






ಕೊಪ್ಪಳ, 14 ಮಾರ್ಚ್ (ಹಿ.ಸ.)
ಆ್ಯಂಕರ್: ಕಾರ್ಖಾನೆಗಳ ಮಾಲಿನ್ಯದಿಂದ ತೀವ್ರ ಬಾಧಿತಕ್ಕೆ ಒಳಗಾಗಿರುವ ತಾಲೂಕಿನ ಅಲ್ಲಾನಗರ, ಹಿರೇಬಗನಾಳ, ಕುಣಿಕೇರಿ, ಕುಣಿಕೇರಾ ತಾಂಡಾ ಗ್ರಾಮಗಳಿಗೆ ಶನಿವಾರ ಬಿಜೆಪಿ ನಿಯೋಗ ಭೇಟಿ ನೀಡಿ, ಸ್ಥಳೀಯರ ಸಮಸ್ಯೆಗಳನ್ನು ಪರಿಶೀಲಿಸಿತು.
ಜಿಲ್ಲಾ ಬಿಜೆಪಿ ನಿಯೋಗದ ನಾಯಕರು ಬರುತ್ತಿದ್ದಂತೆಯೇ ಗ್ರಾಮಸ್ಥರು, ಅವರನ್ನು ತಮ್ಮ ಹೊಲ, ಮನೆಗಳಿಗೆ ಕರೆದೊಯ್ದು ಕಾರ್ಖಾನೆಗಳ ಮಾಲಿನ್ಯದಿಂದ ತಮಗಾಗುತ್ತಿರುವ ಸಂಕಟಗಳನ್ನು ತೆರೆದಿಟ್ಟರು.
ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್, ಕೊಪ್ಪಳ ಲೋಕಸಭಾ ಕ್ಷೇತ್ರದ ನಿಕಟಪೂರ್ವ ಅಭ್ಯರ್ಥಿ ಬಸವರಾಜ ಕ್ಯಾವಟರ್,
ಜಿಲ್ಲಾಧ್ಯಕ್ಷ ನವೀನ ಗುಳಗಣ್ಣನವರ್, ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ, ಮುಖಂಡರಾದ ಮಹಾಂತೇಶ ಪಾಟೀಲ್, ಗಣೇಶ ಹೊರತಟ್ನಾಳ್, ವೀರೇಶ ಸಜ್ಜನ, ಪ್ರಭುಗೌಡ, ಪ್ರದೀಪ್ ಹಿಟ್ನಾಳ್ ಸೇರಿ ವಿವಿಧ ಕಾರ್ಯಕರ್ತರನ್ನೊಳಗೊಂಡ ತಂಡದ ಎದುರು ಜನರು ತಮ್ಮ ನೋವುಗಳನ್ನು ಹಂಚಿಕೊಂಡರು.
ಈ ವೇಳೆ ಮಾತನಾಡಿದ ಪ್ರತಿಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ ಅವರು, ಇಲ್ಲಿಯ ಜನರ ಪರಿಸ್ಥಿತಿ ನೋಡಿದರೆ ತುಂಬಾ ಸಂಕಟವಾಗುತ್ತದೆ.
ಧೂಳಿನ ಪರಿಣಾಮದಿಂದ ಈ ಭಾಗದಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿದ್ದು, ಅಂಗವಿಕಲ ಮಕ್ಕಳು ಹುಟ್ಟುತ್ತಿರುವುದು ನಿಜಕ್ಕೂ ಕಳವಳಕಾರಿಯಾಗಿದೆ.
ಈ ವಿಷಯವನ್ನು ಪಕ್ಷದ ಹಿರಿಯ ನಾಯಕರ ಗಮನಕ್ಕೆ ತರುವುದರ ಜತೆಗೆ ವಿಧಾನಸಭೆಯಲ್ಲೂ ಚರ್ಚೆ ನಡೆಸುವೆ. ಇಂತಹ ಸಮಸ್ಯೆಗಳಿಗೆ ತಾರ್ಕಿಕ ಅಂತ್ಯ ಕಾಣಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದರು.
ಕೊಪ್ಪಳ ಲೋಕಸಭಾ ಕ್ಷೇತ್ರದ ನಿಕಟಪೂರ್ವ ಅಭ್ಯರ್ಥಿ ಬಸವರಾಜ ಕ್ಯಾವಟರ್ ಮಾತನಾಡಿ,
ಈ ಭಾಗದ ಜನರ ಸಂಕಟ ನೋಡಲಾಗುತ್ತಿಲ್ಲ. ನಿಜಕ್ಕೂ ಇಲ್ಲಿಯ ಜನರು ಅನುಭವಿಸುತ್ತಿರುವ ಯಾತನೆ ನಮ್ಮ ಶತ್ರುಗಳಿಗೆ ಬರಬಾರದು.
ಆದರೆ, ಇನ್ನೂ ಮುಂದೆ ನಾವು ನಿಮ್ಮ ದನಿಯಾಗಿ ಕೆಲಸ ಮಾಡುವೆವು.
ನೆಲ-ಜಲ- ವಾಯುವಿಗೆ ದಕ್ಕೆ ತರುವವರ ವಿರುದ್ಧ ನಮ್ಮ ಹೋರಾಟ ನಿರಂತರವಾಗಿರಲಿದೆ. ನಿಮ್ಮ ಸಂಕಟಕ್ಕೆ ನಾವು ದನಿಯಾಗುವೆವು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣನವರ್ ಮಾತನಾಡಿ, ಕೊಪ್ಪಳ ತಾಲೂಕಿನಲ್ಲಿ ಕಾರ್ಖಾನೆಗಳ ಮಾಲಿನ್ಯದಿಂದ ಜನರ ಬದುಕು ಬರಡಾಗಿದೆ.
ವಿವಿಧ ಆರೋಗ್ಯ ಸಮಸ್ಯೆಗಳು ಗಂಭೀರವಾಗಿ ಕಾಡುತ್ತಿವೆ. ಪರಿಸ್ಥಿತಿ ಹೀಗೆ ಮುಂದುವರಿದರೇ ಬಾಧಿತ ಗ್ರಾಮಗಳಲ್ಲಿ ಜನರು ನರಕಯಾತನೆ ಅನುಭವಿಸಬೇಕಾಗುತ್ತದೆ.
ರಾಜ್ಯ ಸರಕಾರ, ಈ ವಿಚಾರದಲ್ಲಿ ಅನಗತ್ಯ ನಿರ್ಲಕ್ಷ್ಯ ಮಾಡುತ್ತಿರುವುದು ಸರಿಯಲ್ಲ. ಈ ನಿಟ್ಟಿನಲ್ಲಿ ಹೋರಾಟ ರೂಪಿಸಲಾಗುವುದು ಎಂದರು.
ಕಣ್ಣಿರು ಹಾಕಿದ ಎಮ್ ಎಲ್ ಸಿ: ಕಾರ್ಖಾನೆ ಮಾಲಿನ್ಯದಿಂದ ಜನರಿಗೆ ಎದುರಾಗಿರುವ ಆರೋಗ್ಯ ತೊಂದರೆ ನೋಡಿ, ವಿಪ ಸದಸ್ಯೆ ಹೇಮಲತಾ ನಾಯಕ್ ಕಣ್ಣಿರು ಹಾಕಿದರು.*ಮಹಿಳೆಯರಿಗೆ ಗರ್ಭಕೋಶ ಕ್ಯಾನ್ಸರ್, ಅಸ್ತಮಾ, ಕಿಡ್ನಿ ಫೇಲ್ ವಿವಿಧ ಸಮಸ್ಯೆ ಹೇಳಿಕೊಳ್ಳುತ್ತಲೇ ವಿಪ ಸದಸ್ಯೆಯವರಿಗೆ ದು:ಖ ತಡೆಯಲು ಆಗಲಿಲ್ಲ. ತಾವು ಮಾತನಾಡುವಾಗ ದು:ಖಿತರಾದರು. ಬಳಿಕ ಸುಧಾರಿಸಿಕೊಂಡು ಮಾತನಾಡಿದ ಅವರು, ಈ ಭಾಗದ ಸಮಸ್ಯೆಗಳ ಬಗ್ಗೆ ಸಿದ್ದರಾಮಯ್ಯ ನೇತೃತ್ವದ ಸರಕಾರ ನಿಷ್ಕಾಳಜಿ ತೋರುತ್ತಿದೆ. ಕಾರ್ಖಾನೆಯಿಂದ ಉಂಟಾಗುತ್ತಿರುವ ಧೂಳಿನ ಸಮಸ್ಯೆ ಕುರಿತು ಸದನದಲ್ಲಿ ಪ್ರಶ್ನೆ ಕೇಳಿದರೂ ಸರಿಯಾದ ಉತ್ತರ ನೀಡುತ್ತಿಲ್ಲ ಎಂದು ಅವರು ಹೇಳಿದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್