ವೀರಭದ್ರೇಶ್ವರ ಜಾತ್ರೆಯಲ್ಲಿ ಗುಗ್ಗಳೋತ್ಸವ ಸಂಭ್ರಮ
ಗದಗ, 03 ಏಪ್ರಿಲ್ (ಹಿ.ಸ.) : ಆ್ಯಂಕರ್ : ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ನಡೆಯುತ್ತಿರುವ ಕೋಟೆ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಎರಡನೇ ದಿನದ ಗುಗ್ಗಳೋತ್ಸವ ಭಕ್ತಿ, ಸಂಪ್ರದಾಯ ಮತ್ತು ವೀರಭಾವದ ಅದ್ಭುತ ಸಂಯೋಜನೆಯಾಗಿ ಗಮನ ಸೆಳೆಯಿತು. ಜಾತ್ರೆಯ ಅಂಗವಾಗಿ ನೂರಾರು ಭಕ್ತರು ಅಗ್ನಿಕುಂಡದಲ್ಲಿ
ಫೋಟೋ


ಗದಗ, 03 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ನಡೆಯುತ್ತಿರುವ ಕೋಟೆ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಎರಡನೇ ದಿನದ ಗುಗ್ಗಳೋತ್ಸವ ಭಕ್ತಿ, ಸಂಪ್ರದಾಯ ಮತ್ತು ವೀರಭಾವದ ಅದ್ಭುತ ಸಂಯೋಜನೆಯಾಗಿ ಗಮನ ಸೆಳೆಯಿತು.

ಜಾತ್ರೆಯ ಅಂಗವಾಗಿ ನೂರಾರು ಭಕ್ತರು ಅಗ್ನಿಕುಂಡದಲ್ಲಿ ಹಾಯ್ದು ದೇವರ ದರ್ಶನ ಪಡೆದ ದೃಶ್ಯಗಳು ಭಕ್ತರ ಮನಸೂರೆಗೊಂಡವು. ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿದ್ದು, ಜಾತ್ರಾ ವಾತಾವರಣ ಮತ್ತಷ್ಟು ಭಕ್ತಿಮಯವಾಗಿತ್ತು.

ಇದೇ ವೇಳೆ ಇಬ್ಬರು ಬಾಲ ಪುರವಂತರು ನಾಲಿಗೆ ಮೇಲೆ ಕರ್ಪೂರದ ದೀಪ ಇಟ್ಟು ಪವಾಡ ಪ್ರದರ್ಶಿಸಿದರೆ, ಅಂಧ ವಿಕಲಚೇತನ ಕಲ್ಲಪ್ಪ ಬಣವಿ ಹೇಳಿದ ವೀರಭದ್ರ ದೇವರ ಚರಿತ್ರೆ ಭಕ್ತರನ್ನು ಮಂತ್ರಮುಗ್ಧರನ್ನಾಗಿಸಿತು. ಈ ಕಾರ್ಯಕ್ರಮಗಳು ಜಾತ್ರೆಯ ಪ್ರಮುಖ ಆಕರ್ಷಣೆಯಾಗಿದ್ದವು. ಪ್ಯಾಟಿ ಹನುಮಂತ ದೇವರ ದೇವಸ್ಥಾನದಿಂದ ಪ್ರಾರಂಭವಾದ ಭವ್ಯ ಮೆರವಣಿಗೆಯಲ್ಲಿ ಗ್ರಾಮ ಹಾಗೂ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ ಪುರವಂತರು ವೀರಭದ್ರನ ವಿಭಿನ್ನ ಅವತಾರಗಳ ವೇಷಭೂಷಣಗಳಲ್ಲಿ ಕಾಣಿಸಿಕೊಂಡು ವೀರಾವೇಶದ ಮೂಲಕ ದೇವರ ಚರಿತ್ರೆಯನ್ನು ಮನಮಿಡಿಯುವಂತೆ ನಿರೂಪಿಸಿದರು. ದಕ್ಷ ಬ್ರಹ್ಮನ ಕಥಾವಸ್ತುವಿನ ಪ್ರದರ್ಶನಗಳು ಭಕ್ತರಲ್ಲಿ ಭಾವೋದ್ರೇಕ ಮೂಡಿಸಿತು.

ಸಮ್ಮಾಳ ಮೇಳದ ತಾಳಕ್ಕೆ ಯುವಕರು ಕುಣಿದು ಮೆರವಣಿಗೆಯ ಉತ್ಸಾಹ ಹೆಚ್ಚಿಸಿದರೆ, “ಈರಣ್ಣ ದೊರೆಯೇ ನಿನಗಾರು ಸರಿಯೇ” ಎಂಬ ಘೋಷಣೆಗಳು ಜಾತ್ರೆಯ ಸಂಭ್ರಮವನ್ನು ಉಜ್ವಲಗೊಳಿಸಿತು.

ಭಕ್ತಿಯ ಪರಾಕಾಷ್ಠೆಯನ್ನು ತೋರಿಸುವ ದೃಶ್ಯವಾಗಿ 108 ಗಂಟುಗಳಿದ್ದ 50 ಮೀಟರ್ಗೂ ಹೆಚ್ಚು ಉದ್ದದ ದಾರವನ್ನು 50ಕ್ಕೂ ಹೆಚ್ಚು ಯುವಕರು ಶಸ್ತ್ರದ ಮೂಲಕ ತಮ್ಮ ಗಲ್ಲದಲ್ಲಿ ಸೇರಿಸಿಕೊಂಡರು. ಮಹಿಳೆಯರು ಹಾಗೂ ಮಕ್ಕಳು ಸಹ ಗಲ್ಲ ಮತ್ತು ಕೈಗಳಿಗೆ ಶಸ್ತ್ರ ಹಾಕಿಸಿಕೊಂಡು ತಮ್ಮ ಭಕ್ತಿಯನ್ನು ಅರ್ಪಿಸಿದರು.

ಜಾತ್ರೆಯ ವಿಶೇಷ ಆಕರ್ಷಣೆಯಾದ ಅಗ್ನಿಕುಂಡದಲ್ಲಿ ಮಕ್ಕಳು, ಯುವಕರು ಹಾಗೂ ವೃದ್ಧರು ಸೇರಿ ನೂರಾರು ಭಕ್ತರು ಹಾಯ್ದು ವೀರಭದ್ರ ದೇವರ ದರ್ಶನ ಪಡೆದರು. ಪಲ್ಲಕ್ಕಿ ಹಾಗೂ ಸಮ್ಮಾಳ ಮೇಳದ ವಾದ್ಯಗಳನ್ನು ಹೊತ್ತು ಅಗ್ನಿಕುಂಡ ದಾಟಿದ ದೃಶ್ಯಗಳು ಭಕ್ತಿಯ ಪರಮಾವಧಿಯನ್ನು ಪ್ರತಿಬಿಂಬಿಸಿತು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande