

ಕೊಪ್ಪಳ, 01 ಮೇ (ಹಿ.ಸ.) :
ಆ್ಯಂಕರ್ : ನಗರಸಭೆ ಮುಂದೆ 183ನೇ ದಿನದಲ್ಲಿ ಬಲ್ಡೋಟ ತೊಲಗಿಸಿ ಧರಣಿ ಯಶಸ್ವಿಯಾಗಿ ನಡೆಯಿತು. ಧರಣಿ ವೇದಿಕೆಯಲ್ಲಿ ಭಗವಾನ್ ಬುಧ್ಧರ ಪೂರ್ಣಿಮೆ ಮತ್ತು ಕಾರ್ಮಿಕರ ದಿನಾಚರಣೆಯನ್ನು ಏಕಕಾಲಕ್ಕೆ ಆಚರಿಸಲಾಯಿತು.
ಪ್ರಕಾಶಕ ಡಿ.ಎಂ.ಬಡಿಗೇರ ತಥಾಗತ ಬುದ್ಧರ ಸಂದೇಶ ಕುರಿತು ಮಾತನಾಡಿ, ಜಗತ್ತಿಗೆ ಶಾಂತಿಯನ್ನು ಸಾರಿದ ಮೊದಲ ದಾರ್ಶನಿಕರು. ಬುದ್ಧರು ಯಾವುದೇ ಧರ್ಮ, ಯಾವುದೇ ದೇವಧೂತನನ್ನು ನಂಬುವುದು ಬೇಡ. ನಿಮ್ಮ ವಿವೇಚನೆಯಿಂದ, ಶೋಧಿಸಿ, ವಿಶ್ಲೇಷಿಸಿ ಸರಿಯನಿಸಿದ್ದನ್ನು ಒಪ್ಪಿಕೊಳ್ಳಿ. ಯಾರೋ ಏನೋ ಹೇಳುತ್ತಾರೆ ಎಂದರೆ ಒಪ್ಪಿಕೊಳ್ಳಬೇಡಿ ಎಂದರು. ನಿನ್ನೊಳಗೆ ನಿನ್ನನ್ನು ಹುಡುಕಿಕೊ ದೇವರನ್ನಲ್ಲ ಎಂದರು. ಇಂದು ನಾವು ಯುದ್ಧ ಕಾಲದಲ್ಲಿದ್ದೇವೆ. ಯುದ್ಧ ಬೇಡ ಬುದ್ಧ ಬೇಕು ಎನ್ನುವ ಘೋಷಣೆ ಗಟ್ಟಿ ಧ್ವನಿಯಲ್ಲಿ ಜಗತ್ತಿಗೆ ಸಾರೋಣ ಎಂದರು.
ಮಹಿಳಾ ಚಿಂತಕಿ ಸಾವಿತ್ರಿ ಮುಜುಮದಾರ ಮಾತನಾಡಿ, 1886 ಮೇ 1 ರಂದು ಅಮೆರಿಕಾದ ಶಿಕಾಗೋ ನಗರದ ಹೇ ಮಾರ್ಕೇಟ್ನಲ್ಲಿ 8 ತಾಸಿನ ಕೆಲಸಕ್ಕಾಗಿ ನಡೆದ ಹೋರಾಟದ ಮೇಲೆ ಗೋಲಿಬಾರ್ ಮಾಡಲಾಗಿ ಕಾರ್ಮಿಕರ ಬಲಿದಾನವಾಯಿತು. ಆ ಹೋರಾಟದಿಂದ ಜಗತ್ತು 8 ತಾಸಿನ ಕೆಲಸದ ಸಮಯ ಗೆದ್ದುಕೊಂಡಿತು. ಭಾರತದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಕಾರ್ಮಿಕರ ಹಕ್ಕು, ಅದರಲ್ಲಿ ಮಹಿಳಾ ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಡಿದ ಕಾರ್ಮಿಕ ವರ್ಗದ ನಿಜ ನೇತಾರರು. ಅವರು ಸಂವಿಧಾನದಲ್ಲಿ ಕಾರ್ಮಿಕರ ಹಕ್ಕುಗಳನ್ನು ಕಾಪಾಡುವ, ಕಾನೂನು ರೂಪಿಸುವಲ್ಲಿ ಅತೀವ ಶಕ್ತಿ ಪ್ರಾವಧಾನ ಮಾಡಿದ್ದಾರೆ. ಜಗತ್ತು ನಿರ್ಮಿಸಿದ ಕಾರ್ಮಿಕ, ಮತ್ತು ಬುದ್ಧರ ಪೂರ್ಣಿಮೆ ಇದೆ ದಿನಕ್ಕೆ ಬಂದಿದ್ದು ಆಚರಣೆ ಮಾಡಲು ಬಹು ಖುಷಿಯಾಗಿದೆ ಎಂದರು.
ವೇದಿಕೆಯಲ್ಲಿ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಅವರು ಬುದ್ಧರ ಸಂದೇಶದ ಮಹತ್ವದ ಕುರಿತು ಮಾತನಾಡಿದರು, ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಬಿ.ಜಿ.ಕರಿಗಾರ, ನಾಯಕಿ ಸರೋಜಾ ಬಾಕಳೆ, ಮೂಕಪ್ಪ ಮೇಸ್ತ್ರಿ ಬಸಾಪುರ, ರವಿ ಕಾಂತನವರ, ಶಿವಾನಂದಯ್ಯ ಬೀಳಗಿಮಠ, ಸುಭಾನ ಸಾಬ್ ನೀರಲಗಿ, ಶಿವಪ್ಪ ಜಲ್ಲಿ, ವಿಜಯಮಹಾಂತೇಶ ಹಟ್ಟಿ, ಗಂಗಮ್ಮ ಕುರುಗೋಡು, ದುರುಗಪ್ಪ ಕನಕಮನಿ, ಯಮನೂರಪ್ಪ ಹಾಲಳ್ಳಿ, ನಾಗರಾಜ ಕುಷ್ಟಗಿ, ಕನಕಪ್ಪ ಪೂಜಾರ, ತಿಪ್ಪಯ್ಯಸ್ವಾಮಿ ಹಿರೇಮಠ, ರಾಮಣ್ಣ ಮಾಲಗತ್ತಿ ಮುಂತಾದವರು ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್