
ಗದಗ, 07 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಅಂಗವಾಗಿ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನಲ್ಲಿ ರಾಜ್ಯ ಮಟ್ಟದ ಮುಕ್ತ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ತಾಲ್ಲೂಕು ಆಡಳಿತ, ಪೊಲೀಸ್ ಇಲಾಖೆ ಮತ್ತು ಶಿಕ್ಷಣ ಇಲಾಖೆಗಳು ಸ್ಥಳೀಯ ದಲಿತ, ಕನ್ನಡಪರ ಹಾಗೂ ಇತರೆ ಸಂಘಟನೆಗಳ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ನಡೆಸುತ್ತಿವೆ.
ಏಪ್ರಿಲ್ 12 ರಂದು ಬೆಳಿಗ್ಗೆ 9 ಗಂಟೆಗೆ ಕುಷ್ಟಗಿ ಪಟ್ಟಣದ ಕ್ರೈಸ್ಟ್ ದಿ ಕಿಂಗ್ ಶಾಲೆಯಲ್ಲಿ ಸ್ಪರ್ಧೆ ನಡೆಯಲಿದೆ. ಯಾವುದೇ ವಯೋಮಿತಿ ಹಾಗೂ ವಿದ್ಯಾರ್ಹತೆಯ ನಿರ್ಬಂಧವಿಲ್ಲದೆ ರಾಜ್ಯದ ಎಲ್ಲಾ ಜಿಲ್ಲೆಗಳ ಆಸಕ್ತರು ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಸ್ಪರ್ಧಾರ್ಥಿಗಳು ತಮ್ಮ ಆಧಾರ್ ಕಾರ್ಡ್ ನಕಲು ಪ್ರತಿಯೊಂದಿಗೆ ಹಾಜರಾಗಬೇಕು.
ಸ್ಪರ್ಧೆಯ ಮೊದಲ ಹಂತದಲ್ಲಿ 50 ಅಂಕಗಳ ಬಹು ಆಯ್ಕೆ ಪ್ರಶ್ನೆಗಳ ಸುತ್ತು ನಡೆಯಲಿದೆ. ಈ ಹಂತದಲ್ಲಿ ಅತಿ ಹೆಚ್ಚು ಅಂಕಗಳಿಸಿದ ಮೊದಲ 12 ಮಂದಿ ಸ್ಪರ್ಧಾರ್ಥಿಗಳು ಎರಡನೇ ಹಂತಕ್ಕೆ ಆಯ್ಕೆಯಾಗುತ್ತಾರೆ. ನಂತರ ಈ 12 ಮಂದಿಯನ್ನು 6 ತಂಡಗಳಾಗಿ ವಿಂಗಡಿಸಿ ಮೌಖಿಕ ಸುತ್ತು ನಡೆಸಲಾಗುತ್ತದೆ.
ವಿಜೇತ ತಂಡಗಳಿಗೆ ಆಕರ್ಷಕ ಬಹುಮಾನಗಳನ್ನು ಘೋಷಿಸಲಾಗಿದೆ. ಪ್ರಥಮ ಬಹುಮಾನವಾಗಿ ₹50,000, ದ್ವಿತೀಯ ಬಹುಮಾನವಾಗಿ ₹30,000 ಹಾಗೂ ತೃತೀಯ ಬಹುಮಾನವಾಗಿ ₹20,000 ನೀಡಲಾಗುತ್ತದೆ. ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ವಿತರಿಸಲಾಗುತ್ತದೆ.
ರಸಪ್ರಶ್ನೆ ಪಠ್ಯ ವಿಷಯಗಳು, ಅಂಬೇಡ್ಕರ್ ಅವರ ಜೀವನ ಮತ್ತು ಶಿಕ್ಷಣ, ರಾಷ್ಟ್ರೀಯ ಹೋರಾಟ, ಭಾರತೀಯ ಸಂವಿಧಾನ ರಚನೆ, ಶಿಕ್ಷಣ ಮತ್ತು ಸಂಘಟನೆ, ಹೋರಾಟದ ತತ್ವಗಳು, ಚಿಂತನೆಗಳು, ಮೀಸಲಾತಿ, ಮಹಿಳಾ ಹಕ್ಕುಗಳು ಹಾಗೂ ಸಮಕಾಲೀನ ಪ್ರಸ್ತುತತೆ ಸೇರಿದಂತೆ ವಿವಿಧ ವಿಷಯಗಳನ್ನು ಒಳಗೊಂಡಿರುತ್ತದೆ.
ಆಸಕ್ತರು ಏಪ್ರಿಲ್ 11ರೊಳಗಾಗಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಎಸ್.ಎಸ್. ತೆಮಿನಾಳ (9740421421), ಶ್ರೀನಿವಾಸ ದೇಸಾಯಿ (9845808941), ಸುರೇಶ್ ಅಂಕೋಲಿ (9901797951), ಅಮರೇಗೌಡ (9902180043) ಅಥವಾ ಭರಮಪ್ಪ ಪಿ (9731799080) ಇವರನ್ನು ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಕುಷ್ಟಗಿ ವೃತ್ತದ ಪೊಲೀಸ್ ಇನ್ಸ್ಪೆಕ್ಟರ್ ವಿಶ್ವನಾಥ ಹಿರೇಗೌಡರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP