
ಬೈರುತ್, 10 ಮೇ (ಹಿ.ಸ.) :
ಆ್ಯಂಕರ್ : ಲೆಬನಾನ್ ಮೇಲೆ ಇಸ್ರೇಲ್ ನಡೆಸುತ್ತಿರುವ ನಿರಂತರ ವಾಯು ಮತ್ತು ಫಿರಂಗಿ ದಾಳಿಗಳು ಮತ್ತಷ್ಟು ತೀವ್ರಗೊಂಡಿದ್ದು, ಶನಿವಾರ ನಡೆದ ದಾಳಿಗಳಲ್ಲಿ ಕನಿಷ್ಠ 24 ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಅಮೆರಿಕದ ಮಧ್ಯಸ್ಥಿಕೆಯಲ್ಲಿ ನಡೆಯುತ್ತಿರುವ ಕದನ ವಿರಾಮದ ನಡುವೆಯೇ ಹಿಂಸಾಚಾರ ಮುಂದುವರಿದಿರುವುದು ಮಧ್ಯಪ್ರಾಚ್ಯದಲ್ಲಿ ಆತಂಕ ಹೆಚ್ಚಿಸಿದೆ.
ಆಲ್ ಜಝಿರಾ ವರದಿ ಪ್ರಕಾರ, ಇಸ್ರೇಲ್ ಶನಿವಾರ ದಕ್ಷಿಣ ಲೆಬನಾನಿನ ಒಂಬತ್ತು ಪಟ್ಟಣಗಳು ಹಾಗೂ ಹಳ್ಳಿಗಳಿಗೆ ಸ್ಥಳಾಂತರಿಸುವ ಸೂಚನೆ ನೀಡಿದ ಬಳಿಕ ಭಾರಿ ವಾಯುದಾಳಿ ನಡೆಸಿತು. ದಕ್ಷಿಣ ಲೆಬನಾನಿನ ಹಲವೆಡೆ ಇಸ್ರೇಲಿ ಯುದ್ಧವಿಮಾನಗಳು ಮತ್ತು ಡ್ರೋನ್ಗಳ ಮೂಲಕ ದಾಳಿ ನಡೆದಿದ್ದು, ಫಿರಂಗಿ ದಾಳಿಯೂ ಹೆಚ್ಚಾಗಿದೆ.
ಕಳೆದ 48 ಗಂಟೆಗಳಲ್ಲಿ ಇಸ್ರೇಲ್ ದಾಳಿಯ ತೀವ್ರತೆ ಗಮನಾರ್ಹವಾಗಿ ಏರಿಕೆಯಾಗಿದೆ ಎಂದು ವರದಿಗಳು ತಿಳಿಸಿವೆ. ದಕ್ಷಿಣ ಲೆಬನಾನಿನ ಹಲವಾರು ಪ್ರದೇಶಗಳಲ್ಲಿ ಮನೆಗಳು, ಕಟ್ಟಡಗಳು ಹಾಗೂ ಮೂಲಸೌಕರ್ಯಗಳಿಗೆ ಹಾನಿಯಾಗಿದೆ. ಸ್ಥಳೀಯ ನಿವಾಸಿಗಳು ಭೀತಿಯಲ್ಲೇ ಸುರಕ್ಷಿತ ಪ್ರದೇಶಗಳತ್ತ ತೆರಳುತ್ತಿದ್ದಾರೆ.
ಇಸ್ರೇಲ್ ಘೋಷಿಸಿರುವ “ಹಳದಿ ವಲಯ” ವ್ಯಾಪ್ತಿಯೊಳಗೆ ಈ ದಾಳಿಗಳು ನಡೆದಿವೆ ಎಂದು ಹೇಳಲಾಗಿದೆ. ಈ ವಲಯವು ಲೆಬನಾನ್ ಗಡಿಯೊಳಗೆ ಸುಮಾರು 10 ಕಿಲೋಮೀಟರ್ ವಿಸ್ತಾರ ಹೊಂದಿದೆ. ಈ ಪ್ರದೇಶದಲ್ಲಿ ಇಸ್ರೇಲಿ ಪಡೆಗಳು ವಿಧ್ವಂಸಕ ಕಾರ್ಯಾಚರಣೆ ನಡೆಸಿವೆ ಎಂಬ ಆರೋಪಗಳೂ ಕೇಳಿ ಬಂದಿವೆ.
ಇದರ ನಡುವೆಯೇ, ಅಮೆರಿಕದ ವಾಷಿಂಗ್ಟನ್ನಲ್ಲಿ ನಡೆಯಲಿರುವ ರಾಜತಾಂತ್ರಿಕ ಮಾತುಕತೆಗಳಿಗೆ ಎರಡೂ ದೇಶಗಳು ಸಿದ್ಧತೆ ನಡೆಸುತ್ತಿರುವುದು ಗಮನಾರ್ಹವಾಗಿದೆ. ಈಗಿನ ಕದನ ವಿರಾಮವನ್ನು ವಿಸ್ತರಿಸುವ ಕುರಿತು ಕೆಲವು ಮಟ್ಟಿನ ಆಶಾಭಾವನೆ ಇದ್ದರೂ, ನಿರಂತರ ದಾಳಿಗಳು ಶಾಂತಿ ಪ್ರಕ್ರಿಯೆಗೆ ದೊಡ್ಡ ಸವಾಲಾಗಿ ಪರಿಣಮಿಸಿವೆ.
ಲೆಬನಾನ್ ಸರ್ಕಾರವು ಯುದ್ಧದಿಂದ ಹಾನಿಗೊಳಗಾದ ದಕ್ಷಿಣ ಭಾಗಗಳ ಪುನರ್ನಿರ್ಮಾಣಕ್ಕೆ ಅಂತಾರಾಷ್ಟ್ರೀಯ ಸಮುದಾಯದಿಂದ ನೆರವು ಕೋರಿದೆ. ಜೊತೆಗೆ, ದಕ್ಷಿಣ ಲೆಬನಾನಿನಿಂದ ಇಸ್ರೇಲಿ ಪಡೆಗಳನ್ನು ಹಿಂತೆಗೆದುಕೊಳ್ಳುವಂತೆ ಹಾಗೂ ಬಂಧಿತರ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa