
ಪುತ್ರಜಯ, 08 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಸ್ನೇಹಪರ ರಾಷ್ಟ್ರಗಳ ಬೆಂಬಲ ಅತ್ಯಂತ ನಿರ್ಣಾಯಕವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಲೇಷ್ಯಾ ಭೇಟಿಯ ಎರಡನೇ ದಿನವಾದ ಭಾನುವಾರ ಹೇಳಿದರು.
ಭಾರತ ಮತ್ತು ಮಲೇಷ್ಯಾ ಎರಡೂ ದೇಶಗಳ ಸಮೃದ್ಧಿ ಪರಸ್ಪರವಾಗಿ ಸಂಬಂಧ ಹೊಂದಿದೆ ಎಂಬ ಸಾಮಾನ್ಯ ನಂಬಿಕೆ ಹೊಂದಿದ್ದು, ಜಾಗತಿಕ ಅಸ್ಥಿರತೆಯ ಇಂದಿನ ವಾತಾವರಣದಲ್ಲಿ ಎರಡು ಕಡಲ ನೆರೆಹೊರೆಯ ರಾಷ್ಟ್ರಗಳು ತಮ್ಮ ದ್ವಿಪಕ್ಷೀಯ ಸಂಬಂಧಗಳ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಮಲೇಷ್ಯಾದ ಆಡಳಿತ ಮತ್ತು ನ್ಯಾಯಾಂಗ ರಾಜಧಾನಿ ಪುತ್ರಜಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಲೇಷ್ಯಾದ ಪ್ರಧಾನಿ ಅನ್ವರ್ ಇಬ್ರಾಹಿಂ ಅವರೊಂದಿಗೆ ನಿಯೋಗ ಮಟ್ಟದ ಮಾತುಕತೆ ನಡೆಸಿದರು.
ಸಭೆಯ ಬಳಿಕ ನಡೆದ ಜಂಟಿ ಹೇಳಿಕೆಯಲ್ಲಿ, ಮಲೇಷ್ಯಾದ ನಾಯಕತ್ವ ಮತ್ತು ಸರ್ಕಾರ ನೀಡಿದ ಆತ್ಮೀಯ ಸ್ವಾಗತಕ್ಕೆ ಪ್ರಧಾನಿ ಮೋದಿ ಅವರು ಕೃತಜ್ಞತೆ ಸಲ್ಲಿಸಿದರು.
ಮಲೇಷ್ಯಾ ಭೇಟಿಯು ಭಾರತ–ಮಲೇಷ್ಯಾ ಸಂಬಂಧಗಳನ್ನು ಹೊಸ ಮಟ್ಟಕ್ಕೆ ಕೊಂಡೊಯ್ಯುವ ದೃಢ ಸಂಕಲ್ಪವನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.
ವರ್ಷಗಳಿಂದ ಎರಡೂ ದೇಶಗಳ ನಡುವಿನ ಸಂಬಂಧಗಳು ಗಮನಾರ್ಹ ವೇಗ ಮತ್ತು ಆಳವನ್ನು ಪಡೆದುಕೊಂಡಿದ್ದು, ಕೃಷಿ, ಉತ್ಪಾದನೆ, ಶುದ್ಧ ಇಂಧನ, ಅರೆವಾಹಕಗಳು, ಕೌಶಲ್ಯ ಅಭಿವೃದ್ಧಿ ಹಾಗೂ ಸಾಮರ್ಥ್ಯ ವೃದ್ಧಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಹಕಾರ ಸ್ಥಿರವಾಗಿ ಬಲಗೊಳ್ಳುತ್ತಿದೆ ಎಂದು ಅವರು ತಿಳಿಸಿದರು.
ರಕ್ಷಣಾ ಮತ್ತು ಭದ್ರತಾ ಸಹಕಾರವೂ ಕ್ರಮೇಣ ವಿಸ್ತರಿಸುತ್ತಿದ್ದು, ಇದು ಎರಡು ದೇಶಗಳ ನಡುವಿನ ಪರಸ್ಪರ ವಿಶ್ವಾಸವನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಆಸಿಯಾನ್ ಅಧ್ಯಕ್ಷತೆಯನ್ನು ವಹಿಸಿರುವ ಪ್ರಧಾನಿ ಅನ್ವರ್ ಇಬ್ರಾಹಿಂ ಅವರನ್ನು ಅಭಿನಂದಿಸಿದ ಅವರು, ಮಲೇಷ್ಯಾದ ಸಕ್ರಿಯ ಬೆಂಬಲದಿಂದ ಭಾರತ–ಆಸಿಯಾನ್ ಸಂಬಂಧಗಳು ಇನ್ನಷ್ಟು ಬಲಿಷ್ಠವಾಗಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಎರಡೂ ದೇಶಗಳ ನಡುವಿನ ಸಂಬಂಧದ ನಿಜವಾದ ಶಕ್ತಿ ಜನರ ನಡುವಿನ ಬಾಂಧವ್ಯದಲ್ಲಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಭಾರತೀಯ ಮೂಲದ ಸುಮಾರು 30 ಲಕ್ಷ ಮಲೇಷಿಯನ್ನರು ಭಾರತ ಮತ್ತು ಮಲೇಷ್ಯಾ ನಡುವಿನ ಜೀವಂತ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅವರು ಸ್ಮರಿಸಿದರು.
ಮಲೇಷ್ಯಾದಲ್ಲಿನ ಭಾರತೀಯ ವಲಸಿಗರೊಂದಿಗೆ ನಡೆದ ಭೇಟಿಯನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಅವರಿಗೆ ಪ್ರಧಾನಿ ಅನ್ವರ್ ಇಬ್ರಾಹಿಂ ಅವರು ನೀಡುತ್ತಿರುವ ಗೌರವ ಮತ್ತು ವಾತ್ಸಲ್ಯವನ್ನು ನೋಡಿ ಹೆಮ್ಮೆ ಅನಿಸುತ್ತಿದೆ ಎಂದು ಹೇಳಿದರು.
ಜಾಗತಿಕ ಅಸ್ಥಿರತೆಯ ಈ ಯುಗದಲ್ಲಿ ಭಾರತ ಮತ್ತು ಮಲೇಷ್ಯಾ ಎರಡು ಪ್ರಮುಖ ಕಡಲ ನೆರೆಹೊರೆಯ ರಾಷ್ಟ್ರಗಳಾಗಿದ್ದು, ಎಲ್ಲಾ ಕ್ಷೇತ್ರಗಳಲ್ಲಿ ಸಹಕಾರವನ್ನು ವಿಸ್ತರಿಸಿ ಆಳಗೊಳಿಸಲು ಒಟ್ಟಾಗಿ ಕೆಲಸ ಮಾಡಬೇಕಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಮಲೇಷ್ಯಾ ಜೊತೆಗಿನ ಪಾಲುದಾರಿಕೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಭಾರತ ಸಂಪೂರ್ಣವಾಗಿ ಬದ್ಧವಾಗಿದೆ ಎಂದು ಅವರು ಪುನರುಚ್ಚರಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa