
ವಿಜಯಪುರ, 18 ಏಪ್ರಿಲ್ (ಹಿ.ಸ.) :
ಆ್ಯಂಕರ್ : ವಿಜಯಪುರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಬ್ಬರು ಸರ್ಕಾರಿ ಸಿಬ್ಬಂದಿಗಳು ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಘಟನೆ ಇಂದು ನಡೆದಿದೆ.
ಫಿರ್ಯಾದಿದಾರರು ಲೋಕಾಯುಕ್ತ ವಿಜಯಪುರ ಪೊಲೀಸ್ ಠಾಣೆಗೆ ನೀಡಿದ ದೂರಿನ ಪ್ರಕಾರ, ಭಾರತ್ ಪೆಟ್ರೋಲಿಯಂಗೆ ಸಂಬಂಧಿಸಿದ ಪೆಟ್ರೋಲ್ ಬಂಕ್ ತೆರೆಯಲು ಸ್ಥಳದ ನಕ್ಷೆ ಅನುಮೋದನೆ ನೀಡುವ ಸಂಬಂಧ ದ್ವಿತೀಯ ದರ್ಜೆ ಸಹಾಯಕ ಅರವಿಂದ ಪವಾರ ಹಾಗೂ ಕಂಪ್ಯೂಟರ್ ಆಪರೇಟರ್ ಅಯುಬ ತೊನಶ್ಯಾಳ ಅವರು ರೂ.15,000 ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು.
ಈ ದೂರಿನ ಆಧಾರದ ಮೇಲೆ ಲೋಕಾಯುಕ್ತ ಪೊಲೀಸರು ಮಧ್ಯಾಹ್ನ ಟ್ರ್ಯಾಪ್ ಕಾರ್ಯಾಚರಣೆ ನಡೆಸಿ, ಆರೋಪಿತರು ಲಂಚದ ಹಣ ಸ್ವೀಕರಿಸುತ್ತಿದ್ದ ವೇಳೆ ಅವರನ್ನು ಬಲೆಗೆ ಬೀಳಿಸಿ ಬಂಧಿಸಿದರು.
ಅವರಿಂದ ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಈ ಕಾರ್ಯಾಚರಣೆಯನ್ನು ಕರ್ನಾಟಕ ಲೋಕಾಯುಕ್ತ ವಿಜಯಪುರ ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ ಪೊಲೀಸ್ ಉಪಾಧೀಕ್ಷಕರ ನೇತೃತ್ವದಲ್ಲಿ ಇನ್ಸ್ಪೆಕ್ಟರ್ಗಳು ಮತ್ತು ಸಿಬ್ಬಂದಿಗಳ ತಂಡ ಯಶಸ್ವಿಯಾಗಿ ನಡೆಸಿದೆ. ಪ್ರಕರಣದ ತನಿಖೆ ಮುಂದುವರಿದಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande