ಭವಾನಿ ಚಿತ್ರಮಂದಿರಕ್ಕೆ ‘ಘಾರ್ಗಾ’ ಚಿತ್ರತಂಡದ ಭೇಟಿ
ಭವಾನಿ ಚಿತ್ರಮಂದಿರಕ್ಕೆ ‘ಘಾರ್ಗಾ’ ಚಿತ್ರತಂಡದ ಭೇಟಿ
ಜ್ಯೋಗಿ’ ಖ್ಯಾತಿಯ ಅಶ್ವಿನಿ ರಾಮ್‌ಪ್ರಸಾದ್ ಕೋಲಾರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಭಿಮಾನಿಗಳು ಸ್ವಾಗತ ಕೋರಿದರು.


ಕೋಲಾರ, 0೮ ಫೆಬ್ರವರಿ (ಹಿ.ಸ) :

ಆ್ಯಂಕರ್ : ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ಮಾಪಕ, ‘ಜ್ಯೋಗಿ’ ಖ್ಯಾತಿಯ ಅಶ್ವಿನಿ ರಾಮ್‌ಪ್ರಸಾದ್ ಅವರು ಇಂದು ಕೋಲಾರ ನಗರದ ಭವಾನಿ ಚಿತ್ರಮಂದಿರಕ್ಕೆ ಭೇಟಿ ನೀಡಿದರು.

ತಮ್ಮ ಪುತ್ರ ಅರುಣ್ ರಾಮ್‌ಪ್ರಸಾದ್ ನಟಿಸಿ, ನಿರ್ದೇಶಿಸಿರುವ ‘ಘಾರ್ಗಾ’ ಚಿತ್ರವು ಫೆಬ್ರವರಿ ೬ ರಂದು ರಾಜ್ಯಾದ್ಯಂತ ತೆರೆಕಂಡಿದ್ದು, ಚಿತ್ರದ ಪ್ರದರ್ಶನ ವೀಕ್ಷಿಸಲು ಮತ್ತು ಪ್ರೇಕ್ಷಕರ ಪ್ರತಿಕ್ರಿಯೆ ತಿಳಿಯಲು ಅವರು ಪತ್ನಿ ಶ್ರೀಮತಿ ನಳಿನಿ ಅವರೊಂದಿಗೆ ಆಗಮಿಸಿದ್ದರು.

ಕಾಂಗ್ರೆಸ್ ಪದವೀಧರ ಕ್ಷೇತ್ರದ ಜಿಲ್ಲಾಧ್ಯಕ್ಷರಾದ ಟಿ.ಎಸ್. ಸುಧೀರ್ ಅವರ ನೇತೃತ್ವದಲ್ಲಿ ಅಶ್ವಿನಿ ರಾಮ್‌ಪ್ರಸಾದ್ ಕುಟುಂಬವನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು.

ಚಿತ್ರಮಂದಿರದ ಬಳಿ ಜಮಾಯಿಸಿದ್ದ ಅಭಿಮಾನಿಗಳು ಹೂಮಾಲೆ ಹಾಕಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ‘ಘಾರ್ಗಾ’ ಚಿತ್ರವು ರಾಜ್ಯಾದ್ಯಂತ ಶತದಿನೋತ್ಸವ ಆಚರಿಸಲಿ ಎಂದು ಅಭಿಮಾನಿಗಳು ಈ ಸಂದರ್ಭದಲ್ಲಿ ಹಾರೈಸಿದರು.

ಅಭಿಮಾನಿಗಳನ್ನು ಉದ್ದೇಶಿಸಿ ನಿರ್ಮಾಪಕ ಅಶ್ವಿನಿ ರಾಮ್ ಪ್ರಸಾದ್ ಮಾತನಾಡಿ ನನ್ನ ಪುತ್ರ ಅರುಣ್ ರಾಮ್‌ಪ್ರಸಾದ್ ಈ ಚಿತ್ರದ ಮೂಲಕ ನಟನಾಗಿ ಮತ್ತು ನಿರ್ದೇಶಕನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾನೆ. ಚಿತ್ರದಲ್ಲಿ ಸಾಯಿ ಕುಮಾರ್, ಸಂಪತ್ ರಾಜ್ ಮತ್ತು ರಾಹುಲ್ ದೇವ್ ಅಂತಹ ಹಿರಿಯ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಹಿಂದೆ ಶಿವರಾಜ್ ಕುಮಾರ್ ಅಭಿನಯದ ‘ಜ್ಯೋಗಿ’ ಚಿತ್ರವನ್ನು ನಾಡಿನ ಜನತೆ ಹೇಗೆ ಅಪ್ಪಿಕೊಂಡಿದ್ದರೋ, ಅದೇ ರೀತಿ ‘ಘಾರ್ಗಾ’ ಚಿತ್ರವನ್ನೂ ಯಶಸ್ವಿಗೊಳಿಸುತ್ತಾರೆ ಎಂಬ ನಂಬಿಕೆ ನನಗಿದೆ, ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದೇ ವೇಳೆ ಮಾತನಾಡಿದ ಟಿ.ಎಸ್. ಸುಧೀರ್ ಅವರು, ಘಾರ್ಗಾ ಚಿತ್ರವು ಭರ್ಜರಿ ಯಶಸ್ಸು ಕಾಣುವುದು ಖಚಿತ. ಇದರ ಬೆನ್ನಲ್ಲೇ ನಿರ್ಮಾಣವಾಗಲಿರುವ ‘ಜ್ಯೋಗಿ-೨’ ಚಿತ್ರವು ಚಿತ್ರರಂಗದಲ್ಲಿ ಹೊಸ ದಾಖಲೆ ಬರೆಯಲಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಸುಮಾರು ಒಂದು ಲಕ್ಷ ಜನರ ಸಮ್ಮುಖದಲ್ಲಿ ಈ ಚಿತ್ರದ ಸಂಭ್ರಮಾಚರಣೆ ನಡೆಸುವ ಗುರಿ ಹೊಂದಿದ್ದೇವೆ, ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಚಿತ್ರತಂಡದ ಪ್ರಮುಖರು ಹಾಗೂ ಸ್ಥಳೀಯ ಮುಖಂಡರಾದ ವಿನಯ್, ಅಂತರಗ0ಗೆ ಪೂಜಾರಿ ಶ್ರೀನಿವಾಸ್, ಮಂಜು, ಹರೀಶ್, ಕೆಜಿಎಫ್ ವಿಜಯ್, ಚಂದ್ರು, ತೇಜಸ್, ನವೀನ್ ಅಭಿ ಸೇರಿದಂತೆ ನೂರಾರು ಅಭಿಮಾನಿಗಳು ಉಪಸ್ಥಿತರಿದ್ದರು.

ಚಿತ್ರ : ‘ಜ್ಯೋಗಿ’ ಖ್ಯಾತಿಯ ಅಶ್ವಿನಿ ರಾಮ್‌ಪ್ರಸಾದ್ ಕೋಲಾರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಭಿಮಾನಿಗಳು ಸ್ವಾಗತ ಕೋರಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande