ಪೂರ್ವ ಕಾಂಗೋದಲ್ಲಿ ಐಸಿಸ್ ಬೆಂಬಲಿತ ಬಂಡುಕೋರರ ದಾಳಿ ; 20 ನಾಗರಿಕರ ಸಾವು
ಕಿನ್ಶಾಸಾ (ಕಾಂಗೋ), 10 ಫೆಬ್ರವರಿ (ಹಿ.ಸ.) : ಆ್ಯಂಕರ್ : ಭಯೋತ್ಪಾದಕ ಸಂಘಟನೆ ಐಸಿಸ್‌ಗೆ ನಿಷ್ಠೆ ಘೋಷಿಸಿರುವ ಅಲೈಡ್ ಡೆಮಾಕ್ರಟಿಕ್ ಫೋರ್ಸಸ್ ಬಂಡುಕೋರರು ವಾರಾಂತ್ಯದಲ್ಲಿ ಪೂರ್ವ ಕಾಂಗೋದ ಉತ್ತರ ಕಿವು ಪ್ರಾಂತ್ಯದ ಹಳ್ಳಿಯ ಮೇಲೆ ನಡೆಸಿದ ಭೀಕರ ದಾಳಿಯಲ್ಲಿ ಕನಿಷ್ಠ 20 ನಾಗರಿಕರು ಸಾವಿಗೀಡಾಗಿದ್ದಾರೆ
ಪೂರ್ವ ಕಾಂಗೋದಲ್ಲಿ ಐಸಿಸ್ ಬೆಂಬಲಿತ ಬಂಡುಕೋರರ ದಾಳಿ ; 20 ನಾಗರಿಕರ ಸಾವು


ಕಿನ್ಶಾಸಾ (ಕಾಂಗೋ), 10 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಭಯೋತ್ಪಾದಕ ಸಂಘಟನೆ ಐಸಿಸ್‌ಗೆ ನಿಷ್ಠೆ ಘೋಷಿಸಿರುವ ಅಲೈಡ್ ಡೆಮಾಕ್ರಟಿಕ್ ಫೋರ್ಸಸ್ ಬಂಡುಕೋರರು ವಾರಾಂತ್ಯದಲ್ಲಿ ಪೂರ್ವ ಕಾಂಗೋದ ಉತ್ತರ ಕಿವು ಪ್ರಾಂತ್ಯದ ಹಳ್ಳಿಯ ಮೇಲೆ ನಡೆಸಿದ ಭೀಕರ ದಾಳಿಯಲ್ಲಿ ಕನಿಷ್ಠ 20 ನಾಗರಿಕರು ಸಾವಿಗೀಡಾಗಿದ್ದಾರೆ.

ಉತ್ತರ ಕಿವು ಪ್ರಾಂತ್ಯದ ಲುಬೆರೊ ಪ್ರದೇಶದ ಮಾಂಬಿಂಬಿ–ಇಸಿಗೊ ಗ್ರಾಮದಲ್ಲಿ ಶನಿವಾರ ಮುಂಜಾನೆ ಈ ದಾಳಿ ನಡೆದಿದ್ದು, ಘಟನೆಯಿಂದ ಭಾರೀ ಪ್ರಮಾಣದಲ್ಲಿ ಜನರು ಸ್ಥಳಾಂತರಗೊಂಡಿದ್ದಾರೆ ಎಂದು ಮಿಲಿಟರಿ ಆಡಳಿತಾಧಿಕಾರಿ ಕರ್ನಲ್ ಅಲೈನ್ ಕಿವೆವಾ ಮಿಟೆಲಾ ತಿಳಿಸಿದ್ದಾರೆ.

ಈ ದಾಳಿಯಲ್ಲಿ ಐಸಿಸ್ ಬೆಂಬಲಿತ ADF ಬಂಡುಕೋರರು ಹಾಗೂ ರುವಾಂಡಾ ಬೆಂಬಲಿತ ಎಂ–23 (ಮಾರ್ಚ್ 23 ಚಳುವಳಿ) ಗುಂಪಿನ ಕೈವಾಡ ಇರಬಹುದೆಂದು ಶಂಕಿಸಲಾಗಿದೆ ಎಂದು ಅರಬ್ ನ್ಯೂಸ್ ವರದಿ ಮಾಡಿದೆ.

ದಾಳಿಯ ಕುರಿತು ADF ಸಂಘಟನೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸ್ಥಳೀಯ ನಾಗರಿಕ ಸಮಾಜದ ಕಾರ್ಯಕರ್ತರ ಪ್ರಕಾರ, ಬಂಡುಕೋರರು ಮೊದಲು ರೈತರ ಹೊಲಗಳ ಮೇಲೆ ದಾಳಿ ನಡೆಸಿ, ಬಳಿಕ ಚಾಕುಗಳು ಹಾಗೂ ಇತರ ಮಾರಕ ಆಯುಧಗಳಿಂದ ನಾಗರಿಕರ ಮೇಲೆ ದೌರ್ಜನ್ಯ ಎಸಗಿದ್ದಾರೆ.

“ಈ ಸಾವಿನ ಸಂಖ್ಯೆ ಇನ್ನೂ ಪ್ರಾಥಮಿಕ ಅಂದಾಜು ಮಾತ್ರ. ಅನೇಕ ನಾಗರಿಕರು ಕಾಣೆಯಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ,” ಎಂದು ಬಾಪೆರೆಯ ನಾಗರಿಕ ಸಮಾಜದ ಮುಖ್ಯಸ್ಥ ಕಿನೋಸ್ ಕಿಟ್ವಾ ತಿಳಿಸಿದ್ದಾರೆ. ಅಲ್ಲದೆ, ಈ ಪ್ರದೇಶದಲ್ಲಿ ಕಾಂಗೋಲೀಸ್ ಸೇನಾ ಪಡೆಗಳ ಸಮರ್ಪಕ ಹಾಜರಾತಿ ಇಲ್ಲದಿರುವುದನ್ನೂ ಅವರು ತೀವ್ರವಾಗಿ ಟೀಕಿಸಿದ್ದಾರೆ.

ಪೂರ್ವ ಕಾಂಗೋದಲ್ಲಿ ADF ಹಾಗೂ M23 ಸೇರಿದಂತೆ ಹಲವು ಸಶಸ್ತ್ರ ಗುಂಪುಗಳು ನಿರಂತರವಾಗಿ ಹಿಂಸಾಚಾರ ನಡೆಸುತ್ತಿವೆ. 2019ರಲ್ಲಿ ADF, ಐಸಿಸ್‌ಗೆ ನಿಷ್ಠೆ ಘೋಷಿಸಿದ್ದು, ಉಗಾಂಡಾ ಗಡಿ ಭಾಗಗಳಲ್ಲಿ ಸಕ್ರಿಯವಾಗಿದೆ. ಈ ಗುಂಪು ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿಗಳನ್ನು ನಡೆಸುತ್ತಿದೆ ಎಂಬ ಆರೋಪಗಳಿವೆ.

ಉತ್ತರ ಕಿವು ಪ್ರಾಂತೀಯ ನಾಗರಿಕ ಸಮಾಜ ಸಮನ್ವಯ ಸಮಿತಿಯ ಮಾಹಿತಿಯಂತೆ, 2026ರ ಆರಂಭದಿಂದಲೇ ಬೆನಿ ಹಾಗೂ ಲುಬೆರೊ ಪ್ರದೇಶಗಳಲ್ಲಿ ADF ಬಂಡುಕೋರರು ಕನಿಷ್ಠ 62 ನಾಗರಿಕರನ್ನು ಹತ್ಯೆಗೈದಿದ್ದಾರೆ. ಈ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಗಳ ಮುಖ್ಯಸ್ಥ ಜೀನ್–ಪಿಯರ್ ಲ್ಯಾಕ್ರೋಯಿಕ್ಸ್ ಅವರು ಸೋಮವಾರ ಪೂರ್ವ ಕಾಂಗೋ ಹಾಗೂ ಬೆನಿ ಪ್ರದೇಶಗಳಿಗೆ ಎರಡು ದಿನಗಳ ಅಧಿಕೃತ ಭೇಟಿ ಆರಂಭಿಸಿದ್ದಾರೆ.

1990ರ ದಶಕದ ಅಂತ್ಯದಲ್ಲಿ ಉಗಾಂಡಾದ ಅಧ್ಯಕ್ಷ ಯೊವೆರಿ ಮುಸೆವೇನಿ ಅವರ ಆಡಳಿತದ ವಿರುದ್ಧ ಅಸಮಾಧಾನಗೊಂಡ ಗುಂಪುಗಳಿಂದ ADF ರೂಪುಗೊಂಡಿತ್ತು. 2002ರಲ್ಲಿ ಉಗಾಂಡಾ ಸೇನೆಯ ದಾಳಿಯ ಬಳಿಕ ಈ ಸಂಘಟನೆ ಕಾಂಗೋಗೆ ಸ್ಥಳಾಂತರಗೊಂಡಿದ್ದು, ಸಾವಿರಾರು ನಾಗರಿಕರ ಹತ್ಯೆಗೆ ಕಾರಣವಾಗಿದೆ ಎಂದು ಆರೋಪಿಸಲಾಗಿದೆ. ಜುಲೈ 2025ರಲ್ಲಿ ಮಾತ್ರವೇ ಈ ಗುಂಪು ಕನಿಷ್ಠ 100 ಜನರನ್ನು ಹತ್ಯೆ ಮಾಡಿತ್ತು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande