ಪ್ರೊ. ಸಿ ಮಹಾದೇವಪ್ಪವರಿಗೆ ಪ್ರತಿಷ್ಠಿತ ನಾಡೋಜ ಗೌರವ ಪದವಿ
ಹಂಪಿ
ಪ್ರೊ. ಸಿ ಮಹಾದೇವಪ್ಪವರಿಗೆ ಪ್ರತಿಷ್ಠಿತ ನಾಡೋಜ ಗೌರವ ಪದವಿ


ಹಂಪಿ, 24 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಪ್ರೊ.ಸಿ.ಮಹಾದೇವಪ್ಪನವರು ಶತಾಯುಷಿಗಳು. ಅವರಿಗೆ ಈಗ 104 ವರ್ಷ. ಕನ್ನಡದ ಪ್ರಖಾಂಡ ಪಂಡಿತರು. ಪ್ರೊ. ಮಹಾದೇವಪ್ಪನವರು 8 ಜುಲೈ 1922ರಲ್ಲಿ ಸೋಸಲೆ ಬಸಪ್ಪ ಮತ್ತು ವೀರಾಜಮ್ಮನವರ ಪುತ್ರರಾಗಿ ಸೋಸಲೆಯಲ್ಲಿ ಜನಿಸಿದರು. ಇವರ ಮೂಲ ಹೆಸರು ಎಸ್.ಬಿ.ಚನ್ನಬಸಪ್ಪ, ಇವರು ತಮ್ಮ ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣವನ್ನು ಸೋಸಲೆ ಗ್ರಾಮದಲ್ಲಿ ಮುಗಿಸಿದರು. ಪ್ರೌಢಶಾಲೆಯನ್ನು ಮೈಸೂರಿನ ಸರ್ಕಾರಿ ಮರಿಮಲ್ಲಪ್ಪ ಹೈಸ್ಕೂಲಿನಲ್ಲಿ, ಇಂಟರ್ ಮೀಡಿಯಟ್ನ್ನು ಮೈಸೂರಿನ ಯುವರಾಜ ಕಾಲೇಜಿನಲ್ಲಿ, ಬಿ.ಎ ಕನ್ನಡ ಆನರ್ಸ್ನ್ನು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪೂರೈಸಿದರು. ನಂತರ ಮೈಸೂರಿನ ಓರಿಯಂಟಲ್ ಲೈಬ್ರರಿಯಲ್ಲಿ ಕನ್ನಡ ಓಲೆಗರಿಗಳಿಂದ ಪ್ರತಿಮಾಡುವ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಕೆಲವೇ ತಿಂಗಳು ಅಲ್ಲಿ ಇರುತ್ತಾರೆ. 1945ರಿಂದ 1948ರವರೆಗೆ ತುಮಕೂರಿನ ಇಂಟರ್ಮೀಡಿಯಟ್ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ, ನಂತರ ಮೈಸೂರಿನ ಯುವರಾಜ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಮಾಡುತ್ತಾರೆ. ಅಧ್ಯಾಪನ ವೃತ್ತಿಯೊಂದಿಗೆ ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ ಪದವಿ ಪಡೆದುಕೊಳ್ಳುತ್ತಾರೆ. ಚಿಕ್ಕಮಗಳೂರು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾಗಿ, ಬೆಂಗಳೂರಿನ ಮಹಾರಾಣಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿ, ನಂತರ ತುಮಕೂರು ಪ್ರಥಮ ದರ್ಜೆ ಕಾಲೇಜಿನ ಪ್ರಿನ್ಸಿಪಾಲರಾಗಿ ಸೇವೆ ಸಲ್ಲಿಸಿ, ನಿವೃತ್ತರಾಗುತ್ತಾರೆ.

ಹಸ್ತಪ್ರತಿ, ಗ್ರಂಥಸಂಪಾದನೆ, ಸಂಶೋಧನೆ, ಅಧ್ಯಯನ, ಅಧ್ಯಾಪನ ಇವು ಶ್ರಿಯುತರ ಮುಖ್ಯ ಕಾರ್ಯಕ್ಷೇತ್ರಗಳು. ಕನ್ನಡ, ತಮಿಳು, ಇಂಗ್ಲಿಷ್ ಮತ್ತು ಸಂಸ್ಕøತ ಭಾಷೆಗಳಲ್ಲಿ ಅಪಾರ ಪಾಂಡಿತ್ಯವುಳ್ಳವರು. ಬಹುಭಾಷೆ ಮತ್ತು ಬಹುಜ್ಞಾನಶಿಸ್ತುಗಳನ್ನು ಬಲ್ಲಿದರು. ಹಳಗನ್ನಡ, ನಡುಗನ್ನಡ ಸಾಹಿತ್ಯ, ವಚನಸಾಹಿತ್ಯ, ಸ್ತೋತ್ರಸಾಹಿತ್ಯ, ಅಲಂಕಾರಸಾಹಿತ್ಯ, ಅನುವಾದಸಾಹಿತ್ಯ ಹೀಗೆ, ಬಹುಕ್ಷೇತ್ರಗಳಲ್ಲಿ ಗಂಭೀರ ಅಧ್ಯಯನ ಮಾಡಿದ್ದಾರೆ. ಅನುಪಲಬ್ಧ ಹಾಗೂ ಅಪರೂಪದ ಹಲವು ಕೃತಿಗಳನ್ನು ಶೋಧಿಸಿ ಹಸ್ತಪ್ರತಿ ಹಾಗೂ ಮುದ್ರಿತ ಗ್ರಂಥಗಳ ಸಹಾಯದಿಂದ ಪರಿಷ್ಕರಿಸಿ, ಪ್ರಕಟಿಸಿದ್ದಾರೆ. ಅವುಗಳಲ್ಲಿ ಪ್ರಮುಖವಾದವುಗಳು ಕೆಳಗಿನಂತೆ ಇವೆ.

ಕಾಲೇಜ್ ಟ್ರಾನ್ಸಲೇಷನ್(1949), ಗುಬ್ಬಿ ಮಲ್ಲಣಾರ್ಯನ ಭಾವ ಚಿಂತಾರತ್ನ(1954-1971) ಮರು.ಮು), , ಶ್ರೀಚನ್ನಂಜೆದೇವರು ಸೇರಿಸಿದ ಶಂಕರ ದೇವರ ಕಂದ(1958), ಮೊಗ್ಗೆಯ ಮಾಯಿದೇವನ ಷಟಸ್ಥಲ ಗದ್ಯ(1962), ಚಂದ್ರಕವಿಯ ಶಂಕರಶತಕ(1965), ಗಾಲಿಬ್ನ ಘಜಲ್ಗಳು(ಕನ್ನಡ ಅನುವಾದ, 1969), ಉದಯಾದಿತ್ಯನ ಉದಯಾದಿತ್ಯಾಲಂಕಾರ ಸಂಪಾದನೆ(1996), ಗೋರಕ್ಷನಾಥನ ಯೋಗಶಾಸ್ತ್ರ ಗ್ರಂಥವಾದ ಗೋರಕ್ಷ ಶತಕಂ(1996), ಮೊಗ್ಗೆಯ ಮಾಯಿದೇವರ ಪ್ರಭುಗೀತಾ(ಅಲ್ಲಮನ ವಚನಗಳ ಸಂಸ್ಕøತ ವ್ಯಾಖ್ಯಾನ 2001), ಅರವತ್ತು ಮೂವರ ಚಾರಿತ್ರ್ಯ(2004), ಗುಬ್ಬಿ ಶಾಂತೇಶ್ವರನ ತೋಂಟದ ಸಿದ್ಧೇಶ್ವರ ಪುರಾಣ(2005), ಗೋಸಲ ಗಣಾಚಾರ್ಯನ ಅಜೀವ ಮಧುಸ್ಮøತಿ(2005), ಉದಯಾದಿತ್ಯ ವಿರಚಿತ ಜ್ಞಾನಸಾರಂ(2006), ಉದಯಾದಿತ್ಯನ ನಾಗವರ್ಮ ಕವಿವರ್ಯರ ಕಾವ್ಯ ಏವ ಕವಿ ಚರಿತೆ, ನಾಗವರ್ಮ ಚಂದ್ರರಾಜರ : ಉಭಯ ಕವಿಗಳ ತೌಲನಿಕ ಅಧ್ಯಯನ(2011), ಉದಯಾದಿತ್ಯ ವಿರಚಿತ ನಾಗವರ್ಮನ ಭಾಷ್ಯಸಹಿತ ರತ್ನಮಂಜೂಷಿಕಾ ಛಂದೋವಿಚಿತಿಃ(2012), ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ ಮುಂತಾದವು ಇವರ ಗಮನಾರ್ಹವಾದ ಕೃತಿಗಳು. ಏಕೋತ್ತರ ಶತಸ್ಥಲ ಇತ್ತೀಚಿನ ಪ್ರಕಟಣೆಯಾಗಿದೆ. ಇದನ್ನು ಶ್ರೀಯುತರು 101 ವರ್ಷ ವಯೋಮಾನದಲ್ಲಿ ಪರಿಷ್ಕರಿಸಿ ಪ್ರಕಟಿಸಿದ್ದಾರೆ. ಎಪ್ಪತ್ತರ ವಯಸ್ಸಿನಲ್ಲಿ ಆಧುನಿಕ ತಂತ್ರಜ್ಞಾನದ ಕೊಡುಗೆ ಯಾದ ಕಂಪ್ಯೂಟರ್ ಕಲಿತು ತಮ್ಮ ಪುಸ್ತಕಗಳನ್ನು ತಾವೇ ಮುದ್ರಣಕ್ಕೆ ಅಣಿಗೊಳಿಸಿದ ಅಪರೂಪದ ವಿದ್ವಾಂಸರಲ್ಲಿ ಮಹಾದೇವಪ್ಪನವರೂ ಪ್ರಮುಖರು. 12ನೇ ಶಮಾನದ ಆಯುರ್ವೇದ ಆಚಾರ್ ನರಹರಿ ಪಂಡಿತರ ಸಂಸ್ಕøತ ನಿಘಂಟು ರಾಜಾಭಿದಾನ ಚೂಡಾಮಣಿ 2 ಸಂಪುಟಗಳಲ್ಲಿ ಪರಿಷ್ಕರಿಸಿ ಪ್ರಕಟಿಸಿದ್ದಾರೆ(2019). ಹೀಗೆ ಪ್ರೊ. ಮಹಾದೇವಪ್ಪ ಅವರು ಓಲೆಗರಿಗಳಿಂದ ಕವಿ ಕಾವ್ಯಗಳನ್ನು ಬಿಡಿಸಿ ಪ್ರಾಚೀನ ಕನ್ನಡ ಸಾಹಿತ್ಯ ಚರಿತ್ರೆಗೆ ಗಟ್ಟಿ ಅಡಿರಚನೆ ಹಾಕಿದ್ದಾರೆ. ಇವರಿಗೆ ಈಗ 104 ವರ್ಷಗಳು ಸಂದಿವೆ. ಆದರೂ ದಣಿವರಿಯದೆ ಗ್ರಂಥಸಂಪಾದನೆ-ಸಂಶೋಧನೆ ಕಾರ್ಯದಲ್ಲಿ ತೊಡಗಿ ಯುವಕರಿಗೆ ಮಾದರಿಯಾಗಿದ್ದಾರೆ.

ಬಹುಭಾಷೆ ಹಾಗೂ ಬಹುಶಿಸ್ತುಗಳ ತಜ್ಞರು, ಆಧುನಿಕಪೂರ್ವ ಕನ್ನಡ ಸಾಹಿತ್ಯದ ಪ್ರಕಾಂಡ ಪಂಡಿತರೂ ಆದ ಪ್ರೊ. ಸಿ ಮಹಾದೇವಪ್ಪವರಿಗೆ ಕನ್ನಡ ವಿಶ್ವವಿದ್ಯಾಲಯ ತನ್ನ 34ನೇ ನುಡಿಹಬ್ಬದಲ್ಲಿ ಪ್ರತಿಷ್ಠಿತ ನಾಡೋಜ ಗೌರವ ಪದವಿಯನ್ನು ನೀಡಿ ಗೌರವಿಸುತ್ತದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande