

ಗದಗ, 07 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಎಲ್ಪಿಜಿ ದರ ಏರಿಕೆಯಿಂದ ಸಾಮಾನ್ಯ ಜನರ ಬದುಕು ಸಂಕಷ್ಟಕ್ಕೆ ಸಿಲುಕಿರುವ ನಡುವೆಯೇ, ಮಹಿಳಾ ಆಟೋ ಚಾಲಕಿಯೊಬ್ಬರ ಮನಕಲುಕುವ ಪರಿಸ್ಥಿತಿ ಬೆಳಕಿಗೆ ಬಂದಿದೆ. ಪತಿ ಸಾವಿನ ಬಳಿಕ ಕುಟುಂಬದ ಹೊಣೆ ಹೊತ್ತಿರುವ ರೇಖಾ ಎಂಬ ಆಟೋ ಚಾಲಕಿ ಈಗ ದುಡಿಮೆ ಕುಸಿತದಿಂದ ಆರ್ಥಿಕ ಸಂಕಷ್ಟದಲ್ಲಿ ದಿನ ಕಳೆಯುತ್ತಿದ್ದಾರೆ.
ಪತಿ ಸಾವಿನ ನಂತರ ಜೀವನ ಸಾಗಿಸಲು ಆಟೋ ಚಾಲಕಿಯಾಗಿ ಕೆಲಸ ಆರಂಭಿಸಿದ ರೇಖಾ, ಈ ಮೊದಲು ದಿನಕ್ಕೆ 400ರಿಂದ 500 ರೂಪಾಯಿ ದುಡಿದು ಕುಟುಂಬ ನಿರ್ವಹಿಸುತ್ತಿದ್ದರು. ಆದರೆ ಇತ್ತೀಚಿನ ಎಲ್ಪಿಜಿ ದರ ಏರಿಕೆಯಿಂದ ಆಟೋ ವೆಚ್ಚ ಹೆಚ್ಚಾಗಿ, ಈಗ ದಿನಕ್ಕೆ ಕೇವಲ 50ರಿಂದ 100 ರೂಪಾಯಿ ಮಾತ್ರ ಕೈಗೆ ಉಳಿಯುತ್ತಿದೆ ಎಂದು ಅವರು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.
ಇದರ ನಡುವೆ ಕುಟುಂಬದ ಸಂಕಷ್ಟ ಮತ್ತಷ್ಟು ಗಂಭೀರವಾಗಿದೆ. ರೇಖಾ ಅವರ 10 ವರ್ಷದ ಮಗಳು ಗಂಭೀರ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದು, ಪ್ರತಿದಿನ ಇನ್ಸುಲಿನ್ ನೀಡಬೇಕಾಗಿದೆ. ತಿಂಗಳಿಗೆ ಸಾವಿರಾರು ರೂಪಾಯಿ ಔಷಧೋಪಚಾರಕ್ಕೆ ಖರ್ಚಾಗುತ್ತಿದ್ದು, ಈ ವೆಚ್ಚವನ್ನು ಭರಿಸುವುದೇ ದೊಡ್ಡ ಸವಾಲಾಗಿದೆ.
ಇದೇ ವೇಳೆ ರೇಖಾ ತಾವೂ ಅನಾರೋಗ್ಯದಿಂದ ಬಳಲುತ್ತಿದ್ದರೂ, ಕುಟುಂಬದ ಹೊಣೆ ಹೊತ್ತು ದಿನನಿತ್ಯ ಆಟೋ ಚಲಾಯಿಸುತ್ತಿದ್ದಾರೆ. ಆದರೆ ಕಳೆದ ಒಂದು ವಾರದಿಂದ ಆಟೋ ಕೂಡ ನಿಂತಿರುವ ಕಾರಣ, ಕುಟುಂಬಕ್ಕೆ ಆದಾಯವೇ ಇಲ್ಲದಂತಾಗಿದೆ. ಮಗಳ ಚಿಕಿತ್ಸೆ ವೆಚ್ಚ, ಮಗನ ಶಿಕ್ಷಣ, ಮನೆ ಬಾಡಿಗೆ ಸೇರಿದಂತೆ ವಿವಿಧ ಖರ್ಚುಗಳನ್ನು ಭರಿಸಲು ಸಾಧ್ಯವಾಗದೆ ಕುಟುಂಬ ತೀವ್ರ ಸಂಕಷ್ಟದಲ್ಲಿದೆ. ಒಂದೊತ್ತಿನ ಊಟಕ್ಕೂ ಕಷ್ಟವಾಗಿರುವ ಪರಿಸ್ಥಿತಿಯಲ್ಲಿ, ಈ ಕುಟುಂಬ ಬಡತನದ ಬೆಂಕಿಯಲ್ಲಿ ವಿಲವಿಲನೆ ಕಂಗಾಲಾಗಿದೆ.
ಈ ಹಿನ್ನೆಲೆ ಸರ್ಕಾರ ಹಾಗೂ ದಾನಿಗಳಿಂದ ಸಹಾಯ ದೊರಕಬೇಕೆಂದು ಆಟೋ ಚಾಲಕಿ ರೇಖಾ ಮನವಿ ಮಾಡಿದ್ದಾರೆ. ಸಂಕಷ್ಟದಲ್ಲಿರುವ ಇಂತಹ ಕುಟುಂಬಗಳಿಗೆ ತುರ್ತು ನೆರವು ಒದಗಿಸುವ ಅಗತ್ಯವಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP