
ಕೋಲಾರ,೧೫ ಏಪ್ರಿಲ್ (ಹಿ.ಸ) :
ಆ್ಯಂಕರ್ : ತಾರತಮ್ಯ ಮತ್ತು ಭೇದಭಾವವಿಲ್ಲದ ಸಮಾಜ ನಿರ್ಮಾಣ ಮಾಡಲು ನಮ್ಮಲ್ಲಿ ‘ತಾಯ್ತನ' ಮತ್ತು 'ಮಗುತನ'ದ ಗುಣಗಳು ಜಾಗೃತವಾಗುವುದು ಅಗತ್ಯ ಎಂದು ನಾಡೋಜ ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.
ಕೋಲಾರ ತಾಲ್ಲೂಕಿನ ತೇರಹಳ್ಳಿ ಬೆಟ್ಟದ ಆದಿಮ ಸಾಂಸ್ಕೃತಿಕ ಕೇಂದ್ರದ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಮಕ್ಕಳ ಶಿಬಿರವನ್ನು ರಾಗಿ ಬೀಸುವ ಕಲ್ಲಿಗೆ ರಾಗಿ ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು. ತಾಯಿಯು ಎಂದಿಗೂ ಮೇಲು-ಕೀಳು, ದೊಡ್ಡವರು-ಚಿಕ್ಕವರು ಅಥವಾ ಗಂಡು-ಹೆಣ್ಣು ಎಂಬ ಭೇದ ಮಾಡುವುದಿಲ್ಲ. ಇಂತಹ ತಾರತಮ್ಯವಿಲ್ಲದ ವಿಶಾಲ ಮನೋಧರ್ಮವೇ ತಾಯ್ತನ. ಹಾಗೆಯೇ ಮಗುವಿನಲ್ಲಿ ಸದಾ ಕುತೂಹಲ ಮತ್ತು ಕಲಿಯುವ ಆಸಕ್ತಿ ಇರುತ್ತದೆ. ಮಕ್ಕಳ ಶಿಬಿರಗಳ ನಿಜವಾದ ಅನನ್ಯತೆ ಹಾಗೂ ಸಾರ್ಥಕತೆ ಇರುವುದೇ ಭೇದಭಾವವಿಲ್ಲದ ಈ ಮಗುತನವನ್ನು ಪೋಷಿಸುವುದರಲ್ಲಿ ಎಂದು ಅವರು ಮಾರ್ಮಿಕವಾಗಿ ನುಡಿದರು.
ಇಂದಿನ ಕಾಲಘಟ್ಟದಲ್ಲಿ ಮಾನವೀಯತೆಯ ಜಾಗವನ್ನು ಅಮಾನವೀಯತೆ ಆಕ್ರಮಿಸಿದೆ ಹಾಗೂ ವಿವೇಕದ ಸ್ಥಾನದಲ್ಲಿ ಅವಿವೇಕ ಮನೆಮಾಡಿದೆ. ಜಾತಿ ವ್ಯವಸ್ಥೆ ವಿನಾಶವಾಗುವ ಬದಲು ಅದು ಮತ್ತಷ್ಟು ವಿಕಾರವಾಗಿ ಬೆಳೆಯುತ್ತಿರುವುದು ವಿಷಾದನೀಯ. ಮಾನವೀಯ ಮೌಲ್ಯಗಳ ಬದಲಿಗೆ ಮತೀಯತೆ ಹರಡುತ್ತಿರುವ ಇಂತಹ ದುರಿತ ಕಾಲದಲ್ಲಿ ಮಕ್ಕಳ ಎಳೆಯ ಮನಸ್ಸಿನಲ್ಲಿ ಡಾ. ಬಿ.ಆರ್. ಅಂಬೇಡ್ಕರ್, ಮಹಾತ್ಮ ಗಾಂಧಿ, ಗೌತಮ ಬುದ್ಧ, ಬಸವಣ್ಣ, ಸೂಫಿ ಸಂತರು ಹಾಗೂ ತತ್ವಪದಕಾರರ ಆಶಯಗಳನ್ನು ಬಿತ್ತಬೇಕಾದ ತುರ್ತು ಅಗತ್ಯವಿದೆ ಎಂದು ಕರೆ ನೀಡಿದರು.
ರಾಗಿ ಬೀಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ್ದನ್ನು ಪ್ರಸ್ತಾಪಿಸಿದ ಅವರು, ಹಳೆಯದನ್ನು ಅಂಟಿಸಿಕೊ0ಡು ಏನು ಮಾಡುವುದೆಂದು ಕೆಲವರು ಪ್ರಶ್ನಿಸಬಹುದು. ಆದರೆ ಹಳೆಯದು ನಮ್ಮ ನೆಲದ ಸಂಪ್ರದಾಯದ ಭಾಗವಾಗಿದೆ. ಯಾವುದರಲ್ಲಿ ಚಲನಶೀಲತೆ ಮತ್ತು ನಿರಂತರ ಬೆಳವಣಿಗೆ ಇರುವುದಿಲ್ಲವೋ ಅದು ಕೇವಲ ಸ್ಥಗಿತಗೊಂಡ ಸಂಪ್ರದಾಯವಾಗುತ್ತದೆ. ಆದರೆ ಸಂಸ್ಕೃತಿಯ ಪರಂಪರೆಯು ಸದಾ ಚಲನಶೀಲವಾಗಿರಬೇಕು ಎಂದು ತಿಳಿಸಿದರು.
ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ಅಂಗೀಕಾರವಾಗುವ ಮೊದಲೇ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಪ್ರಜಾಪ್ರಭುತ್ವದ ಅಗತ್ಯವನ್ನು ಪ್ರತಿಪಾದಿಸಿದ್ದರು. ಆರ್ಥಿಕ ಪ್ರಜಾಪ್ರಭುತ್ವ ಗಟ್ಟಿಯಾಗಿದ್ದಾಗ ಮಾತ್ರ ರಾಜಕೀಯ ಪ್ರಜಾಪ್ರಭುತ್ವ ಯಶಸ್ವಿಯಾಗಲು ಸಾಧ್ಯ. ಎಲ್ಲಕ್ಕಿಂತ ಮಿಗಿಲಾಗಿ ದೇಶಕ್ಕೆ ಸಾಮಾಜಿಕ ಪ್ರಜಾಪ್ರಭುತ್ವ ಅತ್ಯಗತ್ಯ ಎಂಬುದು ಅಂಬೇಡ್ಕರ್ ಅವರ ಬಲವಾದ ನಿಲುವಾಗಿತ್ತು. ಸಮಾನತೆ, ಸೋದರತೆ ಮತ್ತು ಸ್ವಾತಂತ್ರ್ಯ ಎಂಬ ಈ ಮೂರು ಆಶಯಗಳೇ ಪ್ರಜಾಪ್ರಭುತ್ವದ ಅಡಿಗಲ್ಲುಗಳು. ಪ್ರಜಾಪ್ರಭುತ್ವ ಎಂದರೆ ಕೇವಲ ಚುನಾವಣೆಗಳಲ್ಲ. ಚುನಾವಣೆ ಅದರ ಒಂದು ಭಾಗವಷ್ಟೇ. ನಿಜವಾದ ಪ್ರಜಾಪ್ರಭುತ್ವವು ಸಮಾಜದಲ್ಲಿ ಸಮಾನತೆ, ಸೌಹಾರ್ದತೆ ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನು ಒಳಗೊಂಡಿರಬೇಕು ಎಂಬ ತಾತ್ವಿಕತೆಯನ್ನು ಬರಗೂರು ರಾಮಚಂದ್ರಪ್ಪ ಅವರು ಈ ಸಂದರ್ಭದಲ್ಲಿ ನೆನಪಿಸಿದರು.
ಮುಖ್ಯಮಂತ್ರಿಗಳ ಮಾದ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಮಾತನಾಡಿ ಮೊಬೈಲ್ ವ್ಯಸನದಿಂದ ಮಕ್ಕಳು ಸಂವೇದನೆ ಕಳೆದುಕೊಳ್ಳುತ್ತಿದ್ದಾರೆ.ಹಿಂದೆ ಮಕ್ಕಳಿಗೆ ಊಟ ಮಾಡುವಾಗ ತಾಯಿ ಆಕಾಶ ತೋರಿಸುತ್ತಿದ್ದರು.ಆದರೆ ಈಗ ಮೊಬೈಲ್ ತೋರಿಸ ಬೇಕಾಗಿದೆ. ಒಂದೇ ಮನೆಯಲ್ಲಿದ್ದರೂ ಅಪ್ಪ, ಅಮ್ಮ ಮಕ್ಕಳ ನಡುವೆ ಸಂವಹನೆ ಮತ್ತು ಕೌಟುಂಬಿಕ ಸಂಬ0ಧಗಳ ಬೆಸುಗ ಇರುವುದಿಲ್ಲ. ಎಲ್ಲರೂ ಬೇರೆ ಬೇರೆ ಕೊಠಡಿಯಲ್ಲಿ ವಾಸ ಮಾಡುತ್ತಿದ್ದು, ಪ್ರತಿಯೊಬರಲ್ಲಿಯೂ ಮೊಬೈಲ್ ಇರುತ್ತದೆ. ಹಿಂದೆ ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡಿ ಪರಸ್ಪರ ಮಾತನಾಡುತ್ತಿದ್ದರು. ಈಗ ಊಟಕ್ಕೆ ಕರೆಯುವ ಬದಲು ಅಡುಗೆ ಆದ ಮೇಲೆ ಮೆಸೇಜ್ ಕಳುಹಿಸಲಾಗುತ್ತದೆ. ಮೊಬೈಲ್ ವ್ಯಸನದಿಂದಾಗಿ ಮನುಷ್ಯ ಸಂಬ0ಧಗಳು ಮರೆಯಾಗುತ್ತಿವೆ ಎಂದು ಕಳವಳವ್ಯಕ್ತಪಡಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಮಂಜುನಾಥ ಸ್ವಾಮಿ ಈ ಶಿಬಿರ ಮತ್ತೊಂದು ಶಾಲೆಯಾಗದೆ ವಿಭಿನ್ನವಾಗಿ ಮಕ್ಕಳು ಬದಕು ಕಟ್ಟಿಕೊಳ್ಳುವ ಶಿಬಿರವಾಗಲಿ ಎಂದು ಹರಸಿದರು.
ಆದಿಮ ಸಂಸ್ಥೆಯ ಎನ್. ಮುನಿಶಾಮಿ ಆದಿಮ ಸಾಂಸ್ಕೃತಿ ಸಂಸ್ಥೆಯ ಅಧ್ಯಕ್ಷ ಈ ಬಾರಿ ಮತ್ತೆ ಮೊಳೆಯಲಿ ಮಾನವೀಯತೆಯ ಆಶಯದೊಂದಿಗೆ ಮಕ್ಕಳ ಮೇಳ ಹಮ್ಮಿಕೊಳ್ಳಲಾಗಿದೆ. ರಾಜ್ಯಾದ್ಯಂತ ನೂರ ಎಂಬತ್ತು ಮಕ್ಕಳು ಭಾಗಿಯಾಗಿರುವುದಾಗಿ ತಿಳಿಸಿದರು.
ಸಂಸ್ಥೆಯ ಕಾರ್ಯದರ್ಶಿ ಹಾ.ಮ ರಾಮಚಂದ್ರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಗೋವಿಂದಪ್ಪ ಕಾರ್ಯಕ್ರಮ ನಿರೂಪಿಸಿದರು. ಆದಿಮ ರಂಗ ಶಿಕ್ಷಣ ವಿದ್ಯಾರ್ಥಿಗಳು ಜಡೆ ಕೋಲಾಟ ಮತ್ತು ಕಂಸಾಳ ನೃತ್ಯ ಪ್ರದರ್ಶನ ನಡೆಸಿದರು. ರಾಜಪ್ಪ ಮತ್ತು ಸಂಗಡಿಗರು ಆಶಯ ಗೀತೆ ಹಾಡಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್