ಕೆನಡಾದ ಶಾಲೆಯಲ್ಲಿ ಗುಂಡಿನ ದಾಳಿ : ೧೦ ಮಂದಿ ಸಾವು
ಟಂಬ್ಲರ್ ರಿಡ್ಜ್, 11 ಫೆಬ್ರವರಿ (ಹಿ.ಸ.) : ಆ್ಯಂಕರ್ : ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದ ಟಂಬ್ಲರ್ ರಿಡ್ಜ್ ಪಟ್ಟಣದಲ್ಲಿರುವ ಮಾಧ್ಯಮಿಕ ಶಾಲೆಯಲ್ಲಿ ನಡೆದ ಭೀಕರ ಗುಂಡಿನ ದಾಳಿಯಲ್ಲಿ ಶಂಕಿತ ದಾಳಿಕೋರ ಸೇರಿ ಎಂಟು ಮಂದಿ ಸಾವನ್ನಪ್ಪಿದ್ದಾರೆ. ಇದಲ್ಲದೆ, ಘಟನೆಯೊಂದಕ್ಕೆ ಸಂಬಂಧಿಸಿದಂತೆ ಹತ್ತಿರದ
Gun fire


ಟಂಬ್ಲರ್ ರಿಡ್ಜ್, 11 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದ ಟಂಬ್ಲರ್ ರಿಡ್ಜ್ ಪಟ್ಟಣದಲ್ಲಿರುವ ಮಾಧ್ಯಮಿಕ ಶಾಲೆಯಲ್ಲಿ ನಡೆದ ಭೀಕರ ಗುಂಡಿನ ದಾಳಿಯಲ್ಲಿ ಶಂಕಿತ ದಾಳಿಕೋರ ಸೇರಿ ಎಂಟು ಮಂದಿ ಸಾವನ್ನಪ್ಪಿದ್ದಾರೆ. ಇದಲ್ಲದೆ, ಘಟನೆಯೊಂದಕ್ಕೆ ಸಂಬಂಧಿಸಿದಂತೆ ಹತ್ತಿರದ ಮನೆಯೊಂದರಲ್ಲಿ ಇಬ್ಬರ ಶವಗಳು ಪತ್ತೆಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 10ಕ್ಕೆ ಏರಿಕೆಯಾಗಿದೆ ಎಂದು ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸ್ ತಿಳಿಸಿದೆ.

ಪೊಲೀಸರ ಮಾಹಿತಿ ಪ್ರಕಾರ, ಮಧ್ಯಾಹ್ನ ಸುಮಾರು 1:20ರ ವೇಳೆ ಗುಂಡಿನ ದಾಳಿಯ ವರದಿ ಲಭಿಸಿತು. ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಶಾಲೆಯೊಳಗೆ ಆರು ಮಂದಿ ಹಾಗೂ ಶಂಕಿತ ಶೂಟರ್ ಮೃತಪಟ್ಟಿರುವುದನ್ನು ಕಂಡುಹಿಡಿದರು. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ಹೆಲಿಕಾಪ್ಟರ್ ಮೂಲಕ ಆಸ್ಪತ್ರೆಗೆ ಸಾಗಿಸಲಾಯಿತು. ಅವರಲ್ಲಿ ಒಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.

ಈ ದಾಳಿಯಲ್ಲಿ 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಆರ್‌ಸಿಎಂಪಿ ತಿಳಿಸಿದ್ದು, ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ‘ದಿ ಕೆನಡಿಯನ್ ಪ್ರೆಸ್’ ವರದಿ ಮಾಡಿದೆ.

ತನಿಖೆಯ ಸಂದರ್ಭದಲ್ಲಿ ಹತ್ತಿರದ ಮನೆಯನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುತಿಸಲಾಗಿದ್ದು, ಅಲ್ಲಿ ಇಬ್ಬರು ಮೃತದೇಹಗಳು ಪತ್ತೆಯಾಗಿವೆ. ಶಂಕಿತ ದಾಳಿಕೋರನು ತನ್ನನ್ನು ತಾನೇ ಗುಂಡಿಕ್ಕಿಕೊಂಡಿರುವುದಾಗಿ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಇನ್ನೂ ಬೇರೆ ಯಾರಾದರೂ ಈ ದಾಳಿಯಲ್ಲಿ ಭಾಗಿಯಾಗಿದ್ದಾರೆಯೇ ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಸುಮಾರು 2,400 ಜನಸಂಖ್ಯೆಯ ಟಂಬ್ಲರ್ ರಿಡ್ಜ್ ಸಣ್ಣ ಪಟ್ಟಣವಾಗಿದ್ದು, ಘಟನೆ ಹಿನ್ನೆಲೆ ಸಾರ್ವಜನಿಕರು ಮನೆಯೊಳಗೆ ಉಳಿದುಕೊಳ್ಳುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಸುತ್ತಮುತ್ತಲಿನ ಪ್ರದೇಶಗಳಿಂದ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ.

ಮತ್ತೊಂದೆಡೆ, ಪೀಸ್ ರಿವರ್ ಸೌತ್ ಶಾಲೆ ತಿಳಿಸಿದಂತೆ ಟಂಬ್ಲರ್ ರಿಡ್ಜ್ ಸೆಕೆಂಡರಿ ಮತ್ತು ಎಲಿಮೆಂಟರಿ ಶಾಲೆಗಳನ್ನು ಸಂಪೂರ್ಣ ಲಾಕ್‌ಡೌನ್ ಮಾಡಲಾಗಿದೆ. ಸೆಕೆಂಡರಿ ಶಾಲೆಯಲ್ಲಿ 7ರಿಂದ 12ನೇ ತರಗತಿಯವರೆಗೆ ಸುಮಾರು 175 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಘಟನೆಯ ನಂತರ ಹೆಚ್ಚುವರಿ ಪೊಲೀಸ್ ಹಾಗೂ ಆಂಬ್ಯುಲೆನ್ಸ್ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಪೀಸ್ ರಿವರ್ ಸೌತ್ ಶಾಸಕ ಲ್ಯಾರಿ ನ್ಯೂಫೆಲ್ಡ್ ತಿಳಿಸಿದ್ದಾರೆ. ಭದ್ರತಾ ಕಾರಣಗಳಿಂದಾಗಿ ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳಲು ಅವರು ನಿರಾಕರಿಸಿದ್ದಾರೆ. ತಮ್ಮ ಪ್ರೀತಿಪಾತ್ರರನ್ನು ಹುಡುಕುತ್ತಿರುವ ಸಮುದಾಯದ ಸದಸ್ಯರು ದಯವಿಟ್ಟು ಮನೆಗೆ ಹಿಂತಿರುಗಿ ಪೊಲೀಸರಿಗೆ ತನಿಖೆ ನಡೆಸಲು ಅವಕಾಶ ನೀಡುವಂತೆ ಅವರು ಮನವಿ ಮಾಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande