ಪೊಲೀಸ್ ವ್ಯವಸ್ಥೆ ಸುಧಾರಣೆಗೆ ನಿವೃತ್ತ ಎ.ಎಸ್.ಐ ಕೆ.ಎನ್. ರವೀಂದ್ರನಾಥ್ ಮನವಿ
ಪೊಲೀಸ್ ವ್ಯವಸ್ಥೆ ಸುಧಾರಣೆಗೆ ನಿವೃತ್ತ ಎ.ಎಸ್.ಐ ಕೆ.ಎನ್. ರವೀಂದ್ರನಾಥ್ ಮನವಿ
ಎ.ಎಸ್.ಐ. ಕೆ.ಎನ್.ರವೀಂದ್ರನಾಥ್


ಕೋಲಾರ, 0೩ ಎಪ್ರಿಲ್ (ಹಿ.ಸ.) ಆಂಕರ್ :

ಆ್ಯಂಕರ್ : ಕೋಲಾರ ಜಿಲ್ಲೆಯ ಪೊಲೀಸ್ ಇಲಾಖೆಯ ಸಿಬ್ಬಂದಿ ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಕೋರಿ ಮುಖ್ಯಮಂತ್ರಿಗಳು ಹಾಗೂ ಗೃಹ ಮಂತ್ರಿಗಳಿಗೆ ನಿವೃತ್ತ ಎ.ಎಸ್.ಐ. ಗೌರಿಪೇಟೆ ಕೆ.ಎನ್.ರವೀಂದ್ರನಾಥ್ ರವರು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ಜಿಲ್ಲೆಯ ಪೊಲೀಸ್ ಠಾಣೆಗಳಲ್ಲಿ ಪ್ರಸ್ತುತ ಇರುವ ಸಿಬ್ಬಂದಿ ಬಲವು ೧೯೯೧-೯೨ನೇ ಸಾಲಿನಲ್ಲಿ ಮಂಜೂರಾದ ಹಳೆಯ ಅಂಕಿ-ಅಂಶಗಳ ಆಧಾರದ ಮೇಲೆ ಇದೆ. ಕಳೆದ ೩೫ ವರ್ಷಗಳಲ್ಲಿ ಜನಸಂಖ್ಯೆಯು ಮೂರು ಪಟ್ಟು ಹೆಚ್ಚಾಗಿದ್ದರೂ ಸಿಬ್ಬಂದಿ ಸಂಖ್ಯೆ ಹೆಚ್ಚಾಗಿಲ್ಲ. ಇದರಿಂದ ಸಿಬ್ಬಂದಿಯ ಮೇಲೆ ಹೆಚ್ಚಿನ ಒತ್ತಡ ಉಂಟಾಗುತ್ತಿದ್ದು, ಅವರ ಆರೋಗ್ಯ ಮತ್ತು ಕುಟುಂಬದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.

ಈ ಒತ್ತಡವನ್ನು ಕಡಿಮೆ ಮಾಡಲು ಪ್ರತಿ ಠಾಣೆಗೆ ತಲಾ ೨೫ ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸುವುದು ಅಗತ್ಯವಾಗಿದೆ. ಅಲ್ಲದೆ, ಠಾಣೆಗಳ ವ್ಯಾಪ್ತಿಯು ತುಂಬಾ ದೊಡ್ಡದಾಗಿದ್ದು, ಉದಾಹರಣೆಗೆ ಕೋಲಾರ ಗ್ರಾಮಾಂತರ ಠಾಣೆಯು ೨೨೮ ಹಳ್ಳಿಗಳನ್ನು ಒಳಗೊಂಡಿದ್ದರೂ ಕೇವಲ ೬೭ ಸಿಬ್ಬಂದಿ ಮಾತ್ರ ಮಂಜೂರಾಗಿದ್ದಾರೆ. ಈ ಬೃಹತ್ ವ್ಯಾಪ್ತಿಯಿಂದಾಗಿ ಜನರಿಗೆ ಸಕಾಲದಲ್ಲಿ ಸ್ಪಂದಿಸುವುದು ಕಷ್ಟವಾಗುತ್ತಿದ್ದು, ಹೊಸದಾಗಿ ಮಾಲೂರು ಗ್ರಾಮಾಂತರ, ಸುಗಟೂರು ಮತ್ತು ವಡಗೂರು ಬಳಿ ಪೊಲೀಸ್ ಠಾಣೆಗಳನ್ನು ಮಂಜೂರು ಮಾಡಬೇಕೆಂದು ಕೋರಲಾಗಿದೆ.

ಸಿಬ್ಬಂದಿ ನಿರ್ವಹಣೆ ಮತ್ತು ಸೌಲಭ್ಯಗಳ ವಿಷಯದಲ್ಲಿ ಹಲವು ಸುಧಾರಣೆಗಳ ಅಗತ್ಯವಿದೆ. ಕೆಳಹಂತದ ಸಿಬ್ಬಂದಿಯ ಕೊರತೆಯನ್ನು ನೀಗಿಸಲು, ಸಿಬ್ಬಂದಿ ನಿವೃತ್ತಿಯಾಗುವ ಒಂದು ವರ್ಷ ಮುಂಚಿತವಾಗಿಯೇ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು. ಕೋಲಾರ ಜಿಲ್ಲೆಯಲ್ಲಿ ೨೦ ವರ್ಷ ಸೇವೆ ಸಲ್ಲಿಸಿದರೂ ಪದೋನ್ನತಿ ಸಿಗದಿರುವುದು ಸಿಬ್ಬಂದಿಯ ಮಾನಸಿಕ ಶೋಭೆಗೆ ಕಾರಣವಾಗಿದ್ದು, ಸಕಾಲಕ್ಕೆ ಬಡ್ತಿ ನೀಡುವ ವ್ಯವಸ್ಥೆಯಾಗಬೇಕಿದೆ.

ಆಧುನಿಕ ಕಾಲಕ್ಕೆ ತಕ್ಕಂತೆ ಪೊಲೀಸರಿಗೆ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಮತ್ತು ಹೊಸ ಕಾನೂನುಗಳ ಬಗ್ಗೆ ತರಬೇತಿ ಹಾಗೂ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಬೇಕು. ದಕ್ಷತೆಯನ್ನು ಹೆಚ್ಚಿಸಲು ಠಾಣೆಗಳಿಗೆ ಸುಸಜ್ಜಿತ ವಾಹನಗಳು, ತಲಾ ೧೦ ಕಂಪ್ಯೂಟರ್ಗಳು, ೩ ಲ್ಯಾಪ್ಟಾಪ್ಗಳು ಮತ್ತು ಆಧುನಿಕ ಜೆರಾಕ್ಸ್ ಯಂತ್ರಗಳನ್ನು ಒದಗಿಸಬೇಕು. ಮತ್ತು ಬಂದೋಬಸ್ತ್ಗೆ ಹೋಗುವ ಸಿಬ್ಬಂದಿಗೆ ಉತ್ತಮ ವಸತಿ ಹಾಗೂ ಆಹಾರ ಒದಗಿಸಲು ಪ್ರತಿ ತಾಲ್ಲೂಕಿನಲ್ಲಿ ೨೦೦ ಜನರಿಗೆ ಆಗುವಂತೆ ಸುಸಜ್ಜಿತ ಸಮುದಾಯ ಭವನ ನಿರ್ಮಿಸಬೇಕು. ಪೊಲೀಸ್ ಸಮುದಾಯ ಭವನವನ್ನು ಬಾಡಿಗೆಗೆ ಪಡೆದುಕೊಳ್ಳುವ ನಿವೃತ್ತ ಸಿಬ್ಬಂದಿಗೆ ಶೇ. ೬೦ರಷ್ಟು ರಿಯಾಯಿತಿಯನ್ನು ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಸಿಬ್ಬಂದಿಯ ಕಲ್ಯಾಣ ಮತ್ತು ಆಡಳಿತಾತ್ಮಕ ಬದಲಾವಣೆಗಳೂ ಸಹ ಅನಿವಾರ್ಯವಾಗಿವೆ. ೫೦ ವರ್ಷ ಮೇಲ್ಪಟ್ಟವರನ್ನು ಹೊರ ಜಿಲ್ಲೆಯ ಬಂದೋಬಸ್ತ್ಗೆ ನಿಯೋಜಿಸಬಾರದು ಮತ್ತು ಗರ್ಭಿಣಿ ಮಹಿಳಾ ಪೊಲೀಸರಿಗೆ ಠಾಣಾ ಕರ್ತವ್ಯ ನೀಡಬೇಕು. ನಿಗದಿತ ಅವಧಿಗಿಂತ ಹೆಚ್ಚು ಕೆಲಸ ಮಾಡುವವರಿಗೆ ಒ.ಟಿ ಭತ್ಯೆ ನೀಡಬೇಕು ಮತ್ತು ಕಡ್ಡಾಯವಾಗಿ ವಾರದ ರಜೆ ನೀಡಬೇಕು. ರಜೆ ನೀಡಲು ಸಾಧ್ಯವಾಗದಿದ್ದರೆ ಆ ದಿನಕ್ಕೆ ಎರಡರಷ್ಟು ವೇತನ ನೀಡಬೇಕು.

ವೇತನದ ವಿಷಯದಲ್ಲಿ ಕರ್ನಾಟಕ ಪೊಲೀಸರಿಗೆ ದೇಶದಲ್ಲೇ ಕಡಿಮೆ ಸಂಬಳವಿದ್ದು, ಪ್ರತ್ಯೇಕ ವೇತನ ಪರಿಷ್ಕರಣಾ ಸಮಿತಿ ನೇಮಿಸಬೇಕೆಂಬ ಬೇಡಿಕೆಯಿದೆ. ಠಾಣೆಗಳಿಗೆ ಬೇಕಾದ ಲೇಖನಿ ಸಾಮಗ್ರಿಗಳನ್ನು ಇಲಾಖೆಯೇ ನೇರವಾಗಿ ಪೂರೈಸಬೇಕು ಮತ್ತು ತನಿಖೆಗಾಗಿ ಹೊರ ರಾಜ್ಯ/ಜಿಲ್ಲೆಗೆ ಹೋಗುವಾಗ ಸಾರಿಗೆ ಸಂಸ್ಥೆಗಳಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಬೇಕು.

ವಾರ್ಷಿಕವಾಗಿ ಎರಡು ಜೊತೆ ಸಮವಸ್ತ್ರದೊಂದಿಗೆ ಅಗತ್ಯ ಪರಿಕರಗಳನ್ನು ನೀಡಬೇಕು. ಕೊನೆಯದಾಗಿ, ಪೊಲೀಸ್ ವಸತಿ ಗೃಹಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಹಾಗೂ ನಿವೃತ್ತ ಪೊಲೀಸರಿಗೆ ಮಾರಣಾಂತಿಕ ಕಾಯಿಲೆಗಳಿಗೆ ’ಆರೋಗ್ಯ ಭಾಗ್ಯ’ ಅಡಿಯಲ್ಲಿ ಸುಸಜ್ಜಿತ ಚಿಕಿತ್ಸೆ ಕೊಡಿಸಬೇಕು. ಇಲಾಖೆಯ ಧ್ವನಿಯಾಗಿ ವಿಧಾನ ಪರಿಷತ್ತಿನಲ್ಲಿ ಒಬ್ಬ ಶಾಸಕರನ್ನು ನೇಮಿಸಬೇಕೆಂಬ ಮನವಿಯೂ ರವಿಂದ್ರನಾಥ್ ರವರು ಮಾಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande