
ಬೆಂಗಳೂರು, 07 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಆಟೋ ಗ್ಯಾಸ್ ಕೊರತೆಯ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ನೀಡಿದ ಹೇಳಿಕೆಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಗ್ಯಾಸ್ ಇಲ್ಲದಿದ್ದರೆ ಪೆಟ್ರೋಲ್ ಬಳಸಿ ಎಂಬ ಸಚಿವರ ಹೇಳಿಕೆ ಕೇಂದ್ರ ಸರ್ಕಾರದ ಅಹಂಕಾರದ ಪರಮಾವಧಿಯಾಗಿದೆ ಎಂದು ಕೆಪಿಸಿಸಿ ಮುಖ್ಯ ವಕ್ತಾರ ಎ. ಎನ್. ನಟರಾಜ್ ಗೌಡ ಟೀಕಿಸಿದ್ದಾರೆ.
ಗ್ಯಾಸ್ ಕೊರತೆಯಿಂದ ದಿನಗೂಲಿ ಅವಲಂಬಿತ ಲಕ್ಷಾಂತರ ಆಟೋ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ಸಚಿವರ ಸಲಹೆ ವಾಸ್ತವಿಕತೆಯಿಂದ ದೂರವಾಗಿದೆ ಎಂದು ಆರೋಪಿಸಲಾಗಿದೆ. ಈ ಹೇಳಿಕೆಯನ್ನು ಫ್ರೆಂಚ್ ಕ್ರಾಂತಿ ಕಾಲದ ಬ್ರೆಡ್ ಇಲ್ಲದಿದ್ದರೆ ಕೇಕ್ ತಿನ್ನಿ ಎಂಬ ಉದಾಹರಣೆಗೆ ಹೋಲಿಸಲಾಗಿದೆ.
ಪೆಟ್ರೋಲ್ ದರ ಗ್ಯಾಸ್ಗಿಂತ ಹೆಚ್ಚು ಇರುವುದರಿಂದ ಆಟೋ ಚಾಲಕರಿಗೆ ಇದು ಆರ್ಥಿಕವಾಗಿ ಸಾಧ್ಯವಿಲ್ಲ ಎಂದು ಕೆಪಿಸಿಸಿ ಹೇಳಿದೆ. ಬಹುತೇಕ ಆಟೋಗಳು ಎಲ್ ಪಿ ಜಿ, ಸಿ ಎನ್ ಜಿ ಆಧಾರಿತವಾಗಿದ್ದು, ಪೆಟ್ರೋಲ್ ಬಳಕೆ ಸಾಧ್ಯವಿಲ್ಲ. ಕೆಲವು ವಾಹನಗಳಲ್ಲಿ ಇರುವ ಸಣ್ಣ ಪೆಟ್ರೋಲ್ ಟ್ಯಾಂಕ್ ತುರ್ತು ಬಳಕೆಗೆ ಮಾತ್ರ ಎಂದು ಸ್ಪಷ್ಟಪಡಿಸಲಾಗಿದೆ.
ತೈಲ ಕಂಪನಿಗಳನ್ನು ನಿಯಂತ್ರಿಸಿ ಇಂಧನ ಪೂರೈಕೆ ಖಚಿತಪಡಿಸುವುದು ಕೇಂದ್ರದ ಕರ್ತವ್ಯವಾಗಿದ್ದು, ಅಂತಾರಾಷ್ಟ್ರೀಯ ಬಿಕ್ಕಟ್ಟು ನೆಪ ಹೇಳಿ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಲಾಗಿದೆ.
ಕೇಂದ್ರ ಸರ್ಕಾರ ತಕ್ಷಣ ಎಲ್ಪಿಜಿ ಪೂರೈಕೆಯನ್ನು ಸುಧಾರಿಸಲು ಕ್ರಮ ಕೈಗೊಳ್ಳಬೇಕು ಹಾಗೂ ಸಚಿವರು ಆಟೋ ಚಾಲಕರಲ್ಲಿ ಕ್ಷಮೆ ಯಾಚಿಸಬೇಕು ಎಂದು ನಟರಾಜ್ ಗೌಡ ಒತ್ತಾಯಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa