ನಾಟಕ ಪ್ರದರ್ಶನ: ರಂಗಕಲೆಯ ಮಹತ್ವದ ಬಗ್ಗೆ ಮಿಥುನ ಪಾಟೀಲ ಅಭಿಮತ
ಗದಗ, 14 ಮಾರ್ಚ್ (ಹಿ.ಸ.) ಆ್ಯಂಕರ್: ದೃಶ್ಯ ಮಾಧ್ಯಮವು ಜನರ ಮನಸ್ಸಿನ ಮೇಲೆ ಅತ್ಯಂತ ಪರಿಣಾಮಕಾರಿಯಾಗಿ ಪ್ರಭಾವ ಬೀರುವ ಮಾಧ್ಯಮವಾಗಿದ್ದು, ಅದರಲ್ಲೂ ನಾಟಕಗಳಲ್ಲಿ ನೀಡಲಾಗುವ ಉತ್ತಮ ಸಂದೇಶಗಳು ಸಮಾಜಕ್ಕೆ ಸರಿದಾರಿ ತೋರಿಸುವ ಕೆಲಸ ಮಾಡುತ್ತವೆ ಎಂದು ರೋಣ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅ
ಫೋಟೋ


ಗದಗ, 14 ಮಾರ್ಚ್ (ಹಿ.ಸ.)

ಆ್ಯಂಕರ್: ದೃಶ್ಯ ಮಾಧ್ಯಮವು ಜನರ ಮನಸ್ಸಿನ ಮೇಲೆ ಅತ್ಯಂತ ಪರಿಣಾಮಕಾರಿಯಾಗಿ ಪ್ರಭಾವ ಬೀರುವ ಮಾಧ್ಯಮವಾಗಿದ್ದು, ಅದರಲ್ಲೂ ನಾಟಕಗಳಲ್ಲಿ ನೀಡಲಾಗುವ ಉತ್ತಮ ಸಂದೇಶಗಳು ಸಮಾಜಕ್ಕೆ ಸರಿದಾರಿ ತೋರಿಸುವ ಕೆಲಸ ಮಾಡುತ್ತವೆ ಎಂದು ರೋಣ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮಿಥುನ ಪಾಟೀಲ ಹೇಳಿದರು.

ಗದಗ ಜಿಲ್ಲೆಯ ತಾಲೂಕಿನ ತೋಟಗಂಟಿ ಗ್ರಾಮದಲ್ಲಿ ಅನ್ನದಾನೇಶ್ವರ ಶಾಖಾ ಮಠದ 16ನೇ ವರ್ಷದ ರಥೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ತಂತ್ರಜ್ಞಾನ ಬೆಳವಣಿಗೆ ಆಗದ ದಿನಗಳಲ್ಲಿ ನಾಟಕಗಳು ಗ್ರಾಮೀಣ ಜನರಿಗೆ ಪ್ರಮುಖ ಮನರಂಜನೆಯ ಸಾಧನವಾಗಿದ್ದವು. ಕಲಾವಿದರು ವೇದಿಕೆಯ ಮೇಲೆ ನಿಜ ಜೀವನದ ಸನ್ನಿವೇಶಗಳನ್ನು ಅತ್ಯಂತ ನೈಜವಾಗಿ ಪ್ರದರ್ಶಿಸುವ ಮೂಲಕ ಪ್ರೇಕ್ಷಕರ ಮನಸ್ಸಿಗೆ ತಟ್ಟುವ ರೀತಿಯಲ್ಲಿ ಸಂದೇಶಗಳನ್ನು ನೀಡುತ್ತಿದ್ದರು. ಇದೇ ಕಾರಣಕ್ಕೆ ನಾಟಕಗಳು ಸಮಾಜದ ಮೇಲೆ ಉತ್ತಮ ಪರಿಣಾಮ ಬೀರುವ ಸಾಮರ್ಥ್ಯ ಹೊಂದಿವೆ ಎಂದು ಹೇಳಿದರು.

ನಾಟಕಗಳಲ್ಲಿ ಕಾಣಿಸಿಕೊಳ್ಳುವ ಪಾತ್ರಗಳಲ್ಲಿನ ಉತ್ತಮ ಅಂಶಗಳನ್ನು ಪ್ರೇಕ್ಷಕರು ತಮ್ಮ ನಿಜ ಜೀವನದಲ್ಲಿಯೂ ಅಳವಡಿಸಿಕೊಂಡರೆ ಸಮಾಜದಲ್ಲಿ ಉತ್ತಮ ಬದಲಾವಣೆ ತರಲು ಸಾಧ್ಯವಾಗುತ್ತದೆ ಎಂದು ಅವರು ಸಲಹೆ ನೀಡಿದರು.

ಆಧುನಿಕತೆ ಹಾಗೂ ತಂತ್ರಜ್ಞಾನಗಳ ಹಾವಳಿಯಿಂದಾಗಿ ನಾಟಕ ಸೇರಿದಂತೆ ಹಲವಾರು ಪಾರಂಪರಿಕ ಕಲೆಗಳು ನಿಧಾನವಾಗಿ ಮರೆಯಾಗುವ ಪರಿಸ್ಥಿತಿ ಎದುರಾಗುತ್ತಿದೆ. ಈ ಕಲೆಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರೇಕ್ಷಕರ ಮೇಲಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶದ ಕಲಾವಿದರು ನಾಟಕ ಪ್ರದರ್ಶನಗಳ ಮೂಲಕ ರಂಗಕಲೆಯನ್ನು ಉಳಿಸಲು ಹಾಗೂ ಬೆಳಸಲು ಮುಂದಾಗಬೇಕು ಎಂದು ಮಿಥುನ ಪಾಟೀಲ ಕರೆ ನೀಡಿದರು.

ಈ ಸಂದರ್ಭದಲ್ಲಿ ಆರ್.ಜಿ. ಪಾಟೀಲ, ಎ.ಆರ್. ಮಲ್ಲನಗೌಡ್ರ, ಗಂಗನಗೌಡ ಪಾಟೀಲ, ಬಸಯ್ಯ ಕಲ್ಮಠ, ಬಸವರಾಜ ಕುಂಬಾರ, ಉಮೇಶಗೌಡ ಸಂಗನಗೌಡ ಪಾಟೀಲ, ಹೀರೇಹಾಳ, ಬೂದಿಹಾಳ ಸೇರಿದಂತೆ ಗ್ರಾಮದ ಮುಖಂಡರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

ರಥೋತ್ಸವದ ಅಂಗವಾಗಿ ಗ್ರಾಮದಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ನಡೆಯುತ್ತಿದ್ದು, ನಾಟಕ ಪ್ರದರ್ಶನವನ್ನು ನೋಡಲು ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಪ್ರದೇಶದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande