
ಕೋಲಾರ, ೨೪ ಫೆಬ್ರವರಿ (ಹಿ.ಸ) :
ಆ್ಯಂಕರ್ : ಬಾಲ್ಯವಿವಾಹ, ಮಕ್ಕಳು,ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ವಿಶೇಷಕಾನೂನಿನ ರಕ್ಷಣೆ ಇದ್ದು, ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗೀತಾ ಕರೆ ನೀಡಿದರು.
ಕೋಲಾರ ತಾಲ್ಲೂಕಿನ ನರಸಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಪೊಲೀಸ್ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಮಹಿಳೆಯರ ಮತ್ತು ಮಕ್ಕಳ ಸಬಲೀಕರಣಕ್ಕಾಗಿ ಅಕ್ಕಪಡೆ ವಾಹನ ಮುಖಾಂತರ ನಿಮ್ಮೊಂದಿಗೆ ನಾವಿದ್ದೇವೆ ಎಂಬ ಘೋಷ ವಾಕ್ಯದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಾಲ್ಯ ವಿವಾಹ,ಬಾಲಗರ್ಭಿಣಿ ಅಪರಾಧ ಮಾತ್ರವಲ್ಲ, ಹೆಣ್ಣಿನ ಜೀವಕ್ಕೂ ಅಪಾಯ ಎಂಬುದನ್ನು ಅರಿತು ಈ ಪಿಡುಗಿನ ವಿರುದ್ದ ಧ್ವನಿಯೆತ್ತಬೇಕು ಎಂದು ಸಲಹೆ ನೀಡಿದ ಅವರು, ಮದುವೆಗೆ ಹೆಣ್ಣು ಮಕ್ಕಳಿಗೆ ೧೮ ಗಂಡು ಮಕ್ಕಳಿಗೆ ೨೧ ಸರ್ಕಾರ ಮಾಡಿರುವ ನಿಯಮ ಮಾತ್ರವಲ್ಲ, ತಜ್ಞರು ಸೂಚಿಸಿರುವ ಆರೋಗ್ಯಕರ ವಯಸ್ಸು. ಕಾರಣಾಂತರಗಳಿ0ದ ಬಾಲಗರ್ಭಿಣಿಯಾದರೆ ಅದರಿಂದ ಜೀವಕ್ಕೂ ಹಾನಿ ಎಂದು ಎಚ್ಚರಿಸಿದ ಅವರು, ಆರೋಗ್ಯ ಇಲಾಖೆಯಲ್ಲಿ ಗರ್ಭಿಣಿಯಾಗುವುದನ್ನು ತಡೆಯಲು ಉಚಿತ ಸೌಲಭ್ಯಗಳಿಂದ ಅದನ್ನು ಮುಜುಗರಕ್ಕೊಳಗಾಗದೇ ಪಡೆದುಕೊಳ್ಳಿ, ಅಗತ್ಯವಾದಲ್ಲಿ ಆರೋಗ್ಯ ಇಲಾಖೆಯಲ್ಲಿ ಆಪ್ತ ಸಮಾಲೋಚನೆಗೆ ಒಳಗಾಗಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿ ಡಾ. ಫಾತಿಮಾ ಮಾತನಾಡಿ, ಬಾಲ್ಯವಿವಾಹ ಮಾಡಿದರೆ ಪೋಕ್ಸೋ ಕಾಯಿದೆಯಡಿ ಪೋಷಕರೂ ಸಹಾ ಅಪರಾಧಿಗಳಾಗುತ್ತಾರೆ, ಜೈಲು ಶಿಕ್ಷೆಗೆ ಒಳಗಾಗಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು, ಓದಬೇಕಾದ ವಯಸ್ಸಿನಲ್ಲಿ ಮಕ್ಕಳಿಗೆ ಮದುವೆ ಮಾಡಿ ಅವರ ಬದುಕು ನರಕ ಮಾಡುವ ಮನಸ್ಥಿತಿಯಿಂದ ದೂರವಾಗಬೇಕು ಎಂದರು.
ಎಎಸ್ಐ ಮಂಜುನಾಥ್, ಮಕ್ಕಳು ನಿಮ್ಮ ಪರಿಸರದಲ್ಲಿ ಇಂತಹ ಬಾಲ್ಯವಿವಾಹ ಪ್ರಕರಣ ಕಂಡು ಬಂದರೆ ನಿಮ್ಮ ಶಿಕ್ಷಕರಿಗೆ, ಪೊಲೀಸ್ ಠಾಣೆಗೆ ಮಾಹಿತಿ ನೀಡಿ ತಡೆಯಲು ಸಹಕರಿಸಿ ಎಂದು ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಬಾಲ್ಯ ವಿವಾಹ, ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು, ಮಹಿಳಾ ಮತ್ತು ಮಕ್ಕಳ ಸಾಗಾಣಿಕೆ, ಪೋಕ್ಸೋ ಕಾಯ್ದೆ, ಭೇಟಿ ಬಚಾವೋ ಭೇಟಿ ಪಡಾವೋ, ೧೮೧,೧೧೨,೧೦೯೮ ಉಚಿತ ಸಹಾಯವಾಣಿಗಳ ಕುರಿತು ಜಾಗೃತಿ ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ನರಸಾಪುರ ಆರೋಗ್ಯ ಕೇಂದ್ರದ ಫಾರ್ಮಸಿಸ್ಟ್ ಕಾಂತಮ್ಮ, ಸ್ಟಾಫ್ ನರ್ಸ್ ರಮ್ಯ ಆರೋಗ್ಯ ನಿರೀಕ್ಷಣಾಧಿಕಾರಿ ರಾಘವೇಂದ್ರ ಭಾಗವಹಿಸಿದ್ದರು.
ಚಿತ್ರ ; ಕೋಲಾರ ತಾಲ್ಲೂಕಿನ ನರಸಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಪೊಲೀಸ್ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಮಹಿಳೆಯರ ಮತ್ತು ಮಕ್ಕಳ ಸಬಲೀಕರಣಕ್ಕಾಗಿ ಅಕ್ಕಪಡೆ ವಾಹನ ಮೂಲಕ ಜಾಗೃತಿ ಮೂಡಿಸಲಾಯಿತು. ನಿಮ್ಮೊಂದಿಗೆ ನಾವಿದ್ದೇವೆ ಎಂಬ ಘೋಷ ವಾಕ್ಯದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗೀತಾ ಮಾತನಾಡಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್