
ಗದಗ, 01 ಮೇ (ಹಿ.ಸ.) :
ಆ್ಯಂಕರ್ : ಅಯ್ಯಾಚಾರವೆಂಬುದು ಆಚಾರ, ವಿಚಾರ ಮತ್ತು ಶಿವಾಚಾರವನ್ನು ಪಾಲಿಸುವ ಜವಾಬ್ದಾರಿಯನ್ನು ವಹಿಸುವ ಧಾರ್ಮಿಕ ಪ್ರಕ್ರಿಯೆಯಾಗಿದೆ ಎಂದು ಬನ್ನಿಕೊಪ್ಪದ ಡಾ. ಸುಜ್ಞಾನದೇವ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ನರಸಾಪೂರ ಗ್ರಾಮದ ರಂಭಾಪೂರಿ ಶಾಖಾ ಹಿರೇಮಠ ಗುರುಕುಲದಲ್ಲಿ ಪಂಚವಟಿ ಧಾರ್ಮಿಕ ಗುರುಕುಲ ಜನಕಲ್ಯಾಣ ಟ್ರಸ್ಟ್ ಹಾಗೂ ಅಖಿಲ ಭಾರತ ಜಂಗಮ ಸೇವಾ ಸಮಿತಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಜಂಗಮ ವಟುಗಳಿಗೆ ಅಯ್ಯಾಚಾರ ಹಾಗೂ ಲಿಂಗದೀಕ್ಷೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಅಯ್ಯಾಚಾರ ವೀರಶೈವ ಲಿಂಗಾಯತ ಸಮುದಾಯದಲ್ಲಿ ಜಂಗಮ ವಟುಗಳಿಗೆ ನೀಡಲಾಗುವ ವಿಶೇಷ ದೀಕ್ಷಾ ಸಂಸ್ಕಾರವಾಗಿದೆ ಎಂದು ಹೇಳಿದರು.
ಪ್ರಪಂಚದಲ್ಲಿ ಶಿವದೀಕ್ಷೆಗಿಂದ ದೊಡ್ಡ ದೀಕ್ಷೆ ಬೇರೊಂದಿಲ್ಲ. ಶಿವದೀಕ್ಷೆ ತೆಗೆದುಕೊಂಡವರಿಗೆ ಲೌಕಿಕ ಬದುಕಿನಲ್ಲಿ ದೈವಿಗುಣ ಹೆಚ್ಚಾಗಲಿದೆ. ಧರ್ಮಾರಚಣೆ ಮೂಲಕ ಲಿಂಗದೀಕ್ಷೆ ಪಡೆದುಕೊಂಡರೆ ದೇವತಾ ಮನುಷ್ಯರಾಗುತ್ತಾರೆ. ಅದೇ ರೀತಿ ಲಿಂಗದೀಕ್ಷೆ ಪಡೆದವರು ಇನ್ನು ಮುಂದೆ ಧರ್ಮಪರಿಪಾಲನೆ ಮಾಡಿಕೊಂಡು ಸನ್ಮಾರ್ಗದಲ್ಲಿ ನಡೆಯಬೇಕು ಎಂದು ಹೇಳಿದರು.
ವೀರಶೈವ ಸಂಪ್ರದಾಯದಂತೆ ಜಂಗಮವಟುಗಳಿಗೆ ನೀಡುವ ಶಿವದೀಕ್ಷೆ(ಅಯ್ಯಾಚಾರ) ಪದ್ಧತಿಯನ್ನು ಜಂಗಮರು ಉಳಿಸಿಕೊಂಡು ಹೋಗಬೇಕು. ಪೂರ್ವಜರ ಆಚಾರ, ವಿಚಾರಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಧರ್ಮ ರಕ್ಷಣೆಗೆ ಮುಂದಾಗಬೇಕು ಎಂದರು.
ಇಂದಿನ ದಿನಮಾನಗಳಲ್ಲಿ ಉಚಿತವಾಗಿ ಆಯ್ಯಾಚಾರ ಹಾಗೂ ಲಿಂಗ ದೀಕ್ಷೆ ಮಾಡುವುದು ಹೆಮ್ಮೆಯ ವಿಷಯ. ಈ ದಿಶೆಯಲ್ಲಿ ಪ್ರತಿ ವರ್ಷವೂ ಕೂಡಾ ಗುರುಕುಲ ಹಾಗೂ ಸಮಿತಿಯಿಂದ ಇಂತಹ ಧಾರ್ಮಿಕ ಕೆಲಸಗಳು ನಡೆಯಲಿ ಎಂದು ತಿಳಿಸಿದರು.
ಮಲ್ಲನಕೇರಿ ವಿರಕ್ತಮಠದ ಚನ್ನಬಸವ ಸ್ವಾಮೀಜಿ ಮಾತನಾಡಿ, 30 ದಿನಗಳ ಉಚಿತ ಸಂಸ್ಕಾರವನ್ನು ಹಮ್ಮಿಕೊಂಡಿದ್ದು ತುಂಬಾ ಒಳ್ಳೆಯ ವಿಷಯ. ಇಂತಹ ಕೆಲಸ ಕಾರ್ಯಗಳು ಹೆಚ್ಚು ಪ್ರಚಲಿತವಾಗಲಿ ಹಾಗೂ ಧಾರ್ಮಿಕತೆಯ ಬಗ್ಗೆ ಮಕ್ಕಳಲ್ಲಿ ಇನ್ನೂ ಹೆಚ್ಚಿನ ಜ್ಞಾನ ನೀಡುವುದು ಉತ್ತಮ. ಇಂತಹ ಉತ್ತಮ ಕಾರ್ಯವನ್ನು ಮಾಡಿದ್ದಕ್ಕೆ ಅಭಿನಂದನೆಗಳನ್ನು ತಿಳಿಸಿದರು.
ಅಖಿಲ ಭಾರತ ಜಂಗಮ ಸೇವಾ ಸಮಿತಿಯ ಅಧ್ಯಕ್ಷ ಪ್ರಭಯ್ಯ ದಂಡಾವತಿಮಠ ಅಧ್ಯಕ್ಷತೆ ವಹಿಸಿ ಮಾತನಾಡಿ, ಗುರುಕುಲದ ಜೊತೆಗೂಡಿ ಪ್ರತಿವರ್ಷವೂ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರನ್ನು ಧಾರ್ಮಿಕತೆಯ ಮಹತ್ವದ ಬಗ್ಗೆ ಮಾಹಿತಿ ನೀಡಲು ಕೈಜೋಡಿಸುವುದಾಗಿ ತಿಳಿಸಿದರು.
ನೇತೃತ್ವ ವಹಿಸಿದ್ದ ಪಂಚವಟಿ ಧಾರ್ಮಿಕ ಗುರುಕುಲ ಜನಕಲ್ಯಾಣ ಟ್ರಸ್ಟ್ನ ಅಧ್ಯಕ್ಷ ಡಾ. ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪ್ರತಿಯೊಂದು ಜನಾಂಗದವರಿಗೆ ಧಾರ್ಮಿಕತೆಯ ಬಗ್ಗೆ ಮನವರಿಕೆ ಮಾಡುವುದು ಹಾಗೂ ಅದನ್ನು ಸರಿಯಾದ ರೀತಿಯಲ್ಲಿ ಎಲ್ಲಾ ಜನರು ಉಪಯೋಗಿಸಿಕೊಂಡಾಗ ಅದು ಒಂದು ಉತ್ತಮವಾದ ಕಾರ್ಯವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಂಜುನಾಥ ಹಳ್ಳೂರಮಠ, ಮೃತ್ಯುಂಜಯ ಭಿಕ್ಞಾವತಿಮಠ, ತೋಟಯ್ಯ ಗುಡ್ಡಿಮಠ, ಕೆ.ಎಸ್. ಹಿರೇಮಠ, ವೀರಯ್ಯ ಹೊಸಮಠ, ಲಿಂಗಯ್ಯ ಹಿರೇಮಠ, ವೀರಬಸಯ್ಯ ವಿರಕ್ತಮಠ ಸೇರಿ ಅನೇಕರು ಇದ್ದರು.
25 ಜನ ಜಂಗಮ ವಟುಗಳಿಗೆ ಅಯ್ಯಾಚಾರ ಹಾಗೂ 10 ಜನ ಭಕ್ತ ಸಮೂಹಕ್ಕೆ ಲಿಂಗದೀಕ್ಷೆ ನೀಡಲಾಯಿತು. ಜಂಗಮ ಸಮಾಜದ ಸಾಧಕರನ್ನು ಸನ್ಮಾನಿಸಲಾಯಿತು. ನಂತರ ಧರ್ಮಸಭೆ ಹಾಗೂ ಅನ್ನಮಹಾಪ್ರಸಾದ ಸೇವೆ ಜರುಗಿತು.
ಹಿಂದೂಸ್ತಾನ್ ಸಮಾಚಾರ್ / lalita MP