
ಗದಗ, 01 ಮೇ (ಹಿ.ಸ.) :
ಆ್ಯಂಕರ್ : ಜಗತ್ತಿನಾದ್ಯಂತ ಯುದ್ಧದ ಕಾರ್ಮೋಡಗಳು ಕವಿದಿರುವ ಇಂದಿನ ಅಕ್ಷರಶಃ ವಿಷಮ ಪರಿಸ್ಥಿತಿಯಲ್ಲಿ ಭಗವಾನ್ ಬುದ್ಧನ ಶಾಂತಿ ಮತ್ತು ಸಹಬಾಳ್ವೆಯ ಸಂದೇಶಗಳು ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತವಾಗಿವೆ ಬುದ್ಧನ ಶಾಂತಿ ಮಂತ್ರ ಇಂದಿನ ಜಗತ್ತಿಗೆ ಅನಿವಾರ್ಯ ಎಂದು ರಾಜ್ಯದ ಕಾನೂನು ನ್ಯಾಯ ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು,ಪ್ರವಾಸೋದ್ಯಮ ಇಲಾಖೆಯ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್. ಕೆ. ಪಾಟೀಲ ಹೇಳಿದರು.
ಗದಗ ನಗರದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾಡಳಿತ ಭವನದ ಅಡಿಟೋರಿಯಂ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಭಗವಾನ್ ಬುದ್ಧ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬುದ್ಧನ ತತ್ವಗಳು ಕೇವಲ ಒಂದು ಧರ್ಮ ಅಥವಾ ಪ್ರದೇಶಕ್ಕೆ ಸೀಮಿತವಾಗಿಲ್ಲ, ಅವು ಇಡೀ ಜಗತ್ತಿನ ಆಸ್ತಿ ಎಂದು ಬಣ್ಣಿಸಿದರು ಅಮೆರಿಕಕ್ಕೆ ಕೋಟ್ಯಂತರ ಡಾಲರ್ ನಷ್ಟ ಇಂದಿನ ಜಾಗತಿಕ ರಾಜಕೀಯ ವಿದ್ಯಮಾನಗಳ ಕುರಿತು ರಷ್ಯಾ-ಉಕ್ರೇನ್ ಹಾಗೂ ಇಸ್ರೇಲ್-ಇರಾನ್ ನಡುವಿನ ಯುದ್ಧಗಳಿಂದಾಗಿ ಜಗತ್ತು ಭಾರಿ ಬೆಲೆ ತರುತ್ತಿದೆ, ಕೇವಲ ಯುದ್ಧದ ಕಾರಣದಿಂದಾಗಿ ಅಮೆರಿಕದಂತಹ ದೊಡ್ಡ ರಾಷ್ಟçವು ಸುಮಾರು ೪೦ ಲಕ್ಷ ಕೋಟಿ ಡಾಲರ್ನಷ್ಟು ಆರ್ಥಿಕ ನಷ್ಟ ಅನುಭವಿಸಿದೆ ಎಂದರೆ ಪರಿಸ್ಥಿತಿಯ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳಬಹುದು. ಒಂದೆಡೆ ಕೋಟ್ಯಂತರ ರೂಪಾಯಿ ಮೌಲ್ಯದ ವಿಮಾನಗಳನ್ನು ಮತ್ತೊಂದೆಡೆ ಅಲ್ಪ ಮೊತ್ತದ ಡ್ರೋನ್ಗಳು ಹೊಡೆದುರುಳಿಸುತ್ತಿವೆ. ಈ ಸಾವು-ನೋವು ಮತ್ತು ವಿನಾಶದ ಹಾದಿಯು ಮನುಕುಲಕ್ಕೆ ಮಾರಕವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಬುದ್ಧ ಶಾಂತಿಯ ಸಂಕೇತ: ಬುದ್ಧ ಎಂದರೆ ಕಣ್ಣು ಮುಚ್ಚಿ ಕುಳಿತ ಶಾಂತಿ ಮೂರ್ತಿ ಮಾತ್ರವಲ್ಲ, ಆತ ಜಗತ್ತಿಗೆ ಏಕಾಗ್ರತೆ ಮತ್ತು ಸಮಾನತೆಯ ಪಾಠ ಕಲಿಸಿದ ಮಹಾಗುರು. ಸಮಾಜದಲ್ಲಿ ಗಂಡು-ಹೆಣ್ಣು, ಶ್ರೀಮಂತ-ಬಡವ ಎಂಬ ಭೇದವಿಲ್ಲದೆ ಎಲ್ಲರೂ ಒಂದೇ ಎಂಬ ಸಮಸಮಾಜದ ಕನಸನ್ನು ಬುದ್ಧ ಅಂದೇ ಕಂಡಿದ್ದರು. ಇಂದಿನ ರಾಜಕೀಯ ನಾಯಕರು ಒಬ್ಬರನ್ನೊಬ್ಬರು ಕೊಲ್ಲುವ, ದ್ವೇಷಿಸುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ಆದರೆ, ಭಾರತವು ವಿವಿಧ ಜಾತಿ, ಧರ್ಮ ಮತ್ತು ಪಂಥಗಳ ನಡುವೆಯೂ ಬುದ್ಧನ ಶಾಂತಿ ಮಂತ್ರದ ಅಡಿಯಲ್ಲಿ ಒಗ್ಗಟ್ಟಿನಿಂದ ಸಾಗುತ್ತಿದೆ ಎಂದು ಹೆಮ್ಮೆಯಿಂದ ನುಡಿದರು.
ಗದಗ ನಗರದಲ್ಲಿ ಬೌದ್ಧ ಸಂಸ್ಕೃತಿ ಮತ್ತು ವಿಚಾರಧಾರೆಗಳನ್ನು ಪಸರಿಸುವ ನಿಟ್ಟಿನಲ್ಲಿ ೧೦ ಕೋಟಿ ರೂಪಾಯಿಗಳ ಭವ್ಯ , ಬುದ್ಧ ವಿಹಾರ ನಿರ್ಮಾಣಕ್ಕೆ ಸರ್ಕಾರ ಅನುಮೋದನೆ ನೀಡಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್. ಕೆ. ಪಾಟೀಲ ಅವರು ಪ್ರಕಟಿಸಿದರು.
ಬುದ್ಧ ವಿಹಾರದ ನಿರ್ಮಾಣಕ್ಕಾಗಿ ಈಗಾಗಲೇ ೧೦ ಕೋಟಿ ರೂಪಾಯಿಗಳ ಅನುದಾನ ಮಂಜೂರಾಗಿದ್ದು, ಆ ಪೈಕಿ ೩ ಕೋಟಿ ರೂಪಾಯಿಗಳು ಈಗಾಗಲೇ ಬಿಡುಗಡೆಯಾಗಿ ಜಿಲ್ಲಾಧಿಕಾರಿಗಳ ವ್ಯಾಪ್ತಿಗೆ ತಲುಪಿವೆ. ನಗರದ ಮೆಡಿಕಲ್ ಕಾಲೇಜು ಸಮೀಪವಿರುವ ಗುಡ್ಡದ ಮೇಲಿನ ಆಯಕಟ್ಟಿನ ಜಾಗದಲ್ಲಿ ಈ ವಿಹಾರ ತಲೆ ಎತ್ತಲಿದೆ. ಇದಕ್ಕೆ ಸಂಬಂಧಿಸಿದ ನಕ್ಷೆ ಮತ್ತು ಯೋಜನಾ ವರದಿ ಸಿದ್ಧವಾಗಿದ್ದು, ಮುಂದಿನ ಒಂದು ತಿಂಗಳ ಒಳಗಾಗಿ ಕಾಮಗಾರಿ ಆರಂಭವಾಗಲಿದೆ ಎಂದು ಸಚಿವರು ತಿಳಿಸಿದರು.
ಇಂದಿನ ಜಗತ್ತಿಗೆ ಬುದ್ಧನ ಶಾಂತಿ ಮಂತ್ರ ಅತಿ ಅವಶ್ಯಕವಾಗಿದೆ. ಪತ್ರಿಕೆಯೊಂದರಲ್ಲಿ ಪ್ರಕಟವಾದ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬಂದೂಕು ಹಿಡಿದು ಫೋಟೋ ತೆಗೆಸಿಕೊಂಡಿದ್ದನ್ನು ಉಲ್ಲೇಖಿಸಿದ ಸಚಿವರು, ಟ್ರಂಪ್ ಅವರೇ, ಇಂದು ಜಗತ್ತಿಗೆ ನಿಮ್ಮ ಬಂದೂಕು ಬೇಕಾಗಿಲ್ಲ, ಬುದ್ಧನ ಶಾಂತಿ ಮಂತ್ರ ಬೇಕಾಗಿದೆ ಎಂದು ಮಾರ್ಮಿಕವಾಗಿ ನುಡಿದರು.
ಜಗತ್ತಿನಾದ್ಯಂತ ಸಕಾರಾತ್ಮಕ ಮತ್ತು ರಚನಾತ್ಮಕ ಬದಲಾವಣೆಗೆ ಬುದ್ಧನ ತತ್ವಗಳೇ ದಾರಿದೀಪ ಎಂದರು.
ನಮ್ಮ ದೇಶದ ಸಂವಿಧಾನವು ಬುದ್ಧನ ಬುದ್ಧಂ ಧಮ್ಮಂ ಸಾರವನ್ನು ಒಳಗೊಂಡಿದೆ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಬುದ್ಧನ ಸಮ ಸಮಾಜ, ಶೋಷಣೆ ಮುಕ್ತ ಸಮಾಜ ಮತ್ತು ಸಮಾನತೆಯ ತತ್ವಗಳಿಂದ ಪ್ರೇರಿತರಾಗಿ ಸಂವಿಧಾನವನ್ನು ರೂಪಿಸಿದ್ದಾರೆ. ಇದರಲ್ಲಿ ಬಸವಣ್ಣ ಮತ್ತು ಗಾಂಧೀಜಿಯವರ ವಿಚಾರಧಾರೆಗಳೂ ಸಮ್ಮಿಳಿತವಾಗಿವೆ ಎಂದು ಅವರು ವಿವರಿಸಿದರು.
ಬುದ್ಧನ ಸಾಹಿತ್ಯ ಓದಲು ವಿದ್ಯಾರ್ಥಿಗಳಿಗೆ ತಿಳಿ ಹೇಳಿ ಕನ್ನಡ ಸಾಹಿತ್ಯದಲ್ಲಿ ವಚನ ಮತ್ತು ದಾಸ ಸಾಹಿತ್ಯದಷ್ಟೇ ಮಹತ್ವ ಬುದ್ಧನ ಪ್ರೇರಣೆಯಿಂದ ಸೃಷ್ಟಿಯಾದ ಸಾಹಿತ್ಯಕ್ಕೂ ಇದೆ. ನಾವು ದಶಕಗಳಿಂದ ಬುದ್ಧನ ಹೆಸರನ್ನು ಹೇಳುತ್ತಿದ್ದೇವೆ, ಆದರೆ ಆತನ ಸಾಹಿತ್ಯವನ್ನು ಆಳವಾಗಿ ಓದಿಲ್ಲ. ಕೇವಲ 'ಬುದ್ಧಂ ಶರಣಂ ಗಚ್ಛಾಮಿ' ಎನ್ನುವುದಕ್ಕೆ ಸೀಮಿತವಾಗದೆ, ಬುದ್ಧನ ಮಾರ್ಗದರ್ಶನ ಮತ್ತು ವಿಚಾರಗಳನ್ನು ಓದಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಚಿವರು ಯುವಜನತೆಗೆ ಕರೆ ನೀಡಿದರು.
ವಿಧಾನ ಪರಿಷತ್ ಶಾಸಕ ಎಸ್. ವಿ. ಸಂಕನೂರು ಜಗತ್ತಿನಲ್ಲಿ ಶಾಂತಿ, ಅಹಿಂಸೆ ಮತ್ತು ಮಾನವೀಯತೆ ನೆಲೆಸಲು ಭಗವಾನ್ ಬುದ್ಧನ ತತ್ವಗಳು ಅತ್ಯವಶ್ಯಕವಾಗಿದ್ದು, ಅವುಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯರಾದ ಎಸ್. ವಿ. ಸಂಕನೂರು ಅವರು ಕರೆ ನೀಡಿದರು.
ಬುದ್ಧನ ಮೂರು ಮಂತ್ರಗಳು ಸಚಿವರಾದ ಎಚ್. ಕೆ. ಪಾಟೀಲ ಅವರು ಉಲ್ಲೇಖಿಸಿದಂತೆ ಬುದ್ಧನು ಜಗತ್ತಿಗೆ ಶಾಂತಿ, ಅಹಿಂಸೆ ಮತ್ತು ಮಾನವೀಯತೆ ಎಂಬ ಮೂರು ಮಹಾನ್ ಮಂತ್ರಗಳನ್ನು ನೀಡಿದ್ದಾನೆ. ಯಾವುದೇ ದೇಶ ಅಥವಾ ರಾಜ್ಯ ಪ್ರಗತಿ ಹೊಂದಬೇಕಾದರೆ ಅಲ್ಲಿ ಶಾಂತಿ ಇರುವುದು ಅತಿ ಮುಖ್ಯ. ವ್ಯಕ್ತಿಯೊಬ್ಬನಿಗೆ ಎಷ್ಟೇ ಅಧಿಕಾರ ಮತ್ತು ಅಂತಸ್ತು ಇದ್ದರೂ, ಆತನಿಗೆ ಮಾನಸಿಕ ಶಾಂತಿ ಇಲ್ಲದಿದ್ದರೆ ಅದು ಬದುಕೇ ಅಲ್ಲ ಎಂದು ಅವರು ಅಭಿಪ್ರಾಯಪಟ್ಟರು. ಅಹಿಂಸೆ ಮತ್ತು ಪ್ರೀತಿಯ ಮೂಲಕ ಎಲ್ಲರನ್ನೂ ಸಮಾನವಾಗಿ ಕಾಣುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಬಸವಣ್ಣ ಮತ್ತು ಬುದ್ಧನ ವಿಚಾರಧಾರೆಗಳು ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ಸಮಾನತೆಯ ಸಮಾಜಕ್ಕಾಗಿ ಹೋರಾಡಿದ್ದನ್ನು ಸ್ಮರಿಸಿದ ಸಂಕನೂರು ಅವರು, ಅದಕ್ಕೂ ಮುನ್ನ ಎಂಟನೇ ಶತಮಾನದಲ್ಲೇ ಬುದ್ಧನು ಜಾತಿ ಪದ್ಧತಿಯ ವಿರುದ್ಧ ಮತ್ತು ಮೇಲು-ಕೀಳು ಎಂಬ ಭೇದಭಾವದ ವಿರುದ್ಧ ಧ್ವನಿ ಎತ್ತಿದ್ದನ್ನು ನೆನಪಿಸಿಕೊಂಡರು. ಹಿಂದೂ ಧರ್ಮದಲ್ಲಿ ನಂಬಲಾದ 'ಕರ್ಮ ಸಿದ್ಧಾಂತ'ದ ಬಗ್ಗೆಯೂ ಬುದ್ಧನು ಅಂದೇ ಸಂದೇಶ ನೀಡಿದ್ದ ಎಂದು ಅವರು ವಿವರಿಸಿದರು.
ಜೀವನದ ಸತ್ಯ ಮತ್ತು ಸನ್ಮಾರ್ಗ ಜೀವನದಲ್ಲಿ ಸಾವು, ಮುಪುö್ಪ ಮತ್ತು ರೋಗಗಳು ಅನಿವಾರ್ಯವಾಗಿದ್ದು, ಇವುಗಳ ನಡುವೆಯೂ ಮನುಷ್ಯನು ಕೆಟ್ಟ ಮಾರ್ಗವನ್ನು ಬಿಟ್ಟು ಧರ್ಮದ ಹಾದಿಯಲ್ಲಿ ನಡೆಯಬೇಕು ಎಂದು ಸಂಕನೂರು ಹೇಳಿದರು ಇಂದಿನ ದಿನಗಳಲ್ಲಿ ಸಮಾಜಕ್ಕೆ ಬುದ್ಧನ ವೈಚಾರಿಕತೆ ಬಹಳ ಅವಶ್ಯಕವಾಗಿದೆ ಎಂದು ಅವರು ಒತ್ತಿ ಹೇಳಿದರು.
ಭವ್ಯ ಬುದ್ಧ ವಿಹಾರಕ್ಕೆ ಅಭಿನಂದನೆ ಸಲ್ಲಿಸಿ ಇದೇ ಸಂದರ್ಭದಲ್ಲಿ ಗದಗ ನಗರದಲ್ಲಿ ೧೦ ಕೋಟಿ ರೂಪಾಯಿ ವೆಚ್ಚದಲ್ಲಿ ಭವ್ಯವಾದ ಬುದ್ಧ ವಿಹಾರ ನಿರ್ಮಾಣಕ್ಕೆ ಮುಂದಾಗಿರುವ ಜಿಲ್ಲಾ ಉಸ್ತುವಾರಿ ಸಚಿವ ಎಚ್. ಕೆ. ಪಾಟೀಲ ಅವರ ಕಾರ್ಯವನ್ನು ಮುಕ್ತಕಂಠದಿAದ ಶ್ಲಾಘಿಸಿದರು. ಈ ವಿಹಾರವು ಬೌದ್ಧ ಧರ್ಮದ ತತ್ವಗಳನ್ನು ಪ್ರಚಾರ ಮಾಡಲು ಮತ್ತು ಅಧ್ಯಯನ ಮಾಡಲು ಪೂರಕವಾಗಲಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.
ನಿವೃತ್ತ ಉಪನ್ಯಾಸಕರಾದ ಸತೀಶ ಪಾಶಿ ಮಾತನಾಡಿ ಬುದ್ಧ ಎಂದರೆ ಕೇವಲ ಒಬ್ಬ ವ್ಯಕ್ತಿಯಲ್ಲ, ಆತ ಇಡೀ ಜಗತ್ತನ್ನೇ ಗೆದ್ದ ಮಹಾನ್ ಶಕ್ತಿ. ಇತಿಹಾಸದಲ್ಲಿ ಬುದ್ಧನ ತ್ಯಾಗ ಮತ್ತು ಸತ್ಯದ ಹುಡುಕಾಟದ ಹಾದಿ ಇಂದಿಗೂ ಪ್ರಸ್ತುತ ಎಂದು ಯುವ ಚಿಂತಕ ಸತೀಶ ಪಾಶಿ ಅವರು ಹೇಳಿದರು.
ಅರಮನೆಯ ಸುಖ ತೊರೆದ ಸಿದ್ಧಾರ್ಥನು ಅರಮನೆಯ ಐಷಾರಾಮಿ ಜೀವನವನ್ನು ಬಿಟ್ಟು ಹೊರಬರಲು ಕಾರಣವಾದ ಸಂದರ್ಭಗಳನ್ನು ವಿವರಿಸುತ್ತಾ, ಅವರು ಶುದ್ಧೋದನ ಮತ್ತು ಸಿದ್ಧಾರ್ಥನ ನಡುವಿನ ಸಂಭಾಷಣೆಯನ್ನು ಮೆಲುಕು ಹಾಕಿದರು.
ತನಗೆ ಸಾವು ಬರಬಾರದು, ರೋಗ-ರುಜಿನಗಳು ತಗುಲಬಾರದು ಮತ್ತು ವಯಸ್ಸಾಗಿ ಮುಪುö್ಪ ಆವರಿಸಬಾರದು ಎಂಬ ಮೂರು ನಿಬಂಧನೆಗಳನ್ನು ಸಿದ್ಧಾರ್ಥ ತನ್ನ ತಂದೆಯ ಮುಂದೆ ಇಡುತ್ತಾನೆ. ಈ ಅಗೋಚರ ಪ್ರಶ್ನೆಗಳಿಗೆ ಉತ್ತರವಿಲ್ಲದೆ ಶುದ್ಧೋದನ ಮೌನಕ್ಕೆ ಶರಣಾದಾಗ, ಸಿದ್ಧಾರ್ಥನು ೨೯ನೇ ವಯಸ್ಸಿನಲ್ಲಿ ಅರಮನೆಯನ್ನು ತೊರೆದನು.
ಜಗತ್ತನ್ನೇ ಗೆದ್ದ ಬುದ್ಧ ಲೋಕದ ಅನೇಕ ಬರಹಗಾರರು ಬುದ್ಧನನ್ನು 'ಬುದ್ಧ, ಇದ್ದ , ಗೆದ್ದ' ಎಂಬ ಪದಗಳಿಂದ ವಿವರಿಸಿರಬಹುದು. ಆದರೆ, ಬುದ್ಧನು ಇಡೀ ಜಗತ್ತನ್ನೇ ಗೆದ್ದವನು. ಯಾವುದೇ ಧನ-ಧಾನ್ಯ, ಆನೆ-ಕುದುರೆ ಅಥವಾ ರಥಗಳ ಸೈನ್ಯವಿಲ್ಲದೆ, ಕೇವಲ ಶಾಂತಿ ಮತ್ತು ಸತ್ಯದ ಮೂಲಕ ಜಗತ್ತನ್ನು ಗೆದ್ದ ಏಕೈಕ ವ್ಯಕ್ತಿ ಬುದ್ಧ. ಕುವೆಂಪು ದರ್ಶನದಲ್ಲಿ ದಶರಥ ಮತ್ತು ಬುದ್ಧನ ಹೋಲಿಕೆ
ತಮ್ಮ ಭಾಷಣದಲ್ಲಿ ಕುವೆಂಪು ಅವರ 'ರಾಮಾಯಣ ದರ್ಶನಂ' ಕೃತಿಯನ್ನು ಉಲ್ಲೇಖಿಸಿದ ಅವರು, ದಶರಥ ಮಹಾರಾಜನ ಶೌರ್ಯ ಮತ್ತು ಅವನ ಅಂತ್ಯವನ್ನು ಸಿದ್ಧಾರ್ಥನ ನಿರ್ಧಾರಕ್ಕೆ ಹೋಲಿಸಿ ವಿಶ್ಲೇಷಿಸಿದರು. ಕೈಕೆಯ ಮಾತುಗಳಿಗೆ ಒಳಗಾದ ದಶರಥನ ಶೌರ್ಯ ಹೇಗೆ ನಾಶವಾಯಿತೋ, ಹಾಗೆಯೇ ತಮ್ಮ ಇಂದ್ರಿಯಗಳ ಮೇಲೆ ಹತೋಟಿ ಸಾಧಿಸಲು ಸಿದ್ಧಾರ್ಥನು ಮಧ್ಯರಾತ್ರಿಯಲ್ಲಿ ಯಾರಿಗೂ ತಿಳಿಯದಂತೆ ಮನೆಯಿಂದ ಹೊರಬಂದನು.
ಸಿದ್ಧಾರ್ಥನು ತನ್ನ ಅರಮನೆಯನ್ನು ಬಿಟ್ಟು ಸರಿಹೂ ನದಿಯ (ಈಗಿನ ಗೋದಾವರಿ) ದಂಡೆಯ ಮೂಲಕ ಅರಣ್ಯವನ್ನು ಪ್ರವೇಶಿಸಿದ ಕ್ಷಣವನ್ನು ಪಾಶಿ ಅವರು ಭಾವುಕವಾಗಿ ವಿವರಿಸಿದರು. ಸಿದ್ಧಾರ್ಥನು ತನ್ನ ಪ್ರೀತಿಯ ಕುದುರೆ 'ಕಂತಕ' ಮತ್ತು ಸೇವಕ 'ಚನ್ನ'ನ ಸಹಾಯದೊಂದಿಗೆ ಸತ್ಯದ ಹುಡುಕಾಟಕ್ಕೆ ಹೊರಟನು. ಬುದ್ಧನ ಜೀವನದ ಅಂತಿಮ ಹಂತದಲ್ಲಿ ಗಿರಿಜನರ ಹೆಣ್ಣುಮಗಳು ನೀಡಿದ ಪಾಯಸವನ್ನು ಸ್ವೀಕರಿಸಿ, ಮತ್ತೆ ನಾನು ಮನುಷ್ಯನಾಗಿ ಪರಿನಿಬ್ಬಾಣ ಹೊಂದುತ್ತಿದ್ದೇನೆ ಎಂದು ತನ್ನ ಶಿಷ್ಯರಿಗೆ ತಿಳಿಸಿ ಕಣ್ಣಿನಿಂದ ಮರೆಯಾದರು ಎಂದು ಅವರು ನೆನಪಿಸಿಕೊಂಡರು.
ಬಾಬಾಸಾಹೇಬ್ ಅಂಬೇಡ್ಕರ್ ಅವರು ಬುದ್ಧನನ್ನು ಅನುಸರಿಸಲು ಕೇವಲ ಭಕ್ತಿ ಕಾರಣವಲ್ಲ, ಬದಲಾಗಿ ಬುದ್ಧನಲ್ಲಿದ್ದ ಸತ್ಯ ಮತ್ತು ವೈಚಾರಿಕತೆಯೇ ಮುಖ್ಯ ಕಾರಣವಾಗಿತ್ತು ಎಂದು ಸತೀಶ ಪಾಶಿ ಅವರು ಒತ್ತಿ ಹೇಳಿದರು.
ಜೇನುಗೂಡು ಕಲಾತಂಡದ ಬಸವರಾಜ ಅಂಗಡಿ ಮತ್ತು ಸಂಗಡಿಗರಿAದ ಭಗವಾನ ಬುದ್ಧರ ಗಾಯನ ಪ್ರಸ್ತುತ ಪಡಿಸಿದರು. ಬಸವರಾಜ ಅಂಗಡಿ ಮತ್ತು ಸಂಗಡಿಗರು ನಾಡಗೀತೆ ಪ್ರಸ್ತುತ ಪಡಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಸವರಾಜ ಬಳ್ಳಾರಿ ಸರ್ವರನ್ನು ಸ್ವಾಗತಿಸಿದರು ಪ್ರೊ. ಬಾಹುಬಲಿ ಜೈನರ ಕಾರ್ಯಕ್ರಮ ನಿರೂಪಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಚ್. ಕೆ. ಪಾಟೀಲ ಹಾಗೂ ಡಾ.ಎಸ್. ವಿ. ಸಂಕನೂರು, ಅಮೃತ ಹಸ್ತದಿಂದ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಬಿ.ಇ.ಡಿ ಕಾಲೇಜುಗಳಲ್ಲಿ ಏರ್ಪಡಿಸಿದ್ದ ಭಗವಾನ ಬುದ್ಧರ ಕುರಿತು ಪ್ರಬಂಧ ಸ್ಪರ್ದೆಯಲ್ಲಿ ವೀಜೆತರಾದ ವಿದ್ಯರ್ಥಿಗಳಿಗೆ, ಎಸ್ ಎಸ್ ಎಲ್ ಸಿ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಮುದಾಯದ ಸಾಧಕರಿಗೆ ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ವೀಕೆಂದ್ರಿಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರು ಡಿ. ಆರ್. ಪಾಟೀಲ,ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ ಅಸೂಟಿ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ ಅಪರ ಜಿಲ್ಲಾಧಿಕಾರಿ ಡಾ.ದುರಗೇಶ.ಕೆ.ಆರ್., ಉಪವಿಭಾಗಧಿಕಾರಿ ಗಂಗಪ್ಪ ಎಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ ಜಗದೀಶ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಸಿ. ಆರ್. ಮುಂಡರಗಿ,ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಶ್ರೀಮತಿ ಡಾ. ನಂದಾ ಹಣಬರಟ್ಟಿ, ಸಪಾಯಿ ಕರ್ಮಚಾರಿ ಸಂಘದ ಸದಸ್ಯ ಎಸ್.ಎನ್ ಬಳ್ಳಾರಿ, ಸೇರಿದಂತೆ ಸಮಾಜದ ಗಣ್ಯರು, ಮುಖಂಡರುಗಳು, ಎಲ್ಲಾ ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP