
ವಿಜಯಪುರ, 18 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಕೆಲಸದ ಸ್ಥಳಗಳಲ್ಲಿ ಹಿಂದೂ ಯುವತಿಯರಿಗೆ ಕಿರುಕುಳ ಹೆಚ್ಚುತ್ತಿದೆ ಎಂದು ಆರೋಪಿಸಿ, ಅವರಿಗೆ ಸೂಕ್ತ ಭದ್ರತೆ ಒದಗಿಸಲು ಹಿಂದೂಪರ ಸಂಘಟನೆಗಳ ಮುಖಂಡರು ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ದಯಾಸಾಗರ ಪಾಟೀಲ ನೇತೃತ್ವದಲ್ಲಿ ಮನವಿ ಸಲ್ಲಿಸಿದ ಅವರು, ಮಹಾರಾಷ್ಟ್ರದ ನಾಸಿಕ್ನಲ್ಲಿರುವ ಬಹುರಾಷ್ಟ್ರೀಯ ಕಂಪನಿ ಟಿಸಿಎಸ್ ನಲ್ಲಿ ನಡೆದ ಘಟನೆ ಉದಾಹರಣೆಯಾಗಿ ಉಲ್ಲೇಖಿಸಿದರು.
ಮುಖಂಡರು ಮಾತನಾಡಿ, ಬಹುರಾಷ್ಟ್ರೀಯ ಕಂಪನಿಗಳಲ್ಲಿ ಹಿಂದೂ ಧಾರ್ಮಿಕ ಆಚರಣೆಗಳಿಗೆ ಧಕ್ಕೆಯಾಗುತ್ತಿರುವುದು ಹಾಗೂ ಅವಮಾನಿಸುವ ಘಟನೆಗಳು ನಡೆಯುತ್ತಿವೆ ಎಂದು ಆರೋಪಿಸಿದರು. ದೇಶದ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸುವ ಇಂತಹ ಕಂಪನಿಗಳ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸಿ, ಕಠಿಣ ಕಾನೂನು ರೂಪಿಸಬೇಕು ಎಂದು ಆಗ್ರಹಿಸಿದರು.
ದಯಾಸಾಗರ ಪಾಟೀಲ ಮಾತನಾಡಿ, ವಿಜಯಪುರ ಜಿಲ್ಲೆಯಲ್ಲಿಯೂ ವಿವಿಧ ಸಮುದಾಯಗಳ ಉದ್ಯೋಗಿಗಳು ಕೆಲಸ ಮಾಡುತ್ತಿರುವ ಶಿಕ್ಷಣ ಸಂಸ್ಥೆಗಳು, ಆರೋಗ್ಯ ಕೇಂದ್ರಗಳು, ತರಬೇತಿ ಸಂಸ್ಥೆಗಳು ಹಾಗೂ ಸಣ್ಣ ಕೈಗಾರಿಕೆಗಳಿವೆ. ಎಲ್ಲ ಉದ್ಯೋಗಿಗಳಿಗೆ ಸುರಕ್ಷಿತ ಹಾಗೂ ಗೌರವಯುತ ಕೆಲಸದ ವಾತಾವರಣ ಕಲ್ಪಿಸುವುದು ಅತ್ಯಗತ್ಯ ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ ಅವರು, ಕೆಲಸದ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸುವುದು, ಉದ್ಯೋಗಿಗಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದು, ದೂರು ಪರಿಹಾರ ವ್ಯವಸ್ಥೆ ಬಲಪಡಿಸುವುದು, ಕಿರುಕುಳ ಪ್ರಕರಣಗಳ ವಿರುದ್ಧ ಕಠಿಣ ನೀತಿ ಜಾರಿಗೊಳಿಸುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಜೊತೆಗೆ ತ್ವರಿತ ಸ್ಪಂದನೆಗಾಗಿ ಸಹಾಯವಾಣಿ ಸಂಖ್ಯೆಯನ್ನು ಪ್ರಕಟಿಸುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಕೃಷ್ಣಾ ಗುನ್ಹಾಳಕರ, ಪ್ರೇಮಾನಂದ ಬಿರಾದಾರ, ಮಹೇಂದ್ರಕುಮಾರ ನಾಯಕ, ಕುಮಾರ ಗಡಗಿ, ಸುನೀಲ ಭೈರವಾಡಗಿ, ಶಂಕರ ಹೂಗಾರ, ಸಿದ್ದು ಕಲ್ಲೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande