
ಕೋಲಾರ, ೧೮ ಏಪ್ರಿಲ್ (ಹಿ.ಸ) :
ಆ್ಯಂಕರ್ : ಮಾಹಿತಿ ಹಕ್ಕು ಕಾಯ್ದೆಯು ಪ್ರಜಾಪ್ರಭುತ್ವದಲ್ಲಿ ಸಾಮಾನ್ಯ ನಾಗರಿಕನಿಗೆ ನಿಜವಾದ ಅಧಿಕಾರವನ್ನು ನೀಡುವ ಶಕ್ತಿಯುತ ಅಸ್ತ್ರವಾಗಿದೆ ಎಂದು ಕೋಲಾರ ಜಿಲ್ಲಾಧಿಕಾರಿ ಡಾ. ಎಂ ಆರ್. ರವಿ ಅಭಿಪ್ರಾಯಪಟ್ಟರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಮತ್ತು ಜಿಲ್ಲಾಡಳಿತದ ಸಹಯೋಗದೊಂದಿಗೆ 'ಮಾಹಿತಿ ಹಕ್ಕು ಅಧಿನಿಯಮ ೨೦೦೫'ರ ಕುರಿತು ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಆಡಳಿತದಲ್ಲಿ ಪಾರದರ್ಶಕತೆ: ಆಡಳಿತವು ಸಾರ್ವಜನಿಕರಿಗೆ ಉತ್ತರದಾಯಿತ್ವವನ್ನು ಹೊಂದಿರಬೇಕು ಮತ್ತು ಈ ನಿಟ್ಟಿನಲ್ಲಿ ಮಾಹಿತಿ ಹಕ್ಕು ಕಾಯ್ದೆಯು ಅತ್ಯಂತ ನಿರ್ಣಾಯಕವಾಗಿದೆ. ಡಿಜಿಟಲೀಕರಣದ ಮಹತ್ವದಿಂದ ಆಡಳಿತದಲ್ಲಿ ಪಾರದರ್ಶಕತೆಯನ್ನು ತರಲು 'ಇ-ಗವರ್ನನ್ಸ್' ಅಳವಡಿಕೆ ಅವಶ್ಯಕವಾಗಿದೆ. ಕಡತಗಳ ಡಿಜಿಟಲೀಕರಣದ ಮೂಲಕ ಸಾರ್ವಜನಿಕರಿಗೆ ಮಾಹಿತಿ ಲಭ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದು ಅವರು ತಿಳಿಸಿದರು.
ಪ್ರತಿಯೊಂದು ಇಲಾಖೆಯಲ್ಲೂ ಸಾರ್ವಜನಿಕ ಮಾಹಿತಿ ಅಧಿಕಾರಿಯ ಪಾತ್ರ ಮುಖ್ಯವಾಗಿದೆ ಮತ್ತು ಈ ಕಾಯ್ದೆಯ ಅಡಿಯಲ್ಲಿ ನಾಗರಿಕರಿಗೆ ಸಮರ್ಪಕ ಮಾಹಿತಿ ನೀಡುವುದು ಸರ್ಕಾರದ ಕರ್ತವ್ಯವಾಗಿದೆ ಎಂದು ಅವರು ಒತ್ತಿ ಹೇಳಿದರು.
ಭೂಸುರಕ್ಷಾ ಯೋಜನೆ ಸೇರಿದಂತೆ ಕಂದಾಯ ಇಲಾಖೆಯ ಹಲವು ಸೇವೆಗಳನ್ನು ಡಿಜಿಟಲೀಕರಣಗೊಳಿಸಲಾಗುತ್ತಿದೆ. ಇದರಿಂದ ಲಕ್ಷಾಂತರ ಪುಟಗಳ ದಾಖಲೆಗಳು ಸಾರ್ವಜನಿಕರಿಗೆ ಆನ್ಲೈನ್ನಲ್ಲಿ ಲಭ್ಯವಾಗುತ್ತಿವೆ. ಸಕಾಲ ಅಡಿಯಲ್ಲಿ ಸಿಗುವ ಸೇವೆಗಳನ್ನು ನಿಗದಿತ ಸಮಯದೊಳಗೆ ಜನರು ವಿಳಂಬವಿಲ್ಲದೆ ಪಡೆದುಕೊಳ್ಳಬಹುದು ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.
ರಾಜ್ಯ ಮಾಹಿತಿ ಆಯುಕ್ತ ಡಾ. ಹರೀಶ್ ಕುಮಾರ್ ಮಾತನಾಡಿ ಪ್ರಜಾಪ್ರಭುತ್ವದಲ್ಲಿ ಸರ್ಕಾರ ಮತ್ತು ಆಡಳಿತ ವ್ಯವಸ್ಥೆಯು ಜನರಿಗೆ ಉತ್ತರದಾಯಿಯಾಗಿರಬೇಕು. ಮಾಹಿತಿ ಹಕ್ಕು ಕಾಯ್ದೆಯು ಈ ವ್ಯವಸ್ಥೆಯನ್ನು ಜನರಿಗೆ ತಲುಪಿಸುವ ಕೊಂಡಿಯಾಗಿದೆ. ಒಬ್ಬ ಸಾಮಾನ್ಯ ವ್ಯಕ್ತಿ ಕೇವಲ ಹತ್ತು ರೂಪಾಯಿಗಳ ವೆಚ್ಚದಲ್ಲಿ ಮಾಹಿತಿ ಪಡೆಯುವ ಮೂಲಕ ಇಡೀ ಆಡಳಿತದ ತಪ್ಪುಗಳನ್ನು ಪ್ರಶ್ನಿಸುವ ಶಕ್ತಿಯನ್ನು ಈ ಕಾಯ್ದೆ ನೀಡಿದೆ ಎಂದು ತಿಳಿಸಿದರು.
ಯುವಜನತೆ ಮತ್ತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಇಂದಿನ ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ಸಮಯ ವ್ಯರ್ಥ ಮಾಡುವುದಕ್ಕಿಂತ ಹೆಚ್ಚಾಗಿ, ಕಾನೂನುಗಳ ಬಗ್ಗೆ, ಅದರಲ್ಲೂ ವಿಶೇಷವಾಗಿ ಮಾಹಿತಿ ಹಕ್ಕು ಕಾಯ್ದೆಯ ಬಗ್ಗೆ ಜ್ಞಾನ ಗಳಿಸಿಕೊಳ್ಳಬೇಕು. ಜವಾಬ್ದಾರಿಯುತ ಪ್ರಜೆಯಾಗಿ ಬೆಳೆದಾಗ ಮಾತ್ರ ನಮ್ಮ ದೇಶದ ಅಭಿವೃದ್ಧಿ ಸಾಧ್ಯ ಎಂದು ಕಿವಿಮಾತು ಹೇಳಿದರು.
ನೆಹರೂ ಅವರ ಕಾಲದ ಒಂದು ಪ್ರಸಂಗವನ್ನು ಉಲ್ಲೇಖಿಸಿದ ಅವರು, ಪ್ರಜಾಪ್ರಭುತ್ವದ ಮೌಲ್ಯ ಮತ್ತು ಸ್ವಾತಂತ್ರ್ಯದ ಮಹತ್ವವನ್ನು ವಿವರಿಸಿದರು. ಅಧಿಕಾರಶಾಹಿಯ ಅಡೆತಡೆಗಳ ನಡುವೆಯೂ ಸಾರ್ವಜನಿಕರು ಮಾಹಿತಿ ಪಡೆಯುವ ಹಕ್ಕನ್ನು ಚಲಾಯಿಸುವಾಗ ಎದುರಾಗುವ ಸವಾಲುಗಳನ್ನು ಹೇಗೆ ಎದುರಿಸಬೇಕು ಎಂಬುದರ ಕುರಿತು ಕಾರ್ಯಾಗಾರದಲ್ಲಿ ಉಪಯುಕ್ತ ಮಾಹಿತಿಯನ್ನು ಹಂಚಿಕೊAಡರು.ಮಾಹಿತಿ ಹಕ್ಕು ಕಾಯ್ದೆಯ ವಿವಿಧ ಮಗ್ಗುಲುಗಳು, ಅರ್ಜಿ ಸಲ್ಲಿಕೆ ವಿಧಾನ ಹಾಗೂ ಅದರಿಂದ ಸಿಗುವ ಪರಿಹಾರಗಳ ಕುರಿತು ಗೋಷ್ಠಿಗಳು ನಡೆದವು.
ರಾಜ್ಯ ಮಾಹಿತಿ ಆಯುಕ್ತೆ ಡಾ. ಬಿ.ಆರ್. ಮಮತ ಅವರು ಮಾತನಾಡಿ ಮಾಹಿತಿ ಹಕ್ಕು ಕಾಯಿದೆಯು ಆಡಳಿತದಲ್ಲಿ ಪಾರದರ್ಶಕತೆಯನ್ನು ಮತ್ತು ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಲು ಇರುವ ಅತ್ಯಂತ ಪ್ರಮುಖ ಸಾಧನವಾಗಿದೆ. ಮಾಹಿತಿ ಹಕ್ಕು ಆಂದೋಲನದ ಇತಿಹಾಸವನ್ನು ಸ್ಮರಿಸಿದ ಅವರು, ರಾಜಸ್ಥಾನದ ಮಜ್ದೂರ್ ಕಿಸಾನ್ ಶಕ್ತಿ ಸಂಘಟನೆ ಮತ್ತು ಅರುಣಾ ರಾಯ್ ಅವರಂತಹ ವ್ಯಕ್ತಿಗಳು ಈ ಹಕ್ಕಿಗಾಗಿ ನಡೆಸಿದ ಹೋರಾಟವನ್ನು ಉಲ್ಲೇಖಿಸಿದರು. ಆಡಳಿತಾತ್ಮಕ ಸಂಸ್ಕೃತಿಯಲ್ಲಿ 'ಅಧಿಕೃತ ರಹಸ್ಯ ಕಾಯಿದೆ'ಯ ಮನಸ್ಥಿತಿಯಿಂದ ಹೊರಬಂದು, ಪಾರದರ್ಶಕತೆಯನ್ನು ಅಳವಡಿಸಿಕೊಳ್ಳುವಂತೆ ಅವರು ಅಧಿಕಾರಿಗಳಿಗೆ ಕರೆ ನೀಡಿದರು.
ಅಪ್ಲಿಕೇಶನ್ಗಳಿಗೆ ಸಂಬAಧಿಸಿದ ಕಾನೂನು ವಿಧಾನಗಳು ಮತ್ತು ಗೌಪ್ಯತೆ ಅಥವಾ ಭದ್ರತೆಯ ಕಾರಣದಿಂದಾಗಿ ಇರುವ ವಿನಾಯಿತಿಗಳ ಬಗ್ಗೆ ಅವರು ವಿವರವಾಗಿ ತಿಳಿಸಿದರು.ಮಾಹಿತಿ ಹಕ್ಕು ಕಾಯಿದೆಯು 'ಸಕಾಲ' ಯೋಜನೆಯೊಂದಿಗೆ ಹೇಗೆ ಸಹಕರಿಸುತ್ತದೆ ಎಂಬುದನ್ನು ವಿವರಿಸಿದ ಅವರು, ಡಿಜಿಟಲ್ ಸಾಧನಗಳು ಮತ್ತು ವಿದ್ಯಾರ್ಥಿ ಐಡಿಗಳನ್ನು ಬಳಸುವುದರಿಂದ ಆಡಳಿತದಲ್ಲಿನ ವಿಳಂಬವನ್ನು ಕಡಿಮೆ ಮಾಡಬಹುದು. ಆರ್ಟಿಐ ವಿಚಾರಣೆಗಳಿಗೆ ಸಮಯಕ್ಕೆ ಸರಿಯಾಗಿ ಪ್ರತಿಕ್ರಿಯಿಸದ ಅಧಿಕಾರಿಗಳು ದಂಡ ತೆರಬೇಕಾಗುತ್ತದೆ ಎಂಬುದನ್ನು ನೆನಪಿಸಿದ ಅವರು, ಇದು ಸಮಯಬದ್ಧ ಸೇವೆಯನ್ನು ಉತ್ತೇಜಿಸುವ ಕ್ರಮವಾಗಿದೆ ಎಂದು ಅಭಿಪ್ರಾಯಪಟ್ಟರು.
ರಾಜ್ಯ ಮಾಹಿತಿ ಆಯುಕ್ತರಾದ ರುದ್ರಣ್ಣ ಹರ್ತಿಕೋಟೆ ಅವರು ಮಾತನಾಡಿ ಸಾರ್ವಜನಿಕರಿಗೆ ಸರಕಾರಿ ಕಚೇರಿಗಳಲ್ಲಿ ನಡೆಯುವ ಆಡಳಿತಾತ್ಮಕ ಪ್ರಕ್ರಿಯೆಗಳ ಬಗ್ಗೆ ಅರಿವು ಮೂಡಿಸುವುದು ಮತ್ತು ಅವುಗಳನ್ನು ಪ್ರಶ್ನಿಸುವ ಶಕ್ತಿಯನ್ನು ನೀಡುವುದು ಈ ಕಾಯ್ದೆಯ ಮುಖ್ಯ ಉದ್ದೇಶವಾಗಿದೆ. ಸಾರ್ವಜನಿಕರು ಕೇಳುವ ಮಾಹಿತಿಯನ್ನು ನಿಗದಿತ ಅವಧಿಯಲ್ಲಿ ಒದಗಿಸುವುದು ಅಧಿಕಾರಿಗಳ ಕರ್ತವ್ಯ. ಮಾಹಿತಿಯನ್ನು ನೀಡಲು ನಿರಾಕರಿಸುವ ಅಥವಾ ಸಕಾರಣವಿಲ್ಲದೆ ವಿಳಂಬ ಮಾಡುವ ಅಧಿಕಾರಿಗಳ ವಿರುದ್ಧ ದಂಡ ವಿಧಿಸುವ ಅಧಿಕಾರವನ್ನು ಆಯೋಗ ಹೊಂದಿದೆ ಎಂದರು.
ಮಾಹಿತಿ ಹಕ್ಕು ಕಾಯ್ದೆಯನ್ನು ವೈಯಕ್ತಿಕ ದ್ವೇಷ ತೀರಿಸಿಕೊಳ್ಳಲು ಅಥವಾ ಬ್ಲ್ಯಾಕ್ಮೇಲ್ ಮಾಡಲು ಬಳಸಬಾರದು. ಸಮಾಜದ ಹಿತದೃಷ್ಟಿಯಿಂದ ಜವಾಬ್ದಾರಿಯುತವಾಗಿ ಬಳಸಬೇಕು ಎಂದು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ತಿಳಿಸಿದರು. ಯುವ ಪೀಳಿಗೆಯು ಅನ್ಯಾಯದ ವಿರುದ್ಧ ಧ್ವನಿ ಎತ್ತಲು ಮತ್ತು ಸರಕಾರದ ಕಾರ್ಯವೈಖರಿಯನ್ನು ಅರ್ಥಮಾಡಿಕೊಳ್ಳಲು ಈ ಕಾಯ್ದೆಯನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳಬೇಕು ಎಂದು ಪ್ರೇರೇಪಿಸಿದರು.
ಅರ್ಜಿಗಳ ವಿಲೇವಾರಿ ವೇಗ ಹೆಚ್ಚಿಸಲು ಆಯೋಗವು ಜಿಲ್ಲಾವಾರು ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುತ್ತಿದ್ದು, ಸಾರ್ವಜನಿಕರಿಂದ ಬರುವ ಅರ್ಜಿಗಳಿಗೆ ಆದ್ಯತೆ ಮೇರೆಗೆ ಪರಿಹಾರ ನೀಡಲಾಗುತ್ತಿದೆ. ರಾಜ್ಯ ಮಾಹಿತಿ ಆಯುಕ್ತರಾದ ಎಸ್. ರಾಜಶೇಖರ್ ಅವರು ಮಾತನಾಡಿ ೧೯೭೫ರ ರಾಜನಾರಾಯಣ ವರ್ಸಸ್ ಉತ್ತರ ಪ್ರದೇಶ ರಾಜ್ಯದ ಪ್ರಕರಣದ ತೀರ್ಪಿನ ನಂತರ, ಮಾಹಿತಿ ಪಡೆಯುವ ಹಕ್ಕನ್ನು ಮೂಲಭೂತ ಹಕ್ಕಿನ ಒಂದು ಭಾಗವಾಗಿ ಸರ್ವೋಚ್ಚ ನ್ಯಾಯಾಲಯ ವ್ಯಾಖ್ಯಾನಿಸಿದೆ. ಈ ಕಾಯ್ದೆಯು ಸಾರ್ವಜನಿಕರಿಗೆ ಸರ್ಕಾರದ ಕೆಲಸ ಕಾರ್ಯಗಳ ಬಗ್ಗೆ ಪಾರದರ್ಶಕತೆಯನ್ನು ಒದಗಿಸುವ ಮುಖ್ಯ ಸಾಧನವಾಗಿದೆ ಎಂದು ಅವರು ವಿವರಿಸಿದರು.
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಕೆಯಾಗುತ್ತಿರುವ ಅರ್ಜಿಗಳ ಬಗ್ಗೆ ಆಯುಕ್ತರು ಕಳವಳ ವ್ಯಕ್ತಪಡಿಸಿದರು. ಅರ್ಜಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಉತ್ತಮ ಲಕ್ಷಣ, ಆದರೆ ಆ ಅರ್ಜಿಯಲ್ಲಿನ ಉದ್ದೇಶ ಪಾರದರ್ಶಕವಾಗಿರಬೇಕು. ಕೆಲವರು ದುರುದ್ದೇಶದಿಂದ ಪದೇ ಪದೇ ಅರ್ಜಿಗಳನ್ನು ಸಲ್ಲಿಸುತ್ತಿದ್ದಾರೆ. ಇದರಿಂದ ಕಾಯ್ದೆಯ ಮೂಲ ಉದ್ದೇಶವೇ ಹಳ್ಳ ಹಿಡಿಯುವ ಆತಂಕವಿದೆ, ಎಂದು ಎಚ್ಚರಿಸಿದರು.
ಅಧಿಕಾರಿಗಳು ಮಾಹಿತಿ ನೀಡಲು ಭಯಪಡಬಾರದು. ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಬಂದಾಗ ನಿಯಮಬದ್ಧವಾಗಿ ಮಾಹಿತಿಯನ್ನು ಒದಗಿಸಬೇಕು. ಕಾನೂನುಬದ್ಧವಾಗಿ ಮಾಹಿತಿ ನೀಡಲು ವಿನಾಯಿತಿ ಇರುವ ಪ್ರಕರಣಗಳನ್ನು ಹೊರತುಪಡಿಸಿ, ಉಳಿದ ವಿಷಯಗಳಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಈ ಕಾಯ್ದೆಯನ್ನು ಜವಾಬ್ದಾರಿಯುತವಾಗಿ ಬಳಸಬೇಕು. ಕಾಯ್ದೆಯ ದುರುಪಯೋಗವು ಅಧಿಕಾರಿಗಳಲ್ಲಿ ಆತಂಕ ಮೂಡಿಸುವುದಲ್ಲದೆ, ನಿಜವಾದ ಫಲಾನುಭವಿಗಳಿಗೆ ನ್ಯಾಯ ಸಿಗದಂತೆ ಮಾಡುತ್ತದೆ ಎಂದು ಆಯುಕ್ತರು ತಿಳಿಸಿದರು.
ರಾಜ್ಯ ಮಾಹಿತಿ ಆಯುಕ್ತರಾದ ಬದ್ರುದ್ದಿನ್ ಅವರು ಮಾತನಾಡಿ ಇಂದಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾ ಅಥವಾ ಪತ್ರಿಕೆಗಳಲ್ಲಿ ಬರುವ ಮಾಹಿತಿಯನ್ನೇ ಅಂತಿಮ ಎಂದು ನಂಬುವ ಪ್ರವೃತ್ತಿ ಹೆಚ್ಚಾಗಿದೆ. ಆದರೆ, ಅಧಿಕೃತವಾದ ದಾಖಲೆಗಳನ್ನು ಪಡೆಯಲು ಮಾಹಿತಿ ಹಕ್ಕು ಕಾಯ್ದೆಯೇ ಸರಿಯಾದ ದಾರಿ. ಸಾರ್ವಜನಿಕ ಕೆಲಸಗಳಲ್ಲಿನ ಲೋಪದೋಷಗಳನ್ನು ಪತ್ತೆ ಹಚ್ಚಲು ಮತ್ತು ಭ್ರಷ್ಟಾಚಾರವನ್ನು ತಡೆಗಟ್ಟಲು ಈ ಕಾಯ್ದೆಯನ್ನು ಪ್ರತಿಯೊಬ್ಬರೂ ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳು ಮತ್ತು ಯುವಜನತೆ ಕೇವಲ ಪಠ್ಯಪುಸ್ತಕಗಳಿಗೆ ಸೀಮಿತವಾಗದೆ, ಸಾಮಾಜಿಕ ಜವಾಬ್ದಾರಿಯನ್ನು ಅರಿತುಕೊಳ್ಳಬೇಕು. ಸರ್ಕಾರಿ ಯೋಜನೆಗಳು, ಸೌಲಭ್ಯಗಳು ಮತ್ತು ಸಾರ್ವಜನಿಕ ಆಸ್ತಿಗಳ ರಕ್ಷಣೆಗೆ ಸಂಬAಧಿಸಿದAತೆ ಮಾಹಿತಿ ಪಡೆಯುವ ಕಲೆ ಕಲಿಯಬೇಕು. ಉದಾಹರಣೆಗೆ, ಶಾಲೆಗಳು, ಆಸ್ಪತ್ರೆಗಳು ಅಥವಾ ಸಾರ್ವಜನಿಕ ಭೂಮಿಯ ಒತ್ತುವರಿ ತಡೆಗಟ್ಟುವಲ್ಲಿ ಈ ಕಾಯ್ದೆಯ ಪಾತ್ರ ಮಹತ್ವದ್ದು ಎಂದು ಅವರು ವಿವರಿಸಿದರು.
ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸುವುದು ಹೇಗೆ, ಅದನ್ನು ಯಾವ ಹಂತದಲ್ಲಿ ಬಳಸಬೇಕು ಮತ್ತು ದಾಖಲೆಗಳನ್ನು ಪಡೆಯುವ ವಿಧಾನಗಳ ಕುರಿತು ಆಯುಕ್ತರು ತಿಳುವಳಿಕೆ ನೀಡಿದರು. ಅರ್ಜಿ ಸಲ್ಲಿಸುವ ಮುನ್ನ ವಿಷಯದ ಬಗ್ಗೆ ಅಧ್ಯಯನ ನಡೆಸಿ, ಸ್ಪಷ್ಟವಾಗಿ ಕೇಳಿದರೆ ಮಾತ್ರ ನಮಗೆ ನ್ಯಾಯಯುತ ಉತ್ತರ ಸಿಗುತ್ತದೆ. ಕಾಯ್ದೆಯ ದುರುಪಯೋಗವಾಗದಂತೆ, ಸಾರ್ವಜನಿಕ ಹಿತಾಸಕ್ತಿಯಿಂದ ಅರ್ಜಿಗಳನ್ನು ಸಲ್ಲಿಕೆ ಮಾಡುವುದು ನಾಗರಿಕರ ಕರ್ತವ್ಯ ಎಂದು ಅವರು ಎಚ್ಚರಿಸಿದರು.
ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ. ಬಿ.ಕೆ ರವಿ ಮಾತನಾಡಿ ಇಂದಿನ ದಿನಗಳಲ್ಲಿ 'ಮಾಹಿತಿ ಅಂದರೆ ಹಣ' ಇದ್ದಂತೆ. ಮಾಹಿತಿ ಹಕ್ಕು ಕಾಯಿದೆಯು ೨೦೦೫ರಲ್ಲಿ ಜಾರಿಗೆ ಬಂದಿದ್ದು, ಇದು ಜನಸಾಮಾನ್ಯರಿಗೆ ತಮ್ಮ ಹಕ್ಕುಗಳನ್ನು ಪಡೆಯಲು ಮತ್ತು ಸರ್ಕಾರಿ ವ್ಯವಸ್ಥೆಯಲ್ಲಿನ ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಉತ್ತಮ ಅವಕಾಶ ಕಲ್ಪಿಸಿದೆ. ಶಿಕ್ಷಣ ಸಂಸ್ಥೆಗಳು ಮತ್ತು ವಿದ್ಯಾರ್ಥಿಗಳು ಮಾಹಿತಿ ಹಕ್ಕು ಕಾಯಿದೆಯನ್ನು ಕೇವಲ ದೂರು ನೀಡಲು ಬಳಸುವ ಬದಲು, ಸಮಾಜದ ಅಭಿವೃದ್ಧಿ ಹಾಗೂ ರಚನಾತ್ಮಕ ಕಾರ್ಯಗಳಿಗೆ ಬಳಸಬೇಕೆಂದು ಅವರು ಸಲಹೆ ನೀಡಿದರು.
ವಿಶ್ವವಿದ್ಯಾಲಯಗಳು ಮತ್ತು ಜಿಲ್ಲಾಡಳಿತಗಳು ಒಂದಾಗಿ ಕಾರ್ಯನಿರ್ವಹಿಸುವ ಮೂಲಕ ಮಾಹಿತಿ ಹಕ್ಕು ಕಾಯಿದೆಯ ಬಗ್ಗೆ ಸಾರ್ವಜನಿಕರಲ್ಲಿ, ವಿಶೇಷವಾಗಿ ಗ್ರಾಮೀಣ ಭಾಗದ ಜನರಲ್ಲಿ ಹೆಚ್ಚಿನ ಅರಿವು ಮೂಡಿಸಬೇಕೆಂದು ಒತ್ತಿ ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯ ಮಾಹಿತಿ ಆಯುಕ್ತರಾದ ರಾಜಶೇಖರ್, ಸಿಂಡಿಕೇಟ್ ಸದಸ್ಯ ಗೋಪಾಲ ಗೌಡ, ಕುಲಸಚಿವ ಪ್ರೊ. ಎನ್ ಲೋಕನಾಥ್, ಕುಮುದ, ಮುಖ್ಯ ಲೆಕ್ಕಾಧಿಕಾರಿ ವಸಂತಕುಮಾರ್, ಸೇರಿದಂತೆ ವಿಶ್ವವಿದ್ಯಾಲಯದ ಅಧಿಕಾರಿಗಳು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್