
ಗದಗ, 03 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಗದಗ–ಸೊಲ್ಲಾಪೂರ ಡಬ್ಬಿಂಗ್ ಮಾರ್ಗ ಪೂರ್ಣಗೊಂಡ ಬಳಿಕ ಗದಗ ಮೂಲಕವೇ ಹೊಸ ರೈಲುಗಳನ್ನು ಸಂಚರಿಸಲು ಅವಕಾಶ ಕಲ್ಪಿಸಬೇಕು ಎಂದು ಗದಗ ಜಿಲ್ಲಾ ವಿಕಾಸ ವೇದಿಕೆ ರೈಲ್ವೆ ಇಲಾಖೆಗೆ ಮನವಿ ಸಲ್ಲಿಸಿದೆ.
ಈ ಕುರಿತು ಮಾತನಾಡಿದ ಜಿಲ್ಲಾ ವಿಕಾಸ ವೇದಿಕೆ ಅಧ್ಯಕ್ಷ ವಿಶ್ವನಾಥ ಖಾನಾಪೂರ ಅವರು, ಗದಗ–ಸೊಲ್ಲಾಪೂರ ಡಬ್ಲಿಂಗ್ ಕಾಮಗಾರಿಯಿಂದ ಈ ಭಾಗದ ಸಂಚಾರ ವ್ಯವಸ್ಥೆ ಮತ್ತಷ್ಟು ಸುಧಾರಿಸಲಿದೆ. ಗದಗ, ಕೊಪ್ಪಳ, ಹೊಸಪೇಟೆ ಹಾಗೂ ಬಳ್ಳಾರಿ ಭಾಗದ ಜನರಿಗೆ ಪ್ರಯಾಣ ಸೌಲಭ್ಯ ಹೆಚ್ಚಳವಾಗಲಿದೆ ಎಂದು ತಿಳಿಸಿದರು.
ಉದ್ಯೋಗಾರ್ಥಿಗಳು, ವ್ಯಾಪಾರಸ್ಥರು, ಉದ್ಯಮಿಗಳು ಹಾಗೂ ಪ್ರವಾಸೋದ್ಯಮ ವಲಯಕ್ಕೆ ಈ ರೈಲುಗಳು ಮಹತ್ವದ ನೆರವಾಗಲಿವೆ. ವಂದೇ ಭಾರತ ಸೇರಿದಂತೆ ಬಾಗಲಕೋಟೆ ಮೈಸೂರು,ವಿಜಯಪುರ–ತಿರುಪತಿ, ಮುಂಬೈ–ಬೆಂಗಳೂರು, ಮುಂಬೈ–ಚೆನ್ನೈ, ಪುಣೆ–ರಾಮೇಶ್ವರಂ, ವಿಜಯಪುರ–ಬೆಂಗಳೂರು, ವಿಜಯಪುರ–ವಿಜಯವಾಡ, ವಿಜಯಪುರ–ರಾಯಚೂರು ಹಾಗೂ ಅಹಮದಾಬಾದ್–ಬೆಂಗಳೂರು ರೈಲುಗಳನ್ನು ಗದಗ ಮಾರ್ಗವಾಗಿ ಸಂಚರಿಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ಕಲ್ಯಾಣ ಕರ್ನಾಟಕ ಭಾಗದ ಬಳ್ಳಾರಿ, ಹೊಸಪೇಟೆ, ಕೊಪ್ಪಳ ಹಾಗೂ ಗದಗ ಜಿಲ್ಲೆಗಳನ್ನು ಬಾದಾಮಿ–ಬಾಗಲಕೋಟೆ ಮಾರ್ಗದ ಮೂಲಕ ವಿಜಯಪುರಕ್ಕೆ ಸಂಪರ್ಕಿಸುವುದು ಅತ್ಯಂತ ಅಗತ್ಯವಾಗಿದೆ. ಹಂಪಿ ಯುನೆಸ್ಕೋ ವಿಶ್ವ ಪರಂಪರೆ ತಾಣ ಹಾಗೂ ಬಾದಾಮಿಯ ಐತಿಹಾಸಿಕ ಗುಹಾ ದೇವಾಲಯಗಳಿಗೆ ಪ್ರವಾಸಿಗರ ಭೇಟಿ ಸುಲಭವಾಗಲಿದೆ ಎಂದು ಹೇಳಿದರು.
ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಗೆ ಪ್ರಯಾಣಿಸುವ ಜನರಿಗೆ ಈ ರೈಲುಗಳು ಹೆಚ್ಚಿನ ಅನುಕೂಲ ಕಲ್ಪಿಸಲಿವೆ ಎಂದು ಅಭಿಪ್ರಾಯಪಟ್ಟರು. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ರಾಜ್ಯ ರೈಲ್ವೆ ಸಚಿವ ವಿ. ಸೋಮಣ್ಣ ಹಾಗೂ ನೈಋತ್ಯ ರೈಲ್ವೆ ಇಲಾಖೆ ಈ ಭಾಗದ ಜನರ ಬೇಡಿಕೆಯನ್ನು ಪರಿಗಣಿಸಿ ಗದಗ ಮೂಲಕ ರೈಲು ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಮನವಿ ಮಾಡಲಾಗಿದೆ.
ಈ ಸಂದರ್ಭದಲ್ಲಿ ಶಿವಕುಮಾರ ಹಡಗಲಿಮಠ, ವೆಂಕಟೇಶ ಕಬಾಡಿ, ಜಗದೀಶ ಕಂಗೋರಿ, ನಾಗರಾಜ ಹಂದಿಗೋಳಿ ಸೇರಿದಂತೆ ವೇದಿಕೆಯ ಸದಸ್ಯರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP