ವಿಸ್ಪರ್ಸ್ ಆಫ್ ದಿ ರಿವರ್ : ಪ್ರಕೃತಿಯೊಂದಿಗೆ ಮಾತನಾಡುವ ಸಿನಿಮಾ
ಸ್ಯಾಂಡಲ್ವುಡ್ನಲ್ಲೊಂದು ಸಾಮಾಜಿಕ ಕಳಕಳಿಯ ಸಿನಿಮಾ
Cinema


ಬೆಂಗಳೂರು, 24 ಫೆಬ್ರವರಿ (ಹಿ.ಸ.) :

ಆ್ಯಂಕರ್ : ವಿಸ್ಪರ್ಸ್ ಆಫ್ ದಿ ರಿವರ್, ಇದೊಂದು ಅಪರೂಪದ ಸಾಮಾಜಿಕ ಚಿತ್ರ. ಸ್ಯಾಂಡಲ್ವುಡ್ನಲ್ಲಿ ತರಹೇವಾರಿ ಸಿನಿಮಾಗಳು ಬರುತ್ತಿವೆ. ಲವ್, ಕ್ರೈಮ್, ಸಸ್ಪನ್ಸ್, ಹಾರರ್ ಹೀಗೆ ಅನೇಕ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಈ ಎಲ್ಲಾ ಸಿನಿಮಾಗಳ ಮಧ್ಯೆ ಇದೀಗ ವಿಭಿನ್ನ ಮತ್ತು ಸಾಮಾಜಿಕ ಕಳಕಳಿ ಹೊಂದಿರುವ ವಿಸ್ಪರ್ಸ್ ಆಫ್ ದಿ ರಿವರ್ ಸಿನಿಮಾ ಪ್ರೇಕ್ಷಕರ ಗಮನ ಸೆಳೆಯುತ್ತಿದೆ..

ಕೆ. ಪ್ರಭಾಕರನ್ ನಿರ್ದೇಶನದಲ್ಲಿ ಮೂಡಿಬಂದಿರುವ ಸಿನಿಮಾ. ಮಂಜುನಾಥ್ ಪೈ ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಟನೆ ಜೊತೆಗೆ ಮಂಜುನಾಥ್ ಪೈ ಚಿತ್ರಕಥೆಯನ್ನು ಬರೆದಿದ್ದಾರೆ. ಈ ಚಿತ್ರವನ್ನು ಸ್ನೇಹಿತರಾದ ರಾಧಾಕೃಷ್ಣ ಪೈ, ವಿವೇಕ್ ವಿನ್ಸೆಂಟ್, ಶ್ರೀರಾಮ್ ಸಿ ಸೇರಿ ಮೀನಾ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ನಿರ್ಮಿಲಾಗಿದೆ.

ಈ ಸಿನಿಮಾವನ್ನು ರೈತರ ಬದುಕಿನೊಂದಿಗೆ ನೇರವಾಗಿ ಸಂಬಂಧ ಹೊಂದಿರುವ ವೃತ್ತಿಪರರು, ಸಿನಿಮಾ ತಂತ್ರಜ್ಞರು ಮತ್ತು ನಾಟಕ ಕಲಾವಿದರೆಲ್ಲರು ಒಟ್ಟಿಗೆ ಸೇರಿ ರೂಪಿಸಿದ್ದಾರೆ. ನದಿಗಳೊಂದಿಗೆ ನಮ್ಮ ಸಂಬಂಧವನ್ನು ಮರುಪರಿಶೀಲಿಸುವ ಪ್ರಯತ್ನವನ್ನು ಈ ಸಿನಿಮಾದಲ್ಲಿ ಮಾಡಲಾಗಿದೆ. ನದಿಗಳನ್ನು ಉಳಿಸುವ ಬಗ್ಗೆ ಭಾವನಾತ್ಮಕವಾಗಿ ಈ ಸಿನಿಮಾವನ್ನು ಕಟ್ಟಿಕೊಡಲಾಗಿದೆ. ಇತ್ತೀಚೆಗೆ ಬಿಡುಗಡೆಯಾಗಿರುವ ಟೀಸರ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಆಯೋಜಿಸಿದ್ದ ಪ್ರಿಮಿಯರ್ ಶೋಗಳಲ್ಲಿ ಸಿನಿ ಗಣ್ಯರು ಹಾಗೂ ಪ್ರೇಕ್ಷಕರಿಂದ ಸಿನಿಮಾಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಈ ಸಿನಿಮಾ ಬಗ್ಗೆ ಹೇಳುವುದಾರೆ ಕೃಷಿಗೆ ಸಂಬಂಧಿತ ವ್ಯವಹಾರವನ್ನು ವಿಸ್ತರಿಸುವ ಕನಸನ್ನು ಹೊಂದಿರುವ ಮಗ ಕೆಲಸ ಬಿಟ್ಟು ಊರಿಗೆ ಮರಳುತ್ತಾನೆ. ಆದರೆ ತಂದೆ-ಮಗನ ನಡುವಿನ ವಿಭಿನ್ನ ದೃಷ್ಟಿಕೋನಗಳು ಸಂಘರ್ಷಕ್ಕೆ ಕಾರಣವಾಗುತ್ತವೆ. ಬಳಿಕ ಮಗ ಮಣ್ಣು, ನದಿ ಮತ್ತು ಮೂಲ ಮೌಲ್ಯಗಳೊಂದಿಗೆ ಬಾಂಧವ್ಯ ಬೆಳಸಿಕೊಳ್ಳುತ್ತಾನೆ. ಗ್ರಾಮೀಣ ಬದುಕು, ಕೃಷಿಕರ ದಿನನಿತ್ಯದ ಆಚರಣೆಗಳು, ಜನಪದ ಕಥೆ, ಯಕ್ಷಗಾನ ಮತ್ತು ಹಳ್ಳಿಯ ಸಮೂಹ ಜೀವನ ಸೇರಿದಂತೆ ಸಹಜವಾಗಿ ಈ ಸಿನಿಮಾ ಒಳಗೊಂಡಿದೆ.

ಇನ್ನೂ ಸಿನಿಮಾಗೆ ರೋಹಿತ್ ಪೂಜಾರಿ ಸಂಗೀತ ನೀಡಿದ್ದು, ಕೆ. ಸತ್ಯರಾಜ್ ಛಾಯಾಗ್ರಹಣ ಮಾಡಿದ್ದಾರೆ. ಪ್ರಮುಖ ಪಾತ್ರಗಳಲ್ಲಿ ಶಬಾನಾ, ಕಾಂತಾರ ಖ್ಯಾತಿಯ ಪ್ರಭಾಕರ್ ಕುಂದರ್ ಹಾಗೂ ದಿವಂಗತ ಪ್ರಭಾಕರ್ ಕಲ್ಯಾಣಿ ಅಭಿನಯಿಸಿದ್ದಾರೆ. ವಿಸ್ಪರ್ಸ್ ಆಫ್ ದಿ ರಿವರ್ ಕನ್ನಡ ಸಿನೆಮಾದಲ್ಲಿ ಹೊಸ ಅಲೆಯನ್ನು ಸೂಚಿಸುವ ಚಿತ್ರವಾಗಿದ್ದು, ಶೀಘ್ರದಲ್ಲೇ ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಲಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande