
ಹುಬ್ಬಳ್ಳಿ, 28 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಕುಂದಗೋಳ ತಾಲೂಕಿನ ಬೆನಕನಹಳ್ಳಿ, ಸಂಶಿ, ಕಮಡೊಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ಪಿಂಚಣಿ, ನಮ್ಮ ಹೊಲ ನಮ್ಮ ರಸ್ತೆ, ಕಾರ್ಮಿಕ ಇಲಾಖೆ, ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಜನರ ಅಹವಾಲುಗಳಿಗೆ ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಅವರು ಸ್ಪಂದಿಸಿದರು.
ಕುಂದಗೋಳ ಪಟ್ಟಣದ ಸವಾಯಿ ಗಂಧರ್ವರ ಸ್ಮಾರಕ ಭವನದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಜನ ಸಂಪರ್ಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ಅರ್ಜಿಗಳ ವಿಲೇವಾರಿಗೆ ಅಗತ್ಯ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜನರ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸುವ ಮತ್ತು ಆಡಳಿತವನ್ನು ಜನರಿಗೆ ಇನ್ನಷ್ಟು ಹತ್ತಿರ ತರುವ ಉದ್ದೇಶದಿಂದ ಇಂದು ತಾಲೂಕು ಕೇಂದ್ರದಲ್ಲಿ ಜನ ಸಂಪರ್ಕ ಸಭೆ ಯಶಸ್ವಿಯಾಗಿ ಏರ್ಪಡಿಸಲಾಗಿತ್ತು. ಈ ಜನ ಸಂಪರ್ಕ ಸಭೆಯಲ್ಲಿ ವಿವಿಧ ಗ್ರಾಮಗಳಿಂದ ಬಂದ ಜನರು ತಮ್ಮ ಸಮಸ್ಯೆಗಳು, ಬೇಡಿಕೆಗಳು ಹಾಗೂ ಸಲಹೆಗಳನ್ನು ನೇರವಾಗಿ ಸಚಿವರಿಗೆ ತಿಳಿಸಿದರು.
ಸಾರ್ವಜನಿಕರು ಕುಡಿಯುವ ನೀರಿನ ಕೊರತೆ, ರಸ್ತೆ ದುರಸ್ತಿ, ಒಳಚರಂಡಿ ವ್ಯವಸ್ಥೆ, ವಿದ್ಯುತ್ ವ್ಯತ್ಯಯ, ಆರೋಗ್ಯ ಸೇವೆಗಳ ಅಭಾವ, ಶಾಲಾ ಸೌಲಭ್ಯಗಳ ಕೊರತೆ ಸೇರಿದಂತೆ ಹಲವು ಪ್ರಮುಖ ವಿಷಯಗಳ ಬಗ್ಗೆ ತಿಳಿಸಿದರು.
ಈ ಸಂದರ್ಭದಲ್ಲಿ ಕೆಲವು ತುರ್ತು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸಲಾಯಿತು. ಕೆಲವು ಸಮಸ್ಯೆಗಳನ್ನು ದಾಖಲಿಸಿ, ಅವುಗಳನ್ನು ಸಂಬಂಧಪಟ್ಟ ಇಲಾಖೆಗೆ ಕಳುಹಿಸಿ ನಿಗದಿತ ಅವಧಿಯಲ್ಲಿ ಪರಿಹಾರ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa