
ಹುಬ್ಬಳ್ಳಿ, 01 ಮೇ (ಹಿ.ಸ.) :
ಆ್ಯಂಕರ್ : ಬುದ್ಧರು ಶಾಂತಿ, ಅಹಿಂಸೆ ಹಾಗೂ ಕರುಣೆ ಎಂಬ ಮೌಲ್ಯಗಳನ್ನು ಮಾನವಕುಲಕ್ಕೆ ಬೋಧಿಸಿದ್ದು, ದುಃಖದಿಂದ ಹೊರಬರುವ ಜೀವನ ಮಾರ್ಗವನ್ನು ತೋರಿಸಿದರು ಎಂದು ಸದ್ಗುರು ಸಮರ್ಥ ವಾಲಿ ಗುರೂಜಿ ಹೇಳಿದರು.
ನಗರದ ವಾಯುವಿಹಾರಿಗಳ ಸಂಘ ಆಯೋಜಿಸಿದ್ದ ಬುದ್ಧ ಪೂರ್ಣಿಮಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, “ಆಸೆಯೇ ದುಃಖಕ್ಕೆ ಮೂಲ” ಎಂಬ ಬುದ್ಧರ ತತ್ತ್ವವನ್ನು ಉದಾಹರಣೆಯೊಂದಿಗೆ ವಿವರಿಸಿದರು. ಮನುಷ್ಯನು ಒಂದು ತೋಟದಲ್ಲಿ ಮಾವಿನ ಹಣ್ಣನ್ನು ನೋಡಿ ಕಣ್ಣಿನಿಂದ ಆಸೆ ಹುಟ್ಟುತ್ತದೆ, ಮನಸ್ಸು ಅದನ್ನು ಕಿತ್ತುಕೊಳ್ಳಲು ಪ್ರೇರೇಪಿಸುತ್ತದೆ, ಕಾಲುಗಳು ಆ ದಿಕ್ಕಿನಲ್ಲಿ ಸಾಗುತ್ತವೆ, ಕೈ ಹಣ್ಣನ್ನು ಕಿತ್ತುಕೊಳ್ಳುತ್ತದೆ. ಆದರೆ ತೋಟದ ಮಾಲೀಕ ಬಂದು ಹೊಡೆಯುತ್ತಿದ್ದಂತೆ, ಅದೇ ಕಣ್ಣುಗಳಲ್ಲಿ ಕಣ್ಣೀರು ಮೂಡುತ್ತದೆ. ಈ ಘಟನೆಯ ಮೂಲಕ ಆಸೆ ದುಃಖಕ್ಕೆ ಕಾರಣವಾಗುತ್ತದೆ ಎಂಬುದನ್ನು ಅವರು ವಿವರಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಾಜಿ ಶಾಸಕ ಪಿ. ರಾಜೀವ್ ಮಾತನಾಡಿ, ಬಸವಣ್ಣರ ವಚನಗಳ ಮೂಲಕ ಸಮಾನತೆಯ ಜೀವನ ಮಾರ್ಗವನ್ನು ಅರಿತುಕೊಳ್ಳಬಹುದು ಎಂದರು. “ದಯವಿಲ್ಲದ ಧರ್ಮ ಯಾವುದಯ್ಯ” ಎಂಬ ವಚನ ಉಲ್ಲೇಖಿಸಿ, ಪ್ರತಿಯೊಬ್ಬರೂ ದಯೆ ಮತ್ತು ಕರುಣೆಯಿಂದ ಬದುಕಬೇಕು ಎಂದು ಕರೆ ನೀಡಿದರು.
ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಸಾವಕಾರ ಅಧ್ಯಕ್ಷತೆ ವಹಿಸಿದ್ದರು. ಪ್ರಾಸ್ತಾವಿಕವಾಗಿ ಮಾತನಾಡಿದ ವಿಶಾಲಾಕ್ಷಿ ಆಕಳವಾಡಿ, ಧ್ಯಾನದ ಮೂಲಕ ಶಾಂತಿ, ಅಹಿಂಸೆ ಮತ್ತು ಸಮಾನತೆ ಸಾಧಿಸಬಹುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬ್ರಹ್ಮರ್ಷಿ ಪ್ರೇಮನಾಥ ಜಿ, ಡಾ. ಕೃಷ್ಣಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa