
ಕೋಲಾರ ೦೧ ಏಪ್ರಿಲ್ (ಹಿ.ಸ) :
ಆ್ಯಂಕರ್ : ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ವೈಜ್ಞಾನಿಕವಾಗಿ ಬೆಲೆ ಸಿಗದೆ ರೈತರು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ನಷ್ಟವನ್ನು ಕ್ರಮೇಣವಾಗಿ ಕಡಿಮೆ ಮಾಡಿಕೊಂಡು ದೇಶದ ಜನರಿಗೆ ಆಹಾರ ಉತ್ಪನ್ನಗಳನ್ನು ಬೆಳೆದುಕೊಡಬೇಕಾದ ಕಾಯಕ ವೃತ್ತಿ ರೈತರು ಮಾಡಬೇಕಾಗಿದೆ ಎಂದು ಭಾರತೀಯ ಕಿಸಾನ್ ಸಂಘದ ರಾಷ್ಟ್ರೀಯ ಅಧ್ಯಕ್ಷ ಕೆ. ಸಾಯಿ ರೆಡ್ಡಿ ಅಭಿಮತ ವ್ಯಕ್ತಪಡಿಸಿದರು.
ಕೋಲಾರದ ಬಿಕೆಎಸ್ ಕಾರ್ಯಾಲಯದಲ್ಲಿ ಜಿಲ್ಲಾ ಮಟ್ಟದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಕಿಸಾನ್ ಸಂಘಕ್ಕೆ ಮುಂದಿನ ವರ್ಷ ೫೦ ಸಂಭ್ರಮ ಕಾಣಲಿದ್ದು ದೇಶದ ಈಗ ೭೩ ಗ್ರಾಮಗಳಲ್ಲಿ ಇರುವ ಬಿಕೆಎಸ್ ಮುಂದಿನ ಸದಸ್ಯತ್ವ ಅಭಿಯಾನ ವೇಳೆಗೆ ಒಂದು ಲಕ್ಷ ಗ್ರಾಮಗಳಲ್ಲಿ ಕಿಸಾನ್ ಸಂಘದ ಗ್ರಾಮ ಸಮಿತಿಗಳು ಕಾರ್ಯನಿರ್ವಹಿಸಲು ಈಗ ಇಲ್ಲಿಂದಲೇ ಸಕ್ರಿಯವಾಗಿ ಪದಾಧಿಕಾರಿಗಳು ಕಾರ್ಯನಿರ್ವಹಿಸಬೇಕಾಗಿದೆ. ಕೋಲಾರ ಜಿಲ್ಲೆಯಲ್ಲಿ ಕನಿಷ್ಠ ೫೦೦ ಗ್ರಾಮಗಳಿಗೆ ತಲುಪಿ ಗ್ರಾಮಗಳಲ್ಲಿ ಕೃಷಿ ಸಮಸ್ಯೆಗಳು ರೈತರ ಬಿಕ್ಕಟ್ಟುಗಳನ್ನು ಬಗೆಹರಿಸಲು ಆಳುವ ಸರ್ಕಾರಗಳ ಗಮನ ಸೆಳೆಯುವ ಕಾರ್ಯ ಮಾಡಬೇಕಾಗಿದೆ ಜೊತೆಗೆ ಗ್ರಾಮಗಳಲ್ಲಿ ಪಂಚ ಪರಿವರ್ತನೆ ಮೂಲಕ ಐಕ್ಯತೆ ಕಾಪಾಡಿಕೊಳ್ಳುವ ಸಂಕಲ್ಪಗಳು ಪ್ರತಿಯೊಬ್ಬರಲ್ಲೂ ಬರವಂತೆ ಮಾಡಿ ಹಳ್ಳಿಗಳಿಂದಲೇ ಸಮಾಜ ಕಟ್ಟುವ ದೇಶ ಕಟ್ಟುವ ಕೆಲಸ ಆಗಬೇಕಾಗಿದೆ ಎಂದರು.
ರಾಸಾಯನಿಕ ಗೊಬ್ಬರಗಳು ಕಡಿಮೆ ಬಳಕೆ ಮಾಡಿ ಮಣ್ಣಿನ ಆರೋಗ್ಯ ಕಾಪಾಡಿಕೊಂಡು ಗೋ ಆಧಾರಿತ ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಮೂಲಕ ರೈತರ ಕೃಷಿ ಖರ್ಚು ವೆಚ್ಚಗಳನ್ನು ಕಡಿಮೆ ಮಾಡಿಕೊಳ್ಳುವ ಕೌಶಲ್ಯವನ್ನು ತುಂಬಾ ಬೇಕಾಗಿದೆ ಜೊತೆ ಜೊತೆಗೆ ರೈತರು ಬೆಳೆದ ಬೆಳೆಗೆ ನಿರ್ದಿಷ್ಟವಾದ ಬೆಲೆ ನಿಗದಿಗೆ ಹೋರಾಟಗಳು ಹಮ್ಮಿಕೊಳ್ಳಬೇಕಾಗಿದೆ ಎಂದರು.
ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಕೃಷ್ಣ ನದಿ ನೀರು ಹಂಚಿಕೆ ಬಗ್ಗೆ ಕೇಂದ್ರ ಮತ್ತು ಕರ್ನಾಟಕ ಆಂಧ್ರ ಸರ್ಕಾರಗಳ ಗಮನ ಸೆಳೆಯುವ ಕಾರ್ಯ ಮಾಡಲು ಕಿಸಾನ್ ಸಂಘದಲ್ಲಿ ಇರುವ ನಿವೃತ್ತ ನೀರಾವರಿ ತಜ್ಞರು ತಂಡಗಳೊAದಿಗೆ ಸಂಪರ್ಕ ವ್ಯವಸ್ಥೆ ಮಾಡಲಾಗುವುದು. ಅವರು ಅಧ್ಯಯನದ ಜೊತೆಗೆ ಸಂವಾದ ಕಾರ್ಯಕ್ರಮಗಳು ಮೂಲಕ ಜನಜಾಗೃತಿಯೊಂದಿಗೆ ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳು ಮತ್ತು ಸರ್ಕಾರಗಳು ನೀರಾವರಿ ಬೇಡಿಕೆಯನ್ನು ಈಡೇರಿಸಬೇಕಾದ ವಾತಾವರಣ ಸೃಷ್ಟಿ ಮಾಡಬೇಕು. ಆಗಲೇ ಕಾರ್ಯ ಸಾಧ್ಯವಾಗಲಿದೆ. ಆದುದರಿಂದ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ನಿಮ್ಮೊಂದಿಗೆ ಭಾರತೀಯ ಕಿಸಾನ್ ಸಂಘ ರಾಷ್ಟ್ರೀಯ ಮಟ್ಟದ ಪದಾಧಿಕಾರಿಗಳು ಸರ್ಕಾರಗಳ ಗಮನಕ್ಕೆ ಅಂಕಿ ಅಂಶಗಳ ಸಮೇತ ತರಲು ಕಾರ್ಯನಿರ್ವಹಿಸಲಾಗುವುದು ಎಂಬ ಸ್ಪಷ್ಟನೆ ನೀಡಿದರು.
ಸಭೆಯಲ್ಲಿ ಬಿಕೆಎಸ್ ದಕ್ಷಿಣ ಪ್ರಾಂತ ಉಪಾಧ್ಯಕ್ಷ ಅಪ್ಪಾಜಿಗೌಡ, ಸಂಘಟನಾ ಕಾರ್ಯದರ್ಶಿ ನಾರಾಯಣಸ್ವಾಮಿ, ಕಾರ್ಯಕಾರಿ ಸದಸ್ಯರಾದ ಇ. ಸುಬ್ರಮಣಿ, ಅಮೃತ, ಜಿಲ್ಲಾ ಉಪಾಧ್ಯಕ್ಷ ಅರಹಳ್ಳಿ ಶ್ರೀನಿವಾಸ ಗೌಡ, ಜಿಲ್ಲಾ ಕಾರ್ಯದರ್ಶಿ ಕೆ. ಗೋಪಾಲರೆಡ್ಡಿ, ಜಿಲ್ಲಾ ಖಜಾಂಚಿ ವಕೀಲ ವಿ. ಜಯಪ್ಪ, ಕೋಲಾರ ತಾಲೂಕು ಅಧ್ಯಕ್ಷ ನಡುಪಳ್ಳಿ ಕೃಷ್ಣಮೂರ್ತಿ, ಕಾರ್ಯದರ್ಶಿ ಪೇಟೆ ಗಂಗಾಧರ್, ಮುಳಬಾಗಿಲು ತಾಲೂಕು ಅಧ್ಯಕ್ಷ ಆರ್. ನಾರಾಯಣ ಗೌಡ, ಕಾರ್ಯದರ್ಶಿ ಮುನಿರಾಮಯ್ಯ, ಸಂಘಟನಾ ಕಾರ್ಯದರ್ಶಿ ಎಂ. ಚಂಗಲರಾಯಪ್ಪ, ಖಜಾಂಚಿ ಕೆ. ಎನ್. ಕೃಷ್ಣಪ್ಪ ಮತ್ತಿತರ ಪದಾಧಿಕಾರಿಗಳು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್