ಗ್ರಾಮಗಳಲ್ಲಿ ಸಾಮರಸ್ಯ ಜೀವನ ನಡೆಸಲು ಭಾರತೀಯ ಕಿಸಾನ್ ಸಂಘದ ರಾಷ್ಟ್ರೀಯ ಅಧ್ಯಕ್ಷ ಸಾಯಿರೆಡ್ಡಿ ಕರೆ
ಗ್ರಾಮಗಳಲ್ಲಿ ಸಾಮರಸ್ಯ ಜೀವನ ನಡೆಸಲು ಭಾರತೀಯ ಕಿಸಾನ್ ಸಂಘದ ರಾಷ್ಟ್ರೀಯ ಅಧ್ಯಕ್ಷ ಸಾಯಿರೆಡ್ಡಿ ಕರೆ
ಮುಳಬಾಗಿಲು ತಾಲೂಕಿನ ಅರಹಳ್ಳಿ ಗ್ರಾಮದ ಕಿಸಾನ್ ಸಂಘದ ಗ್ರಾಮ ಸಮಿತಿಯಿಂದ ಗೋಪೂಜೆ ನಡೆಯಿತು.


ಕೋಲಾರ, 0೧ ಏಪ್ರಿಲ್ (ಹಿ.ಸ) :

ಆ್ಯಂಕರ್ : ಗ್ರಾಮಗಳಲ್ಲಿ ರೈತರು ಸಾಮರಸ್ಯ ಜೀವನ ನಡೆಸಿದರೆ ಆ ಗ್ರಾಮ ದೇಶಕ್ಕೆ ಮಾದರಿ ಗ್ರಾಮವಾಗುತ್ತದೆ. ಸಣ್ಣಪುಟ್ಟ ಸಮಸ್ಯೆಗಳನ್ನು ಆ ದಿನವೇ ಪಂಚರ ಸಮ್ಮುಖದಲ್ಲಿ ಬಗೆಹರಿಸಿಕೊಂಡರೆ ರೈತರ ಜೀವನ ಹಸನಾಗುತ್ತದೆ. ಈ ಬಗ್ಗೆ ಚಿಂತನೆಗಳು ಪ್ರತಿ ಗ್ರಾಮಗಳಲ್ಲೂ ಆಗಬೇಕಾಗಿದೆ ಎಂದು ಭಾರತೀಯ ಕಿಸಾನ್ ಸಂಘದ ರಾಷ್ಟ್ರೀಯ ಅಧ್ಯಕ್ಷ ಕೆ. ಸಾಯಿ ರೆಡ್ಡಿ ಅಭಿಪ್ರಾಯಪಟ್ಟರು.

ಮುಳಬಾಗಿಲು ತಾಲೂಕಿನ ದುಗ್ಗಸಂದ್ರ ಹೋಬಳಿ ಅರಹಳ್ಳಿ ಗ್ರಾಮದ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ಮಂಗಳವಾರ ರಾತ್ರಿ ಕಿಸಾನ್ ಸಂಘದ ಗ್ರಾಮ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಭೂ ಸುಪೋಷಣ ಪೂಜೆ, ಗಂಗಾ ಪೂಜೆ ಹಾಗೂ ಗ್ರಾಮ ಸಮಿತಿ ಉದ್ಘಾಟನೆ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.

ಹಿಂದೆ ನಮ್ಮ ಪೂರ್ವಿಕರು ಪ್ರತಿದಿನ ದೇವಾಲಯಗಳು ಬಳಿ ಭಜನೆ ಸತ್ಸಂಗ ಕಾರ್ಯಕ್ರಮಗಳ ಮೂಲಕ ಒಂದೆಡೆ ಸೇರುತ್ತಿದ್ದರು ಆ ರಾತ್ರಿ ಗ್ರಾಮದಲ್ಲಿ ಅಣ್ಣತಮ್ಮಂದಿರ ಸಮಸ್ಯೆಗಳು ಇತರೆ ಯಾವುದೇ ಸಮಸ್ಯೆಗಳು ಬಂದರು ಅದನ್ನು ಪಂಚರು ಗಮನಿಸಿ ಇತ್ಯರ್ಥ ಮಾಡುತ್ತಿದ್ದರು. ಆದರೆ ಈಗ ಸಣ್ಣಪುಟ್ಟ ವಿಷಯಗಳಿಂದ ದೊಡ್ಡ ವಿಷಯಗಳವರೆಗೂ ಸರ್ಕಾರಿ ಕಚೇರಿಗೆ, ಪೊಲೀಸ್ ಠಾಣೆ ಹೋಗುತ್ತಿದ್ದೇವೆ. ನ್ಯಾಯಾಲಯಗಳಿಗೆ ಹೋಗಿ ನೆಮ್ಮದಿ ಮತ್ತು ಆಯಸ್ಸು ಕಳೆದುಕೊಳ್ಳುವುದರ ಜೊತೆಗೆ ವೈಮನಸುಗಳು ಹೆಚ್ಚಾಗಿ ಅಪರಾಧಗಳ ಸಂಖ್ಯೆಯು ಬೆಳೆಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಗ್ರಾಮಸ್ಥರೆಲ್ಲರೂ ಇರುವ ಎಲ್ಲ ರಾಜಕೀಯ ಪಕ್ಷಗಳಲ್ಲೂ ಇರಿ ಪರವಾಗಿಲ್ಲ. ಆದರೆ ಅದನ್ನು ಒಂದು ಕ್ರೀಡೆ ರೀತಿ ಮತದಾನ ದಿನಕ್ಕೆ ಸೀಮಿತ ಮಾಡಿ ನಂತರ ಎಲ್ಲರೂ ಒಂದೇ ಎಂಬುದನ್ನು ಮುಂದುವರಿಸಬೇಕು. ಸರ್ಕಾರಿ ನೌಕರರು, ಆಶಾ ಅಂಗನವಾಡಿ ಕಾರ್ಯಕರ್ತೆಯರ ಕುಟುಂಬದವರು ಎಲ್ಲ ರಾಜಕೀಯ ಪಕ್ಷಗಳಲ್ಲೂ ಇರುತ್ತಾರೆ. ಆದರೆ ಅವರ ಬೇಡಿಕೆಗಳು ಈಡೇರಬೇಕಾದಾಗ ಯಾವುದೇ ಪಕ್ಷದ ಸರ್ಕಾರ ಬಿದ್ದರೂ ಬೀದಿಗೆ ಬಂದು ಪ್ರತಿಭಟಿಸುತ್ತಾರೆ. ರೈತರು ಸಹ ಈ ರೀತಿ ಪಕ್ಷಾತೀತವಾಗಿ ತಮ್ಮ ಹಕ್ಕುಗಳನ್ನು ಕೇಳಲು ಭಾರತೀಯ ಕಿಸಾನ್ ಸಂಘ ದೇಶದ ವ್ಯಾಪಿ ರೈತರನ್ನು ಜಾಗೃತಿಗೊಳಿಸುತ್ತಿದೆ. ನಮ್ಮ ಪ್ರತಿಭಟನೆ ಹೋರಾಟಗಳು ಮತ್ತೊಬ್ಬರ ಹಕ್ಕುಗಳಿಗೆ ತೊಂದರೆಯಾಗಬಾರದು ಬಸ್ಸು ಅಂಗಡಿ ವಾಹನಗಳಿಗೆ ಹಾಗೂ ಸಂಚಾರಕ್ಕೆ ದಕ್ಕೆ ಆಗದಂತೆ ನೋಡಿಕೊಳ್ಳಬೇಕು ಎಂಬ ಸಲಹೆ ನೀಡಿದರು.

ಕಿಸಾನ್ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸಂಘಟನಾ ಕಾರ್ಯದರ್ಶಿ ನಾರಾಯಣಸ್ವಾಮಿ ಮಾತನಾಡಿ ನಮ್ಮ ದೇಶದ ಸಂಸ್ಕೃತಿ ಪರಂಪರೆಗಳು ಪ್ರಕೃತಿಗೆ ಅನುಗುಣವಾಗಿ ನಡೆದುಕೊಂಡು ಬಂದಿವೆ. ನಮ್ಮ ಪೂರ್ವಿಕರು ಇದನ್ನು ಅನುಸರಿಸಿಕೊಂಡು ಒಂದು ಪರಿಣಾಮ ಶುದ್ಧ ಕುಡಿಯುವ ನೀರು, ಶುದ್ಧವಾದ ಆಹಾರ ಪದಾರ್ಥಗಳು ಬೆಳೆಯುತ್ತಿದ್ದರು. ಜೊತೆಗೆ ಉತ್ತಮವಾದ ಗಿಡಮರಗಳ ಮೂಲಕ ಪ್ರಕೃತಿಯೊಂದಿಗೆ ಜೀವನ ಸಾಗಿಸುತ್ತಿದ್ದರು. ಆದರೆ ಇದನ್ನು ನಿರ್ಲಕ್ಷಿಸಿದ ಪರಿಣಾಮ ಇಂದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಈ ಬಗ್ಗೆ ಎಚ್ಚರವಹಿಸಿ ಮಣ್ಣಿನ ಫಲವತ್ತತೆ ಹೆಚ್ಚಿಸಲು ಸಾವಯವ ಮತ್ತು ನೈಸರ್ಗಿಕ ಕೃಷಿಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಇದರಿಂದ ಕುಟುಂಬದ ಆರೋಗ್ಯ ಗ್ರಾಮದ ಸಂಪನ್ಮೂಲ ಅಭಿವೃದ್ಧಿ ಜೊತೆಗೆ ಸದೃಢ ದೇಶ ನಿರ್ಮಾಣಕ್ಕೆ ಕಾರ್ಯನಿರ್ವಹಿಸಿದಂತೆ ಆಗುತ್ತದೆ ಎಂಬ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಸಂಘದ ಜಿಲ್ಲಾ ಉಪಾಧ್ಯಕ್ಷ ಅರಹಳ್ಳಿ ಜಿ. ಕೆ. ಶ್ರೀನಿವಾಸಗೌಡ, ಜಿಲ್ಲಾ ಖಜಾಂಚಿ ವಕೀಲ ವಿ. ಜಯಪ್ಪ, ಜಿಲ್ಲಾ ಮಹಿಳಾ ಪ್ರಮುಖರಾದ ಬೀಮಾಪುರ ಶಶಿಕಲಾ, ಮುಡಿಯನೂರು ಜಯಲಕ್ಷ್ಮಮ್ಮ, ಪ್ರೇಮಮ್ಮ, ತಾಲೂಕು ಅಧ್ಯಕ್ಷ ಉಗಿನಿ ಆರ್. ನಾರಾಯಣ ಗೌಡ, ಕಾರ್ಯದರ್ಶಿ ಪಿ ಗಂಗಾಪುರ ಮುನಿರಾಮಯ್ಯ, ನಗರ ಘಟಕದ ಅಧ್ಯಕ್ಷ ಬೆಮೆಲ್ ಧನಂಜಯ, ಕಾರ್ಯದರ್ಶಿ ಕೆ. ಮಧುಸೂದನ್,ಅರಹಳ್ಳಿ ಗ್ರಾಮ ಸಮಿತಿ ಅಧ್ಯಕ್ಷ ಆರ್. ರಮೇಶ್, ಕಾರ್ಯದರ್ಶಿ ತಮ್ಮಣ್ಣ ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande