆ” ಎಂದು ಆರೋಪಿಸಿದ್ದಾರೆ.
ಬಲೂಚ್ ಜನರಿಗೆ ಮೂಲಭೂತ ಆರ್ಥಿಕ ಹಕ್ಕುಗಳನ್ನೇ ನಿರಾಕರಿಸಲಾಗುತ್ತಿದೆ. ಬಡ ಕಾರ್ಮಿಕರು ಮತ್ತು ವ್ಯಾಪಾರಿಗಳನ್ನು ಭದ್ರತಾ ಪಡೆಗಳು ನಿರಂತರವಾಗಿ ಕಿರುಕುಳ ನೀಡುತ್ತಿವೆ ಎಂದು ಅವರು ದೂರಿದ್ದಾರೆ.
ಕರಾವಳಿ ಕಾವಲು ಪಡೆ, ಪೊಲೀಸ್, ಸೇನೆ ಮತ್ತು ಇತರ ಭದ್ರತಾ ಸಂಸ್ಥೆಗಳ ಅಧಿಕಾರಿಗಳು ಬಲೂಚ್ ಪ್ರದೇಶದ ಬಡ ವಾಹನ ಚಾಲಕರು ಹಾಗೂ ಅಂಗಡಿ ಮಾಲೀಕರಿಂದ ಹಣ ಸುಲಿಗೆ ಮಾಡುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.
ಈ ಘಟನೆಯನ್ನು ಬಲೂಚಿಸ್ತಾನ್ ರಾಷ್ಟ್ರೀಯ ಪಕ್ಷ ಹಾಗೂ ರಾಷ್ಟ್ರೀಯ ಪಕ್ಷ ತೀವ್ರವಾಗಿ ಖಂಡಿಸಿವೆ. ಬಲೂಚಿಸ್ತಾನದ ಜನರ ಬದುಕುವ ಹಕ್ಕನ್ನೇ ಕಸಿದುಕೊಳ್ಳಲಾಗುತ್ತಿದೆ ಎಂದು ಪಕ್ಷಗಳು ಆರೋಪಿಸಿವೆ.
ಘಟನೆಯಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಿವಿಧ ಸಂಘಟನೆಗಳು ಆಗ್ರಹಿಸಿವೆ. ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa