ಸೂಡಿ ಗ್ರಾಮದಲ್ಲಿ ಐತಿಹಾಸಿಕ ಮಹೋತ್ಸವ ಕಾರ್ಯಕ್ರಮ
ಗದಗ, 03 ಏಪ್ರಿಲ್ (ಹಿ.ಸ.) : ಆ್ಯಂಕರ್ : ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಸೂಡಿ ಗ್ರಾಮದಲ್ಲಿ ಇದೇ ಮೊದಲ ಬಾರಿಗೆ ಪಂಚಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ 50ನೇ ವರ್ಷದ ರಥೋತ್ಸವದ ಅಂಗವಾಗಿ ನೂತನ ರಥ ಲೋಕಾರ್ಪಣೆ ಸೇರಿದಂತೆ ವೈವಿಧ್ಯಮಯ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಮೇ 6ರ
ಫೋಟೋ


ಗದಗ, 03 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಸೂಡಿ ಗ್ರಾಮದಲ್ಲಿ ಇದೇ ಮೊದಲ ಬಾರಿಗೆ ಪಂಚಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ 50ನೇ ವರ್ಷದ ರಥೋತ್ಸವದ ಅಂಗವಾಗಿ ನೂತನ ರಥ ಲೋಕಾರ್ಪಣೆ ಸೇರಿದಂತೆ ವೈವಿಧ್ಯಮಯ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಮೇ 6ರಿಂದ 10ರವರೆಗೆ ಭರ್ಜರಿಯಾಗಿ ನಡೆಯಲಿವೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ತಿಳಿಸಿದ್ದಾರೆ.

ನಗರದ ಎಪಿಎಂಸಿ ಸಮೀಪದ ಶರಣಬಸವ (ರಾಜು) ಗುಡಿಮನಿ ಅವರ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ವೀರಶೈವ ಧರ್ಮ ಪರಂಪರೆಯ ಮೂಲ ಆಚಾರ್ಯರೇ ಪಂಚಪೀಠದ ಪರಮಾಚಾರ್ಯರಾಗಿದ್ದು, ಕಾಶೀ ಪೀಠದ ಶಾಖಾ ಮಠವೇ ಸೂಡಿಯ ಶ್ರೀ ಜುಕ್ತಿಹಿರೇಮಠ ಎಂದು ವಿವರಿಸಿದರು.

ಡಾ. ಕೊಟ್ಟೂರ ಬಸವೇಶ್ವರ ಶಿವಾಚಾರ್ಯರು 14ನೇ ಪೀಠಾಧ್ಯಕ್ಷರಾಗಿದ್ದು, ಅವರ ಅವಧಿಯಲ್ಲಿ 2017ರಲ್ಲಿ ನೂತನ ಮಠ ಲೋಕಾರ್ಪಣೆಗೊಂಡಿದೆ. ಇದೀಗ ನೂತನ ರಥ ಲೋಕಾರ್ಪಣೆ ನಡೆಯುತ್ತಿರುವುದು ಸಂತಸದ ವಿಷಯವಾಗಿದ್ದು, “ಘಟದಿಂದ ಮಠ” ಪರಿಕಲ್ಪನೆಗೆ ಜುಕ್ತಿಹಿರೇಮಠ ಸಾಕ್ಷಿಯಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಮಾತನಾಡಿದ ಡಾ. ಕೊಟ್ಟೂರ ಬಸವೇಶ್ವರ ಶಿವಾಚಾರ್ಯರು, ಸೂಡಿ ಗ್ರಾಮದಲ್ಲಿ ಪಂಚಪೀಠಾಧೀಶ್ವರ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಇದೇ ಮೊದಲ ಬಾರಿಗೆ ನಡೆಯುತ್ತಿದ್ದು, ಒಂದೇ ವೇಳೆ ಐದು ಜಗದ್ಗುರುಗಳು ಭಾಗವಹಿಸುವುದು ಕಳೆದ 25 ವರ್ಷಗಳಲ್ಲಿ ಅಪರೂಪದ ಐತಿಹಾಸಿಕ ಕ್ಷಣವಾಗಿದೆ ಎಂದು ತಿಳಿಸಿದರು.

ಈ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದ್ದು, ಸಭೆಯಲ್ಲಿ ಎಸ್.ಪಿ. ಸಂಶಿಮಠ, ಸಿದ್ದಣ್ಣ ಮಾರನಬಸರಿ, ಎಚ್.ಎಸ್. ಶಿವನಗೌಡರ, ರಾಜು ಕುರಡಗಿ, ಶರಣಪ್ಪ ಕುರಡಗಿ, ಸದಾಶಿವಯ್ಯ ಮದರಿಮಠ, ಚಂದ್ರು ಬಾಳಿಹಳ್ಳಿಮಠ, ಮಲ್ಲಿಕಾರ್ಜುನ ಸಂತೋಜಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದರು. ಮಹಿಳೆಯರ ಪರವಾಗಿ ವಿಜಯಲಕ್ಷ್ಮಿ ಮಾನ್ವಿ, ಜಯಶ್ರೀ ತಾತನಗೌಡ ಸೇರಿದಂತೆ ಹಲವರು ಹಾಜರಿದ್ದರು.

ಕಾರ್ಯಕ್ರಮದ ವಿವರಗಳ ಪ್ರಕಾರ, ಮೇ 6ರಂದು ಉಚಿತ ಆರೋಗ್ಯ ತಪಾಸಣೆ, ಕಣ್ಣಿನ ತಪಾಸಣೆ ಮತ್ತು ರಕ್ತದಾನ ಶಿಬಿರ ನಡೆಯಲಿದ್ದು, ಸಂಜೆ ಹುಬ್ಬಳ್ಳಿಯ ಜಿ.ವಿ. ಕಲಾಬಳಗದಿಂದ ನಾಟಕ ಪ್ರದರ್ಶನ ಜರುಗಲಿದೆ. ಮೇ 7ರಂದು ಕೃಷಿ ಮತ್ತು ಪರಿಸರ ಜಾಗೃತಿ ಕಾರ್ಯಕ್ರಮ, ಮೇ 8ರಂದು ಮಹಿಳಾ ಜಾಗೃತಿ ಸಮಾರಂಭ ಆಯೋಜಿಸಲಾಗಿದೆ.

ಮೇ 9ರಂದು ಯುವಕರಿಗಾಗಿ ವ್ಯಸನಮುಕ್ತ ಸಮಾಜ ನಿರ್ಮಾಣ ಶಿಬಿರ ಹಾಗೂ ಹಾಸ್ತೋತ್ಸವ ನಡೆಯಲಿದ್ದು, ಮೇ 10ರಂದು ಬೆಳಿಗ್ಗೆ 9 ಗಂಟೆಗೆ ಪಂಚಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವ ಜರುಗಲಿದೆ. ಮಧ್ಯಾಹ್ನ 12 ಗಂಟೆಗೆ ಧರ್ಮ ಸಂರಕ್ಷಣಾ ಸಮಾರಂಭ, ಶ್ರೀಮಠ ಪ್ರಶಸ್ತಿ ಪ್ರದಾನ ಹಾಗೂ ನೂತನ ರಥ ಲೋಕಾರ್ಪಣೆ ನೆರವೇರಲಿದೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಈ ಅಪರೂಪದ ಧಾರ್ಮಿಕ ಮಹೋತ್ಸವದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಪೀಠಾಧ್ಯಕ್ಷರು ಮನವಿ ಮಾಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande