
ಬೆಂಗಳೂರು, 07 ಏಪ್ರಿಲ್ (ಹಿ.ಸ.) :
ಆ್ಯಂಕರ್ : ರಾಜ್ಯದಲ್ಲಿ ಆಟೋಗಳಿಗೆ ಅಗತ್ಯವಿರುವ ಎಲ್ಪಿಜಿ ಕೊರತೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಸಾವಿರಾರು ಆಟೋ ಚಾಲಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಗ್ಯಾಸ್ಗಾಗಿ ಎಲ್ಪಿಜಿ ಬಂಕ್ಗಳ ಮುಂದೆ ಕಿಲೋಮೀಟರ್ಗಟ್ಟಲೆ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ಉಂಟಾಗಿದ್ದು, ದಿನನಿತ್ಯದ ದುಡಿಮೆಗೂ ತೀವ್ರ ಹೊಡೆತ ಬಿದ್ದಿದೆ.
ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಆಟೋ ಚಾಲಕರು ಇಡೀ ದಿನ ಗ್ಯಾಸ್ಗಾಗಿ ಕಾಯುವ ಪರಿಸ್ಥಿತಿ ಕಂಡುಬಂದಿದೆ. ಕೆಲವೆಡೆ ಬೆಳಗ್ಗೆಯಿಂದಲೇ ಸಾಲಿನಲ್ಲಿ ನಿಂತರೂ ಸಂಜೆಗೂ ಗ್ಯಾಸ್ ಸಿಗದ ಸ್ಥಿತಿ ಉಂಟಾಗಿದೆ ಎಂದು ಚಾಲಕರು ಅಳಲು ತೋಡಿಕೊಂಡಿದ್ದಾರೆ.
ಆಟೋ ಚಾಲಕರ ಸಂಘಟನೆಗಳು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ತಕ್ಷಣವೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದಿದ್ದರೆ ರಾಜ್ಯಾದ್ಯಂತ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿವೆ. ಗ್ಯಾಸ್ ಕೊರತೆಯಿಂದ ನಮ್ಮ ಜೀವನೋಪಾಯವೇ ಸಂಕಷ್ಟಕ್ಕೀಡಾಗಿದೆ. ಸರಕಾರ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ ಎಂದು ಬೆಂಗಳೂರು ಆಟೋ ಸಂಘಟನೆಯ ಅಧ್ಯಕ್ಷ ರಾಘವೇಂದ್ರ ತಿಳಿಸಿದ್ದಾರೆ.
ಈ ನಡುವೆ, ಏಪ್ರಿಲ್ 9ರಂದು ‘ಕರಾಳ ದಿನ’ ಆಚರಿಸಲು ನಿರ್ಧರಿಸಿರುವ ಆಟೋ ಚಾಲಕರು ತಮ್ಮ ವಾಹನಗಳಿಗೆ ಕಪ್ಪು ಬಾವುಟ ಕಟ್ಟಿ ಪ್ರತಿಭಟನೆ ನಡೆಸಲು ಸಿದ್ಧರಾಗಿದ್ದಾರೆ. ಸಮಸ್ಯೆ ಮುಂದುವರಿದರೆ ‘ಕರ್ನಾಟಕ ಬಂದ್’ ಮಾಡುವುದಾಗಿ ಸಂಘಟನೆಗಳು ಎಚ್ಚರಿಕೆ ನೀಡಿವೆ.
ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಸರಬರಾಜು ಸುಧಾರಣೆ ಮಾಡದಿದ್ದರೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಮೇಲೂ ಪರಿಣಾಮ ಬೀರಲಿದೆ ಎಂದು ಹುಬ್ಬಳ್ಳಿ ಆಟೋ ಮಾಲಿಕರ ಸಂಘದ ಅಧ್ಯಕ್ಷ ಬಿ.ಎಂ.ಮಠಪತಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa