
ಬಾಗಲಕೋಟೆ, 01 ಮೇ (ಹಿ.ಸ.) :
ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಚಿತ್ರಭಾನುಕೋಟೆ ಗ್ರಾಮದಲ್ಲಿ ಶ್ರೀ ದ್ಯಾಮಮ್ಮ ದೇವಿ ಹಾಗೂ ಶ್ರೀ ಕೋಟೆಮ್ಮ ದೇವಿಯರ ಜಾತ್ರಾ ಮಹೋತ್ಸವ ಐದು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದ್ದು, ಗ್ರಾಮದಲ್ಲಿ ಭಕ್ತಿಭಾವದ ವಾತಾವರಣ ಉಂಟಾಗಿದೆ.
ಏಳು ವರ್ಷಗಳಿಗೊಮ್ಮೆ ನಡೆಯುವ ಭಂಡಾರದ ಜಾತ್ರೆಯು ಮೇ 1ರಿಂದ 5ರವರೆಗೆ ನಡೆಯಲಿದ್ದು, ಬಣ್ಣ ಕೊಡಿಸುವುದು ಮತ್ತು ಉಡಿ ತುಂಬುವ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜಾತ್ರೆಗೆ ಚಾಲನೆ ದೊರೆಯಲಿದೆ. ಗ್ರಾಮ ದೇವಿಯರ ಆರಾಧನೆಗಾಗಿ ದೂರದೂರಿನಿಂದ ಭಕ್ತರು ಆಗಮಿಸುವ ನಿರೀಕ್ಷೆ ಇದೆ.
ಜಾತ್ರೆಯ ಅಂಗವಾಗಿ ಮೇ 3ರಂದು ರಾತ್ರಿ ಮೂರು ದಿನಗಳ ಕಾಲ ನಡೆಯುವ ಸಂತೆ ನಾಟಕ ಪ್ರದರ್ಶನ ಆರಂಭವಾಗಲಿದೆ. ಸಾಂಸ್ಕೃತಿಕ ಹಾಗೂ ಧಾರ್ಮಿಕ ಚಟುವಟಿಕೆಗಳು ಜಾತ್ರೆಯ ಪ್ರಮುಖ ಆಕರ್ಷಣೆಯಾಗಿದ್ದು, ಜನರಿಗೆ ಮನರಂಜನೆ ಹಾಗೂ ಭಕ್ತಿ ಎರಡನ್ನೂ ಒದಗಿಸಲಿವೆ.
ಜಾತ್ರೆಯ ಕೊನೆಯ ದಿನ ವಿಶೇಷ ಕಾರ್ಯಕ್ರಮಗಳು ಆಯೋಜಿಸಲಾಗಿದ್ದು, ಬೆಳಗ್ಗೆ 7ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಡೊಳ್ಳು ಹಾಗೂ ವಿವಿಧ ವಾದ್ಯಗಳೊಂದಿಗೆ ಗ್ರಾಮದೇವರ ಭವ್ಯ ಮೆರವಣಿಗೆ ನಡೆಯಲಿದೆ. ಬಳಿಕ ರಾತ್ರಿ 8ರಿಂದ 8:30ರವರೆಗೆ ಬಣ್ಣ ಕೊಡಿಸುವುದು ಹಾಗೂ ಉಡಿ ತುಂಬುವ ಕಾರ್ಯಕ್ರಮ ನೆರವೇರಲಿದೆ. ನಂತರ ‘ದಿಲ್ಲಿ ಹೊಕ್ಕ ಪುಂಡ ಹುಲಿ’ ನಾಟಕ ಪ್ರದರ್ಶನಗೊಳ್ಳಲಿದೆ.
ಭಕ್ತರ ಸೌಲಭ್ಯಕ್ಕಾಗಿ ಮೇ 3ರಿಂದ 5ರವರೆಗೆ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದು ಜಾತ್ರಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ. ಜಾತ್ರೆ ಹಿನ್ನೆಲೆ ಗ್ರಾಮದಲ್ಲಿ ವಿಶೇಷ ಸಿದ್ಧತೆಗಳು ಕೈಗೊಳ್ಳಲಾಗಿದ್ದು, ಭಕ್ತರಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.
ಈ ಜಾತ್ರಾ ಮಹೋತ್ಸವವು ಗ್ರಾಮೀಣ ಸಂಸ್ಕೃತಿ, ಭಕ್ತಿ ಮತ್ತು ಪರಂಪರೆಯ ಪ್ರತೀಕವಾಗಿ ಗುರುತಿಸಿಕೊಂಡಿದ್ದು, ಸಾವಿರಾರು ಭಕ್ತರನ್ನು ಸೆಳೆಯುವ ಮಹತ್ವದ ಧಾರ್ಮಿಕ ಕಾರ್ಯಕ್ರಮವಾಗಿ ಪರಿಣಮಿಸಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande