ದಮನಿತರಿಗೆ ಸೌಲಭ್ಯಗಳನ್ನು ವಿಳಂಬವಿಲ್ಲದೆ ತಲುಪಿಸಲು ಜಿಲ್ಲಾಧಿಕಾರಿಗಳ ಸೂಚನೆ
ದಮನಿತರಿಗೆ ಸೌಲಭ್ಯಗಳನ್ನು ವಿಳಂಭವಿಲ್ಲದೆ ತಲುಪಿಸಲು ಜಿಲ್ಲಾಧಿಕಾರಿಗಳ ಸೂಚನೆ
ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜಾಗೃತಿ ಮತ್ತು ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ಕೋಲಾರ ಜಿಲ್ಲಾಧಿಕಾರಿ ಎಂ.ಆರ್.ರವಿ ಮಾತನಾಡಿದರು.


ಕೋಲಾರ, ೨೮ ಏಪ್ರಿಲ್ (ಹಿ.ಸ) :

ಆ್ಯಂಕರ್ : ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಜನಗಳಿಗೆ ಸೌಲಭ್ಯಗಳ ವಿತರಣೆಯಲ್ಲಿ ವಿಳಂಬ ಸಹಿಸುವ ಪ್ರಶ್ನೆ ಇಲ್ಲ ಎಂದು ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ ತಿಳಿಸಿದರು.

ಜಿಲ್ಲಾಧಿಕಾರಿಗಳ ನ್ಯಾಯಾಂಗ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜಾಗೃತಿ ಮತ್ತು ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ಮಾತನಾಡಿದರು. ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವಲ್ಲಿ ಯಾವುದೇ ನಿರ್ಲಕ್ಷ್ಯ ವಹಿಸಬಾರದು ಎಂದು ಅಧಿಕಾರಿಗಳಿಗೆ ಖಡಕ್ ಆದೇಶ ನೀಡಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯದ ಅಭಿವೃದ್ಧಿ ಕಾರ್ಯಕ್ರಮಗಳು, ವಿದ್ಯಾರ್ಥಿವೇತನ, ಜಮೀನು ಮಂಜೂರಾತಿ ಮತ್ತು ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಾಗಿರುವ ಪ್ರಕರಣಗಳ ಸ್ಥಿತಿಗತಿಯ ಕುರಿತು ಸುದೀರ್ಘವಾಗಿ ಚರ್ಚಿಸಿದರು. ಸಮಾಜ ಕಲ್ಯಾಣ ಇಲಾಖೆ ಹಾಗೂ ಸಂಬ0ಧಪಟ್ಟ ಇಲಾಖೆಗಳಲ್ಲಿ ಬಾಕಿ ಉಳಿದಿರುವ ವಿದ್ಯಾರ್ಥಿವೇತನದ ಮೊತ್ತವನ್ನು ವಿಳಂಬವಿಲ್ಲದೆ ವಿದ್ಯಾರ್ಥಿಗಳಿಗೆ ತಲುಪಿಸಬೇಕು ಎಂದು ತಹಸೀಲ್ದಾರ್ಗಳಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.

ಪರಿಶಿಷ್ಟ ಸಮುದಾಯಕ್ಕೆ ಸಂಬ0ಧಿಸಿದ ಜಮೀನು ಮಂಜೂರಾತಿ ಮತ್ತು ಭೂಮಿ ಹಕ್ಕುಗಳ ಪ್ರಕರಣಗಳನ್ನು ಆದ್ಯತೆಯ ಮೇರೆಗೆ ಇತ್ಯರ್ಥಪಡಿಸಿ, ಅರ್ಹರಿಗೆ ಭೂಮಿಯ ಹಕ್ಕು ದೊರಕಿಸಿಕೊಡಬೇಕೆಂದು ತಿಳಿಸಲಾಯಿತು.

ಅಕ್ರಮ ಮದ್ಯಮಾರಾಟಕ್ಕೆ ಸಂಬ0ಧಿಸಿದರ0ತೆ ಜಿಲ್ಲೆಯ ಹೊರವಲಯದ ಕೆಲ ಪ್ರದೇಶಗಳಲ್ಲಿ ದಿನಸಿ ಹಾಗೂ ಇತರೆ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿರುವುದಾಗಿ ಸಮಿತಿ ಸದಸ್ಯರು ತಿಳಿಸಿದರು. ಇದಕ್ಕೆ ಉತ್ತರಿಸಿದ ಅಬಕಾರಿ ಅಧಿಕಾರಿಗಳು, ಮಾರಾಟವಾಗುತ್ತಿರುವುದು ಅಕ್ರಮ ಮದ್ಯವಲ್ಲ. ನಮ್ಮ ಸಿಬ್ಬಂದಿ ಅಗಿಂದಾಗ್ಗೆ ಹೋಗಿ ಪರಿಶೀಲಿಸುತ್ತಿದ್ದಾರೆ ಎಂದರು

ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಾಗಿರುವ ಪ್ರಕರಣಗಳ ತನಿಖೆಯನ್ನು ತ್ವರಿತಗೊಳಿಸಬೇಕು. ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಸಂತ್ರಸ್ತರಿಗೆ ನೀಡಬೇಕಾದ ಪರಿಹಾರ ಧನವನ್ನು ಕಾಲಮಿತಿಯೊಳಗೆ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಪೊಲೀಸ್ ಇಲಾಖೆಗೆ ಸೂಚಿಸಲಾಯಿತು.

ಜಾತಿ ಪ್ರಮಾಣಪತ್ರಗಳನ್ನು ವಿತರಿಸುವಾಗ ಎಚ್ಚರಿಕೆ ವಹಿಸಬೇಕು. ಯಾವುದೇ ಅಕ್ರಮಗಳು ನಡೆಯದಂತೆ ಸಮಾಜ ಕಲ್ಯಾಣ ಇಲಾಖೆಯ ಮೂಲಕ ಸೂಕ್ತ ಪರಿಶೀಲನೆ ನಡೆಸಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳು ತಲುಪುವಂತಾಗಬೇಕು. ಇಡೀ ಜಿಲ್ಲಾಡಳಿತ ಒಂದು ಬಲಿಷ್ಠ ತಂಡವಾಗಿ ಕಾರ್ಯನಿರ್ವಹಿಸುವ ಮೂಲಕ ಈ ಸಮುದಾಯಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು, ಎಂದು ಕರೆ ನೀಡಿದರು.

ಹೊಸದಾಗಿ ನೇಮಕಗೊಂಡ ಜಾಗೃತಿ ಸಮಿತಿ ಸದಸ್ಯರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪ್ರವೀಣ್. ಪಿ ಬಾಗೇವಾಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕನ್ನಿಕಾ ಸಿಕ್ರಿವಾಲ್, ಅಪರ ಜಿಲ್ಲಾಧಿಕಾರಿ ಎಸ್. ಎಂ. ಮಂಗಳ, ಜಿಲ್ಲಾ ಅರಣ್ಯ ಸಂರಕ್ಷಣಾ ಅಧಿಕಾರಿ ಸರಿನಾ ಸಿಕ್ಕಲಿಗರ್, ಎಲ್ಲಾ ತಾಲ್ಲೂಕಿನ ತಹಸೀಲ್ದಾರ್ಗಳು, ಸಮಿತಿ ಸದಸ್ಯರು ಮತ್ತು ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande